Advertisement
ಪ್ರವಾಹದಲ್ಲಿ ಸಿಲುಕಿದ್ದ ಲಾದಯಗುಂದಿಯ ಗರ್ಭಿಣಿ ಮಹಿಳೆ ಅಕ್ಷತಾ ಹಿರೇಮಠ ಹೀಗೆ ಹೇಳಿ ಕಣ್ಣೀರಾದರು. ನೀರು ಬರುತ್ತ ಅಂತಾ ಹೇಳಿದಾಗ ಮನೆಯ ಸಾಮಾನು ಖಾಲಿ ಮಾಡುವ ಅವಸರ. ಅದರ ಜೊತೆಗೆ ಗರ್ಭಿಣಿಯರಾದ ನನ್ನ ಮತ್ತು ನಮ್ಮ ಅಕ್ಕನನ್ನು ರಕ್ಷಿಸುವುದು ನಮ್ಮ ಹೆತ್ತವರಿಗೆ ದೊಡ್ಡ ಚಿಂತೆಯಾಗಿತ್ತು. ಆ ದೇವರ ರೂಪದಲ್ಲಿ ಹಲವರು ಬಂದು ಕಾಪಾಡಿದರು ಎಂದು ಅಕ್ಷತಾ ನೆನೆದರು.
Related Articles
Advertisement
ಮನೆಗಳ ಸ್ವಚ್ಛತೆಯೆ ನಿತ್ಯದ ಕೆಲಸ: ಲಾಯದಗುಂದಿ, ಆಸಂಗಿ ಗ್ರಾಮಗಳ ಮನೆಗಳಲ್ಲಿ ನೀರು ಹೊಕ್ಕಿದ್ದರಿಂದ ಕೆಸರು ತುಂಬಿದೆ. ಅದನ್ನು ಕಳೆದ ಮೂರ್‍ನಾಲ್ಕು ದಿನಗಳಿಂದ ಸ್ವಚ್ಛ ಮಾಡುವುದರಲ್ಲಿಯೇ ಜನರು ಹೈರಾಣಾಗಿದ್ದಾರೆ. ಮನೆಗಳ ಸ್ವಚ್ಛತೆ ಕೆಲಸಕ್ಕೆ ಮುಂದಾದ ಗ್ರಾಮಸ್ಥರಿಗೆ ಮನೆಗಳಲ್ಲಿ ಹಾವು ಚೇಳುಗಳ ಸಹ ಕಾಣಿಸಿಕೊಂಡಿವೆ. ಲಾಯದಗುಂದಿ ಗ್ರಾಮದಲ್ಲಂತೂ ಅನೇಕ ಮನೆಗಳು ಬಿದ್ದಿವೆ. ರಾಡಿ ತುಂಬಿದ ಮನೆಯಲ್ಲಿ ಕಾಲಿಡದ ಸ್ಥಿತಿ ನಿರ್ಮಾಣಗೊಂಡಿದೆ. ಆದರೆ, ಮುಂದಿನ ಬದುಕಿಗಾಗಿ ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.
ಕುಸಿದ ಗೋಡೆಗಳು: ಲಾಯದಗುಂದಿ, ಅಲ್ಲೂರ, ಆಸಂಗಿ ಗ್ರಾಮಗಳಲ್ಲಿ ಅನೇಕ ಮನೆಗಳ ಸುತ್ತಲು ನೀರು ಆವರಿಸಿದ್ದರಿಂದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಕೆಲವರ ಮನೆಗಳ ಮೇಲ್ಛಾವಣಿಗಳು ಕುಸಿದಿವೆ. ಇದರಿಂದ ಮನೆಗಳನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟಿದ್ದಾರೆ. ಸರ್ಕಾರ ಕೊಡುವ ಪರಿಹಾರದಲ್ಲಿ ಮನೆ ಕಟ್ಟಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ಹಾಳಾದ ಮನೆಯ ವಸ್ತುಗಳು: ನೀರು ಬರುತ್ತದೆ ಎಂಬ ಭಯದಲ್ಲಿ ಮನೆ ಬಿಟ್ಟು ಹೊರಗೆ ಬಂದ ಗ್ರಾಮಸ್ಥರ ಮನೆಗಳಲ್ಲಿ ವಸ್ತುಗಳು ಹಾಳಾಗಿವೆ. ಸಂತ್ರಸ್ತರ ಬದುಕು ನೀರು ಪಾಲಾಗಿದೆ. ಮನೆಯಲ್ಲಿನ ಟಿವಿ, ಟ್ರೇಜುರಿ, ಊರುವಲು ಸಂಗ್ರಹಿಸಿದ್ದ ಕಟ್ಟಿಗೆಗಳು ಸೇರಿದಂತೆ ಮನೆಯಲ್ಲಿನ ಅನೇಕ ವಸ್ತುಗಳು ನೀರಿನಲ್ಲಿ ಹರಿದುಕೊಂಡು ಹೋಗಿವೆ.
2228 ಜನರ ಸ್ಥಳಾಂತರ: ಗುಳೇದಗುಡ್ಡ ಭಾಗದಲ್ಲಿ ಒಟ್ಟು ಹತ್ತು ಗ್ರಾಮಗಳು ಪ್ರವಾಹಕ್ಕೊಳಗಾಗಿದ್ದು, 551 ಕುಟುಂಬಗಳ 2228 ಜನರನ್ನು ಸ್ಥಳಾಂತರಿಸಲಾಗಿದೆ. ಈ ಪ್ರವಾಹದಿಂದ ರಕ್ಷಣೆ ಪಡೆಯಲು 1135 ಜನರು ಸಂಬಂಧಿಕರ ಮನೆಗಳಿಗೆ ಇಂದಿಗೂ ಅಲ್ಲೇ ವಾಸಿಸುತ್ತಿದ್ದಾರೆ. ಬೀಗರ ಮನೆಯಲ್ಲಿ ಎಷ್ಟು ದಿನಾಂತ ಇರೋದು ಎಂಬ ಸ್ವಾಭಿಮಾನವೂ ಕಾಡುತ್ತಿದೆ. ಆದರೆ, ಪ್ರವಾಹದ ಭೀಕರತೆ ಅವರ ಸ್ವಾಭಿಮಾನ ನುಚ್ಚುನೂರು ಮಾಡಿದೆ. ಪ್ರವಾಹಕ್ಕೊಳಗಾಗದ ಜನರಿಗೆ ಪರಿಹಾರ ಕಲ್ಪಿಸಲು 10ಕೇಂದ್ರಗಳನ್ನು ತೆರೆಯಲಾಗಿದ್ದು, 1093 ಜನರನು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಅದರ ಜೊತೆಗೆ 1020 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದ್ದು, 671 ಜಾನುವಾರುಗಳು ಪರಿಹಾರ ಕೇಂದ್ರದಲ್ಲಿವೆ.
ಇಷ್ಟ ಇದ್ರ ಜೀವನ್ ಹೆಂಗ್ ನಡಿಬೇಕ್ರಿ: ಮನ್ಯಾಗ್ ನೀರು ಹೊಕ್ಕ ಎಲ್ಲ ಹಸಿಯಾಗಿವೆ. ಮನಿತುಂಬಾ ರಾಡಿ ತುಂಬ್ಕೊಂಡಿದೆ. ಇಷ್ಟ್ ದಿನ ಆಶಾದೀಪ ಕೇಂದ್ರದಲ್ಲಿ ಇದ್ದಿವಿ. ಇನ್ನೂ ಎಷ್ಟ ದಿನ್ ಇಲ್ಲಿ ಇರಬೇಕ್ ರೀ. ಇಲ್ಲೇ ಇದ್ರ ಜೀವನ್ ಹೆಂಗ ನಡಿತೈತಿ. 3-4ದಿನ ಆತರೀ ಬರೀ ಮನೆ ಸ್ವಚ್ಛ ಮಾಡೂದೇ ಆಗೈತಿ. ಕೆಲಸ ಇಲ್ಲ. ಕೆಲಸಕ್ಕ ಹೋಗಬೇಕೆಂದ್ರ ಹೋಲಾನು ನೀರಾಗ್ ಅದಾವ್. ನಮ್ಮ ಹೊಟ್ಟಿ ಹೆಂಗ್ ನಡಿಬೇಕ್ರಿ. ಗಂಜಿ ಕೇಂದ್ರದಾಗ ಅನ್ನಸಾರು ಕೋಡ್ತಾರ. ಊರಾಗ್ ರಾಡಿ ನಿಂತ ಮಂದಿಗ್ ಜ್ವರ, ಮೈಕೈ ನೋವು ಬಂದಾವ್. ಒಲೆ ಹಚ್ಚಿ ಅಡಿಗೆ ಮಾಡಬೇಕಂದ್ರ ನೀರು ನಿಂತ್ ಒಲಿನು ಹತ್ತವಲ್ದ್ ಎಂದು ನೋವು ತೋಡಿಕೊಳ್ತಿದ್ದಾರೆ ಆಸಂಗಿಯ ಮಹಿಳೆಯರು.
ಕುರಿದೊಡ್ಡಿಯೇ ಮಲಗಲು ಆಸರೆ: ಸಮೀಪದ ಆಸಂಗಿಯ ಗ್ರಾಮದಲ್ಲಿನ ಎರಡು ಕುಟುಂಬಗಳಿಗೆ ಮನೆಗಳಿದ್ದರೂ ಸಹ ಮಲಗಲು ಜಾಗವಿಲ್ಲ. ಮನೆಯ ತುಂಬೆಲ್ಲ ನೀರು ನುಗ್ಗಿ ಕೆಸರಿನಿಂದ ಕೂಡಿದೆ. ಎಷ್ಟು ಸ್ವಚ್ಛಗೊಳಿಸಿದರೂ ಹೋಗುತ್ತಿಲ್ಲ. ಇನ್ನೂ ಹಸಿಯಾಗಿಯೇ ಇದ್ದು ಅದಕ್ಕೆ ಆಡು-ಕುರಿ ಕಟ್ಟುವ ದೊಡ್ಡಿಯಲ್ಲಿ ಮಲಗುವ ಸ್ಥಿತಿ ಬಂದಿದೆ. ಇನ್ನೂ ಗೌಡರ ಎನ್ನುವರ ಮನೆಯ ಸುತ್ತಲು ಕೆಸರು ತುಂಬಿದೆ. ಅವರು ಸಹ ತಮ್ಮ ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದಿದ್ದಾರೆ. ಇನ್ನೂ ಕೆಲವರು ಸಹ ಬಾಡಿಗೆ ಮನೆಗೆ ತೆರಳಿದ್ದಾರೆ.
ಇಷ್ಟ ನೀರ್ ಬರುತ್ತ ಅಂತಾ ಅನ್‌ಕೊಂಡಿದಿಲ್ಲರೀ ಹಿಂದೊಮ್ಮೆ ಬಂದಾಗ ಗುಡಿತನ್ ಬಂದು ಹೋಗಿತ್ತ. ಇಗೂ ಅಷ್ಟ್ ಬರತ್ ಅನಕೊಂಡ ಸುಮನ್ ಆಗಿದ್ವಿ. ಬರಬರುತ್ತ ಮನೆ ಮುಂದೆ ಬಂತ್ರಿ. ಆಗ ನನಗಂತ್ರೂ ಅಳುನ್ ಬಂತ್ರಿ. ಇಬ್ಬರು ಗರ್ಭೀಣಿ ಹೆಣ್ಮಕ್ಕಳನ್ನ ಕರೆಕೊಂಡು ಹೆಂಗ್ ಹೋಗಲಿ ಅಂತಾ ಚಿಂತಿ ಆಗಿತ್ತ ರೀ. ನಮ್ ಯಜಮಾನ್ರ ಸಾಮಾನ್ ತುಂಬಾಕ್ ಓಡ್ಯಾಡಕತ್ರೂ, ನನ್ನ ಇಬ್ಬರು ಮಕ್ಕಳು ಗರ್ಭಿಣಿ ಇದ್ದರೂ ಒಬ್ಬರು ಮನ್ಯಾಗಿನ್ನು ರೇಶನ್, ಕಾಳು ಕಡಿ ತುಂಬುಕತ್ತಿದ್ದೀರ, ಇನ್ನೋಬಾಕಿ ದವಾಖಾನಿವು ಮತ್ ಬ್ಯಾರೇ ಬ್ಯಾರೇ ಕಾಗದ್ ತಗೊಂಡ್ರಿ, ದೇವ್ರ ಬಂದಂಗ ಬೋಟ್ನ್ಯಾಗ್ ಪೊಲೀಸ್ರು, ದೊಡ್ಡ ಮನಸ್ಯಾರು ಬಂದ್ರುರೀ. ಅವರೆಲ್ಲ ಕೂಡಿ ನಮ್ಮನ್ನು ಕರ್ಕೊಂಡು ಹೋದ್ರಿ.• ನೀಲಮ್ಮ ಶಿವಯ್ಯ ಹಿರೇಮಠ,ಲಾಯದಗುಂದಿ ಗ್ರಾಮಸ್ಥೆ