ಕನ್ನಡ ಸಿನಿಮಾರಂಗಕ್ಕೆ ಹೊಸಬರ ಆಗಮನ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ “ಸಾರೋಟ್’ ಚಿತ್ರತಂಡ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಈ ಹೊಸ ತಂಡ ಚಿತ್ರದ ಚಿತ್ರೀಕರಣ ಮುಗಿಸಿ, ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ತಯಾರಿ ನಡೆಸುತ್ತಿದೆ. ಸಿನಿಮಾ ಮಾಡಿದ ಬಹುತೇಕರು, ನಮ್ಮ ಕಥೆ, ಹಾಗೆ, ನಮ್ಮ ಚಿತ್ರಕಥೆ ಹೀಗೆ ಅನ್ನುವುದು ಗೊತ್ತೇ ಇದೆ.
ಆದರೆ, ಹೊಸಬರೇ ಮಾಡಿರುವ “ಸಾರೋಟ್’ ಚಿತ್ರದ ಬಳಗ “ಒಂದು “ಅಚ್ಚುಕಟ್ಟಾದ ಒಂದು ಸಿನಿಮಾ ಮಾಡಿದ್ದೇವೆ ಎಲ್ಲರೂ ನೋಡಿ, ಹರಸಿ-ಹಾರೈಸಿ’ ಎಂದು ವಿನಮ್ರವಾದ ಮನವಿಯೊಂದನ್ನು ಮುಂದಿಟ್ಟಿದೆ. ಹಾಗಾದರೆ, ಈ “ಸಾರೋಟ್’ ಕಥೆ ಏನು? ಇದು ಲವ್ ಸ್ಟೋರಿನಾ, ರೌಡಿಸಂ ಸಬ್ಜೆಕ್ಟ್ ಹೊಂದಿದೆಯಾ, ಮಾಸ್ ಅಥವಾ ಕ್ಲಾಸ್ ಅಂಶಗಳಿವೆಯಾ? ಗೊತ್ತಿಲ್ಲ. ಆದರೆ, ಎಲ್ಲಾ ವರ್ಗಕ್ಕೂ ಸಲ್ಲುವ ಚಿತ್ರವಿದು.
ಅದನ್ನು ಸೀದಾ ಚಿತ್ರಮಂದಿರದಲ್ಲೇ ಬಂದು ಸಿನಿಮಾ ನೋಡಬೇಕೆಂಬುದು ಅವರ ಕಳಕಳಿಯ ಕೋರಿಕೆ. ತಮ್ಮ ಸಿನಿಮಾ ಕುರಿತು ಹೇಳಿಕೊಳ್ಳುವ ನಿರ್ದೇಶಕ ಗೌತಮ್. “ಈ ಚಿತ್ರದಲ್ಲಿ ಎಲ್ಲರೂ ಹೊಸಬರೇ ಇರುವುದರಿಂದ ಏನನ್ನಾದರೂ ಹೊಸತನ್ನೇ ಹೇಳಿದರೆ ಚೆನ್ನ ಎಂದುಕೊಂಡು ನವಿರಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಚಿತ್ರದಲ್ಲಿ ಪ್ರೇಮಕಥೆಯಿದೆ. ಸಂಬಂಧಗಳ ಮೌಲ್ಯವಿದೆ. ನಗುವಿಗಂತೂ ಇಲ್ಲಿ ಬರವಿಲ್ಲ.
ಹೊಸ ಹೊಸ ತಾಣಗಳು ಚಿತ್ರದ ಹೈಲೈಟ್ ಎನ್ನುವ ಅವರು, ಪಾತ್ರಕ್ಕೆ ತಕ್ಕ ಕಲಾವಿದರು, ಜಬರ್‌ದಸ್ತ್ ಆಕ್ಷನ್, ಒಳ್ಳೊಳ್ಳೆ ಹಾಡುಗಳು ಇತ್ಯಾದಿ ಚಿತ್ರದಲ್ಲಿವೆ. ಪ್ರತಿಯೊಂದು ಕಥೆಗೆ ಪೂರಕವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರವಿದ್ದು, ಆದಷ್ಟೂ ಬೇಗ ಟೀಸರ್ ರಿಲೀಸ್ ಮಾಡುವ ಉದ್ದೇಶವಿದೆ. ನಮ್ಮದೊಂದು ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲರ ಬೆಂಬಲ ಅತ್ಯಗತ್ಯ’ ಎಂಬುದು ನಿರ್ದೇಶಕ ಗೌತಮ್ ಮಾತು.
ಇನ್ನು, ಶ್ರೀಕಿರಣ್ ಎಂಬ ಯುವ ಪ್ರತಿಭೆ ಈ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯವಾಗುತ್ತಿದ್ದು, ಅವರಿಗೆ ಜೋಡಿಯಾಗಿ ಮರ್ಲಿನ್ ಇದ್ದಾರೆ. ಉಳಿದ ತಾರಾಬಳಗದಲ್ಲಿ ಮಿಮಿಕ್ರಿ ಗೋಪಿ, ಕುರಿ ಸುನಿಲ್, ಪಲ್ಟಿ ಗೋವಿಂದ್, ನಾಗರತ್ನ ರಂಗಾಯಣ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ಎಂ.ಸಿದ್ದರಾಜು ನಿರ್ಮಾಣದ ಈ ಚಿತ್ರಕ್ಕೆ ವೇಲು ಛಾಯಾಗ್ರಹಣವಿದೆ.