Advertisement

ಆನ್‌ಲೈನ್‌ನಲ್ಲಿ ಕಳ್ಳ-ಪೊಲೀಸ್‌ ಆಟ!

06:28 PM Mar 30, 2018 | |

ಒಂದೋ ಹೇಳಿದ್ದನ್ನು ಮಾಡು, ಇಲ್ಲ ನಮ್ಮೆಲ್ಲರಿಗೂ ಪಿಕ್ಚರ್‌ಗೆ ಟಿಕೆಟ್‌ ಕೊಡಿಸು … ಹಾಗಂತ ಸೀನಿಯರ್‌ಗಳು ರ್ಯಾಗ್‌ ಮಾಡುತ್ತಾರೆ. ಅವರು ಹೇಳಿದ್ದನ್ನು ಮಾಡೋದಕ್ಕೆ ಅವನಿಗೆ ಇಷ್ಟ ಇಲ್ಲ. ಹಾಗಂತ ಟಿಕೆಟ್‌ ಕೊಡಿಸುವುದಕ್ಕೆ ಜೇಬಲ್ಲಿ ಕಾಸಿಲ್ಲ. ಹಾಗಂತ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಮೊದಲನೆಯದಕ್ಕಿಂತ, ಎರಡನೆಯದನ್ನು ಅವನು ಆಯ್ಕೆ ಮಾಡಿಕೊಳ್ಳುತ್ತಾನೆ. ಸೀದಾ ಟಿಕೆಟೆಂಗ್‌ ವೆಬ್‌ಸೈಟ್‌ಗೆ ಹೋಗುತ್ತಾನೆ. ಅದನ್ನು ಹ್ಯಾಕ್‌ ಮಾಡಿ ರ್ಯಾಗ್‌ ಮಾಡಿದ ಸೀನಿಯರ್‌ಗಳಿಗೆ ಟಿಕೆಟ್‌ ಕೊಡಿಸಿ, ಅವರಿಂದ ಬಚಾವ್‌ ಆಗುತ್ತಾನೆ.

Advertisement

ಇದು ಆರಂಭ ಅಷ್ಟೇ. ಮುಂದೊಂದು ದಿನ ಅವನು ಒಂದು ದೊಡ್ಡ ಸಮಸ್ಯೆಯೊಳಗೆ ಸಿಕ್ಕಿಕೊಂಡಾಗ ನೇರವಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಬ್ಲಾಕ್‌ಮೇಲ್‌ ಮಾಡುತ್ತಾನೆ. ತನ್ನನ್ನು ಈ ಸಮಸ್ಯೆಯಿಂದ ಪಾರು ಮಾಡದಿದ್ದರೆ, ಯಾರಿಗೂ ಗೊತ್ತಿರದ ವಿದೇಶಿ ಬ್ಯಾಂಕ್‌ನಲ್ಲಿರುವ ಅವರ ಎರಡು ಸಾವಿರ ಕೋಟಿ ರೂಪಾಯಿಗಳ ವಿಷಯವನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಮುಖ್ಯಮಂತ್ರಿಗಳಿಗೆ ಬೇರೆ ದಾರಿಯೇ ಇಲ್ಲ. ಅವನು ಹೇಳಿದಂತೆ ಕೇಳಬೇಕು, ಇಲ್ಲ ತನ್ನ ಮಾನ ಹರಾಜಿಗಿಡಬೇಕು …

ಇದುವರೆಗೂ ಚಿತ್ರಗಳೆಂದರೆ, ನಾಯಕ ದುಷ್ಟರನ್ನು ಸದೆಬಡಿದು, “ಧರ್ಮಸಂಸ್ಥಾಪನಾರ್ಥಾಯಯ, ಸಂಭವಾಮಿ ಯುಗೇ ಯುಗೇ …’ ಮಾಡುವುದನ್ನು ಹಲವರು ಚಿತ್ರಗಳಲ್ಲಿ ನೋಡಿರಬಹುದು. ಆದರೆ, ಇದೇ ಮೊದಲ ಬಾರಿಗೆ ನಾಯಕನೊಬ್ಬ ಅನೀತಿ-ಅಧರ್ಮವನ್ನು, ತನ್ನ ಒಳಿತಿಗಾಗಿ ಬಳಸಿಕೊಳ್ಳುವುದನ್ನು ನೋಡಬಹುದು. ತಾನು ನಿಲ್ಲಬೇಕು, ಗೆಲ್ಲಬೇಕು, ಬೆಳೆಯಬೇಕು ಎಂಬ ಕಾರಣಕ್ಕೆ ಒಂದು ವ್ಯವಸ್ಥೆಯನ್ನು ಬಳಸಿಕೊಂಡು, ಅದರಿಂದ ಹಣ ಮಾಡುವುದನ್ನು ನೋಡಬಹುದು. ಇದೆಲ್ಲವನ್ನೂ ಅವನು ಹೇಗೆ ಮಾಡುತ್ತಾನೆ ಎಂದರೆ, ಅದಕ್ಕೆ ಉತ್ತರ ಹ್ಯಾಕಿಂಗ್‌.

ಇಂಟರ್‌ನೆಟ್‌ನಲ್ಲಿರುವ ಮಾಹಿತಿಯನ್ನು ಹ್ಯಾಕ್‌ ಮಾಡಿ, ಅದನ್ನು ಮಾರುವ ಮತ್ತು ಅದನ್ನು ಬೇಕಾದಂತೆ ಬಳಸಿಕೊಳ್ಳುವ ಒಂದು ದೊಡ್ಡ ಜಾಲವೇ ಚಾಲ್ತಿಯಲ್ಲಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದುವರೆಗೂ ಈ ಜಾಲದ ಕುರಿತು ಕೆಲವು ಚಿತ್ರಗಳಲ್ಲಿ ಅಲ್ಲಲ್ಲಿ ಬಂದಿತ್ತು. ಆದರೆ, ತಂತ್ರಜ್ಞಾನ, ಮಾಹಿತಿ ಸೋರಿಕೆ, ಹ್ಯಾಕಿಂಗ್‌ ಮುಂತಾದ ಹಲವು ವಿಷಯಗಳನ್ನು ಪೂರ್ಣಪ್ರಮಾಣವಾಗಿಟ್ಟುಕೊಂಡಿರುವ ಚಿತ್ರ ಕನ್ನಡದಲ್ಲಿ ಇದುವರೆಗೂ ಬಂದಿರಲಿಲ್ಲ. “ಗುಳ್ಟು ಆನ್‌ಲೈನ್‌’ ಅಂಥದ್ದೊಂದು ಕೊರತೆ ನೀಗಿಸಿದೆ.

ಮೊದಲೇ ಹೇಳಿದಂತೆ ಇದು ಹ್ಯಾಕಿಂಗ್‌ ಕುರಿತ ಮತ್ತು ಹ್ಯಾಕರ್‌ ಒಬ್ಬನ ಕಥೆ ಇರುವ ಚಿತ್ರ. ಆತ ಹೇಗೆ ಮಾಹಿತಿ ಕಳ್ಳತನ ಮತ್ತು ಮಾಹಿತಿ ಸೋರಿಕೆ ಮಾಡಿ, ಬಲಿಷ್ಠನಾಗುತ್ತಾನೆ ಎಂದು ಚಿತ್ರ ಹೇಳುತ್ತದೆ. ಈ ತರಹದ ವಿಷಯಗಳನ್ನು ಹೇಳುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರಿಗೆ ಅರ್ಥ ಮಾಡಿಸುವುದು ಅಷ್ಟು ಸುಲಭವಲ್ಲ. ಆದರೆ, ಜನಾರ್ಧನ್‌ ಈ ವಿಷಯದಲ್ಲಿ ಗೆದ್ದಿದ್ದಾರೆ. ಇಂಟರ್‌ನೆಟ್‌, ತಂತ್ರಜ್ಞಾನ, ಹ್ಯಾಕಿಂಗ್‌, ಮಾಹಿತಿ ಸೋರಿಕೆ ಮುಂತಾದ ಹಲವು ವಿಷಯಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಹೋಗಿದ್ದಾರೆ.

Advertisement

ಅದೇ ಕಾರಣಕ್ಕೆ ಚಿತ್ರ ಇಷ್ಟವಾಗುತ್ತಾ ಹೋಗುತ್ತದೆ. ಅದರಲ್ಲೂ ಆಧಾರ್‌ ಸಂಖ್ಯೆ ಮತ್ತು ಅದರ ಪ್ರಸ್ತುತೆಯ ಬಗ್ಗೆ ಎದ್ದಿರುವ ಹಲವು ಸಂಶಯ, ಗೊಂದಲಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದರಿಂದ ಮತ್ತು ಈ ಚಿತ್ರವು ಅಂತಹ ವಿಷಯಗಳ ಸುತ್ತವೇ ಸುತ್ತುವುದರಿಂದ ಈ ಚಿತ್ರ ಇನ್ನಷ್ಟು ಹತ್ತಿರವಾಗುತ್ತಾ ಹೋಗುತ್ತದೆ. ಚಿತ್ರದ ಮೊದಲಾರ್ಧ ಒಬ್ಬ ಸಾಮಾನ್ಯ ಸಾಫ್ಟ್ವೇರ್‌ ತಂತ್ರಜ್ಞನ ಸುತ್ತ ಸುತ್ತುತ್ತದೆ.

ಇಲ್ಲಿ ಸ್ನೇಹ, ಪ್ರೀತಿ, ಒಂದಿಷ್ಟು ಕಳ್ಳಾಟ, ಕಣ್ಣಾಮುಚ್ಚಾಲೆಯ ಸುತ್ತ ಸುತ್ತುತ್ತದೆ. ದ್ವಿತೀಯಾರ್ಧ ಶುರುವಾಗುತ್ತಿದ್ದಂತೆಯೆ, ಚಿತ್ರಕ್ಕೊಂದು ದೊಡ್ಡ ಟ್ವಿಸ್ಟ್‌ ಸಿಗುತ್ತದೆ. ಅಲ್ಲಿಂದ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ಕೊನೆಗೆ ಚಿತ್ರ ಮುಗಿಯುವುದೇ ಗೊತ್ತಾಗದಷ್ಟು ಹಿಡಿದಿಟ್ಟು ನೋಡಿಸಿಕೊಂಡು ಹೋಗುತ್ತದೆ. ಈ ಚಿತ್ರದ ಸ್ಪೆಷಾಲಿಟಿ ಎಂದರೆ, ಇಲ್ಲಿ ಹೀರೋ, ವಿಲನ್‌ ಅಂತೇನಿಲ್ಲ. ಹೀರೋ ಎನಿಸಿಕೊಂಡವರು, ವಿಲನ್‌ ಆಗುತ್ತಾರೆ.

ವಿಲನ್‌ ಆದವರು ಹೀರೋ ಆಗುತ್ತಾರೆ. ಆ ಮಟ್ಟಿಗೆ ಇದೊಂದು ವಿಭಿನ್ನ ಮೈಂಡ್‌ಗೇಮ್‌ ಚಿತ್ರ. ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ ಜೊತೆಗೆ ಗಮನಸೆಳೆಯುವ ಇನ್ನೊಬ್ಬರೆಂದರೆ ಅದು ನಾಯಕ ನವೀನ್‌ ಶಂಕರ್‌. ಹಲವು ಶೇಡ್‌ಗಳಿರುವ ಈ ಪಾತ್ರವನ್ನು ನವೀನ್‌ ಬಹಳ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ. ಸೋನು, ಅವಿನಾಶ್‌, ರಂಗಾಯಣ ರಘು, ಪವನ್‌ ಕುಮಾರ್‌ ಎಲ್ಲರೂ ತಮ್ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತ ಈ ಚಿತ್ರದ ಇನ್ನೊಂದು ಪ್ಲಸ್‌ ಪಾಯಿಂಟು.

ಚಿತ್ರ: ಗುಳ್ಟು
ನಿರ್ದೇಶನ: ಜನಾರ್ಧನ್‌ ಚಿಕ್ಕಣ್ಣ
ನಿರ್ಮಾಣ: ಪ್ರಶಾಂತ್‌ ರೆಡ್ಡಿ ಮತ್ತು ದೇವರಾಜ್‌
ತಾರಾಗಣ: ನವೀನ್‌ ಶಂಕರ್‌, ಸೋನು, ಅವಿನಾಶ್‌, ರಂಗಾಯಣ ರಘು ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next