ಬೆಂಗಳೂರು: ಬಂಧಿಸಲು ಬಂದ ಪೊಲೀಸರ ಮೇಲೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕಳ್ಳರ ಮೇಲೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಗುಂಡಿನ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ (19), ಗೌರಿಬಿದನೂರಿನ ನಾರಾಯಣಸ್ವಾಮಿ (29)ಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಮತ್ತೂಬ್ಬ ಆರೋಪಿ ಸುಧಾಕರ್ (27)ನನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ತಡರಾತ್ರಿ ಆರೋಪಿಗಳು ನಗರದ ಲಕ್ಷ್ಮೀಪುರ ಕ್ರಾಸ್ ಬಳಿಯ ಮಾಡರ್ನ್ ಕ್ಲಿನಿಕ್‌ನ ರೋಲಿಂಗ್ ಶೆಟರ್ ಮೀಟಿ ಕಳ್ಳತನಕ್ಕೆ ಯತ್ನಿಸಿದ್ದರು. ಅಶೋಕ್ ಮತ್ತು ನಾರಾಯಣಸ್ವಾಮಿ ಒಳನುಗ್ಗಿ ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ, ಸುಧಾಕರ್ ಹೊರಗೆ ನಿಂತು ಕಾಯುತ್ತಿದ್ದ. ಇದೇ ವೇಳೆ ಗಸ್ತಿನಲ್ಲಿದ್ದ ಇನ್‌ಸ್ಪೆಕ್ಟರ್ ಪುನೀತ್ ಕುಮಾರ್ ಹಾಗೂ ಪಿಎಸ್‌ಐ ಅಣ್ಣಯ್ಯಗೆ ಕೃತ್ಯದ ಅರಿವಾಗಿದ್ದು, ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಆಗ ಮೂವರು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಐ ಪುನೀತ್, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ನಿಲ್ಲದ ಆರೋಪಿಗಳು ಮಾರಕಾಸ್ತ್ರಗಳಿಂದ ಪಿಎಸ್‌ಐ ಅಣ್ಣಯ್ಯ ಮೇಲೆ ಹಲ್ಲೆಗೆ ಮುಂದಾದರು. ಆಗ ಪಿಐ ಪುನೀತ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಕುಸಿದು ಬಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇನ್ನೊಬ್ಬನನ್ನು ಸ್ಥಳದಲ್ಲೇ ಬಂಧಿಸಲಾಯಿತು.
ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಅಶೋಕ್ ಮತ್ತು ನಾರಾಯಣಸ್ವಾಮಿ ಚಿನ್ನಾಭರಣ, ಕಬ್ಬಿಣ, ಪೇಂಟಿಂಗ್ ಹಾಗೂ ಇತರೆ ಅಂಗಡಿಗಳನ್ನೇ ಗುರಿಯಾಗಿಸಿಕೊಂಡಿದ್ದರು. ಬೆಳಗ್ಗೆ ಹೊತ್ತು ಯಾವ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತಿದೆಯೋ ಅದೇ ಅಂಗಡಿಯಲ್ಲಿ ರಾತ್ರಿ ಹೊತ್ತು ಕಳವು ಮಾಡುತ್ತಿದ್ದರು.
ಆರೋಪಿ ಅಶೋಕ್ ವಿರುದ್ಧ 3 ಪ್ರಕರಣಗಳಿದ್ದು, ಮತ್ತೂಬ್ಬ ಆರೋಪಿ ನಾರಾಯಣಸ್ವಾಮಿ ವಿರುದ್ಧ ಉಡುಪಿ ಹಾಗೂ ರಾಜ್ಯದ ಇತರೆಡೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ಸುಧಾಕರ್ ತಂಡಕ್ಕೆ ಸೇರಿಸಿಕೊಂಡಿದ್ದು, ಈತ ಅಂಗಡಿಗಳ ಮುಂದೆ ನಿಂತು ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ರೋಲಿಂಗ್ ಶೆಟರ್ ಮೀಟಿ ಕಳ್ಳತನ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಕಳ್ಳರ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಠಾಣೆಯ ಅಧಿಕಾರಿ ತಿಳಿಸಿದ್ದಾರೆ.