Advertisement

ಅವರಿಲ್ಲದ ಬಾಳ ತೋಟದಲ್ಲಿ ಹೂವು ಬಾಡಿದೆ…

10:10 AM Sep 09, 2017 | |

ಹತ್ತು ವರ್ಷಗಳ ಹಿಂದಿನ ಮಾತು. ಆರ್‌.ಎನ್‌. ಸುದರ್ಶನ್‌ ಮಾತಿಗೆ ಸಿಕ್ಕಿದ್ದರು. ಮಲ್ಲೇಶ್ವರಂನಲ್ಲಿ ಅವರು ವಾಸವಿದ್ದ ಮನೆಯಲ್ಲೇ ಸಂದರ್ಶನ. “ಹೇಳಿ, ನನ್ನಿಂದ ಏನಾಗಬೇಕು?’  ಎಂದು ಅವರು ಕೇಳಿದ ತಕ್ಷಣ- “ನಗುವ ಹೂವು’ ಸಿನಿಮಾ ಹಾಡಿನ ಬಗ್ಗೆ ವಿವರ ಬೇಕು ಅಂದಿದ್ದೆ.  ಸುದರ್ಶನ್‌ ಸಂಭ್ರಮದಿಂದಲೇ ಹೇಳಿದ್ದರು : ಗೊತ್ತಾ ನಿಮಗೆ? ಆ ಸಿನಿಮಾಕ್ಕೆ ನಾನು ನಾಯಕ ಮತ್ತು ಗಾಯಕ!

Advertisement

ಅಷ್ಟೇ ಅಲ್ಲ ಅದು ಸಂಪೂರ್ಣವಾಗಿ ಆರೆನ್ನಾರ್‌ ಕುಟುಂಬದವರ ಸಿನಿಮಾ. ಹೇಗೆ ಗೊತ್ತಾ? ಆ ಸಿನಿಮಾದ ನಿರ್ಮಾಣ ಆರೆನ್ನಾರ್‌ ಕುಟುಂಬದ್ದು. ಹೀರೋಯಿನ್‌ ಆಗಿದ್ದಾಕೆ ನನ್ನ ಪತ್ನಿ ಶೈಲಶ್ರೀ. ಕಥೆ-ಚಿತ್ರಕಥೆ ಬರೆದದ್ದೂ ಅವಳೇ. ಸಂಭಾಷಣೆ ಹಾಗೂ ಗೀತ ರಚನೆಯ ಹೊಣೆ ಹೊತ್ತಿದ್ದು ನನ್ನ ಎರಡನೆಯ ಅಣ್ಣ ಆರ್‌.ಎನ್‌. ಜಯಗೋಪಾಲ್‌. ಛಾಯಾಗ್ರಹಣದ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ನಮ್ಮ ಹಿರಿಯಣ್ಣ ಕೃಷ್ಣ ಪ್ರಸಾದ್‌.

1971ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಸಿನಿಮಾ “ನಗುವ ಹೂವು’. ಈ ಚಿತ್ರದಲ್ಲಿರುವುದು ಕ್ಯಾನ್ಸರ್‌ ರೋಗಿಯೊಬ್ಬನ ಬದುಕಿನ ಸುತ್ತ ಹೆಣೆದ ಕಥೆ. ಅಂಥ ಕಥೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡ್ವಿ ಗೊತ್ತಾ? ನಮ್ಮ ತಾಯಿ ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಸಾವಿನಿಂದ, ನಮ್ಮ ಮನೆಯ ನೆಮ್ಮದಿಯೇ ಹಾಳಾಗಿ ಹೋಯ್ತು. ಒಂದು ಕುಟುಂಬದ ನೆಮ್ಮದಿಯನ್ನೇ ಕೆಡಿಸುವ ಆ ರೋಗದ ವಿರುದ್ಧ ಜಾಗೃತಿ ಮೂಡಿಸಬೇಕು ಅನ್ನಿಸ್ತು.

ಅದೇ ಕಾರಣದಿಂದ ಕ್ಯಾನ್ಸರ್‌ ರೋಗಿಯೊಬ್ಬನ ಬದುಕಿನ ಕಥೆ ಇರುವ ಸಿನಿಮಾ ತಯಾರಿಸಿದ್ವಿ. ಆ ಸಿನಿಮಾದಲ್ಲಿ ಹೀರೋ ಆಗಿ ನಾನಿದ್ದೆ. ನನ್ನದು ಡಾಕ್ಟರ್‌ನ ಪಾತ್ರ. ಆಸ್ಪತ್ರೇಲಿ ಕ್ಯಾನ್ಸರ್‌ಗೆ ತುತ್ತಾದ ಮಕ್ಕಳಿರುತ್ತಾರೆ. ಅದೊಂದು ರಾತ್ರಿ ಆ ಮಕ್ಕಳೆಲ್ಲ ನಿದ್ರೆ ಮಾಡದೆ ಕೂತಿರುತ್ತವೆ. ಅವರನ್ನು ನೋಡಿದ ಡಾಕ್ಟರ್‌ “ತಮ್ಮ ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ, ಕಣ್ಮುಂದೆಯೇ ಇರುವ ಸಾವಿನ ಬಗ್ಗೆ ಏನೊಂದೂ ಗೊತ್ತಿಲ್ಲದೆ ಈ ಮಕ್ಕಳು ತುಂಬಾ ನೆಮ್ಮದಿಯಿಂದ ಇದ್ದಾರೆ.

ಎಲ್ಲರೂ ಹೀಗೇ ಬದುಕಿದರೆ ಚೆಂದವಲ್ಲವೇ?’ ಎಂದು ಅಂದುಕೊಳ್ಳುತ್ತಾನೆ. ಆಗಲೇ ಹಾಡುತ್ತಾನೆ : ಇರಬೇಕು ಇರಬೇಕು ಅರಿಯದ ಕಂದನ ತರಹ! ನಗಬೇಕು ಅಳಬೇಕು ಇರುವಂತೆ ಹಣೆಬರಹ..! ಈ ಹಾಡು ಸೃಷ್ಟಿಯಾಯ್ತಲ್ಲ, ಅದರ ಕುರಿತೂ ಒಂದು ಸ್ವಾರಸ್ಯವಿದೆ. ಚಿತ್ರದಲ್ಲಿ ಎಲ್ಲೆಲ್ಲಿ ಹಾಡುಗಳು ಬರಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿತ್ತು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ ಹೇಳಿದರು – ಇದು ಮಕ್ಕಳ ಮುಂದೆ ಹಾಡುವ ಹಾಡು.

Advertisement

ಹಾಗಾಗಿ ಸರಳವಾಗಿರಲಿ. ಹಾಡಿನಲ್ಲಿ ಶೋಕ ಅಥವಾ ಪ್ರೇಮದ ಸಾಲುಗಳು ಬೇಡ. ಬದಲಿಗೆ, ಬದುಕಿನಲ್ಲಿ ಭರವಸೆ ಮೂಡಿಸುವ ಸಾಲುಗಳಿರಲಿ…ಹೀಗೆಂದ ಮರುಕ್ಷಣವೇ-ಲಲಲಾಲ ಲಲಲಾಲ ಲಲಲಲ ಲಲಲ ಲಾಲ..! ಎಂದು ಟ್ಯೂನ್‌ ಕೊಟ್ಟರು. ಆಗ ಜಿ.ಕೆ. ವೆಂಕಟೇಶ್‌ ಅವರಿಗೆ ಸಹಾಯಕರಾಗಿದ್ದವರು ಇಳಯರಾಜಾ. ಚಿತ್ರ ಬಿಡುಗಡೆಯಾದಾಗ ಹಾಡು, ಸಿನಿಮಾ ಎರಡೂ ಹಿಟ್‌ ಆದವು. ಅದಾಗಿ ಎರಡು ದಶಕದ ನಂತರ ಯಾವುದೋ ಕೆಲಸದ ಪ್ರಯುಕ್ತ ಚೆನ್ನೈನ ಒಂದು ರೆಕಾರ್ಡಿಂಗ್‌ ಸ್ಟುಡಿಯೋಗೆ ಹೋಗಿದ್ದೆ.

ಅವತ್ತು, ಸಂಗೀತ ನಿರ್ದೇಶಕ ಇಳಯರಾಜ ಅವರೂ ಅಲ್ಲಿಗೆ ಬಂದಿದ್ದರು. ಅವರಾಗ ಖ್ಯಾತಿಯ ತುತ್ತ ತುದಿಯಲ್ಲಿದ್ದರು. ಅವರ ಸುತ್ತ ದೊಡ್ಡದೊಂದು ಗುಂಪಿತ್ತು. ನನಗೋ, ಅವರನ್ನು ಒಮ್ಮೆ ಮಾತಾಡಿಸಬೇಕೆಂಬ ಆಸೆ. ಅಕಸ್ಮಾತ್‌ ಅವರು ಗುರುತಿಸದಿದ್ದರೆ ಏನ್ಮಾಡೋದು ಎಂಬ ಆತಂಕ – ಎರಡೂ ಒಟ್ಟಿಗೇ ಆಯ್ತು. ನಾನು ಈ ಚಡಪಡಿಕೆಯಲ್ಲಿದ್ದಾಗಲೇ ಆಕಸ್ಮಿಕವಾಗಿ ಇಳಯರಾಜ ನನ್ನತ್ತ ನೋಡಿದರು.

ಮರುಕ್ಷಣವೇ ಅವರ ಕಂಗಳು ಅರಳಿದವು. ಅಲ್ಲಿಂದಲೇ ಒಮ್ಮೆ ಕೈ ಬೀಸಿ ನಿಂತ ಜಾಗದಲ್ಲೇ ಗಟ್ಟಿಯಾಗಿ – “ಇರಬೇಕು ಇರಬೇಕು ಅರಿಯದ ಕಂದನ ತರಹ….!’ ಎಂದು ಹಾಡುತ್ತ ಹಾಡುತ್ತಲೇ ನನ್ನೆಡೆಗೆ ಬಂದುಬಿಟ್ಟರು. ನನ್ನ ಕೈ ಹಿಡಿದು ಎದೆಗೆ ಒತ್ತಿಕೊಂಡು, ಎಂಥಾ ಒಳ್ಳೆಯ ಹಾಡಲ್ವಾ ಸಾರ್‌ ಇದೂ? ಈ  ಹಾಡಿನ ಮಾಧುರ್ಯಕ್ಕೆ ಸಾಟಿ ಯಾವುದಿದೆ ಹೇಳಿ ಎಂದು ಉದ್ಗರಿಸಿದ್ದರು…
***
ಮಾತಿಗೆ ಸಿಕ್ಕಾಗಲೆಲ್ಲ ಇಂಥವೇ ಚೆಂದದ ಪ್ರಸಂಗಗಳನ್ನು ಹೇಳಿಕೊಂಡು ಖುಷಿಪಡುತ್ತಿದ್ದರು ಸುದರ್ಶನ್‌. ಒಂದರ್ಥದಲ್ಲಿ ಮಗುವಿನಂತೆಯೇ ಇದ್ದ ಅವರೀಗ ಮಾತು ನಿಲ್ಲಿಸಿ ಹೋಗಿಬಿಟ್ಟಿದ್ದಾರೆ. ಅವರಿಲ್ಲದ ಬಾಳ ತೋಟದಲ್ಲಿ, ಹೂವು ಬಾಡಿ ಹೋಗಿದೆ…

* ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next