Advertisement
ಆ ಜೋಡೆತ್ತುಗಳು ಟಿ.ಆರ್. ಶಾಮಣ್ಣ ಮತ್ತು ವಿ.ಎಸ್. ಕೃಷ್ಣ ಅಯ್ಯರ್. ಬೆಂಗಳೂರಿನಲ್ಲಿ ಅಂದಿನ ಜನತಾ ಪಕ್ಷದ “ಚಕ್ರ’ವನ್ನು ಎಳೆಯುವ ಜೋಡೆತ್ತುಗಳಾಗಿದ್ದರು. ಬದುಕು ಕೊನೆ ಗಳಿಗೆವರೆಗೂ ಸೇವೆಗೆ ಮುಡಿಪಾಗಿತ್ತು. ಆ ಸೇವೆಯೇ ಗೆಲುವಿಗೆ ಮಾನದಂಡವಾಗಿತ್ತು.
Related Articles
Advertisement
80ರ ದಶಕದಲ್ಲಿ ಇಡೀ ದೇಶದಲ್ಲಿ ಜನತಾ ಪರಿವಾರದ ಎಲ್ಲ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದರು. ಅಂತಹ ಸಂದರ್ಭದಲ್ಲೂ ಆ ಪಕ್ಷದಿಂದ ಆಯ್ಕೆಯಾದ ಏಕೈಕ ಸಂಸದ ಶಾಮಣ್ಣ. ಕರ್ನಾಟಕದ ಗಾಂಧಿ ಎಂದೂ ಅವರನ್ನು ಕರೆಯುತ್ತಿದ್ದರು ಎಂದು ನೆನಪಿಸಿಕೊಂಡರು.
ಶಾಮಣ್ಣ ಅವರ ಬೆನ್ನಲ್ಲೇ ಪೋಣಿಸಿಕೊಂಡು ಬರುವ ಮತ್ತೂಂದು ಹೆಸರು ಅದೇ ಬಸವನಗುಡಿ ಕ್ಷೇತ್ರದ ಒಂದೇ ಪಕ್ಷದ ವಿ.ಎಸ್. ಕೃಷ್ಣ ಅಯ್ಯರ್. ಇವರೂ ಶಾಮಣ್ಣರಷ್ಟೇ ಸರಳ ವ್ಯಕ್ತಿತ್ವದವರು. 1980ರಲ್ಲಿ ಜನತಾ ಪಕ್ಷದಿಂದ ಶಾಮಣ್ಣ ಗೆದ್ದರೂ, 1984ರಲ್ಲಿ ಕೃಷ್ಣ ಅಯ್ಯರ್ ಅವರಿಗೆ ಕ್ಷೇತ್ರ ಬಿಟ್ಟುಕೊಡುತ್ತಾರೆ. ಅಷ್ಟೇ ಅಲ್ಲ, ಅವರ ಗೆಲುವಿಗೆ ಶ್ರಮಿಸುತ್ತಾರೆ. ಮುಂದೆ ಅವರ ಸ್ನೇಹಿತ ಗೆಲ್ಲುತ್ತಾರೆ ಕೂಡ.
ಕೃಷ್ಣ ಅಯ್ಯರ್ ಮೇಯರ್, ಸಂಸದರಾಗಿದ್ದರು. ಆದರೆ, ಅವರಿದ್ದದ್ದು ಬಸವನಗುಡಿಯಲ್ಲಿ ಬರುವ ಶಂಕರಮಠದ ಒಂದು ಪುಟ್ಟ ಮನೆಯಲ್ಲಿ. ಈಗಲೂ ಅವರ ಪತ್ನಿ ಅದೇ ಮನೆಯಲ್ಲಿ ವಾಸವಿದ್ದಾರೆ. ಕೃಷ್ಣ ಅಯ್ಯರ್ ಜನತಾ ಪಕ್ಷದ ಖಜಾಂಚಿ ಅಥವಾ ಕೋಶಾಧ್ಯಕ್ಷರೇನೂ ಆಗಿರಲಿಲ್ಲ.
ಆದಾಗ್ಯೂ ಚುನಾವಣೆ ಸಂದರ್ಭದಲ್ಲಿ ಸಂಗ್ರಹವಾಗು ಕೋಟಿಗಟ್ಟಲೆ ಹಣ ಅವರ ಮನೆಯಲ್ಲೇ ಇಡಲಾಗುತ್ತಿತ್ತು. ಯಾಕೆಂದರೆ ಅವರೆಂದೂ ಬೇರೆಯವರ ದುಡ್ಡನ್ನು ಸ್ವಂತಕ್ಕೆ ಬಳಸುತ್ತಿರಲಿಲ್ಲ. ಹಾಗೂ ಪಕ್ಷವು ಅವರ ಮೇಲಿಟ್ಟಿದ್ದ ನಂಬಿಕೆಗೆ ಅದು ಸಾಕ್ಷಿ ಕೂಡ ಆಗಿತ್ತು.
ಸಂಸದರಾದ ಮೇಲೆ ಬ್ಯಾಂಕ್‌ವೊಂದರಲ್ಲಿ ಸಾಲ ಮಾಡಿ ಫ್ಯಾಟ್ ಕಾರು ಖರೀದಿಸಿದ್ದರು. ಅದರಲ್ಲೇ ಓಡಾಡುತ್ತಿದ್ದರು. ಜೀವನದ ಕೊನೆಯ ಗಳಿಗೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಾ ವೆಚ್ಚ 17 ಲಕ್ಷ ರೂ. ಆಗಿತ್ತು. ಪಾವತಿಗೆ ಅವರ ಬಳಿ ದುಡ್ಡು ಇರಲಿಲ್ಲ. ಆಗ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಆ ಹಣ ಪಾವತಿಸಿದ್ದರು ಎಂದು ಸ್ಮರಿಸಿದರು.
ಅಂದಿನ ಮತ್ತು ಈಗಿನ ರಾಜಕಾರಣಕ್ಕೆ ಆಕಾಶ ಮತ್ತು ಭೂಮಿಯಷ್ಟು ಅಂತರ ಇದೆ. ಒಂದೇ ಸಮುದಾಯದವರಾಗಿದ್ದರೂ ಒಂದೇ ಕ್ಷೇತ್ರದಲ್ಲಿ ಇಬ್ಬರೂ ಒಟ್ಟಾಗಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಕಾವೇರಿ ಮೊದಲ ಹಂತ ಬೆಂಗಳೂರಿಗೆ ಬರಲು ಇವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು.
“ಇನ್ನೊಂದು ವಿಶೇಷವೆಂದರೆ ನನಗೆ ರಾಜಕೀಯ ಅಕ್ಷರ ಕಲಿಸಿದವರು ಕೃಷ್ಣ ಅಯ್ಯರ್. 1967-72ರಲ್ಲಿ ನಾನು ಎಂಜಿನಿಯರಿಂಗ್ ಓದುತ್ತಿದ್ದೆ. ಗಾಂಧಿಬಜಾರ್‌ನಲ್ಲಿ ನನ್ನ ಜತೆ ಚಿಕ್ಕಣ್ಣ ಎಂಬುವವನು ಓದುತ್ತಿದ್ದ. ಅವನು ವಿ. ಅಣ್ಣಯ್ಯ ಎಂಬುವರನ್ನು ಪರಿಚಯಿಸಿದ.
ಅವನು ಒಬ್ಬ ಸಮಾಜ ಸೇವಕನಾಗಿದ್ದ. ಯುವಕ ಸಂಘದಲ್ಲೂ ಇದ್ದ. ಕೃಷ್ಣ ಅಯ್ಯರ್ ಅದಕ್ಕೆ ಅಧ್ಯಕ್ಷರಾಗಿದ್ದರು. ಆಗ ಅವರ ಪರಿಚಯ ಆಯ್ತು. ಆಗ ಕೃಷ ಅಯ್ಯರ್ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ಸರ್ವೋದಯ, ಯುವಕ ನಾಯಕತ್ವ ಅದು-ಇದು ಎಂದು ರಾಜಕೀಯ ಅಕ್ಷರ ಕಲಿಸಿದರು. ನಂತರ ಎಬಿವಿಪಿ ಸೇರಿದೆ. ಆದರೂ ನನ್ನನ್ನು ದೂರ ಇಟ್ಟಿರಲಿಲ್ಲ’ ಎಂದರು.
* ವಿಜಯಕುಮಾರ್ ಚಂದರಗಿ