Advertisement

ಟೈಟಾನ್ಸ್‌ಗೆ ತಿವಿದ ಬುಲ್ಸ್‌

07:23 AM Jul 31, 2017 | Team Udayavani |

ಹೈದರಾಬಾದ್‌: ನಾಯಕ ರೋಹಿತ್‌ ಕುಮಾರ್‌ ಅವರ ಚುರುಕಿನ ರೈಡಿಂಗ್‌, ಸಂಘಟನಾತ್ಮಕ ಹೋರಾಟದ ಫ‌ಲವಾಗಿ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. 

Advertisement

ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್‌ 31-21 ರಿಂದ ತೆಲುಗು ಟೈಟಾನ್ಸ್‌ಗೆ ಆಘಾತ ನೀಡಿತು. ಟೈಟಾನ್ಸ್‌ಗೆ ಇದು ಕೂಟದಲ್ಲಿ ಸತತ 2ನೇ ಸೋಲಾಗಿದೆ. ಇದಕ್ಕೂ ಮುನ್ನ ಪಾಟ್ನಾ ವಿರುದ್ಧ ಸೋತಿದೆ. ಬುಲ್ಸ್‌ ಮತ್ತು ಟೈಟಾನ್ಸ್‌ ನಡುವಿನ ಪಂದ್ಯ ಆರಂಭದಲ್ಲಿ ಕುತೂಹಲ ಹುಟ್ಟಿಸಿತ್ತು. ಆದರೆ ಬೆಂಗಳೂರು ತಂಡ ನಿರಂತರವಾಗಿ ಅಂಕಗಳನ್ನು ಏರಿಸಿ ಕೊಳ್ಳುತ್ತಾ ಸಾಗಿತು. ಹೀಗಾಗಿ ನಿರಂತರವಾಗಿ ಮುನ್ನಡೆಯನ್ನು ಕಾಯ್ದು ಕೊಂಡಿತು. ಬುಲ್ಸ್‌ ಪರ ರೋಹಿತ್‌ ಕುಮಾರ್‌ ಮತ್ತು ಅಜಯ್‌ ಕುಮಾರ್‌ ಯಶಸ್ವಿ ರೈಡರ್‌ ಆಗಿ ಕಾಣಿಸಿಕೊಂಡರೆ, ಟೈಟಾನ್ಸ್‌ನ ತಾರಾ ಆಟಗಾರ ರಾಹುಲ್‌ ಚೌಧರಿ ವೈಫ‌ಲ್ಯ ಎದುರಿಸಿದರು. ಇದು ಟೈಟಾನ್ಸ್‌ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿತು.

ಮೊದಲ ಅವಧಿಯಲ್ಲೂ ಬುಲ್ಸ್‌ ಮೇಲುಗೈ: ಆರಂಭದಿಂದಲೇ ಬೆಂಗಳೂರು ಬುಲ್ಸ್‌ ಚುರುಕಿನ ಆಟ ಆರಂಭಿಸಿತು. ಟೈಟಾನ್ಸ್‌ನ ರಾಹುಲ್‌ ಚೌಧರಿಯನ್ನು ಹಲವು ಬಾರಿ ತನ್ನ ರಕ್ಷಣಾ ಬಲೆಯಲ್ಲಿ ಕೆಡುವುದರಲ್ಲಿ ಬುಲ್ಸ್‌ ಆಟಗಾರರು ಯಶಸ್ವಿಯಾದರು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬುಲ್ಸ್‌ ತಂಡ 14  -10 ರಿಂದ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಬುಲ್ಸ್‌ ಪರ ಭರ್ಜರಿ ಆಟ ಪ್ರದರ್ಶಿಸಿದ ರೋಹಿತ್‌ 12, ಅಜಯ್‌ ಕುಮಾರ್‌ 7 ಅಂಕ ಪಡೆದರು. ಟೈಟಾನ್ಸ್‌ ಪರ ರಾಹುಲ್‌ ಚೌಧರಿ ಮತ್ತು ರಾಕೇಶ್‌ ಕುಮಾರ್‌ ತಲಾ 4 ಅಂಕ ಪಡೆದರು. ಆದರೆ ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ, ಚೌಧರಿ ಮತ್ತು ರಾಕೇಶ್‌ ವೈಫ‌ಲ್ಯ ಎದುರಿಸಿದರು. ಬುಲ್ಸ್‌ನ ಸಂಘಟನಾತ್ಮಕ ಹೋರಾಟಕ್ಕೆ ಟೈಟಾನ್ಸ್‌ ಮೊದಲ ಅವಧಿಯಲ್ಲಿ 1 ಬಾರಿ, 2ನೇ ಅವಧಿಯಲ್ಲಿ 1 ಬಾರಿ ಆಲೌಟ್‌ ಆಯಿತು. ಹೀಗಾಗಿ ಬುಲ್ಸ್‌ 4 ಆಲೌಟ್‌ ಅಂಕ ಸೇರ್ಪಡೆಯಾಯಿತು. ಬುಲ್ಸ್‌ ರೈಡಿಂಗ್‌ನಲ್ಲಿ ಒಟ್ಟು 17, ಟ್ಯಾಕಿಂಗ್‌ ನಲ್ಲಿ 10 ಅಂಕವನ್ನು ಪಡೆಯಿತು. ಟೈಟಾನ್ಸ್‌ ರೈಡಿಂಗ್‌ನಲ್ಲಿ 15, ಟ್ಯಾಕಿಂಗ್‌ನಲ್ಲಿ 4 ಅಂಕ ಪಡೆಯಿತು. ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ಆ.4 ರಂದು ತಮಿಳ್‌ ತಲೈವಾಸ್‌ ವಿರುದ್ಧ ಆಡಲಿದೆ. 

ಯು ಮುಂಬಾಗೆ ರೋಚಕ ಜಯ
ಹೈದರಾಬಾದ್‌: ಕೊನೆಯ ಕ್ಷಣದವರೆಗೂ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ ಪಂದ್ಯ ಇದಾಗಿತ್ತು. ಕೊನೆಗೂ ಯು ಮುಂಬಾ ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಹರ್ಯಾಣ ಸ್ಟೀಲರ್ ವಿರುದ್ಧ 29-28 ರಿಂದ ರೋಚಕ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್‌ ವಿರುದ್ಧ ಸೋತ ಮಂಬೈ 2ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಪಂದ್ಯದ ಆರಂಭದಲ್ಲಿ ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಗೆ ಸೇರ್ಪಡೆಗೊಂಡಿರುವ ಹರ್ಯಾಣ ಭರ್ಜರಿ ಪ್ರದರ್ಶನ ನೀಡಿತ್ತು. ನಿರಂತರವಾಗಿ ಅಂಕವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಸಂಘಟನಾತ್ಮಕ ಪ್ರದರ್ಶನ ಹೊರಬರುತ್ತಿತ್ತು. ಇದರ ಫ‌ಲವಾಗಿ ಮೊದಲ ಅವಧಿ ಅಂತ್ಯದಲ್ಲಿ ಹರ್ಯಾಣ 15-11 ರಿಂದ ಮುನ್ನಡೆ ಪಡೆದಿತ್ತು. 

2ನೇ ಅವಧಿಯಲ್ಲಿ ಹರ್ಯಾಣಕ್ಕೆ ಆಘಾತ: ಮೊದಲನೇ ಅವಧಿಯ ಮುನ್ನಡೆಯಿಂದ ಹುಮ್ಮಸ್ಸಿನಲ್ಲಿದ್ದ ಹರ್ಯಾಣ 2ನೇ ಅವಧಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಹೀಗಾಗಿ ಒಂದು ಹಂತದಲ್ಲಿ ಹರ್ಯಾಣ 19-14 ರಿಂದ ಮುನ್ನಡೆಯಲ್ಲಿತ್ತು. ನಂತರ ಮುಂಬೈ ತಿರುಗಿ ಬಿದ್ದಿತು.
ನಾಯಕ ಅನೂಪ್‌ ಕುಮಾರ್‌ ಮತ್ತು ಕಾಶಿಲಿಂಗ್‌ ಅಡಕೆ ಎದುರಾಳಿ ಕೋರ್ಟ್‌ನಿಂದ ಒಂದರ ಹಿಂದೆ ಒಂದರಂತೆ ರೈಡಿಂಗ್‌ ಅಂಕ ತಂದರು. ಹರ್ಯಾಣ ಆಲೌಟಾಯಿತು. ಈ ಹಂತದಲ್ಲಿ ಮುಂಬೈ 22-20 ರಿಂದ ಮುನ್ನಡೆ ಪಡೆಯಿತು. ಆನಂತರ ತನ್ನ ಮುನ್ನಡೆಯನ್ನು ಕೊಯ್ದುಕೊಳ್ಳುತ್ತಾ
ಸಾಗಿತು. ಅಂತಿಮ ಹಂತದಲ್ಲಿ ಹರ್ಯಾಣ ಮತ್ತೆ ಚೇತರಿಕೆಯ ಪ್ರದರ್ಶನ ನೀಡಿತ್ತು. ಹೀಗಾಗಿ ಪಂದ್ಯ ತೀವ್ರ ಕುತೂಹಲ ಹುಟ್ಟಿಸಿತ್ತು. ಆದರೆ ಅಂತಿಮವಾಗಿ ಮುಂಬೈ ಕೇವಲ 1 ಅಂಕದ ಅಂತರದಿಂದ ಜಯ ಸಾಧಿಸಿತು. ಮುಂಬೈ ಮತ್ತು ಹರ್ಯಾಣ ತಂಡಗಳು ತಲಾ ಒಂದು ಬಾರಿ ಆಲೌಟ್‌ ಆದವು. 

Advertisement

ಸೆಲ್ವಮಣಿಗೆ ಗಾಯ, ಜೈಪುರಕ್ಕೆ ಅಲಭ್ಯ?
ಹೈದರಾಬಾದ್‌: ಜೈಪುರ ಪಿಂಕ್‌ ಪ್ಯಾಥರ್ ಪ್ರೊಕಬಡ್ಡಿ ತಂಡದ ತಾರಾ ಆಟಗಾರ ರೈಡರ್‌ ಕೆ.ಸೆಲ್ವಮಣಿ ಕಾಲು ನೋವಿಗೆ ತುತ್ತಾಗಿದ್ದಾರೆ. ಬಹುತೇಕ ಮುಂದಿನ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಡೆಲ್ಲಿ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಅವರು ಗಾಯಕ್ಕೆ ತುತ್ತಾಗಿದ್ದರು. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಅವರು ಆಟ ವಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇದು ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಮಾಲೀಕತ್ವದ ಜೈಪುರ ತಂಡಕ್ಕೆ ಚಿಂತೆ ಹೆಚ್ಚಿಸಿದೆ. ಸೆಲ್ವಮಣಿಗೆ ಸೋಮವಾರ ಜೈಪುರದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದಾರೆ. ಬಳಿಕವಷ್ಟೇ ಅವರು ಮುಂದಿನ ಪಂದ್ಯಗಳಿಗೆ ಲಭ್ಯವಿದ್ದಾರಾ? ಎನ್ನುವ ಮಾಹಿತಿ ಸಿಗಲಿದೆ ಎಂದು ಉದಯವಾಣಿಗೆ ತಂಡದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಸೆಲ್ವಮಣಿ ಅವರನ್ನು ಹರಾಜಿನಲ್ಲಿ ಜೈಪುರ 73 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಇವರು ತಂಡದಿಂದ ಹೊರಬಿದ್ದರೆ ಇವರ ಸ್ಥಾನಕ್ಕೆ ಇನ್ನೋರ್ವ ಆಟಗಾರರನ್ನು ತರುವುದು ಜೈಪುರಕ್ಕೆ ಕಷ್ಟವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next