Advertisement

ಈ ಮೂರು ಮಿನಿ ಕತೆ‌ಗಳು

07:44 PM Apr 27, 2019 | mahesh |

ಸರಪಣಿಯ ಕತೆ
ಪ್ರತಿದಿನ ಶಾಲೆ ಬಿಟ್ಟು ಬರುವಾಗ ಬಾಗಿಲಲ್ಲೇ ನನ್ನನ್ನು ಕಾಯುತ್ತ ನಿಂತುಕೊಳ್ಳುವ ಅಮ್ಮ ಇವತ್ತೇಕೆ ಕಾಣುವುದೇ ಇಲ್ಲ ಎನ್ನುವ ಆತಂಕದಲ್ಲಿ ಪುಟ್ಟಿ ಮನೆ ಇಡೀ ಕೇಳುವಂತೆ, “ಅಮ್ಮಾ’ ಎಂದು ಕರೆದಳು. ಅಡುಗೆ ಮನೆಯಲ್ಲಿದ್ದ ಅಮ್ಮ, “ಶ್‌ ! ಸದ್ದು ಮಾಡಬೇಡ’ ಎಂದು ಕೈಯಲ್ಲಿ ಸಣ್ಣದೊಂದು ಕೋಲು ಹಿಡಿದು ಏಕಾಗ್ರತೆಯಿಂದ ಗೋಡೆ ದಿಟ್ಟಿಸುವುದನ್ನು ಮುಂದುವರಿಸಿದಳು.

Advertisement

ಪುಟ್ಟಿ ಒಂದು ಹೆಜ್ಜೆ ಮುಂದೆ ಬಂದು, ಅಮ್ಮನನ್ನೂ ಗೋಡೆಯನ್ನೂ ನೋಡಿದಳು. ಅಷ್ಟರಲ್ಲಿ ಅಮ್ಮ, ಕೈಯಲ್ಲಿದ್ದ ಕೋಲಿನಿಂದ “ಟಪ್ಪಂತ’ ಹಲ್ಲಿಗೆ ಹೊಡೆದಳು. ಅದರ ಬಾಯಲ್ಲಿದ್ದ ಚಿಟ್ಟೆ ಹಾರಿ ಹೋಯಿತು. ಅಮ್ಮ ಪುಟ್ಟಿಯೊಡನೆ ಹತ್ತಿರ ಕರೆದು, “ನೋಡು, ಚಿಟ್ಟೆಯ ಪ್ರಾಣ ಉಳಿಸಿದೆ’ ಎಂದು ತುಸು ಹೆಮ್ಮೆಭರಿತ ಧ್ವನಿಯಲ್ಲಿ ಹೇಳಿದಳು.

ತನಗಾದ ಗಲಿಬಿಲಿಯಿಂದ ಇನ್ನೂ ಹೊರಬರಲಾಗದ ಪುಟ್ಟಿ, “ಅಮ್ಮಾ, ಇವತ್ತಿಡೀ ಆ ಹಲ್ಲಿ ಉಪವಾಸ ಇರಬೇಕಾ?’ ಎಂದು ಕೇಳಿದಳು.
ಅಮ್ಮನ ಮೌನಕ್ಕೆ ಜಾರಿದಳು.

ಸತ್ತವನ‌ ಸಾವಿನ ಕತೆ
ಮೊನ್ನೆಯಷ್ಟೇ ರಾಷ್ಟ್ರಪತಿಗಳು ಅವನ ಕ್ಷಮಾಪಣಾ ಅರ್ಜಿಯನ್ನು ತಳ್ಳಿ ಹಾಕಿದ್ದರು. ನೂರಾರು ಅಮಾಯಕರನ್ನು ಕೊಂದ ಅವನ ಸಾವನ್ನು ಇಡೀ ದೇಶ ಎದುರು ನೋಡುತ್ತಿರುವಾಗ ಅವನನ್ನು ಕ್ಷಮಿಸುವುದು ಅಷ್ಟು ಸುಲಭವೂ ಆಗಿರಲಿಲ್ಲ. ಅವನು ಗಲ್ಲಿಗೇರುವ ನಿರ್ಧರಿತ ಗಳಿಗೆಯಲ್ಲಿ ಗಲ್ಲುಗಂಬದ ಬಳಿ ನಿರ್ಭಾವುಕನಾಗಿ ನಡೆದುಬಂದ ಹೊಸ ಫಾಶಿದಾರ ಅವನಿಗೆ ಕರಿ ಮುಸುಕು ಹಾಕಿ ಕತ್ತಿಗೆ ನೇಣು ಕುಣಿಕೆ ಬಿಗಿದು ಎಳೆದುಬಿಟ್ಟ. ಒಂದು ಕ್ಷಣವಷ್ಟೇ, ನೂರಾರು ಮಂದಿಯನ್ನು ಕರುಣೆಯಿಲ್ಲದೆ ಕೊಂದವನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇತ್ತ ಫಾಶಿದಾರನನ್ನು ಹೆಸರಾಂತ ಪತ್ರಕರ್ತನೊಬ್ಬ, “ಅವನು ಉಗ್ರಗಾಮಿಯೇ ಆಗಿರಬಹುದು, ಆದರೆ ಅವನ ಕುತ್ತಿಗೆಗೆ ಹಗ್ಗ ಬಿಗಿಯುವಾಗ ನಿಮಗೇನೂ ಅನಿಸಲೇ ಇಲ್ಲವೇ? ಒಮ್ಮೆಯೂ ಕೈ ನಡುಗಲೇ ಇಲ್ಲವೇ?’ ಎಂದು ಕೇಳಿದ.

“ಮೊದಲ ಬಾಂಬ್‌ ಸಿಡಿಸಿದಾಗಲೇ ಅವನೊಳಗಿನ ಮನುಷ್ಯ ಸತ್ತುಹೋಗಿದ್ದ. ಸತ್ತಿರುವವನನ್ನು ಮತ್ತೆ ಸಾಯಿಸುವಾಗ ನನಗೆ ಯಾಕೆ ಏನಾದರೂ ಅನಿಸಬೇಕು?’ ಫಾಶಿದಾರನದು ನೇರ ಉತ್ತರ.
ಪತ್ರಕರ್ತ ಬಿಡಲಿಲ್ಲ “ಅವನು ನಿಮ್ಮ ಮಗನಾಗಿದ್ದರೆ ಆಗಲೂ ಹೀಗೆಯೇ ಹೇಳುತ್ತಿದ್ದಿರಾ?’ ಕುಹುಕದಿಂದ ಕೇಳಿದ.  “ಅವನ ಅಪ್ಪ ನಾನೇ’ ತಣ್ಣಗೆ ಉತ್ತರಿಸಿ ತಲೆತಗ್ಗಿಸಿ ನಡೆದುಹೋದ ಫಾಶಿದಾರ.
ಪತ್ರಕರ್ತನ ಮೈಕ್‌ ಸದ್ದು ಕಳೆದುಕೊಂಡು ಸುಮ್ಮನಾಯಿತು.

Advertisement

ಬಣ್ಣ-ಕಣ್ಣಿನ ಕತೆ
ಚಿತ್ರಸಂತೆಯಲ್ಲಿ ಆ ಕಲಾಕಾರನ ಚಿತ್ರಗಳನ್ನು ಪ್ರತಿಬಾರಿಯೂ ಜನ ಮುಗಿಬಿದ್ದು ಕೊಳ್ಳುತ್ತಾರೆ. ಚಿತ್ರಗಳ ಬಗ್ಗೆ ಅವನು ನೀಡುತ್ತಿದ್ದ ವಿವರಣೆಗಳನ್ನೂ , ಸಂಕೇತಗಳನ್ನೂ , ಬಣ್ಣಗಳ ವಿಶ್ಲೇಷಣೆಯನ್ನೂ ಕೇಳಲು ವಿದ್ಯಾರ್ಥಿಗಳ ದಂಡೇ ಅವನ ಸುತ್ತ ಯಾವಾಗಲೂ ನೆರೆದಿರುತ್ತದೆ. ಆದರೆ, ಆ ಜನಜಂಗುಳಿಯ ನಡುವೆಯೂ ಅವನ ಕಣ್ಣುಗಳು ಮಾತ್ರ ಅತ್ಯುತ್ತಮ ಕಲಾಕೃತಿಯಾಗಬಲ್ಲ ವಸ್ತುವೊಂದರ ಹುಡುಕಾಟದಲ್ಲೇ ಇರುತ್ತವೆ. ಹಾಗೆ ಹುಡುಕುತ್ತಿರುವಾಗಲೇ ಬಟ್ಟಲು ಕಂಗಳ ಆ ಹುಡುಗ ಕಣ್ಣಿಗೆ ಬಿದ್ದಿದ್ದ.

ಸುತ್ತಲಿನ ಜಂಗುಳಿಯಿಂದ ನಾಲ್ಕು ಹೆಜ್ಜೆ ದೂರ ನಿಂತು ಅವನ ಮಾತುಗಳನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತಿದ್ದ. ಅದರಲ್ಲೂ ಬಣ್ಣಗಳ ಬಗ್ಗೆ ಹೇಳುತ್ತಿದ್ದಾಗ ಅವನ ಕಣ್ಣುಗಳು ವಿನಾಕಾರಣ ಅರಳುತ್ತಿದ್ದುದನ್ನು ಕಲಾವಿದ ಸ್ಪಷ್ಟವಾಗಿಯೇ ಗಮನಿಸಿದ್ದ. ಇವತ್ತು ಚಿತ್ರಸಂತೆಯ ಕೊನೆಯ ದಿನ. ಹೇಗಾದರೂ ಮಾಡಿ ಹುಡುಗನನ್ನು ಮಾತಾಡಿಸಲೇಬೇಕು ಅಂದುಕೊಂಡೇ ಬಂದಿದ್ದ. ಎಂದಿನಂತೆ ಹುಡುಗ ಇವತ್ತೂ ಅವನ ಮಾತುಗಳನ್ನು ಕೇಳುತ್ತಾ ನಿಂತಿದ್ದ, ಆದರೆ, ಅವನ ಮುಖದ ಲವಲವಿಕೆ ಮಾಯವಾಗಿತ್ತು. ಜನ ಕರಗಿದ ಮೇಲೆ ಕಲಾವಿದ ಅವನ ಬಳಿ ಹೋಗಿ,
“”ಪುಟ್ಟ, ಯಾಕೆ ಸಪ್ಪಗಿದ್ದೀಯಾ? ನಾಳೆಯಿಂದ ಚಿತ್ರಸಂತೆ ಇರುವುದಿಲ್ಲ ಎನ್ನುವ ಬೇಜಾರಾ?”
“”ಹುಂ”
“”ಅಷ್ಟೊಂದು ಇಷ್ಟಾನಾ ಬಣ್ಣಗಳು?”
“”ಇಲ್ಲ ಅಂಕಲ್‌, ಅದರ ವಾಸನೆಯೇ ನನಗಾಗುವುದಿಲ್ಲ. ನನ್ನ ಅಂಧ ತಂಗಿ- ಬಣ್ಣಗಳು ಅಂದ್ರೆ ಏನು- ಅಂತ ಕೇಳಿದ್ಳು, ಅದಕ್ಕೆ ಇಲ್ಲಿಗೆ ಬರ್ತಾ ಇದ್ದೆ. ಈಗ ಇದೂ ಮುಗ್ದು ಹೋಯಿತು. ಇನ್ನೂ ನನಗವಳಿಗೆ ಬಣ್ಣಗಳನ್ನು ವಿವರಿಸಲು ಸಾಧ್ಯವಾಗಲಿಲ್ಲ. ಅಂಕಲ್‌ ನೀವಾದ್ರೂ ಮನೆಗೆ ಬಂದು ವಿವರಿಸ್ತೀರಾ?”
ಕಲಾವಿದನ ಕೈಯಲ್ಲಿದ್ದ ಕುಂಚ ಸುಮ್ಮನೆ ನಡುಗಿತು.

ಫಾತಿಮಾ ರಲಿಯಾ

Advertisement

Udayavani is now on Telegram. Click here to join our channel and stay updated with the latest news.

Next