ತಿರುಪತಿ: ಇನ್ನು ಮುಂದೆ ಜಗತøಸಿದ್ಧ ಯಾತ್ರಾ ಸ್ಥಳ ತಿರುಪತಿಯ ವೆಂಕಟೇಶ್ವರ ದೇಗುಲದಲ್ಲಿ ಗಣ್ಯ ಮತ್ತು ಅತಿ ಗಣ್ಯರಿಗೆ ಇರುವ ದೇವರ ದರ್ಶನ ವ್ಯವಸ್ಥೆ ರದ್ದಾಗುವ ಸಾಧ್ಯತೆ ಇದೆ.
ಇಂಥ ವ್ಯವಸ್ಥೆ ಮೂಲಕ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ, ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದು ಮಾಡಲು ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಕೂಡ ಕೇಳಿ ಬಂದಿದ್ದು, ಈ ಚಿಂತನೆಗೆ ಕಾರಣ ಎನ್ನಲಾಗಿದೆ. ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಹಾಲಿ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಅನನುಕೂಲ ವಾಗುತ್ತಿದೆ. ಹೊಸತಾಗಿ ರಚನೆಯಾಗಿರುವ ದೇಗುಲ ಟ್ರಸ್ಟ್ ಮಂಡಳಿಯ ಸಭೆ ಶೀಘ್ರದಲ್ಲಿಯೇ ನಡೆಯಲಿದೆ. ಅದರಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ. ಗಣ್ಯ ವ್ಯಕ್ತಿಗಳು ವರ್ಷಕ್ಕೆ ಒಂದು ಬಾರಿ ಮಾತ್ರ ದೇಗುಲಕ್ಕೆ ಭೇಟಿ ನೀಡಬೇಕು ಎಂದೂ ಮನವಿ ಮಾಡಿರುವ ರೆಡ್ಡಿ, ಗಣ್ಯರಿಗಾಗಿ ಇರುವ ವಿಶೇಷ ದರ್ಶನ ವ್ಯವಸ್ಥೆ ವರ್ಷಕ್ಕೊಮ್ಮೆ ಮಾತ್ರ ಇರಲಿದೆ ಎಂದೂ ಹೇಳಿದ್ದಾರೆ.
ಎಲ್-1, ಎಲ್-2, ಎಲ್-3 ಎಂಬ ವರ್ಗದ ದರ್ಶನ ವ್ಯವಸ್ಥೆ- ಜಡ್ಜ್ಗಳು, ಸರ್ಕಾರದ ಉನ್ನತ ಅಧಿಕಾರಿಗಳು, ರಾಜಕೀಯ ಪಕ್ಷದ ಅಗ್ರೇಸರ ನಾಯಕರು (ಎಲ್-1), ಸರ್ಕಾರದ ಕೆಳ ಹಂತದ ಅಧಿಕಾರಿಗಳು, ಟಿಟಿಡಿ ಉದ್ಯೋಗಿಗಳು (ಎಲ್-2), ಹಾಲಿ ಶಾಸಕರು, ಸಂಸದರು, ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಟಿಟಿಡಿಯ ಹಿರಿಯ ಅಧಿಕಾರಿಗಳು ನೀಡುವ ಶಿಫಾರಸು ಪತ್ರವನ್ನು ಆಧರಿಸಿ ನೀಡುವ ಪ್ರವೇಶ (ಎಲ್-3) ವ್ಯವಸ್ಥೆ ದೇಗುಲದಲ್ಲಿ ಸದ್ಯ ಚಾಲ್ತಿಯಲ್ಲಿದೆ.