Advertisement

ಈ ದೃಶ್ಯಗಳೇಕೆ ಧಾರಾವಾಹಿಗಳಿಗೆ ವಸ್ತುವಾಗುವುದಿಲ್ಲ !

03:45 AM Jun 30, 2017 | |

ಚಿತ್ರದಲ್ಲಿ ಕಾಣುವವರು ಅತ್ತೆ, ಸೊಸೆ.
ಈ ಅತ್ತೆ-ಸೊಸೆ ಕೇವಲ ತರಕಾರಿಗಳನ್ನು ಮಾರಲು ಮಾತ್ರ ಪೇಟೆಗೆ ಬರುವುದಲ್ಲ. ಗರ್ಭಿಣಿ ಸೊಸೆಯನ್ನೂ ಕರೆದುಕೊಂಡು ಆಸ್ಪತ್ರೆಗೆ ಬರುತ್ತಾರೆ. “ಇದು ಸಹಜ, ವಿಶೇಷವೇನಿದೆ?’ ಎಂದು ಹಲವರು ಪ್ರಶ್ನಿಸಬಹುದು. ಮಗಳ ಆರೈಕೆಯನ್ನು ತಾಯಿ ಮಾಡುವುದು ಸಹಜ. ಸೊಸೆಯ ಆರೈಕೆ ಮಾಡುವ ಅತ್ತೆಯ ಉದಾಹರಣೆಗಳು ನಮ್ಮ ನಮ್ಮ ಮನೆಗಳಲ್ಲಿ ಇದೆಯೇ ಎಂದು ನೋಡಿಕೊಳ್ಳಬೇಕು. ಇದಕ್ಕೆ ಉತ್ತರವಾಗಿ “ಹೀಗಾಗಿದ್ದರೆ ಹೀಗಾಗುತ್ತಿತ್ತು’ ಎಂಬ ಬೇರೆ ಬೇರೆ ಸಬೂಬು ಕೊಟ್ಟು ಕೃತಕ ಮನಸ್ಸಮಾಧಾನ ಪಟ್ಟುಕೊಳ್ಳುವುದು ವ್ಯರ್ಥ. ಇವರಾದರೋ ಹಿಂದುಳಿದ ವರ್ಗಕ್ಕೆ ಸೇರಿದವರು. ಮುಂದುಳಿದ ವರ್ಗದಲ್ಲಿ ಇಂತಹ ಸನ್ನಿವೇಶ ಎಷ್ಟಿದೆ? ಸಾಮಾಜಿಕವಾಗಿ ಹಿಂದುಳಿದವರೋ, ಮುಂದುಳಿದವರೋ ಬಿಡಿ, ಆರ್ಥಿಕವಾಗಿ ಮುಂದುಳಿದವರ ಮನೆಗಳಲ್ಲಿ ಹವಾನಿಯಂತ್ರಿತ ಕಾರುಗಳಲ್ಲಿಯಾದರೂ ಸೊಸೆಯನ್ನು ಅತ್ತೆ ಕರೆದುಕೊಂಡು ಹೋಗುವ ಸ್ಥಿತಿ ಇದೆಯೆ? 

Advertisement

ಗ್ರಾಮೀಣ ಬದುಕಿನ ಇಮ್ಯೂನ್‌ ಸಿಸ್ಟಮ್‌ 
ಸಾರ, ರುಚಿ, ಪರಿಮಳ, ಆತ್ಮ ಇತ್ಯಾದಿ ಶಬ್ದಗಳಿಗೆ ಭೌತಿಕ ರೂಪ ಇರುವುದಿಲ್ಲ. ಒಂದು ಸಮಾಜ ನೆಮ್ಮದಿಯಿಂದ ಬದುಕಲು ಎಂತಹ ವಾತಾವರಣ ಬೇಕು ಎನ್ನುವುದಕ್ಕೆ ಇಂತಹ ಬದುಕು ಅಗತ್ಯ ಎನ್ನಬಹುದು. ಇದನ್ನೇ “ನೆಮ್ಮದಿ ಜೀವನದ ಆತ್ಮ, ಸಾರ, ನೀತಿ’ ಎಂದು ಕರೆಯಬಹುದು. ಭಾರತದ ಇತಿಹಾಸವನ್ನು ಗಮನಿಸುವಾಗ, ಇತಿಹಾಸವೆಂದಾಗ ಶತ- ಸಹಸ್ರಮಾನ ಹಿಂದಕ್ಕೆ ಹೋಗುವುದು ಬೇಡ, 30-40 ವರ್ಷಗಳ ಹಿಂದಿನ ಜನಜೀವನವನ್ನು ಗಮನಿಸಿದಾಗ ಇಂತಹ ಮೌಲ್ಯ ಮನೆಮನೆಗಳಲ್ಲಿ ಇದ್ದದ್ದು ಗೋಚರಿಸುತ್ತದೆ. ಈ ಮಾತನ್ನು ಹೇಳಿದಾಕ್ಷಣ ಮನೆಗಳಲ್ಲಿ ಇದ್ದ ಜಗಳದ ಉದಾಹರಣೆಗಳನ್ನು ಎತ್ತಿ ತೋರಿಸುವ ತವಕ ಕೆಲವರಿಗೆ ಬರುತ್ತದೆ. ಅಷ್ಟು ಗಡಿಬಿಡಿ ಬೇಡ, ಇದು ಏಕೆ ಆರಂಭವಾಗುತ್ತಿತ್ತು ಎನ್ನುವುದು ಮುಂದೆ ತಿಳಿಯುತ್ತದೆ. ಗ್ರಾಮೀಣ ಭಾರತದ ಅಥವಾ ಒಂದು ಸ್ವಸ್ಥ ಸಮಾಜದ ಆತ್ಮ ಎಂಥದ್ದು ಎಂದು ಪ್ರಶ್ನಿಸಿದ್ದರೆ ಇಂಥದ್ದೇ ಎಂದು ಧಾರಾಳವಾಗಿ ಹೇಳಬಹುದೆ ವಿನಾ ಇದನ್ನು ಭೌತಿಕ ರೂಪದಲ್ಲಿ ಪ್ರಾತ್ಯಕ್ಷಿಕೆ ಮಾಡಿಸಿ ತೋರಿಸಲು ಆಗದು. ಇಂದಿಗೂ ಗ್ರಾಮೀಣ ಭಾಗದಲ್ಲಿ ಆಧುನಿಕ ಜೀವನದ ಸ್ಪರ್ಶವಾದರೂ, ಟಿವಿಗಳು ಮನೆಯೊಳಗೆ ಹೊಕ್ಕರೂ, ಅದು ಉಸುರಿಸುವ ಮನೋವಿಕಾರ ಕಾಯಿಲೆಗಳು ಸೋಂಕದಂತೆ ಕಾಪಾಡಿಕೊಂಡ ಹಳ್ಳಿ ಜೀವನ ಕ್ರಮದ ಇಮ್ಯೂನ್‌ ಸಿಸ್ಟಮ್‌ ಬಹಳ ಮುಖ್ಯವೆನಿಸುತ್ತದೆ.
 
ಸಂಕುಚಿತ- ವಿಕಸಿತ ಬದುಕು
ಇಲ್ಲಿ ಭಾರತವನ್ನು ದೇಶದ ಗಡಿಯೊಳಗೆ ಹಾಕಿ ನೋಡುವುದೂ ಒಂದರ್ಥದಲ್ಲಿ ಸಂಕುಚಿತವೆನಿಸುತ್ತದೆ. ಆಧುನಿಕ ಜೀವನ ಮಾದರಿಗಳು ಬರುವ ಮುನ್ನ ವಿವಿಧ ನಾಗರಿಕತೆಗಳಲ್ಲಿಯೂ ಇಂತಹ ಮೌಲಿಕ ಬದುಕು ಇದ್ದಿರಬಹುದೆ ಎಂದೆನಿಸುತ್ತದೆ. 
 
ಗ್ರಾಮೀಣ ಬದುಕು- ಮೌಲಿಕ ಬದುಕು
ಇಂತಹ ಯಾವುದೇ ನಿಷ್ಕಲ್ಮಶ, ಮುಗ್ಧ ಜನರಿಗೆ ಸಮಾಜಕ್ಕೆ ತಾವು ಸಲ್ಲಿಸುತ್ತಿರುವ ಅಮೂಲ್ಯ ಕೊಡುಗೆಗಳು ಗೊತ್ತಿರುವುದಿಲ್ಲ ಎಂದು ಎಷ್ಟೋ ಬಾರಿ ಅನಿಸುವುದುಂಟು. ಒಂದು ವೇಳೆ ಗೊತ್ತಾದರೂ ಅಪಾಯವಿದೆ ಎಂದು ಇನ್ನೊಂದು ವಾದ ಇದೆ. ತಮ್ಮ ಜೀವನ ದೊಡ್ಡದು, ತಮ್ಮ ಸೇವೆ ಉತ್ಕೃಷ್ಟವಾದುದು ಎಂದು ಗೊತ್ತಾದಾಗಲೇ “ಅಹಂ’ ಒಳ ಸೇರುತ್ತದೆ. ಅದು ಒಳಸೇರಿದ್ದು ಗೊತ್ತಾಗುವುದೂ ಇಲ್ಲ. ಒಂದಾನೊಂದು ಕಾಲದಲ್ಲಿ ಅಮೂಲ್ಯ ಜೀವನವನ್ನು ನಡೆಸಿದ ಪೀಳಿಗೆಯವರೇ ಈಗ ವಿರುದ್ಧವಾಗಿ ಬದುಕುತ್ತಿದ್ದಾರೆ ಎನ್ನುವುದು ಸಂಶಯಾತೀತ. ಯಾವಾಗ ನಾವು ದೊಡ್ಡವರು, ನಮ್ಮ ಸೇವೆಯಿಂದ ಸಮುದಾಯ, ಊರು, ದೇಶಕ್ಕೆ ಬಹಳ ಸೇವೆ ದೊರಕುತ್ತಿದೆ ಎಂಬ ಅಹಂ (ದೊಡ್ಡಸ್ತಿಕೆ) ಬಂತೋ ಆಗಲೇ ಅವರು ಆ ವರ್ತುಲದಿಂದ ಈಗ ಕಾಣುತ್ತಿರುವ ವಿಷವರ್ತುಲಕ್ಕೆ ಬಂದರು. ಇದು ಜೊತೆ ಗ್ರಾಮೀಣ ಬದುಕಿನ ನಾಶವಲ್ಲದೆ ಮೌಲಿಕ ಬದುಕಿನ ಇತಿಶ್ರೀ ಕೂಡ ಆಯಿತು. ಹೀಗಾಗಿ ಗ್ರಾಮೀಣ ಬದುಕು- ಮೌಲಿಕ ಬದುಕು ಒಂದಕ್ಕೊಂದು ಬಿಟ್ಟು ಇರದು ಎಂಬ ವಿಶ್ಲೇಷಣೆಯನ್ನೂ ಮಾಡಬಹುದು.  

ಕಲೀತಾ ಹೋದಂತೆ…
ಹೆಚ್ಚು ಹೆಚ್ಚು ಕಲಿತೆವೆಂದು ತಿಳಿಯುವ ಸಮಾಜದಲ್ಲಿ ಈ ಮೌಲಿಕವಾದ ಆತ್ಮ ಕಣ್ಮರೆಯಾಗುತ್ತ ಹೋಗುತ್ತಿದೆಯೆ ಎಂದು ತಾಳೆ ಹಾಕಿ ನೋಡಲು ಕೆಳಗಿನ ಕೆಲವು ಉದಾಹರಣೆಗಳನ್ನು ಬಳಸಬಹುದು. 
 
ಮನೆಗಳಲ್ಲಿ “ಧಾರಾವಾಹಿ ಕಾರ್ಬನ್‌ ಕಾಪಿ’
ನಾಲ್ಕೈದು ದಶಕಗಳ ಹಿಂದೆ ಸಮಾಜದಲ್ಲಿ ಮುಂದುಳಿದವರೆಂದು ತಿಳಿದವರು ಓದುಬರೆಹದಲ್ಲಿಯೂ ಅಷ್ಟೋ ಇಷ್ಟೋ ಮುಂದುಳಿದಿದ್ದರು. ಇವರನ್ನು ಆಕರ್ಷಿಸಲು ನಿಯತಕಾಲಿಕೆಗಳು ಹುಟ್ಟಿಕೊಂಡಿದ್ದವು. ಅದರಲ್ಲಿ ಬರುತ್ತಿದ್ದ ಅತ್ತೆ-ಸೊಸೆ ಕಲಹದ ಧಾರಾವಾಹಿಗಳನ್ನು ಓದಿ ಅಂತಹ ಮನೆಗಳಲ್ಲಿಯೂ ಅದರ ಕಾರ್ಬನ್‌ ಕಾಪಿ ಛಾಯೆ ಮೂಡುತ್ತಿತ್ತು. ಅದೇ ಹಿಂದುಳಿದವರ ಮನೆಗಳಲ್ಲಿ ಸಂಸಾರ ನೆಮ್ಮದಿಯಿಂದ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ. ಮನೆಮನೆಗಳಲ್ಲಿ ಟಿವಿಗಳು ಬಂದಿವೆ, ಕರೆನ್ಸಿ ನೋಟುಗಳೂ ಹೆಚ್ಚಿವೆ. ಇವುಗಳನ್ನೇ ಸಿರಿವಂತಿಕೆ ಎನ್ನುವ ನಮ್ಮ ಮನಃಸ್ಥಿತಿ ಇದನ್ನು ಗಳಿಸಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದೆ. ಆಗಿನ ಮಾಧ್ಯಮದವರ ಕೆಲಸ ಓದುಗರನ್ನು ಆಕರ್ಷಿಸಿದ್ದರೆ ಈಗಿನ ಮಾಧ್ಯಮದ ಕೆಲಸ ವೀಕ್ಷಕರನ್ನು ಆಕರ್ಷಿಸುವುದು. ಮನೆಗೆಡಿಸುವ ಈ ಧಾರಾವಾಹಿಗಳಲ್ಲಿ “ಮೂಗು ಮುರಿಯುವ’ ಪಾತ್ರಗಳದ್ದೇ ಕಾರುಭಾರು. ಚಲನಚಿತ್ರವನ್ನೋ, ಧಾರಾವಾಹಿಗಳನ್ನೋ ಕಲೆಯಾಗಿ ನೋಡುವವರು ಎಷ್ಟು ಜನ? “ಅದೊಂದು ಕೃತಕ ಸನ್ನಿವೇಶ, ನೋಡಿ ಎಂಜಾಯ್‌ ಮಾಡಿ’ ಎನ್ನುವುದಕ್ಕೆ ಮಾತ್ರ ನಿಲ್ಲದೆ ಅದು ನಮ್ಮ ಮೇಲೆ ಪರಿಣಾಮ ಬೀರುವಂತೆ ಆಗುತ್ತದೆ. 

ಮನೆಯ ಸದಸ್ಯರು ಊಟ ಮಾಡಿದ್ದಾರೋ ಇಲ್ಲವೋ ಎಂದು ಗೊತ್ತಿಲ್ಲದಿದ್ದರೂ ಧಾರಾವಾಹಿಯ ರಮೇಶ ಊಟ ಮಾಡಿದ್ದಾನೋ ಇಲ್ಲವೋ ಎಂದು ತಲೆಕೆಡಿಸಿಕೊಂಡ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಧಾರಾವಾಹಿ ಕಾಣುವ ಭರದಲ್ಲಿ ಏನು ನಡೆದರೂ ಗೊತ್ತಾಗದ ಸ್ಥಿತಿ ಇದೆ. ಮದುವೆಯಾದ ಮೇಲೆ ಅವನಿಗೋ? ಅವಳಿಗೋ? ಬೇರೆ ಸಂಬಂಧವಿರುವುದನ್ನು ತೋರಿಸಿ ಕೊಲೆ ಮಾಡುವ ಸನ್ನಿವೇಶವನ್ನೂ ಮೈಮರೆತು ನೋಡುತ್ತಾರೆ. ಇದು ನೋಡುಗರ ಮೇಲೆ ಪರಿಣಾಮ ಬೀರಿ ಎರಡೂ ತರಹದ ಜನರು ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಇದು ಸಮಾಜಕ್ಕೆ ಎಷ್ಟೊಂದು ದುಬಾರಿ ಆಗದು? “ಇಂತಹ ವಿಷಯಗಳು ಆಕಾಶದಿಂದ ಉದುರಿ ಬಿದ್ದಿರುವುದಲ್ಲ, ಸಮಾಜದಲ್ಲಿ ಕಂಡದ್ದೇ’ ಎಂದು ನಿರ್ಮಾಪಕನೋ? ವಾಹಿನಿ ಮುಖ್ಯಸ್ಥರೋ ವಾದಿಸಬಹುದು. ವಾದಿಸಲಿಕ್ಕೆ ಯಾವ ಕೊರತೆಯೂ ಇಲ್ಲ. ಕಾಣಲಿಕ್ಕೆ ಸಿಗುವುದನ್ನು/ ಇರುವುದನ್ನು ಸಾರ್ವಜನಿಕವಾಗಿ ತೋರಿಸಿದರೆ, ಸಾರ್ವತ್ರೀಕರಣಗೊಂಡು ಮನೆಮನೆಗಳಲ್ಲಿ, ವಾದಿಸುವವರ ಮನೆಯಲ್ಲಿಯೇ ಇಂತಹ ಪ್ರಕರಣ ನಡೆದರೆ ಸಹಿಸಿಕೊಳ್ಳುವರೋ? 

ವಿಚ್ಛೇದನಗಳೂ ಮನೆಹಾಳು ಧಾರಾವಾಹಿಗಳೂ…
ಸಮಾಜದಲ್ಲಿ ಬಹು ದೊಡ್ಡ ಸಂಖ್ಯೆ ಜನರ ನಿದ್ದೆಗೆಡಿಸುತ್ತಿರುವ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿಯೂ ಈ “ಮನೆಹಾಳು’ ಧಾರಾವಾಹಿಗಳ ಪಾತ್ರವಿದೆ ಎಂಬುದಕ್ಕೆ ಪ್ರತ್ಯೇಕ ಸಂಶೋಧನ ಅಧ್ಯಯನಗಳು/ಪ್ರಬಂಧ ಮಂಡನೆಗಳು ಬೇಕಿರಲಿಕ್ಕಿಲ್ಲ. ಇದಾವುದನ್ನೂ ಗಮನಿಸದೆ ಹಲ್ಲು ಗಿಂಜಿಕೊಂಡು ಧಾರಾವಾಹಿಗಳನ್ನು ನೋಡಿ ಮತ್ತೆ ಮನೆಯೊಳಗೆ ಕತ್ತಿ ಮಸೆಯುವುದರಲ್ಲಿಯೇ ಆಯುಷ್ಯ ಕ್ಷೀಣವಾಗುತ್ತಿದೆ. ಜೀವನ ಇರುವುದು ಕತ್ತಿ ಮಸೆಯುವುದಕ್ಕೋ, ಕೇವಲ ಧನದಾಹಿಗಳಾಗುವುದಕ್ಕೋ, ಸ್ವಾರ್ಥ-ಸಂಕುಚಿತ, ಕೊಳ್ಳುಬಾಕ ವ್ಯಕ್ತಿಗಳಾಗುವುದಕ್ಕೋ ಇರುವುದಲ್ಲ ಎಂಬ ಧಾರಾವಾಹಿಗಳನ್ನು ವಾಹಿನಿಗಳು ಹೊರತರಬೇಕಾಗಿದೆ. ಮನೆ ಒಡಕು ಧಾರಾವಾಹಿಗಳಿಗೆ ಹೇಗೆ ವಿಷಯಗಳು ಸಿಗುತ್ತದೋ ಹಾಗೆಯೇ ಮನೆ ನಿರ್ಮಾಣದ ಧಾರಾವಾಹಿಗಳಿಗೂ ವಿಷಯಗಳು ಸಿಗುತ್ತವೆ, ನೋಡುವ ಕಣ್ಣುಗಳು ಬೇಕಷ್ಟೆ. ಯಾರೂ ಶ್ರಮಪಟ್ಟು ನಿರ್ಮಿಸಿದ, ಈಗಾಗಲೇ ಇದ್ದ ಸುಸೂತ್ರದ ಮೌಲಿಕ ಜೀವನ ವ್ಯವಸ್ಥೆಗೆ ಇಷ್ಟೆಲ್ಲಾ ಅಡೆತಡೆ ಇದ್ದರೂ ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿಗಳಾದ ವನಜಾ ಮತ್ತು ಬಾಬಿಯವರಂತಹ ಅನೇಕ ಮನೆಗಳು ಇನ್ನೂ ಗ್ರಾಮೀಣ ಪ್ರದೇಶದಲ್ಲಿವೆ ಎನ್ನುವುದೇ ನಿರಾಶಾವಾದಿಗಳನ್ನು ಸದಾಶಯವಾದಿಗಳನ್ನಾಗಿ ಮಾಡುತ್ತದೆ.
 
ಮನೆಮನೆಗಳಲ್ಲಿ ಸೌಹಾರ್ದ, ನೆಮ್ಮದಿ, ಶಾಂತಿ ಮೂಡಿದರೆ ಮಾತ್ರ ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ, ಜಗತ್ತಿನಲ್ಲಿ ಸೌಹಾರ್ದ, ಶಾಂತಿ ನಿರ್ಮಾಣ ಆಗಬಹುದು.  

Advertisement

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next