ಉಳ್ಳಾಲ: ಉಳ್ಳಾಲ ವ್ಯಾಪ್ತಿಯಲ್ಲಿ ಮನೆಗಳಿಂದ ನಗ ನಗದು ದೋಚುತ್ತಿದ್ದ ಕಳ್ಳನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಕಳವುಗೈಯಲಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮನೆ ಮಂದಿ ಹೊರಗಿರುವುದನ್ನು ಖಾತರಿಪಡಿಸಿ ಖಾಲಿ ಮನೆಗಳನ್ನು ಆಯ್ದು ಕಳವು ನಡೆಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್(35) ಬಂಧಿತ ಆರೋಪಿಯಾಗಿದ್ದು, ಈತ ಸೋಮೇಶ್ವರ ಬಸ್ಸು ನಿಲ್ದಾಣದ ಮನೆ ಮತ್ತು ಮತ್ತು ಮೇಲಂಗಡಿಯ ಮನೆಗೆ ಮತ್ತು ದೈವಸ್ಥಾನದಿಂದ ಕಳವು ಮಾಡಿದ್ದು, ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಮತ್ತು ಸೋಮೇಶ್ವರದ ಹೋಂ ಸ್ಟೇಯೊಂದರ ಸಿಸಿಟಿವಿಯಲ್ಲಿ ದಾಖಲಾದ ಚಿತ್ರಣವನ್ನು ಆಧರಸಿ ಉಳ್ಳಾಲ ಪೊಲೀಸರು ಬಂಧಿಸಿ ಕಳವು ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೊವಾಝ್ ಮಾಸ್ತಿಕಟ್ಟೆ ನಿವಾಸಿಯಾದರೂ ಆತ ಹೆಚ್ಚಾಗಿ ಕಣ್ಣೂರಿನಲ್ಲಿರುವ ಪತ್ನಿ ಮನೆಯಲ್ಲಿ ವಾಸವಾಗಿದ್ದು, ಮಾಸ್ತಿಕಟ್ಟೆಯ ಮನೆಗೆ ಆಗಾಗ್ಗೆ ಬರುತ್ತಿದ್ದ ಈತ ಬುಧವಾರ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯಿರುವ ಪ್ರಶಾಂತ್ ಅವರ ಮನೆಯ ಹಿಂಬಾಗಿಲು ಮುರಿದು ಕರಿಮಣಿ ಸರ, ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ ಮತ್ತು ಮೂರು ಸಾವಿರ ನಗದನ್ನು ಕದ್ದಿದ್ದ. ಪ್ರಶಾಂತ್ ತನ್ನ ಕುಟುಂಬದೊಂದಿಗೆ ಉಡುಪಿಯಲ್ಲಿರುವ ಪತ್ನಿ ಮನೆಗೆ ತೆರಳಿದ್ದಾಗ ಈತ ಕಳ್ಳತನ ನಡೆಸಿದ್ದ. ಅದೇ ದಿನ ಮೇಂಗಡಿಯಲ್ಲಿ ಕಿರೋಡಿಯನ್ ಕುಟುಂಬಸ್ಥರ ದೈವಸ್ಥಾನಕ್ಕೆ ಕನ್ನ ಹಾಕಿದ್ದು, ದೈವದ ಹಿತ್ತಾಳೆಯ ಪರಿಕರಗಳನ್ನು ಕಳವು ನಡೆಸಿದ್ದು, ಅಲ್ಲೇ ಪಕ್ಕದ ದೈವಸ್ಥಾನವನ್ನು ನೋಡಿಕೊಳ್ಳುತಿದ್ದ ಪ್ರಸಾದ್ ಅವರ ಮನೆ ಹಿಂಬಾಗಿಲನ್ನು ಮುರಿದು ಕಪಾಟಿನಲ್ಲಿಟ್ಟಿದ್ದ 56 ಗ್ರಾಂ ಚಿನ್ನವನ್ನು ಕಳವು ನಡೆಸಿದ್ದ.
ಕಳವುಗೈದ ದೃಶ್ಯ ಸ್ಥಳೀಯ ಮನೆಯೊಂದರಲ್ಲಿ ದಾಖಲಾಗಿದ್ದು, ಸೋಮೇಶ್ವರ ಬಳಿಯ ಹೋಮಸ್ಟೇಯೊಂದರಲ್ಲಿನ ಸಿಸಿಟಿವಿಯಲ್ಲಿ ಈತ ಕಳವಿಗೆ ಯತ್ನಿಸಿರುವ ದೃಶ್ಯ ದಾಖಲಾಗಿದೆ. ಉಳ್ಳಾಲ ಪೊಲೀಸರು ಸಿಸಿಟಿವಿಯ ಆಧಾರಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.