Advertisement

UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?

09:56 AM May 11, 2024 | Team Udayavani |

ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಮನುಷ್ಯ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಕಾರಣ ಮನುಷ್ಯನಿಗಿರುವ ವಾಕ್‌ ಸಾಮರ್ಥ್ಯ ಮತ್ತು ಯೋಚನಾ ಸಾಮಾರ್ಥ್ಯ. ಆದರೆ ಮಾನವರೆಂಬ ಬುದ್ಧಿಜೀವಿಗಳಾದ ನಾವು ನಮ್ಮ ಸಾಮರ್ಥ್ಯವನ್ನು ಹೇಗೆ ವ್ಯಯಿಸುತ್ತಿದ್ದೇವೆ ಎಂಬುದರ ಕುರಿತಾಗಿ ಒಂದಿನಿತು ಚಿಂತನ ಮಂಥನ ನಡೆಸುವುದು ಒಳಿತೆನಿಸುತ್ತಿದೆ.

Advertisement

ದಿನದ 24 ಗಂಟೆ ಅಂದರೆ 1,440 ನಿಮಿಷಗಳನ್ನು ನಾವು ಹೇಗೆ ಕಳೆಯತ್ತಿದ್ದೇವೆ ಎಂಬುದರ ಕುರಿತಾಗಿ ಅಂತರಾವಲೋಕನ ಮಾಡಿಕೊಂಡರೆ ಮನ ಮರಗುವುದು ಖಚಿತ.ಯಾಕೆಂದರೆ ನಮ್ಮ ದಿನದ ಬಹಳಷ್ಟು ಸಮಯ ನಾವು ಇತರರ ಬಗ್ಗೆ ಚಿಂತಿಸುವುದರಲ್ಲಿ,ಅರ್ಥ ಮಾಡಿಕೊಳ್ಳಲು ಹವಣಿಸುವಲ್ಲಿ,ಅಪಾರ್ಥ ಮಾಡಿಕೊಳ್ಳುವುದರಲ್ಲಿ ಮತ್ತು ನಮ್ಮ ಅಭಿಪ್ರಾಯಗಳನ್ನು ಇತರರಿಗೆ ಹಂಚುವುದರಲ್ಲಿಯೇ ಕಳೆಯುತ್ತಿರುತ್ತೇವೆ.

ಅವರು ತುಂಬಾ ಸೂಕ್ಷ್ಮ, ಇವರು ತುಂಬಾ ಒರಟು, ಇವ ಜಿಪುಣ,ಅವ ಉದಾರಿ,ಇವಳು ತುಂಬಾ ಸೌಮ್ಯ ಸ್ವಭಾವದವಳು,ಅವಳು ಸ್ವಲ್ಪ ಗಂಡುಬೀರಿ ಹೀಗೆ ಅವರಿವರ ಬಗ್ಗೆ ಸರ್ಟಿಫಿಕೇಟ್‌ ಕೊಡುವುದರಲ್ಲಿ ನಾವೆಷ್ಟು ಬುದ್ಧಿವಂತಿಕೆ ತೋರ್ಪಡಿಸುತ್ತೇವೆಯೋ ಅದರ 0.01%ನ್ನು ನಮ್ಮನ್ನು ನಾವು ಅರಿತುಕೊಳ್ಳುವಲ್ಲಿ ತೋರಿಸಿಕೊಳ್ಳದಿರುವುದೇ ಖೇದಕರ ಸಂಗತಿ.

ಬಹಳಷ್ಟು ಸಂದರ್ಭಗಳಲ್ಲಿ ನಾವು ಒಬ್ಬರ ಕುರಿತು ಕೊಡುವ ಸರ್ಟಿಫಿಕೇಟ್‌ ಗಳು ಅನೇಕ ಬಾರಿ ತಿದ್ದುಪಡಿ ಆಗುತ್ತಿರುತ್ತವೆ. ಯಾಕೆಂದರೆ ಮಾನವ ಜನ್ಮವೇ ಹಾಗೆ ಪ್ರತಿಯೊಬ್ಬರಿಗೂ ಇನ್ನೊಬ್ಬರ ಮೇಲೆ ಏನಾದರೊಂದು ಲೋಪ ದೋಷ ಇದ್ದೆ ಇರುತ್ತದೆ. ಅದನ್ನ ನಮ್ಮ ಮಿತಿಯಲ್ಲಿ ಇಟ್ಟುಕೊಂಡರೆ ಏನು ಸಮಸ್ಯೆ ಇಲ್ಲಾ. ನಾವು ಹೊಗಳಿ ಅಟ್ಟಕ್ಕೇರಿಸಿದವರನ್ನು ನಾವೇ ಕೆಲ ಕಾಲದ ಅನಂತರ ದೂರುತ್ತಾ ಪಾತಾಳಕ್ಕೆ ತಳ್ಳುವುದು ಇದೆ. ಕಾರಣ ನಾವು ಕೊಡುವ ಸರ್ಟಿಫಿಕೇಟ್‌ ಸಮಯ, ಸಂದರ್ಭ, ಪರಿಸ್ಥಿತಿ ಮತ್ತು ನಮ್ಮ ಆ ಕ್ಷಣದ ಮನಸ್ಥಿತಿಯನ್ನು ಆಧರಿಸಿರುತ್ತದೆ.

ಅವರಿವರ ಬಗ್ಗೆ ಅಳೆದು ತೂಗಲು ಗಂಟೆಗಟ್ಟಲೆ ಸವೆಸುವ ನಾವು ದಿನಕ್ಕೊಂದು ಬಾರಿ ಕೊಂಚ ಸಮಯ ನಮಗಾಗಿ ವಿನಿಯೋಗಿಸುವುದು ಅತೀ ಅವಶ್ಯಕವೆನಿಸುತ್ತದೆ. ಅವರು ಹಾಗೇ ಇವರು ಹೀಗೆ ಎಂದರಿಯಲು ತವಕಿಸುವ ನಾವು ದಿನಕ್ಕೊಂದು ಬಾರಿ ನಾವು ಹೇಗೆ? ಎಂದು ಪ್ರಶ್ನಿಸಿ ಉತ್ತರ ಕಂಡುಕೊಳ್ಳುವುದು ಉತ್ತಮವಲ್ಲವೇ?

Advertisement

ನಾವು ಮೊದಲು ಅರಿತುಕೊಳ್ಳಬೇಕಾದುದು ನಮ್ಮನ್ನು ಆಗ ನಮ್ಮ ವರ್ತನೆಯಲ್ಲಿ, ಬದುಕಿನಲ್ಲಿ ಅಗತ್ಯ ಪರಿವರ್ತನೆ ಸಾಕಾರಗೊಳಿಸಬಹುದು. ನಮ್ಮನ್ನು ನಾವು ತಿದ್ದಿಕೊಳ್ಳುವುದು ಇತರರನ್ನು ಬದಲಾಯಿಸುವುದಕ್ಕಿಂತ ಬಹಳ ಸರಳ ಹಾಗೂ ಈ ತಿದ್ದುಪದಿಯೇ ನಮ್ಮ ಜೀವನದ ಬಹಳ ದೊಡ್ಡ ಮಟ್ಟದ ಬದಲಾವನೇಗೆ ಕಾರಣವಾಗಬಹುದು ಯಾರಿಗೆ ಗೊತ್ತು! ಅಲ್ಲವೇ?

ಹಾಗಾದಾಗ ಮೇರು ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಲು ಸಾಧ್ಯ. ಅವರಿವರ ಬದುಕನ್ನು ಇಣುಕಿ ನೋಡುತ್ತಾ, ಅಣಕಿಸುತ್ತಾ, ಕೆಣಕುತ್ತಾ ಸಮಯ ಹಾಳು ಮಾಡಿಕೊಳ್ಳುವ ಬದಲಿಗೆ ನಾವು ನಮ್ಮನ್ನರಿತು ಬದುಕುವ ಗುರಿಯತ್ತ  ಚಿತ್ತ ಕೇಂದ್ರೀಕರಿಸಿ ಸಾರ್ಥಕ ಬಾಳು ನಮ್ಮದಾಗಿಸಿಕೊಂಡಾಗ ಮಾತ್ರ ಮಾನವ ಜನ್ಮ ಪಡೆದದ್ದು ಸಾರ್ಥಕ ವೆನಿಸಿಕೊಳ್ಳುತ್ತದೆ. ಅದಕ್ಕೆ ತಾನೇ ಅರಿತವರು ಹೇಳಿದ್ದು” ಮಾನವ ಜನ್ಮ ದೊಡ್ಡದು ಅದ ಹಾಳು ಮಾಡದಿರಿ ಹುಚ್ಚಪ್ಪಗಳಿರಾ..’ ಎಂದು.

ನಮ್ಮೊಳಗಿನ ನಮ್ಮನರಿತು ಮಾನವ ಜನ್ಮದ ಸದುಪಯೋಗ ಮಾಡಿಕೊಳ್ಳೋಣ ಅಲ್ಲವೇ..?

-ನಿಶ್ಮಿತಾ ಜಿ. ಎಚ್‌.

ಹಾರ ಮನೆ ಕೊಕ್ಕಡ.

Advertisement

Udayavani is now on Telegram. Click here to join our channel and stay updated with the latest news.

Next