ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಸೆಪ್ಟೆಂಬರ್ 29, 2020) ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಭಾರತೀಯ ಸೇನಾ ಪಡೆ ನಡೆಸಿದ ಸರ್ಜಿಕಲ್ ದಾಳಿಯ ಬಗ್ಗೆ ಸಾಕ್ಷ್ಯ ಕೊಡುವಂತೆ ಒತ್ತಾಯಿಸಿದ್ದವು, ಯೋಗ ದಿನಾಚರಣೆ ವಿರೋಧಿಸಿದರು ಹಾಗೂ ಗುಜರಾತ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪನೆಗೂ ವಿರೋಧ ವ್ಯಕ್ತಪಡಿಸಿರುವುದಾಗಿ ತಿರುಗೇಟು ನೀಡಿದ್ದಾರೆ.
“ನಾಲ್ಕು ವರ್ಷಗಳ ಹಿಂದೆ ಇದೇ ಸಮಯದಲ್ಲಿ ದೇಶದ ವೀರ ಯೋಧರು ಪಿಒಕೆಗೆ ಲಗ್ಗೆ ಇಟ್ಟು ಸರ್ಜಿಕಲ್ ಸ್ಟ್ರೈಕ್ ನಡೆಸಿ, ಭಯೋತ್ಪಾದಕರ ಶಿಬಿರಗಳನ್ನು ನಾಶಮಾಡಿದ್ದರು. ಆದರೆ ಈ ಜನರು(ವಿಪಕ್ಷಗಳು) ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಬಗ್ಗೆ ಪುರಾವೆ ಕೇಳಿದ್ದವು! ಅಷ್ಟೇ ಅಲ್ಲ ಸರ್ಜಿಕಲ್ ಸ್ಟ್ರೈಕ್ ಅನ್ನು ವಿರೋಧಿಸಿದ್ದವು. ಈ ಮೂಲಕ ಅವರ ಉದ್ದೇಶ ಏನು ಎಂಬುದನ್ನು ಸ್ಪಷ್ಟಪಡಿಸಿದಂತಾಗಿತ್ತು ಎಂದು ಪ್ರಧಾನಿ ವಿಪಕ್ಷಗಳ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಭಾರತದ ನೇತೃತ್ವದಲ್ಲಿ ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ವಿಪಕ್ಷಗಳು ಭಾರತದಲ್ಲಿ ಯೋಗ ದಿನಾಚರಣೆ ವಿರೋಧಿಸಿದ್ದವು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದವು. ಈವರೆಗೂ ಒಗ್ಗಟ್ಟನ್ನು ಸಾರುವ ಪ್ರತಿಮೆಯ ಪ್ರದೇಶಕ್ಕೆ ವಿರೋಧ ಪಕ್ಷದ ಯಾವ ಮುಖಂಡರು ಭೇಟಿ ನೀಡಿಲ್ಲ ಎಂದು ಹೇಳಿದರು.
ವಿಪಕ್ಷಗಳು ವಿರೋಧಿಸುವ ತರಬೇತಿಯನ್ನು ನೀಡುತ್ತಿವೆ ಎಂದಿರುವ ಪ್ರಧಾನಿ, ತಾವು ಅಧಿಕಾರದಲ್ಲಿದ್ದಾಗ (ವಿಪಕ್ಷಗಳು) ದೇಶದ ಸೇನೆಗೆ ಏನನ್ನೂ ಮಾಡಿಲ್ಲವಾಗಿತ್ತು. ರಫೇಲ್ ಯುದ್ಧ ವಿಮಾನಕ್ಕಾಗಿ ವಾಯುಪಡೆ ಬೇಡಿಕೆ ಇಟ್ಟಿದ್ದರೂ ಕೂಡಾ ಅದನ್ನು ಕೇಳಿಸಿಕೊಳ್ಳಲಿಲ್ಲವಾಗಿತ್ತು. ಯಾವಾಗ ನಮ್ಮ ಸರ್ಕಾರ ರಫೇಲ್ ಯುದ್ಧ ವಿಮಾನಕ್ಕಾಗಿ ಫ್ರಾನ್ಸ್ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತೋ ಆವಾಗ ವಿಪಕ್ಷಗಳಿಂದ ದೊಡ್ಡ ಸಮಸ್ಯೆಯನ್ನು ತಂದೊಡ್ಡಲು ಯತ್ನಿಸಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ