Advertisement

ಇಷ್ಟವಿದೆ ಅನ್ನಲು ಇಬ್ಬರಿಗೂ ಭಯ!

07:54 PM Sep 09, 2019 | mahesh |

ಹಲೋ ಅಮ್ಮಿ,
ನಾವಿಬ್ಬರೂ ಪರಿಚಯ ಇದ್ದವರು. ಆಗೊಮ್ಮೆ ಈಗೊಮ್ಮೆ ನಮ್ಮ ನಡುವೆ ಚುಟುಕು ಮಾತುಗಳು ನಡೆದಿದ್ದು ಉಂಟು. ಹೆಣ್ಣು- ಗಂಡು ಎಂಬ ಕಾರಣದಿಂದಲೇ ಎಲ್ಲೆಂದರಲ್ಲಿ ನಿಂತು ಜಾಸ್ತಿ ಹೊತ್ತು ಮಾತನಾಡಲು ಇಬ್ಬರ ಮನಸ್ಸು ಒಪ್ಪುತ್ತಿರಲಿಲ್ಲ. ಅಪರೂಪಕ್ಕೆ ಮಾತನಾಡಿದರೂ ನಮ್ಮ ಮುಖದಲ್ಲಿ ಕ್ಷಣಕಾಲ ನಗುವಿರುತ್ತಿತ್ತು. ಅದೇ ಗುಂಗಿನಲ್ಲಿ ಹೆಜ್ಜೆ ಹಾಕುತ್ತಾ ಮೈಮರೆತಿದ್ದು ಜ್ಞಾಪಕ ಇದೆಯಾ?

Advertisement

ಯಾರಾದರೂ ನೋಡಿಯಾರು ಎಂಬ ಭಯ ಇದ್ದಿದ್ದರಿಂದ ನಿನ್ನನ್ನು ನೋಡಿದ ತಕ್ಷಣ ಮುಖದಲ್ಲಿ ಖುಷಿ ಹೊತ್ತು ಬೇರೆ ಕಡೆಗೆ ಗಮನ ಹರಿಸುತ್ತಿದ್ದೆ. ಒಂಟಿಯಾಗಿದ್ದಾಗ ನಿನ್ನ ಕಡೆಗೇ ಕ್ಷಣ ಕಾಲ ನೋಡುತ್ತ ನಿಂತಿದ್ದೂ ಇದೆ. ಆಗ ನೀನು ಭಯದಿಂದಲೇ ಒಮ್ಮೆ ನೋಡಿ ನೋಡದಂತೆ ಮುಂದೆ ಸಾಗುತ್ತಿದೆ. ಆ ಸಂದರ್ಭದಲ್ಲಿ ಆಗ ನಿನ್ನ ಮುಖದಲ್ಲಿ ಅರಳಿದ ಮುಗುಳ್ನಗೆ ಮಾತ್ರ ಏನೋ ಹೇಳುತ್ತಿತ್ತು. ಇಂಥ ಹಿನ್ನೆಲೆಯ ನಾವು,

ಇದ್ದಕ್ಕಿದ್ದಂತೆ ಒಂದು ದಿನ ಅನಿರೀಕ್ಷಿತವಾಗಿ ಯಾರು ಇಲ್ಲದ ಸ್ಥಳದಲ್ಲಿ ಎದುರುಗೊಂಡೆವು. ಅಲ್ಲಿ ಇಬ್ಬರೇ ಇದ್ದರೂ ತುಟಿಗಳು ಒಣಗುತ್ತಿದ್ದವು. ಮಾತುಗಳು ತೋದಲುತ್ತಿದ್ದವು. ಅಷ್ಟೇ ಅಲ್ಲದೆ ಯಾರಾದರೂ ಬರುತ್ತಾರೇನೊ ಎಂದು ಸುತ್ತಲೂ ತಿರುಗಿ ತಿರುಗಿ ನೋಡುತ್ತಿದ್ದೆವು. ಆ ಭಯವೇ ಹೆಚ್ಚು ಸಮಯ ನಿಲ್ಲದಂತೆ ಮಾಡಿತು. ಇಬ್ಬರು ತಮ್ಮ ತಮ್ಮ ದಾರಿಯಲ್ಲಿ ಹೆಜ್ಜೆ ಹಾಕುತ್ತಾ ಹೊರಟೆವು.

ಈ ಅನಿರೀಕ್ಷಿತ ಭೇಟಿ ನಮ್ಮ ನಡುವಿನ ಸಂಬಂಧವನ್ನು ಖಚಿತ ಪಡಿಸಿತು. ಅಂದಿನಿಂದ ಮರೆಯಲ್ಲಿ ನಿಂತು ನೋಡುವುದು, ದೂರದಿಂದಲೇ ಕಣ್ಣು ಮಿಟುಕಿಸುವುದು, ಕೈ – ತಲೆಯಾಡಿಸುತ್ತ ವಿಚಿತ್ರ ಸನ್ನೆ ಮಾಡುವುದು… ಹೀಗೆ, ನಮ್ಮ ನಡುವಿನ ಬಂಧ ಚಿಗುರುತ್ತಿದೆ. ಆದರೆ, ಆ ನಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲು ನನಗೂ ಭಯ… ನಿನಗೂ ಭಯ…!

ಏನೋ ಇವೆಲ್ಲ ಹೇಳಬೇಕು ಅನಿಸಿತು. ಹೇಳಿ ಬಿಟ್ಟಿದ್ದೇನೆ.

Advertisement

ಇಂತಿನಿಮ್ಮವ,
ಸಣ್ಣಮಾರಪ್ಪ, ಚಂಗಾವರ

Advertisement

Udayavani is now on Telegram. Click here to join our channel and stay updated with the latest news.

Next