Advertisement
ಅವರ ಮನೆಗೆ ಹೋದಾಗ ಅವರು ಸಿಕ್ಕರೆ ಅದು ಪೂರ್ವಜನ್ಮದ ಪುಣ್ಯ. ನಾಲ್ಕು ಮಾತಾಡಿದರೆ ಅದು ಭುವನದ ಭಾಗ್ಯ. ಹೋದರೆ ಅರ್ಧ ದಿನ, ಬಂದರೆ ಸಂದರ್ಶನ ಎಂದು ಮನಸ್ಸು ಗಟ್ಟಿಮಾಡಿಕೊಂಡೇ ಅಂಬರೀಶ್ ಮನೆಗೆ ಪತ್ರಕರ್ತರು ಕಾಲಿಡುತ್ತಿದ್ದದ್ದು. ಇತ್ತೀಚೆಗೆ ಅದೂ ಬದಲಾಗಿತ್ತು. ಅಂಬರೀಶ್ ಮನೆಗೆ ಹೋಗುವುದು ಕೂಡ ಕಷ್ಟವೇ. ಒಂದು ವೇಳೆ ಹೋದಿರಿ ಅಂತಿಟ್ಟುಕೊಳ್ಳಿ, ಅಲ್ಲಿ ನೂರಾರು ಮಂದಿ ಕಾಯುತ್ತಾ ನಿಂತಿರುತ್ತಿದ್ದರು. ಮಂಡ್ಯ, ಮಳವಳ್ಳಿ, ಮೈಸೂರು ಕಡೆಯಿಂದ ಬಂದವರಿಗೆಲ್ಲ ಅವರು ದರ್ಶನ ಕೊಡಲೇಬೇಕಿತ್ತು. ಆ ದರ್ಶನದ ನಡುವೆ ಸಂದರ್ಶನಕ್ಕೆ ಜಾಗವೆಲ್ಲಿ?
Related Articles
Advertisement
ಆದರೆ, ಚಿತ್ರರಂಗದ ಸಂಕಷ್ಟಗಳನ್ನು ಬಲ್ಲ ನಾಯಕರೊಬ್ಬರು ಸಚಿವರಾಗಿದ್ದರಿಂದ, ಚಿತ್ರರಂಗಕ್ಕೆ ಬಜೆಟ್ಟಿನಲ್ಲಿ ಏನಾದರೂ ದಕ್ಕೀತೇನೋ ಎಂಬ ನಿರೀಕ್ಷೆ ಚಿತ್ರೋದ್ಯಮಕ್ಕಿತ್ತು. ಆದರೆ, ಅಂಥದ್ದೇನೂ ನಡೆಯಲಿಲ್ಲ. ಅಂಬರೀಶ್ ಅಲ್ಲೂ ಕೂಡ ನಿರ್ಲಿಪ್ತರಾಗಿದ್ದರು. ಆಗ ಎಲ್ಲರ ಎದುರಿದ್ದ ಪ್ರಶ್ನೆ ಅಂಬರೀಶ್ ಚಿತ್ರರಂಗಕ್ಕೆ ದಕ್ಕುತ್ತಾರೋ ಇಲ್ಲವೋ? “ದೊಡ್ಮನೆ ಹುಡುಗ’ ಅವರು ನಟಿಸಲಿರುವ ಕೊನೆಯ ಚಿತ್ರವಾ? ಹೊಸಬರ ನಿರ್ದೇಶನದ ಚಿತ್ರಗಳಲ್ಲಿ ನಟಿಸುವ ಆಸಕ್ತಿಯನ್ನು ಅಂಬರೀಶ್ ಕಳಕೊಂಡಿದ್ದಾರಾ? ಅಥವಾ ಅಂಬರೀಶ್ ಅವರ ಜಾಯಮಾನಕ್ಕೆ ಒಪ್ಪುವಂಥ ಪಾತ್ರಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕರು ಆಸಕ್ತರಾಗಿಲ್ಲವಾ?
ಅಂಬರೀಶ್ ಮೊದಲಿನಿಂದಲೂ ತಾವಾಗಿಯೇ ಮೇಲೆ ಬಿದ್ದು ಸಿನಿಮಾಗಳನ್ನು ಹುಡುಕಿಕೊಂಡು ಹೋದವರಲ್ಲ. ಅವರ ಬಳಿ ಬಂದು ಕತೆ ಹೇಳಿ, ಅವರನ್ನು ಓಲೈಸಿ, ಅವರ ಹೊತ್ತು-ಗೊತ್ತು ನೋಡಿಕೊಂಡು, ಅವರ ಪುರುಸೊತ್ತಲ್ಲಿ ಚಿತ್ರೀಕರಣ ಮುಗಿಸಿ, ಅವರ ವಿರಾಮದಲ್ಲಿ ಅವರು ನಟಿಸುವಂತೆ ಮಾಡುತ್ತಿದ್ದ ನಿರ್ದೇಶಕರು ಅನೇಕ ಮಂದಿ ಇದ್ದರು. ಅವರೆಂದರೆ ಹೊಸ ನಿರ್ದೇಶಕರಿಗೆ ಭಯ ಮತ್ತು ಭಕ್ತಿ. ಏನಾದರೂ ಹೇಳಿದರೆ ಎಲ್ಲಿ ರೇಗುತ್ತಾರೋ ಎಂಬ ಭಯವಿತ್ತು.
ಒರಟು ಮಾತು, ನೇರ ನುಡಿ: ಅಂಬರೀಶ್ ಚಿತ್ರಗಳು ಕೂಡ ಅಷ್ಟಾಗಿ ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಒಂದು ಕಾಲದ ಸೂಪರ್‌ಹಿಟ್ ಸಿನಿಮಾ “ಅಂತ’ದ ರುಚಿ ಈ ಕಾಲದ ಪ್ರೇಕ್ಷಕರಿಗೆ ತಿಳಿದಿಲ್ಲ. ಅಂಬರೀಶ್ ಅವರನ್ನು “ರೆಬೆಲ್ ಸ್ಟಾರ್’ ಮಾಡಿದ ಚಿತ್ರಗಳನ್ನು ಅವರ ಈ ಪೀಳಿಗೆಯ ಎಷ್ಟೋ ಅಭಿಮಾನಿಗಳು ನೋಡಿಲ್ಲ. ಅಂಬರೀಶ್ ಜನಪ್ರಿಯರಾಗಿರುವುದು ಅವರ ಚಿತ್ರಗಳಿಗಿಂತ ಹೆಚ್ಚಾಗಿ ಅವರ ಒರಟು ಮಾತು, ನೇರ ನುಡಿ ಮತ್ತು ಬಿರುಸು ನಡೆಯಿಂದ. ರಾಜಕೀಯಕ್ಕೆ ಬಂದ ನಂತರ ಅವರು ಅದನ್ನೂ ಕಳೆದುಕೊಳ್ಳಬೇಕಾಗಿ ಬಂದಿತ್ತು. ವಿವಾದಗಳೇ ಇಲ್ಲದ ಅವರನ್ನು ವಿವಾದಗಳೂ ಬೆನ್ನತ್ತಿಕೊಂಡು ಬಂದಿದ್ದವು.