Advertisement

ಮಳೆಗಾಲ ಬಂದ್ರೆ ಈ ಮಾರ್ಗಗಳು ‘ಡೆಡ್ಲಿ’

11:30 AM Aug 19, 2019 | Suhan S |

ಗುಳೇದಗುಡ್ಡ: ಗುಳೇದಗುಡ್ಡ-ನಂದಿಕೇಶ್ವರ ಹಾಗೂ ಗುಳೇದಗುಡ್ಡ-ಹುಲ್ಲಿಕೇರಿ ಮಾರ್ಗದ ರಸ್ತೆಗಳು ನಿಸರ್ಗ ಸೌಂದರ್ಯದಿಂದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವುದೇ ಆನಂದ. ಆದರೆ, ಮಳೆಗಾಲ ಬಂದರೆ ಮಾತ್ರ ಬಲು ಅಪಾಯಕಾರಿ ರಸ್ತೆಯಿದು.

Advertisement

ಗುಳೇದಗುಡ್ಡದಿಂದ ಈ ಎರಡೂ ಪ್ರದೇಶಗಳಿಗೆ ತೆರಳಲು ಗುಡ್ಡ ಕಡಿದು ರಸ್ತೆ ಮಾಡಲಾಗಿದ್ದು, ನಿಸರ್ಗ ಸೌಂದರ್ಯ ಪ್ರೀತಿಸುವವರು, ಪರಿಸರ ಪ್ರೀತಿಸುವವರು ಈ ಮಾರ್ಗದ ಮೂಲಕವೇ ಹಾಯ್ದು ಹೋಗುತ್ತಾರೆ.

ನಿಸರ್ಗ ಸೌಂದರ್ಯ: ಈ ಎರಡೂ ರಸ್ತೆಗಳ ಸುತ್ತಲೂ ಗುಡ್ಡವೇ ಆವರಿಸಿದ್ದು, ನೋಡಲು ಸುಂದರವಾಗಿದೆ. ಈ ರಸ್ತೆಯಲ್ಲಿನ ಪ್ರಕೃತಿ ಸೊಬಗು ಚಾರ್ಮುಡಿ ಘಾಟ್‌ನ ಅನುಭವವನ್ನು ತಂದು ಕೊಡುತ್ತದೆ. ನಿಸರ್ಗ ರಮ್ಯತೆಯನ್ನು ಹೊಂದಿದೆ. ಎಷ್ಟೋ ಜನ ಯುವಕರು ಈ ಪರಿಸರವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯಲೆಂದೇ ಇಲ್ಲಿಗೆ ಆಗಮಿಸುತ್ತಾರೆ. ಸಂಜೆ ಹೊತ್ತು ಈ ಕುರುಚಲು ಗುಡ್ಡಗಳಲ್ಲಿ ಕುಳಿತುಕೊಂಡು ಆನಂದಿಸುತ್ತಾರೆ. ಪ್ರಕೃತಿಯ ಸೊಬಗನ್ನು ಸವಿಯುತ್ತಾರೆ.

ನವಿಲುಗಳ ನೋಡುವುದೇ ಆನಂದ: ಈ ಮಾರ್ಗದಲ್ಲಿ ಸಂಚರಿಸುವವರಿಗೆ ಹಿಂಡು ಹಿಂಡಾದ ನವಿಲುಗಳು ಕಂಡು ಬರುತ್ತವೆ. ನವಿಲುಗಳು ಗರಿ ಬಿಚ್ಚಿ ಕುಣಿಯುವುದು ನೋಡುವುದೇ ಬಲು ಚೆಂದ. ಇಲ್ಲಿಯ ಪ್ರಶಾಂತ ವಾತಾವರಣ, ಕುರುಚಲು ಗುಡ್ಡ, ಸುತ್ತಲೂ ಹಸಿರಾಗಿ ಕಾಣುವ ಹೊಲಗಳು ಈ ಮಾರ್ಗದಲ್ಲಿ ಇರುವುದರಿಂದ ಇವು ಇಲ್ಲಿಯೇ ಹೆಚ್ಚು ವಾಸವಾಗಿವೆ. ಈ ರಸ್ತೆ ಮೂಲಕ ಸಂಚರಿಸುವವರು ನವಿಲುಗಳು ಕಂಡರೆ ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಾರೆ. ಅವು ಕೂಗುವ ಧ್ವನಿಗೆ ಕಿವಿಯಾಗುತ್ತಾರೆ. ಆದರೆ ಯಾರೂ ಕೂಡಾ ಅವುಗಳಿಗೆ ತೊಂದರೆ ಕೊಡಲ್ಲ. ಹೀಗಾಗಿ ಅವು ಸ್ವಚ್ಛಂದವಾಗಿ ಇಲ್ಲಿ ಸಂಚರಿಸುತ್ತವೆ, ವಿಹರಿಸುತ್ತವೆ.

ಎಲ್ಲಿಗೆ ಸಂಪರ್ಕ: ನಂದಿಕೇಶ್ವರ ಮಾರ್ಗದ ರಸ್ತೆ ಮಹಾಕೂಟ, ಶಿವಯೋಗ ಮಂದಿರ, ಬನಶಂಕರಿಗೆ ಸಂಪರ್ಕ ಕಲ್ಪಿಸಿದರೆ, ಹುಲ್ಲಿಕೇರಿ ರಸ್ತೆ ಹುಲ್ಲಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿ, ಮುಂದೆ ಹಾನಾಪುರ ಗ್ರಾಮಕ್ಕೆ ಸಂಪರ್ಕ ಕೊಡುತ್ತದೆ. ಶಿವಯೋಗಮಂದಿರ ಹಾಗೂ ಬನಶಂಕರಿಗೆ ಹೋಗುವವರು ಎಷ್ಟೋ ಜನರು ಬಾದಾಮಿ ಮೂಲಕ ಹೋಗದೇ ನಂದಿಕೇಶ್ವರ ಮಾರ್ಗದ ಮೂಲಕವೇ ಹೋಗುತ್ತಾರೆ.·ಮಹಾಗುಂಡಪ್ಪ ನಂದ್ಯಾಳ, ಹನಮಪ್ಪ ಕೋಚಲ, ನಂದಿಕೇಶ್ವರ ಗ್ರಾಮಸ್ಥರು

ಮಳೆಗಾಲದಲ್ಲಿ ಅಪಾಯಕಾರಿ: ನಿಸರ್ಗ ಸೌಂದರ್ಯ ಹೊಂದಿರುವ ನಂದಿಕೇಶ್ವರ ಹಾಗೂ ಹುಲ್ಲಿಕೇರಿ ಮಾರ್ಗದ ರಸ್ತೆಗಳನ್ನು ಗುಡ್ಡ ಕೊರೆದು ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಮಾತ್ರ ಬಹಳ ಅಪಾಯಕಾರಿಯಾಗಿವೆ. ಮಳೆ ಬಂದಾಗ ಗುಡ್ಡದಲ್ಲಿರುವ ಕಲ್ಲುಗಳು ರಸ್ತೆಗೆ ಬೀಳುತ್ತವೆ. ಈ ಮಾರ್ಗದಲ್ಲಿ ಸಂಚರಿಸುವ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ.
ಕಲ್ಲುಗಳು ಬಿದ್ದಿವೆ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ನಂದಿಕೇಶ್ವರ ಮಾರ್ಗದ ರಸ್ತೆಯಲ್ಲಿ ಮೂರು ದೊಡ್ಡ ಗಾತ್ರದ ಕಲ್ಲುಗಳು ಬಿದ್ದಿವೆ. ಇದೇ ಜಾಗದಲ್ಲಿ ಇನ್ನೆರಡು ದೊಡ್ಡದಾದ ಕಲ್ಲುಗಳು ಬೀಳುವ ಹಂತದಲ್ಲಿದ್ದು, ಎರಡೂ ಬೃಹತ್‌ ಬಂಡೆಗಳ ಸುತ್ತಲೂ ಇರುವ ಮಣ್ಣು ಕುಸಿದಿದೆ. ಅವು ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಹಿಡಿದುಕೊಂಡಿವೆ. ಯಾವಾಗ ಬೀಳುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.
ಸಂಬಂಧಿಸಿದವರು ಗಮನಿಸಲಿ: ಈ ಮಾರ್ಗದಲ್ಲಿ ಶಾಲಾ ವಾಹನಗಳು ಸೇರಿದಂತೆ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ರಾತ್ರಿ ಸಮಯದಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಗುಡ್ಡ ಕುಸಿದು ಕಲ್ಲುಗಳು ಬಿದ್ದರೆ ಅಪಾಯವಾಗುವ ಸಾಧ್ಯತೆ ಕಡಿಮೆ. ಆದರೆ ಹಗಲು ಹೊತ್ತಿನಲ್ಲಿ ಬಿದ್ದರೆ ಅಪಾಯ ಖಚಿತ. ಸಂಬಂಧಪಟ್ಟವರು ರಸ್ತೆಗಳನ್ನು ಇನ್ನಷ್ಟು ಅಗಲಿಸಿ, ಕಲ್ಲುಗಳು ಬಿದ್ದರೂ ರಸ್ತೆಗೆ ಬೀಳದಂತೆ ಕ್ರಮ ವಹಿಸಬೇಕಿದೆ.
Advertisement

•ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next