ದೀಪಾವಳಿಯ ದಿನ. ಎಲ್ಲ ಮನೆಯಗಳಲ್ಲೂ ದೀಪ ಹಚ್ಚುವ ಕೆಲಸ ಆರಂಭವಾಗಿತ್ತು. ದೀಪಗಳಿಂದ, ಎಲ್ಲ ಅಂಗಡಿಗಳೂ ಕಂಗೊಳಿಸುತಿದ್ದವು. ಅಂಗಡಿಗೆ ಮತ್ತು ಶ್ರೀ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಬಾನೆತ್ತರಕ್ಕೆ ಹಾರುವ ಪಟಾಕಿಗಳನ್ನು ಸಿಡಿಸಲು ಆರಂಭಿಸಿದೆವು. ಮಗ್ಗುಲಲ್ಲಿ ಇದ್ದ ಅಂಗಡಿಯವರೂ ಪಟಾಕಿ ಸಿಡಿಸಲು ಆರಂಭಿಸಿದರು. ಬರಬರುತ್ತಾ ನಮಗೂ ಮಗ್ಗುಲಲ್ಲಿ ಇದ್ದ ಅಂಗಡಿಯವರಿಗೂ ಪಟಾಕಿ ಸಿಡಿಸುವ ವಿಷಯದಲ್ಲಿ ಪೈಪೋಟಿ ನಡೆದಿತ್ತು.ನಾವೂ ಬಾನೆತ್ತರಕ್ಕೆ ಚಿಮ್ಮುವ ರಾಕೆಟ್ ಗಳನ್ನ ಹಚ್ಚಿದೆವು. ಅವರು ದೊಡ್ಡ ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.ಅವರಂತೆ ನಾವು ಶಬ್ಧ ಮಾಡುವ ಪಟಾಕಿಗಳನ್ನು ಹಚ್ಚಲು ಆರಂಭಿಸಿದೆವು.
ಪೈಪೋಟಿ ಜೋರಾಗಿಯೇ ನಡೆಯುತ್ತಿತ್ತು. ಇನ್ನೂ ಭಯಂಕರ ಶಬ್ದ ಮಾಡುವ ಪಟಾಕಿಗಳನ್ನು ಹಚ್ಚಲು ದಾರಿ ಹೋಕರು ಹುರಿದುಂಬಿಸುತಿದ್ದರು. ಆದರೆ, ಯಾಕೋ ಇದು ಮಿತಿ ಮೀರಿ ನಡೆಯುವ ಸ್ಪರ್ಧೆ ಯಾಗಿ ನಡೆಯುತ್ತಿದೆ ಎಂದು ನನಗನಿಸಿತು. ಅಷ್ಟರಲ್ಲೇ ಅವರ ಅಂಗಂಡಿಯಲ್ಲಿ ಇದ್ದ ಭಯಂಕರ ಶಬ್ದ ಮಾಡುವ, ಪಟಾಕಿಗಳ ಪೆಟ್ಟಿಗೆಗೆ ಎಲ್ಲಿಂದಲೋ ಕಿಡಿ ತಗುಲಿತು. ಪ್ರಜ್ವಲವಾದ ಬೆಳಕು ಬಂತು. ಆಮೇಲೆ ಕಿವಿಗಡಚಿಕ್ಕುವ ಸದ್ದು. ಕೂಡಲೇ ಅಂಗಡಿಯ ಪಕ್ಕದಲ್ಲಿದ್ದ ಒಬ್ಬ ವ್ಯಕ್ತಿ ಅದನ್ನು ನೋಡಿದ. ನಾವು ಸ್ಪರ್ಧೆಗೆ ಬಿದ್ದವರಂತೆ ಅಲ್ಲೇ ಇದ್ದೆವು.
ಪೆಟ್ಟಿಗೆಯ ಪಕ್ಕದಲ್ಲಿ ನಿಂತ ನಮ್ಮೆಲ್ಲರನ್ನು ಒಟ್ಟಿಗೆ ಹೊರಗೆ ಎಳೆದು ಕೊಂಡು ಬಂದು, ನೀರನ್ನು ಪೆಟ್ಟಿಗೆ ಮೇಲೆ ಹೊಯ್ದು ಸಂಭವನೀಯ ದುರ್ಘಟನೆ ತಪ್ಪಿಸಿದ. ಅಷ್ಟೊತ್ತಿಗೆ ಪೆಟ್ಟಿಗೆ ಪೂರ್ತಿ ಕರಕಲಾಗಿತ್ತು.
ಆವತ್ತು ಅ ವ್ಯಕ್ತಿ ಇಲ್ಲದಿದ್ದರೆ ನಾವು ಕೂಡ ಪೆಟ್ಟಿಗೆಯಂತೆ ಕರಕಲಾಗುತ್ತಿದ್ದೆವೋ ಏನೋ. ಅಲ್ಲಿಗೆ ಪಟಾಕಿ ಹೊಡೆಯುವ ಸ್ಪರ್ಧಾ ಮನೋಭಾವ ಸಂಪೂರ್ಣವಾಗಿ ಸ್ಥಗಿತವಾಯಿತು.
ಬಾಬು ಪ್ರಸಾದ್ ಎ. ಬಳ್ಳಾರಿ.