Advertisement
ನಿಮಿಷಕ್ಕೊಮ್ಮೆ ಎಂಬಂತೆ ಹೊರಗೆ ಬಂದು ಮಳೆಯನ್ನು ವೀಕ್ಷಿಸುತ್ತಿದ್ದೆ. ಸುಮಾರು 10 ಗಂಟೆಯಾಗುತ್ತಿದ್ದಂತೆ ಮಳೆಯ ರಭಸ ಜಾಸ್ತಿಯಾಗಿ ಎಲ್ಲೆಡೆ ನೀರು ತುಂಬತೊಡಗಿತು. ನಮ್ಮ ಮನೆಯ ಹಿಂದೆ-ಮುಂದೆ ಎಲ್ಲ ಕಡೆ ಗದ್ದೆ, ಅದರಲ್ಲಿ ತುಂಬಿದ ನೀರು ಮನೆಯ ಅಂಗಳದ ಕಡೆ ಹರಿಯಲಾರಂಭಿಸಿತು. ನೋಡು ನೋಡುತ್ತಿದ್ದಂತೆ ಕಲರ್‌ಲೆಸ್ ಆಗಿದ್ದ ನೀರು ಕೆಂಬಣ್ಣಕ್ಕೆ ಪರಿವರ್ತನೆಯಾಗತೊಡಗಿತು.
Related Articles
Advertisement
ಅಣ್ಣನಿಗೆ ಚಿಕ್ಕದಾಗುವುದು ಎಂದು ನನಗೆ ಒಂದನೆಯ ತರಗತಿಗೆ ಹೋಗುವಾಗಲೇ ಕೊಟ್ಟಿದ್ದರು. ಈ ವರ್ಷವೂ ಅದೇ ಅದು ಗಿಡ್ಡವಾಗುತ್ತಿತ್ತು. ನಾನು ಉದ್ದ ಇದ್ದೆ . ನನಗೆ ಈ ವರ್ಷ ಕೊಡೆ ಬೇಕು ಎಂದು ಅಮ್ಮನ ಮೂಲಕ ಅಪ್ಪನಿಗೆ ಹೇಳುವ ಕೆಲಸ ಮುಗಿಸಿದ್ದೆ. ಆದರೆ, ಅಪ್ಪ ಮಾತ್ರ ಮಳೆಗಾಲ ನಾಲ್ಕು ತಿಂಗಳು ಮಾತ್ರ, ಅಷ್ಟರಲ್ಲಿ ನೀನೇನೂ ಮಹಾ ಉದ್ದ ಆಗುವುದಿಲ್ಲ. ಈ ವರ್ಷಕ್ಕೆ ಸಾಕು, ಒಂದು ವೇಳೆ ಹರಿದುಹೋದರೆ ಮತ್ತೆ ಬೇಕಾದರೆ ಕೊಡೆ ತೆಗೆದುಕೊಂಡು ಹೋಗು ಎಂದುಬಿಟ್ಟರು. ಬಹುಶಃ ಅದೇ ಹೊತ್ತಿಗೆ “ಅಸ್ತು ದೇವತೆಗಳು ಅಸ್ತು’ ಎಂದಿರಬೇಕು! ಬೇರೆ ವಿಧಿಯಿಲ್ಲದೇ ಒಪ್ಪಿಕೊಂಡೆ.
ಅದೊಂದು ದಿನ ಶಾಲೆಗೆ ಹೋಗುವಾಗ ಮಳೆ ಬರುತ್ತಿದ್ದ ಕಾರಣ ರೈನ್‌ಕೋಟ್ ಧರಿಸಿ ಹೋಗಿದ್ದೆ. ಶಾಲೆಯ ಹೊರಗೆ ರೈನ್‌ಕೋಟ್ ಕಳಚಿಟ್ಟು ಒಳಗೆ ಹೋದೆ. ನಂತರ ಬಂದ ನನ್ನ ತರಗತಿಯವರು ತಮ್ಮ ತಮ್ಮ ರೈನ್‌ಕೋಟ್, ಕೊಡೆಗಳನ್ನು ನನ್ನ ರೈನ್‌ಕೋಟ್ ಮೇಲೆ ಇಟ್ಟು ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ಬಂದ ಗುರುಗಳು “ಇದೇಕೆ ಹೀಗೆ ಒಟ್ಟಾರೆ ಬಿಸಾಡಿದ್ದೀರಿ ಚಂದ ಮಾಡಿ ಮಡಚಿ ಇಡಿ’ ಎಂದಾಗ ಎಲ್ಲರೂ ತಮ್ಮ ತಮ್ಮವುಗಳನ್ನು ಎತ್ತಿಕೊಂಡರು. ಯಾರ ಕೊಡೆಯ ಕಡ್ಡಿ ಸಿಕ್ಕಿ ಹಾಕಿತ್ತೋ ನನ್ನ ರೈನ್‌ಕೋಟಿನ ಆಯುಷ್ಯ ಮುಗಿದಿತ್ತೋ ಗೊತ್ತಿಲ್ಲ. ನನ್ನ ರೈನ್‌ಕೋಟ್ ಉದ್ದಕ್ಕೆ ಸೀಳುಬಿಟ್ಟಿತ್ತು. ಒಂದೆಡೆ ಗಾಬರಿಯಾದರೂ ಇನ್ನೊಂದೆಡೆ ಬಹಳ ಖುಶಿಯಾಗಿತ್ತು. ನಾಳೆಯಿಂದ ಕೊಡೆ ತರಬಹುದಲ್ಲ ಎಂದು. ಮನೆಗೆ ಹೋಗಿ ವಿಷಯ ತಿಳಿಸಿದಾಗ ವಿಧಿಯಿಲ್ಲದೆ ಅವರು ಇದ್ದುದರಲ್ಲಿಯೇ ಒಂದು ಚಿಕ್ಕ ಕೊಡೆ- ಅದೂ ಸೆಕೆಂಡ್‌ಹ್ಯಾಂಡ್- ಕೊಟ್ಟು “ಜಾಗ್ರತೆ ಗಾಳಿ ಬಂದಾಗ ಕೊಡೆ ಗಟ್ಟಿ ಹಿಡಿ’ ಇಲ್ಲವಾದರೆ ನೀನು ಕೂಡಾ ಹಾರಿಹೋಗುತ್ತಿ ಎಂದು ತಮಾಷೆ ಮಾಡಿದ್ದರು. ಆಗ ನಾನು ತುಂಬಾ ಸಣಕಲು ಇದ್ದೆ, ಈಗೇನೂ ಭಾರಿ ದಪ್ಪ ಇಲ್ಲ ಬಿಡಿ. ನನಗೆ ಮಾತ್ರ ಅವರ ಯಾವ ತಮಾಷೆಯೂ ಕಿವಿಯೊಳಗೆ ಹೋಗಿರಲಿಲ್ಲ. ಮರುದಿನ ಕೊಡೆಯೊಂದಿಗೆ ಹೋಗುವುದನ್ನೇ ಕನಸು ಕಾಣುತ್ತ ಮಲಗಿದೆ.
ಮರುದಿನ ಏಳುವಾಗ ನನಗೆ ನಿರಾಸೆ ಕಾಡಿತ್ತು. ಏಕೆಂದರೆ, ಆಕಾಶ ಶುಭ್ರವಾಗಿತ್ತು. ಮಳೆಬಿಡಿ, ಮೋಡದ ಕುರುಹು ಕೂಡ ಇರಲಿಲ್ಲ. ಬೇಸರದಿಂದಲೇ ಶಾಲೆಗೆ ನಡೆದೆ. ಶಾಲೆಯಲ್ಲಿರುವಾಗ ಒಂದೆರಡು ಸಲ ಮಳೆ ಬಂದಾಗ ಬೇಕೆಂದೇ ಟೀಚರ್ ಹತ್ತಿರ ಮೂತ್ರ ವಿಸರ್ಜನೆಗೆ ಹೋಗಲಿಕ್ಕೆ ಎಂದು ಹೇಳಿ ಕೊಡೆ ಹಿಡಿದು ಮಳೆಗೆ ತಿರುಗಾಡಿ ಬಂದಿದ್ದೆ. ಉಳಿದ ಸಂದರ್ಭದಲ್ಲಿ ಗಂಟೆ ಬಾರಿಸಿದಾಗ ಮಾತ್ರ ಮೂತ್ರವಿಸರ್ಜನೆಗೆ ಬಿಡುತ್ತಿದ್ದರೂ ಮಳೆಗಾಲದಲ್ಲಿ ಮಾತ್ರ ಅದಕ್ಕೆ ರಿಯಾಯಿತಿ ಇತ್ತು. ಮಳೆಗಾಲದಲ್ಲಿ ಬೆವರು ಉತ್ಪತ್ತಿ ಕಡಿಮೆ, ಮೂತ್ರ ಉತ್ಪತ್ತಿ ಜಾಸ್ತಿ ಅಂತ ಅವರೇ ಪಾಠ ಮಾಡಿದ್ದಲ್ಲ ! ಅದಕ್ಕೆ ಸಂಜೆ ಬರುವಾಗ ಪುನಃ ಮಳೆ ಇದ್ದ ಕಾರಣ ನನಗೆ ಏಕೋ ಕೊಡೆ ಭಾರ ಎನಿಸತೊಡಗಿತು. ರೈನ್‌ಕೋಟ್ ಆದರೆ ಮಡಚಿ ಚೀಲದಲ್ಲಿ ಇರಿಸಬಹುದಿತ್ತು. ಏನು ಮಾಡುವುದು ,ವಿಧಿಯಿಲ್ಲ. ನಾನೇ ಬಯಸಿದ್ದು ಅಲ್ಲವೇ ಎಂದು ಸುಮ್ಮನಾದೆ.
ಮರುದಿನ ಬೆಳಿಗ್ಗೆ ಏಳುವಾಗಲೇ ಮಳೆರಾಯ ತನ್ನ ಇರುವಿಕೆಯನ್ನು ತೋರಿಸಿದ್ದ ಖುಷಿಯಿಂದ ಕೊಡೆ ಹಿಡಿದು ಹೊರಟೆ. ಹೊತ್ತು ಸರಿದಂತೆ ಮಳೆಯ ಆರ್ಭಟ ಜಾಸ್ತಿಯಾಗಿ ನಿಲ್ಲುವ ಸೂಚನೆ ಕಾಣದಿದ್ದಾಗ ನನಗೆ ಮನೆಗೆ ಹೇಗೆ ಹೋಗುವುದು ಎಂದು ಚಿಂತೆಯಾಗತೊಡಗಿತು. ಮಧ್ಯಾಹ್ನದ ಹೊತ್ತಿಗೆ ಕೆಲವು ಹೆತ್ತವರು ಶಾಲೆಗೆ ಬಂದು ಮಳೆ ಇನ್ನೂ ಜೋರಾಗಿ ಬರುವ ಸೂಚನೆ ಕಾಣುತ್ತಿದೆ ಎಂದರು.
ಶಿಕ್ಷಕರಿಗೂ ಅದು ಸರಿಯೆನಿಸಿತು. ಒಂದೇ ಕಡೆ ಹೋಗುವ ಮಕ್ಕಳನ್ನೆಲ್ಲಾ ಗುಂಪು ಮಾಡಿ ಅದಕ್ಕೆ ಓರ್ವ ನಾಯಕನನ್ನು ಮಾಡಿ ಜೋಪಾನವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ವಹಿಸಿದರು. ಅಂತೆಯೇ ನಾನು ಮತ್ತು ಅಣ್ಣ ಒಂದು ಗುಂಪಲ್ಲಿ ಸೇರಿ ಮನೆಕಡೆ ಹೊರಟೆವು. ನಮ್ಮ ಚೀಲದಲ್ಲಿ ಇರುತ್ತಿದ್ದುದು ಕೆಲವು ಪುಸ್ತಕ ಮಾತ್ರ. ಈಗಿನ ಹಾಗೆ ಮಣಭಾರದ ಚೀಲ ಇರುತ್ತಿರಲಿಲ್ಲ. ಹಾಗಾಗಿ, ಮಳೆಯ ನೀರಿನಲ್ಲಿ ಸಾಗುತ್ತ ಬಟ್ಟೆ ಎಲ್ಲಾ ಒದ್ದೆಯಾಗಿತ್ತು. ಎಲ್ಲರೂ ಅವರವರ ಮನೆಬಂದಾಗ ತೆರಳಿ ಕೊನೆಗೆ ನಾನು ಮತ್ತು ಅಣ್ಣ ನಮ್ಮ ಮನೆದಾರಿ ಹಿಡಿದೆವು. ಮುಂದೆ ಹೋಗುವಾಗ ನಮಗೆ ಒಂದು ಹಳ್ಳ ಸಿಗುತ್ತಿತ್ತು. ನಂತರ ನಮ್ಮ ಗದ್ದೆ ಉಳುಮೆ ಕೆಲಸ ಆಗಿದ್ದ ಕಾರಣ ಬದುವಿನ ಮೇಲಿಂದ ಹೋಗಬೇಕಿತ್ತು.
ಮಳೆಗಾಲದಲ್ಲಿ ಆ ಹಳ್ಳದ ಬಳಿ ಯಾರಾದರೂ ಅಂದರೆ ಅಜ್ಜ , ಅಜ್ಜಿ ಅಥವಾ ಅಮ್ಮ ಬಂದು ನಿಲ್ಲುತ್ತಿದ್ದರು. ಆದರೆ ಇಂದು ಬೇಗ ಶಾಲೆ ಬಿಟ್ಟ ವಿಷಯ ಅವರಿಗೆ ತಿಳಿದಿಲ್ಲವಾದ್ದರಿಂದ ನಮ್ಮನ್ನು ಕರೆದೊಯ್ಯಲು ಯಾರೂ ಬಂದಿರಲಿಲ್ಲ. ಆಗ ನಾವಿಬ್ಬರೇ ಧೈರ್ಯಮಾಡಿ, ಚಪ್ಪಲಿಯನ್ನು ಒಂದು ಕೈಯಲ್ಲಿ ಹಿಡಿದು, ಒಬ್ಬರ ಕೈ ಒಬ್ಬರು ಹಿಡಿದು ನೀರಿಗೆ ಇಳಿದೆವು. ನನ್ನ ಸೊಂಟದವರಗೆ ನೀರು ಬಂದಿತ್ತು. ಚೀಲ, ಬಟ್ಟೆ ಎಲ್ಲವೂ ಒದ್ದೆಯಾಯಿತು. ಹೇಗೋ ಹಳ್ಳವನ್ನು ದಾಟಿ ಗದ್ದೆಯ ಬದುವಿನ ಮೇಲೆ ನಡೆಯತೊಡಗಿದೆವು.
ಅಣ್ಣ ಮುಂದೆ ನಾನು ಹಿಂದೆ. ನಾನು ಕೈಯಲ್ಲಿದ್ದ ಚಪ್ಪಲಿಯನ್ನು ಕೆಳಗೆ ಹಾಕಿ ಕಾಲಿಗೆ ಹಾಕುವುದರಲ್ಲೇ ಮಗ್ನಳಾಗಿದ್ದೆ. ಅಷ್ಟರಲ್ಲಿ ಒಂದು ಬಲವಾದ ಗಾಳಿ ಬೀಸಿ ನನ್ನ ಕೊಡೆಯನ್ನು ಎಳೆದೊಯ್ಯತೊಡಗಿತು. ಕಕ್ಕಾಬಿಕ್ಕಿಯಾದ ನಾನು ಕೊಡೆಯನ್ನು ಗಟ್ಟಿಯಾಗಿ ಹಿಡಿಯುವ ಭರದಲ್ಲಿ ದೇಹದ ಸಮತೋಲನ ಕಳೆದುಕೊಂಡು ಪಕ್ಕಕ್ಕೆ ವಾಲಿದೆ. ಕೊಡೆಯನ್ನು ನೇರವಾಗಿ ಹಿಡಿಯುವಷ್ಟರಲ್ಲಿ ಮತ್ತೂಂದು ಗಾಳಿಬೀಸಿ ನಾನು ಕೊಡೆಯ ಸಮೇತ ಕೆಳಗಿನ ಗದ್ದೆಗೆ ಬಿದ್ದುಬಿಟ್ಟಿದ್ದೆ. ಕಾಲು ಕೆಸರಿನಲ್ಲಿ ಹೂತುಹೋಗಿ ಮೇಲೆತ್ತಲು ಸಹ ಆಗಲಿಲ್ಲ. ಅಣ್ಣನನ್ನು ಕೂಗಿದೆ. ಅವನೋ ಅವನ ಕೊಡೆಯನ್ನು ಸಂಭಾಳಿಸುವುದರಲ್ಲಿ ಅವನಿಗೆ ನನ್ನ ದನಿಯೇ ಕೇಳಿಸಲಿಲ್ಲ. “ನೀರಿನಲ್ಲಿ ಮುಳುಗಿದವಳಿಗೆ ಚಳಿಯೇನು, ಮಳೆಯೇನು’ ಎನ್ನುತ್ತಾ ಕೈಯಲ್ಲಿದ್ದ ಕೊಡೆಯನ್ನು ಮಡಚಿ ಮೇಲಿನ ಗದ್ದೆಯ ಬದುವಿನ ಮೇಲಿಟ್ಟು ನಾನು ನಿಧಾನಕ್ಕೆ ಕೆಸರಿನಿಂದ ಕಾಲನ್ನು ತೆಗೆಯಲು ಪ್ರಯತ್ನಿಸಿದೆ. ಅಷ್ಟರಲ್ಲಿ ಅಣ್ಣನಿಗೆ ನನ್ನ ನೆನಪಾಗಿರಬೇಕು.
ಹಿಂದೆ ನೋಡಿದಾಗ ನನ್ನ ಅವಸ್ಥೆ ನೋಡಿ ವಾಪಾಸು ಓಡಿಬಂದು ನನ್ನನ್ನು ಮೇಲೆತ್ತಿದ್ದ. ಆಗ ನನ್ನ ಬಟ್ಟೆ ನೋಡಬೇಕಿತ್ತು. ಆಗ ಸರ್ಪ್ ಎಕ್ಸೆಲ್, ರಿನ್ ಪೌಡರ್‌ನ ಜಾಹೀರಾತು ಇರಲಿಲ್ಲವೋ ಏನೋ. ಇಲ್ಲದಿದ್ದರೆ ನನ್ನನ್ನೇ ಸೆಲೆಕ್ಟ್ ಮಾಡುತ್ತಿದ್ದರು. ಮನೆಗೆ ಹೋದಾಗ ಅಮ್ಮ ನಮ್ಮ ಅವತಾರ ನೋಡಿ ಮೊದಲು ಗಾಬರಿಗೊಂಡರೂ ವಿಷಯ ತಿಳಿದಾಗ ಮನಸಾರೆ ನಕ್ಕುಬಿಟ್ಟಳು.
ನಗರೀಕರಣದ ಭರದಲ್ಲಿ ಕಾಡು ನಾಶವಾಗಿ ಹಿಂದಿನಷ್ಟು ಮಳೆಯೂ ಬರುತ್ತಿಲ್ಲ. ಕೆಲಸಗಾರರ ಅಭಾವದಿಂದ ವ್ಯವಸಾಯ ಮಾಡುವವರು ಕಡಿಮೆಯಾಗಿದ್ದಾರೆ. ನನ್ನ ತವರಿನಲ್ಲೂ ಈಗ ಅಪ್ಪ, ಅಮ್ಮ ಇಬ್ಬರೇ ಇದ್ದಾರೆ. ಮನೆಯಂಗಳದವರೆಗೂ ವಾಹನ ಹೋಗುವವರೇ ರಸ್ತೆ ನಿರ್ಮಿಸಲಾಗಿದೆ. ಆದರೂ ಆ ಸ್ಥಳವನ್ನು ದಾಟುವಾಗ ಹಿಂದಿನ ದೃಶ್ಯಗಳೇ ಕಣ್ಣೆದುರು ಮೂಡುತ್ತದೆ. ತುಟಿಯಂಚಿನಲ್ಲೇ ನಗುತ್ತೇನೆ.
– ರಾಧಿಕಾ ಜಿ. ಕಾಮತ್