ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದ ಘಟನೆ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೋಟ್ರಿ ಸಮೀಪದ ಹನುಮಾನ್ ದೇವಿ ಮಾತಾ ಮಂದಿರದೊಳಕ್ಕೆ ನುಗ್ಗಿದ ಕಳ್ಳರು ದೇವಾಲಯವನ್ನು ಅಪವಿತ್ರಗೊಳಿಸಿ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ:ದೀಪಾವಳಿಗೆ ಪಟಾಕಿ ಹಚ್ಚಬೇಕೆ? : ಸರಕಾರದ ಮಾರ್ಗಸೂಚಿ ಅನುಸರಿಸಿ
ಇಂಡಸ್ ನದಿ ಪಾತ್ರದ ಸಮೀಪ ಇರುವ ಹನುಮಾನ್ ದೇವಿ ಮಾತಾ ಮಂದಿರದೊಳಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಹೋಗಿರುವುದಾಗಿ ಕೋಟ್ರಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 295 ಹಾಗೂ ಪಾಕಿಸ್ತಾನ್ ದಂಡ ಸಂಹಿತೆಯ ವಿವಿಧ ಕಲಂ ಪ್ರಕಾರ ಎಫ್ ಐಆರ್ ದಾಖಲಿಸಿರುವುದಾಗಿ ಸಾಮ್ನಾ ಟಿವಿ ವರದಿ ಮಾಡಿದೆ.
ಕೋಟ್ರಿಯಲ್ಲಿರುವ ದೇವಸ್ಥಾನದಲ್ಲಿ ಇದೇ ಮೊದಲ ಬಾರಿ ಕಳ್ಳತನ ನಡೆದಿಲ್ಲ. 2021ನೇ ಸಾಲಿನ ಜನವರಿಯಲ್ಲಿಯೂ ಗುರು ಬಾಲಿಮಾಕ್ ದೇವಾಲಯದಲ್ಲಿ ಕಳ್ಳರು ಚಿನ್ನಾಭರಣ ಮತ್ತು ದೇವರ ಸಾವಿರಾರು ರೂಪಾಯಿ ಬೆಲೆ ಬಾಳುವ ಕಿರೀಟವನ್ನು ಕದ್ದೊಯ್ದಿರುವುದಾಗಿ ವರದಿ ತಿಳಿಸಿದೆ.
ಹನುಮಾನ್ ದೇವಿ ಮಾತಾ ಮಂದಿರದ ದೇವರ ಕೊರಳಲ್ಲಿದ್ದ ಎರಡು ನೆಕ್ಲೇಸ್ ಮತ್ತು ದೇವರ ಹುಂಡಿಯಲ್ಲಿದ್ದ 20 ಸಾವಿರ ರೂಪಾಯಿ ನಗದನ್ನು ಕಳ್ಳರು ಕದ್ದೊಯ್ದಿರುವುದಾಗಿ ಸಾಮ್ನಾ ವರದಿ ಮಾಡಿದೆ. ಸ್ಥಳೀಯರ ಪ್ರಕಾರ, ಹಲವಾರು ಮಂದಿ ದೇವಾಲದೊಳಕ್ಕೆ ನುಗ್ಗಿ ಅಪವಿತ್ರಗೊಳಿಸಿರುವುದಾಗಿ ದೂರಿದ್ದಾರೆ. ದೇವಿ ವಿಗ್ರಹವನ್ನು ಕೂಡಾ ಕಳ್ಳರು ಕಿತ್ತು ತೆಗೆದಿರುವುದಾಗಿ ವರದಿ ವಿವರಿಸಿದೆ.