Advertisement

ಆ ದಿನಗಳು ಈ ದಿನಗಳು

03:45 AM Feb 15, 2017 | Harsha Rao |

ಒಮ್ಮೆ ಅಜ್ಜಿ ನನ್ನ ಹತ್ತಿರ ಹೇಳುತ್ತಿದ್ದರು, ಅಲ್ಲಾ ಪುಟ್ಟಾ, ನಮಗೆ ಏಳು ಜನ್ಮಕ್ಕೂ ಒಬ್ಬನೇ ಗಂಡ ಅಂತೆ, ಈಗ ಎಷ್ಟು ಜನ್ಮ ಆಗಿದೆಯೋ ಗೊತ್ತಿಲ್ಲ. ಇನ್ನೂ ಎಷ್ಟು ಜನ್ಮ ಇವರೇ ಗಂಡನಾಗಿ ಬರ್ತಾರೋ ಏನೋ? 

Advertisement

ಒಂದು ಚಿತ್ರಗೀತೆ:
ಒಲಿದರು ನೀನೆ 
ಮುನಿದರೂ ನೀನೇ 
ಕಾಣೆನು ಬೇರೇನೂ 
ಚಿಂತೆಯು ಇನ್ನೇನು
ಅಮೃತವ ನೀಡು
ವಿಷವನೇ ನೀಡು
ಏನು ಮಾತಾಡೆನು
ನಿನ್ನಿಂದ ದೂರಾಗಿ 
ನಾ ಬಾಳೆನು
ತನು ನಿನ್ನದು ಈ ಮನ ನಿನ್ನದು 
ನನದಾಗಿ ಇನ್ನೇನಿದೆ? 
ಈ ಜೀವ ಎಂದೆಂದು ನಿನದಾಗಿದೆ
ಇದು ಎಪ್ಪತ್ತು ಹಾಗೂ ಎಂಬತ್ತರ ದಶಕದ ಚಿತ್ರಗೀತೆ. ಹೆಣ್ಣೆಂದರೆ ತಗ್ಗಿ ಬಗ್ಗಿ ನಡೆಯಬೇಕು. ಗಂಡ ಹಾಕಿದ ಗೆರೆ ದಾಟಬಾರದು. ಗಂಡನನ್ನೇ ದೇವರು ಎಂದು ಪೂಜಿಸಬೇಕು ಎಂಬ ನಂಬಿಕೆ ಆಗ ಗಾಢವಾಗಿತ್ತು. ಅವನು ಹೊಡೆದರೂ ಬಡಿದರೂ ಅವನೇ ಏಳೇಳು ಜನ್ಮಕ್ಕೂ ಪತಿಯಾಗಿ ದೊರೆಯಲಿ ಎಂದು ಬೇಡಿ ಕೊಳ್ಳುವ ಕಾಲವೊಂದಿತ್ತು. ಹೆಣ್ಣಿಗೆ ಇಷ್ಟತ್ತೋ ಇಲ್ಲವೋ ಸುತ್ತಮುತ್ತಲಿನ ಜನರಿಗೆ ಹೆದರಿಯಾದರೂ ಹಾಗೆಯೇ ಕೇಳಿಕೊಳ್ಳುತ್ತಿದ್ದಳು. ಗಂಡ, ಅವನೆಂಥವನಾದರೂ ಅವನು ತನಗೆ ಸಿಕ್ಕಿದ್ದೇ ತನ್ನ ಪುಣ್ಯ ಎಂಬಂತೆ ನಡೆದುಕೊಳ್ಳುವಂತೆ ತರಪೇತಾಗುತ್ತಿತ್ತು. ಆಗ ಹೆಣ್ಣಿನ ಮೈಂಡ್‌ ಸೆಟ್‌ ಆದೇ ರೀತಿಯೇ ಇರುತ್ತಿತ್ತು. ತನ್ನಮ್ಮ ಅಜ್ಜಿಯಂತೆಯೇ ಅವಳೂ ಯೋಚಿಸುತ್ತಿದ್ದಳು. ಅಜ್ಜಿಗೂ ಅಮ್ಮನಿಗೂ ತನಗೂ ವರ್ಷಗಳ ಜನರೇಷನ್‌ ಗ್ಯಾಪ್‌ ಇದೆ. ನಾನೊಂಚೂರು ಆಧುನಿಕವಾಗಿ ಯೋಚಿಸಬಹುದು ಎಂದು ಅವಳಿಗೆ ಎಂದೂ ಅನಿಸುತ್ತಿರಲಿಲ್ಲ. ತಾನು ಓದಿದ್ದರೂ ಮನೆಯಲ್ಲಿ ಗಂಡನಿಗೆ ಇಷ್ಟವಿಲ್ಲದೆ ತಾನು ನೌಕರಿಯನ್ನೂ ಮಾಡುವಂತಿರಲಿಲ್ಲ. ಯಾರಾದರೂ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳನ್ನು ಕಂಡರೆ ಮನೆಯಲ್ಲಿರುವ ಹೆಣ್ಣುಗಳಿಗೆ ಒಂಥರಾ ಅಸೂಯೆ ಮಿಶ್ರಿತ ದೃಷ್ಟಿಕೋನ. ಇಬ್ಬರಿಬ್ಬರು ಸಂಪಾದನೆ ಮಾಡಿ ಅದೇನು ಗುಡ್ಡೆ ಹಾಕ್ತಾರೋ ಎಂಬ ಹಗುರವಾಗಿ ಹೇಳಿಕೊಳ್ಳುತ್ತಾರೆಯೇ ವಿನಾ ಅರೆ! ಅವರು ಒಂದಷ್ಟು ಹೊರಗಿನ ಪ್ರಪಂಚವನ್ನು ನೋಡುತ್ತಿದ್ದಾರೆ ನಾವು ಮನೆಯಲ್ಲೇ ಕೊಳೆಯುತ್ತಿದ್ದೇವೆ, ನಮಗೂ ಒಂದಿಷ್ಟು ಹೊರ ಪ್ರಪಂಚದ ಗಾಳಿ ಬೆಳಕು ಬೇಕು ಎಂದು ಯೋಚಿಸುತ್ತಲೇ ಇರಲಿಲ್ಲ. 

ನನಗೆ ಗೊತ್ತಿರುವ ಅಜ್ಜಿ ಒಬ್ಬರಿದ್ದರು ಆ ಅಜ್ಜಿಯ ಗಂಡ ವಯಸ್ಸಿನಲ್ಲಿದ್ದಾಗ ಬೇರೆ ಯಾವುದೋ ಹೆಣ್ಣಿನ ಸಹವಾಸ ಮಾಡಿದ್ದರಂತೆ. ಅದು ಅಜ್ಜಿಗೆ ಗೊತ್ತಾಗಿ ರಂಪ ಮಾಡಿದ್ದರಂತೆ. ಈಗ ವಯಸ್ಸಾದ ಮೇಲೂ ಅಜ್ಜನಿಗೆ, ಆ ಹೆಣ್ಣಿಗೆ ಒಮ್ಮೊಮ್ಮೆ  ಹಿಡಿಶಾಪ ಹಾಕುತ್ತಿದ್ದರು. ಒಮ್ಮೆ ಅಜ್ಜಿ ನನ್ನ ಹತ್ತಿರ ಹೇಳುತ್ತಿದ್ದರು, ಅಲ್ಲವೇ ಪುಟ್ಟಾ ನಮಗೆ ಏಳು ಜನ್ಮಕ್ಕೂ ಒಬ್ಬನೇ ಗಂಡ ಅಂತೆ, ಈಗ ಎಷ್ಟು ಜನ್ಮ ಆಗಿದೆಯೋ ಗೊತ್ತಿಲ್ಲ. ಇನ್ನೂ ಎಷ್ಟು ಜನ್ಮ ಇವರೇ ಗಂಡನಾಗಿ ಬರ್ತಾರೋ ಏನೋ? ಆ ಜನ್ಮಗಳಲ್ಲೂ ಇವರು ಬೇರೆ ಹೆಣ್ಣಿನ ಸಹವಾಸ ಮಾಡ್ತಾರಾ? ಈ ಚಂದಕ್ಕೆ ಮುಂದಿನ ಜನ್ಮಗಳಲ್ಲೂ ಇವರೇ ಗಂಡನಾಗಲಿ ಎಂದು ಬಯಸಬೇಕಾ? ನಂಗೆ ಏನು ಹೇಳಬೇಕೋ ಗೊತ್ತಾಗದೆ ಕಣ್ಣು ಪಿಳಿಪಿಳಿ ಬಿಟ್ಟಿದ್ದೆ. ಈಗ ಅದನ್ನು ನೆನೆದರೆ ಅಜ್ಜಿಯ ಬಗ್ಗೆ ಕನಿಕರವಾಗುತ್ತದೆ. ಅಜ್ಜಿ ಆ ಕಾಲಕ್ಕೇ ಹೊಸತರಾ ಯೋಚನೆ ಮಾಡಿದ್ದರಲ್ಲಾ ಎನಿಸುತ್ತದೆ. 
ಇನ್ನೊಬ್ಬರು ತಾತ ಅಜ್ಜಿ ಇದ್ದರು. ಅಜ್ಜಿ ಪಾಪದವರು. ತಾತ ಒಳ್ಳೆಯವರಾದರೂ ದರ್ಪಿಷ್ಠ. ಅಜ್ಜಿ ಹಬ್ಬ ಹರಿದಿನಗಳಲ್ಲಿ ಹೊಸಸೀರೆ ಉಟ್ಟರೆ ತಕ್ಷಣ ಬಂದು ತಾತನ ಕಾಲಿಗೆ ನಮಸ್ಕರಿಸುತ್ತಿದ್ದರು.  ತಾತನೂ ಅದನ್ನೇ ಬಯಸುತ್ತಿದ್ದರು.

ಅಕ್ಕಪಕ್ಕದವರು ಇದನ್ನು ತಿಳಿದಿದ್ದ ಪರಿಚಿತರು ಅಜ್ಜಿಯನ್ನು ರೇಗಿಸಿದರೆ “ಅವರೇ ತಾನೆ ಹೊಸ ಸೀರೆ ಕೊಡಿಸಿದ್ದು, ಗಂಡನೇ ದೇವರು ಅವರಿಗೇ ನಮಸ್ಕಾರ ಮಾಡೋದು, ಹಾಗೆ ಮಾಡದೆ ಇದ್ದರೆ ಪಾಪ ಬೇಜಾರು ಮಾಡಿಕೊಳ್ತಾರೆ’ ಎಂದು ಸಣ್ಣಗೆ ಹೇಳುತ್ತಿದ್ದರು. ಅಂದರೆ ತಾತ ಕೋಪ ಮಾಡಿಕೊಳ್ಳುವುದನ್ನು ಬೇಜಾರಿನ ಲೇಪ ಹಚ್ಚಿ ಮರ್ಯಾದೆ ಕಾಪಾಡುತ್ತಿದ್ದರು. 

ಇನ್ನೊಬ್ಬರು ದಂಪತಿಗಳಿದ್ದರು. ಅನ್ಯೋನ್ಯವಾಗಿದ್ದರು. ಹೆಂಡತಿ ಸರ್ಕಾರಿ ನೌಕರಿಯಲಿದ್ದರು. ಸಂಬಳ ಬಂದ ತಕ್ಷಣ ಗಂಡನ ಕೈಗೆ ತಂದುಕೊಡಬೇಕು. ಸಂಬಳ ಜಾಸ್ತಿಯಾದರೆ ಅರಿಯರ್ ಬಂದರೆ ಎಲ್ಲವೂ ಗಂಡನಿಗೆ ಗೊತ್ತಾಗುತ್ತಿತ್ತು. ಗಂಡನ ಕಣ್ಣು ತಪ್ಪಿಸಿ ಹತ್ತು ರುಪಾಯಿಯನ್ನೂ ಇಟ್ಟುಕೊಳ್ಳುವ ಹಾಗಿಲ್ಲ. ಯಾವುದಕ್ಕೆ ಬೇಕಾದರೂ ಗಂಡನ ಬಳಿ ಕೈಚಾಚಬೇಕು. ಏನನ್ನೂ ಗಂಡನಿಗೆ ಗೊತ್ತಿಲ್ಲದೆ ತೆಗೆದುಕೊಳ್ಳುವಂತಿಲ್ಲ. ನಂಗೆ ಅದನ್ನು ನೋಡಿ ಇದು ಯಾತರ ಜೀವನ ಎನಿಸುತ್ತಿತ್ತು. ಜಿಗುಪ್ಸೆಯಾಗುತ್ತಿತ್ತು. 

Advertisement

ನನ್ನ ಗೆಳತಿಯ ಸೋದರತ್ತೆ ಮಾವ ಇದ್ದರು. ಆ ಮಾವ ಮಾಡದೇ ಇರುವ ಅನಾಚಾರವಿಲ್ಲ. ಕುಡಿಯುವುದು, ಇಸ್ಪೀಟಾಡಿ ಹಣ ಕಳೆಯುವುದು, ಕುದುರೆ ಬಾಲಕ್ಕೆ ಹಣ ಕಟ್ಟುವುದು, ಸಾಲದ್ದಕ್ಕೆ ಆಗೀಗ ಬೇರೆ ಹೆಣ್ಣುಗಳ ಸಹವಾಸ. ಸ್ನೇಹಿತೆಯ ಅತ್ತೆಗೆ ಇವೆಲ್ಲಾ ಗೊತ್ತಿದ್ದರೂ ಉಸಿರು ಬಿಡುತ್ತಿರಲಿಲ್ಲ. ಗಂಡನನ್ನು ಆ ಪಾಟಿ ವಹಿಸಿಕೊಂಡು ಮಾತಾಡುತ್ತಿದ್ದರು. ಒಮ್ಮೆ ಅವರ ಷಷ್ಠಬ್ಧಿ ಸಮಾರಂಭ ನಡೆಯಿತು. ಆಗ ಗಂಡ ಹೆಂಡತಿಗೆ ಮತ್ತೂಮ್ಮೆ ತಾಳಿ ಕಟ್ಟುತ್ತಾರಲ್ಲಾ ಅದನ್ನು ನೋಡುತ್ತಿದ್ದ ಗೆಳತಿ “ಅಯ್ಯೋ ಈಗಲೂ ಇವರ ಹತ್ರಾನೆ ತಾಳಿ ಕಟ್ಟಿಸಿಕೊಳ್ಳಬೇಕಲ್ಲಾ? ಅವರ ಕರ್ಮ ನೋಡು ಈ ಸಂಪತ್ತಿಗೆ ಈ ಸಮಾರಂಭ ಎಲ್ಲ ಯಾಕೆ ಮಾಡ್ಕೊàತಾರೋ’ ಎಂದಿದ್ದಳು. ನಾನು ಯಾರಿಗಾದರೂ ಕೇಳಿಸಿತೆಂದು ಅವಳ ತೋಳು ಚಿವುಟಿ ಸುಮ್ಮನಾಗಿಸಿದ್ದೆ.

ಈಗಿನ ದಿನಗಳು ಹಿಂದಿನ ಹಾಗಿಲ್ಲ. “ನಾನೂ ಹೊರಗೆ ದುಡಿದು ಬರಿ¤àನಿ ನೀನೂ ಮನೆ ಕೆಲಸದಲ್ಲಿ ನಂಗೆ ಸಹಾಯ ಮಾಡಬೇಕಪ್ಪಾ’ ಎನ್ನುವ ಹೆಂಡತಿಯರು ಇದ್ದಾರೆ. “ಏನೋ ನಂಗೆ ಒಂದು ರೂಲ್ಸು, ನಿಂಗೆ ಒಂದು ರೂಲ್ಸಾ? ನತ್ತಿಂಗ್‌ ಡೂಯಿಂಗ್‌ ಸುಮ್ಮನೆ ಕೂತ್ಕೊà’ ಎಂದು ಅಬ್ಬರಿಸುವ ಪತ್ನಿಯರು ಇದ್ದಾರೆ. ಏಳು ಜನ್ಮಕ್ಕೂ ಇವನೇ ಗಂಡ ಆಗಲಿ ಅಂತ ಕೇಳ್ಕೊàಬೇಕಾ? ಸಧ್ಯ ಈ ಜನ್ಮ ಕಳೆದರೆ ಸಾಕಾಗಿದೆ. ಅಂತ ಹೇಳುವ ಧೈರ್ಯ ನಮ್ಮ ಹೆಣ್ಣುಮಕ್ಕಳಿಗೆ ಬಂದಿದೆ. ಗಂಡನಲ್ಲಿ ಹುಳುಕಿದ್ದರೆ, ತಪ್ಪಿದ್ದರೆ ಮುಲಾಜಿಲ್ಲದೆ ದಬಾಯಿಸುತ್ತಾರೆ. ಕೆಲಸಕ್ಕೆ ಹೋಗಬೇಡವೆಂದರೆ ಮುಸುರೆ ತೊಳಕೊಂಡು ಬಿದ್ದಿರಕ್ಕೆ ನಂಗೆ ಆಗಲ್ಲಪ್ಪ ಮನೇಲೆ ಇದ್ದರೆ ಉಸಿರು ಕಟ್ಟತ್ತೆ ಅಷ್ಟೆ, ನಾನು ಕೆಲಸಕ್ಕೆ ಹೋಗಬೇಕು ಎಂದು ಧೈರ್ಯವಾಗಿ ಹೇಳಿ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಾರೆ. ಕೆಲಸಕ್ಕೆ ಹೋಗದ ಹೆಣ್ಣುಗಳು ಕಂಡರೆ ಏಯ್‌ ಅದೇನು ಮನೇಲಿ ಕೂತು ಮರಿ ಹಾಕ್ತೀಯಾ ಕೆಲಸಕ್ಕೆ ಹೋಗು ಹೊರಗಿನ ಪ್ರಪಂಚ ಹೇಗಿದೆ ಅಂತ ಗೊತ್ತಾಗತ್ತೆ ಈಗೆಲ್ಲಾ ಅಪ್‌ಡೇಟಾಗಿರಬೇಕಮ್ಮಾ. ಈಗ ನೀನು ಓಬಿರಾಯನ ಕಾಲದಲ್ಲಿದ್ದರೆ ಯಾರೂ ಮೂಸಿ ನೋಡಲ್ಲ ಎಂದು ಬುದ್ಧಿ ಹೇಳುತ್ತಾರೆ. 

ನಮ್ಮ ದೂರದ ಸಂಬಂಧಿಯೊಬ್ಬರು ಮಗ ಬೇರೆ ಜಾತಿಯ ಹುಡುಗಿಯನ್ನು ಇಷ್ಟಪಟ್ಟಿದ್ದಕ್ಕೆ ಮದುವೆಯಾಗುವಾಗ ಅವರ ನೆಂಟರೇ ಇನ್ನೊಬ್ಬರು ದಂಪತಿಗಳು ಹುಡುಗಿಯನ್ನು ದತ್ತು ತೆಗೆದುಕೊಂಡ ಹಾಗೆ ಮಾಡಿ, ಧಾರೆಯೆರೆದು ಕೊಡುವುದು ಎಂದು ಮಾತಾದಾಗ ಹುಡುಗನ ತಂಗಿಯೇ ಇದನ್ನು ಬಲವಾಗಿ ವಿರೋಧಿಸಿ ಹುಡುಗಿಯ ಅಪ್ಪಅಮ್ಮನೇ ಹಸೆ ಮೇಲೆ ಕೂತು ಮದುವೆ ಮಾಡಿಕೊಡುವಂತೆ ಮಾಡಿದ್ದಳು. ನಾವೆಲ್ಲಾ ಅವಳ ಬೆನ್ನು ತಟ್ಟಿದ್ದೆವು. 

ಕಾಲ ಬದಲಾಗುತ್ತಿದೆ. ಅಲ್ಲಲ್ಲ ಮನಸ್ಥಿತಿಗಳು ಬದಲಾಗುತ್ತಿದೆ. ಕೋಲೆ ಬಸವನ ಥರಾ ತಲೆಯಾಡಿಸೋ ಕಾಲ ಈಗಿಲ್ಲ. ಮುಂಚೆ ಮಹಿಳೆಯರಿಗೆ ಪ್ರಶ್ನೆ ಮಾಡಲು ಬಿಡುತ್ತಲೇ ಇರಲಿಲ್ಲ. ಆದರೆ ಈಗ ಹಾಗಿಲ್ಲ. ನಾವು ಸುಮ್ಮನೆ ಕತ್ತು ಬಗ್ಗಿಸಿ ಇದ್ದರೆ ನಮ್ಮನ್ನು ತುಳಿದು ಹಾಕಿ ಬಿಡುತ್ತಾರೆ ಎಂದು ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ. ಪ್ರಶ್ನಿಸುತ್ತಾರೆ. ತಮ್ಮ ಮನಸ್ಸಿಗೆ ಸಮಾಧಾನವಾದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಹೊರ ಪ್ರಪಂಚದ ಬೆರಗುಗಳನ್ನು ಸತ್ಯಗಳನ್ನು ಕಣ್ಣರಳಿಸಿ ನೋಡುವುದನ್ನು ಕಲಿತಿದ್ದಾರೆ. ಹೊರಗಿನ ಜಗತ್ತು ಹೀಗೂ ಇರುತ್ತದೆ, ಅದಕ್ಕೆ ತಕ್ಕಂತೆ ನಾವಿರಬೇಕು ಎಂದು ಅರ್ಥ ಮಾಡಿಕೊಂಡಿದ್ದಾರೆ.  

– ವೀಣಾರಾವ್‌

Advertisement

Udayavani is now on Telegram. Click here to join our channel and stay updated with the latest news.

Next