Advertisement

ನಗರದಲ್ಲಿ ಕದ್ದವರು ನೇಪಾಳ ಗಡಿಯಲ್ಲಿ ಸೆರೆ!

12:09 PM Jan 25, 2018 | Team Udayavani |

ಬೆಂಗಳೂರು: ಕೆಲಸ ಕೊಟ್ಟ ಮಾಲೀಕರ ಮನೆಯಲ್ಲೇ ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಳವು ಮಾಡಿದ್ದ ವಜ್ರ, ಚಿನ್ನಾಭರಣಗಳನ್ನು ನೇಪಾಳದಲ್ಲಿ ಮಾರಾಟ ಮಾಡಿ ಅಲ್ಲಿಯೇ ಸೆಟ್ಲ ಆಗುವ ಉದ್ದೇಶದಿಂದ ಉತ್ತರಖಾಂಡ-ನೇಪಾಳ ನಡುವಿನ ಬನ್‌ಬಾಸ ಗಡಿ ದಾಟಲು ಸಿದ್ಧವಾಗುತ್ತಿದ್ದಾಗ ಭೀಮ್‌ ಬಹದ್ದೂರ್‌ ಶಾಹಿ ( 46) ಆತನ ಪತ್ನಿ ಮೀನಾ ಶಾಹಿ ( 45) ಎಂಬ ಆರೋಪಿಗಳನ್ನು ಬಂಧಿಸಿ ಕರೆತಂದಿರುವ ಪೊಲೀಸರು, ದಂಪತಿಗೆ ಜೈಲಿನ ದಾರಿ ತೋರಿಸಿದ್ದಾರೆ. 

ಆರೋಪಿಗಳಿಂದ ಒಂದು ಕೋಟಿ ರೂ. ಮೌಲ್ಯದ ವಜ್ರ, ಚಿನ್ನಾಭರಣಗಳು ಹಾಗೂ ದುಬಾರಿ ಗಡಿಯಾರ, ಕ್ಯಾಮೆರಾ ವಶಪಡಿಸಿಕೊಳ್ಳ ಲಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿ ರುವ ಇನ್ನಿಬ್ಬರು ಆರೋಪಿಗಳಾದ ಧೀರ್‌ಶಾಹಿ ಹಾಗೂ ಧೀರಜ್‌ ಶಾಹಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

ಆಭರಣ ಹೇಗೆ ದೋಚಿದ್ರು?: ಎಚ್‌ಆರ್‌ಬಿಆರ್‌ ಲೇಔಟ್‌ನ 3ನೇ ಕ್ರಾಸ್‌ನಲ್ಲಿ ವಾಸವಿರುವ ಉದ್ಯಮಿ ನಾಗರಾಜ್‌ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ನೇಪಾಳದ ಕೈಲಾಲಿ ಜಿಲ್ಲೆಯ ರಥಿಪುರ್‌ ಗ್ರಾಮದ ಭೀಮ್‌ ಬಹದ್ದೂರ್‌ ಹಾಗೂ ಆತನ ಪತ್ನಿ ಮನೆಯಲ್ಲಿ ಕೋಟ್ಯಾಂತರ ರೂ.ಮೌಲ್ಯದ ಆಭರಣ ಹಾಗೂ ನಗದು ಇರುವುದನ್ನು ಗಮನಿಸಿದ್ದರು. ಹೇಗಾದರೂ ಚಿನ್ನಾಭರಣ ದೋಚಿ, ಊರಿಗೆ ವಾಪಾಸ್‌ ಹೋಗುವ ಸ್ಕೆಚ್‌ ಹಾಕಿದ್ದರು. ಅದರಂತೆ ಕಳೆದ ವರ್ಷ ಡಿಸೆಂಬರ್‌ 8ರಂದು ನಾಗರಾಜ್‌ ಕುಟುಂಬ ಸಮೇತ ತಮಿಳುನಾಡಿನ ದೇವಾಲಯಗಳಿಗೆ
ಹೋಗಿದ್ದರು. ಅದೇ ದಿನ ರಾತ್ರಿ ನಿಗದಿತ ಯೋಜನೆಯಂತೆ ಆರೋಪಿಗಳು 1ನೇ ಮಹಡಿಯ ಬಾಲ್ಕನಿ ಹತ್ತಿ ಡೋರ್‌ ಲಾಕ್‌ ಒಡೆದು ಅಲ್ಮೇರಾ ತೆಗೆದು ಲಕ್ಷಕ್ಕೂ ಅಧಿಕ ನಗದು, ಕೋಟ್ಯಾಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಡಿ.11ರಂದು ಘಟನೆ ಬೆಳಕಿಗೆ ಬಂದಿತ್ತು.

ಈ ಸಂಬಂಧ ನಾಗರಾಜ್‌ ಅಳಿಯ ಚೈತನ್ಯ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ ಬಾಣಸವಾಡಿ ಠಾಣೆ ಇನ್ಸ್‌ಪೆಕ್ಟರ್‌ ಮುನಿಕೃಷ್ಣ ನೇತೃತ್ವದ ತಂಡ, ಮೊದಲಿಗೆ ಅದೇ ಭಾಗದಲ್ಲಿ ವಾಸವಿದ್ದ ನೇಪಾಳಿಗರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪಿಗಳು ರೈಲು ಮೂಲಕ ದೆಹಲಿ ತಲುಪಿರುವುದು ಗೊತ್ತಾಯಿತು. ಅಲ್ಲದೆ ಬನ್‌ ಬಾಸ ಗಡಿ ಮೂಲಕವೇ ನೇಪಾಳಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಈ ನಿಟ್ಟಿನಲ್ಲಿ ಎರಡು ವಿಶೇಷ ತಂಡಗಳು ಬನ್‌ ಬಾಸ ಗಡಿ ಪ್ರದೇಶಕ್ಕೆ ತೆರಳಿದ್ದವು, ಗಡಿಯಲ್ಲಿ ಒಂದು ತಂಡ ಹಾಗೂ ಮತ್ತೂಂದು ತಂಡ ನೇಪಾಳದಲ್ಲಿ ಆರೋಪಿಗಳ ಸೆರೆಗೆ ಹೊಂಚುಹಾಕಿತ್ತು. ಗಡಿಯಲ್ಲಿಯೇ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಚರ್ಚಿಸಿ ಅಲ್ಲಿಯೇ ಕಾದು ಕುಳಿತಿದ್ದಾಗ ಭೀಮ್‌ ಬಹದ್ದೂರ್‌ ಶಾಹಿ ದಂಪತಿ ಕಳವು ಮಾಲಿನ ಸಮೇತ ಸಿಕ್ಕಿಬಿದ್ದಿದ್ದಾರೆ. ಬಳಿಕ ಅವರ ಬಳಿಯಿದ್ದ ಆಭರಣಗಳನ್ನು ಜಪ್ತಿ ಮಾಡಿಕೊಂಡು ವಾಪಾಸ್‌ ಕರೆತರಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

ನೇಪಾಳ ಪೊಲೀಸರ ವಶದಲ್ಲಿ ಮತ್ತೂಬ್ಬ ಆರೋಪಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಧೀರ್‌ಶಾಹಿ, ಧೀರಜ್‌ ಶಾಹಿ, ಅಪೀಲ್‌ ಸಾಹಿ ನೇಪಾಳದ ಕೈಲಾಲಿ ಜಿಲ್ಲೆಯಲ್ಲಿರುವ ಶಂಕೆ ಮೇರೆಗೆ ಒಂದು ತಂಡ ಅಲ್ಲಿಗೆ ತೆರಳಿ, ಅತ್ತರಿಯ ಧನಗಡಿ, ಮಹೇಂದ್ರನಗರ, ರಥಿಪುರ್‌ಗಳಲ್ಲಿ ಮೂರು ದಿನಗಳ ಕಾರ್ಯಾಚರಣೆ ನಡೆಸಿ ಅಪೀಲ್‌ ಸಾಹಿನನ್ನ ಬಂಧಿಸಿ ಕರೆತಂದಿದೆ. ಆತನಿಂದ 95 ಗ್ರಾಂ ಚಿನ್ನಾಭರಣ ಹಾಗೂ 29 ಸಾವಿರ. ರೂ. ನೇಪಾಳ ಕರೆನ್ಸಿ ಜಪ್ತಿ ಮಾಡಿಕೊಳ್ಳಲಾಯಿತು.

ಆದರೆ, ರಾಜತಾಂತ್ರಿಕ ಕಾರಣಗಳಿಂದ ಆತನನ್ನು ನಗರಕ್ಕೆ ಕರೆತಂದಿಲ್ಲ. ಅಲ್ಲಿನ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರಿದಿದ್ದು, ಈ ತಂಡ ಇದೇ ರೀತಿಯ ಬೇರೆ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next