Advertisement

ಮೃಗಶಿರ: ಶ್ರೀಧರ ಬಳಗಾರ ಬರೆಯುತ್ತಿರುವ ಕಾದಂಬರಿಯ ಮೊದಲ ಪುಟಗಳು

09:51 AM Nov 11, 2019 | mahesh |

ಕಿರಿದಾದ ಇಳಕಲು ಮಣ್ಣು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಜಂಗು ಹಿಡಿದ ಹಳೆಯ ಕಬ್ಬಿಣದ ಗೇಟಿನೆದುರು ನಿರುಪಾಯನಾಗಿ ನಿಂತಿದ್ದೆ. ನಾನು ಗೇಟು ತೆಗೆದರೆ ನನ್ನ ಹಿಂದೆಯೇ ಒಳ ನುಗ್ಗಲು ದನವೊಂದು ಕಾದು ನಿಂತಿತ್ತು. ಆ ಗೇಟನ್ನು ತೆಗೆಯುವ ಬಗೆ ನನಗೆ ತಿಳಿಯದೆ, ಅದನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿದ ಕೀಲು ಸಂಧಿಯನ್ನು ಹುಡುಕಾಡಿ ಸೋತೆ. ಮರದ ಸರಗೋಲು ಅಥವಾ ದಣಪೆ ಆಗಿದ್ದರೆ ಗೊಂದಲಾಗುತ್ತಿರಲಿಲ್ಲ. ಗೇಟು ನನ್ನನ್ನು ಅಣಕಿಸುವಂತೆ ಅಭೇದ್ಯ ನಿಂತಿತ್ತು. ನನ್ನ ದಡ್ಡತನವನ್ನು ನೋಡಿ ನಗಲು ಆ ಮೂಕಪ್ರಾಣಿಯೊಂದನ್ನು ಬಿಟ್ಟರೆ ಭೋರ್ಗೆರೆಯುವ ಕಾಡಿನಲ್ಲಿ ಯಾರೂ ಇದ್ದಿರಲಿಲ್ಲ. ಆದರೆ, ಅದೇನಾದರೂ ಇರಿಯಲು ಬಂದರೆ ನನ್ನ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಅನುಮಾನವಿರಲಿಲ್ಲ. ಅಂಥ ದುಷ್ಟಬುದ್ಧಿಯೇನೂ ಸದ್ಯ ಅದಕ್ಕಿದ್ದಂತಿರಲಿಲ್ಲ.

Advertisement

ಕೆಳಗೆ ಧರೆ ಕಡಿದು ಮಾಡಿದ ಅಂಗಳದ ಆಯತದಲ್ಲಿ ನಿಂತ ನಿಶ್ಶಬ್ದ ಮನೆ ಉಗ್ರಾಣಿ ಶಂಕ್ರನದ್ದು ಎಂದು ನನಗೆ ಖಾತ್ರಿಯಾಗಿತ್ತು. ನಾನು ತಲುಪಬೇಕಾದ ಗಡಿಮನೆ ದಾರಿ ತಪ್ಪಿದ್ದೆ. ಒಂದೆರಡು ಸಲ ಕರೆದರೂ ಪ್ರಯೋಜನವಾಗಲಿಲ್ಲ. ಮಾಡಿಗೆ ಹಂಚು ಜೋಡಿಸಿ ಚಂಡಿಕೆ ಬಿಟ್ಟಂತೆ ಕೋಳಿಗೆ ಸೋಗೆ ಹೊದೆಸಿದ್ದರು. ಕಟಾಂಜನ, ಅಡಿಕೆ, ಅಟ್ಟ, ಸದ್ದಿಲ್ಲದೆ ಬಿದ್ದುಕೊಂಡ ಹಳ್ಳ, ಅದರಾಚೆ ಹಾಳು ಸುರಿಯುತ್ತಿರುವಂತೆ ಕಾಣುವ ಗದ್ದೆ, ಬಾಗಿಲು ತೆರೆದು ದನ ಅಟ್ಟಿದ ಅರ್ಧ ಗೋಡೆಯ ಕೊಟ್ಟಿಗೆ, ಹರಿದ ಅಂಗಿಯ ಬೆಚ್ಚು ನಿಂತ, ಸೊಟ್ಟ ಕಾಲಿನ ಬದನೆ ಗಿಡದ ಹಿತ್ತಲು ಎಲ್ಲ ಕಾಲದ ಪರಿವೆಯಿಲ್ಲದೆ ಅಲ್ಲಿದ್ದವು. ಕೊನೆಯ ಯತ್ನವೆಂಬಂತೆ ನಾನು ದಾಟಿ ಹೋಗಲು ಪರ್ವತಾರೋಹಿಯಂತೆ ಗೇಟನ್ನು ಏರತೊಡಗಿದೆ. ಎರಡು ಮೆಟ್ಟಿಲು ಏರುತ್ತಲೆ ಅನಾಮತ್ತಾಗಿ ಗೇಟು ಮುಂದಕ್ಕೆ ಚಲಿಸಿತು. ಇನ್ನೇನು ಇಳಿಯಬೇಕು ಎಂಬಷ್ಟರಲ್ಲಿ ಕಿತಾಪತಿ ಗೇಟು ಮೊದಲಿನ ಸ್ಥಾನಕ್ಕೆ ವಾಪಸಾಯಿತು. ಅದು ನಿಂತೀತೆಂದು ಅಂದುಕೊಳ್ಳುವಷ್ಟರಲ್ಲಿ ಪುನಃ ವಾಲುತ್ತ ವಯ್ನಾರದಲ್ಲಿ ಮತ್ತೆ ಹೊರಟಿತು. ದಣಿಸಿದ ಗೇಟಿನ ತುಂಟ ಬುದ್ಧಿಗೆ ನಾನು ರೇಗುತ್ತ ತುಸು ಅಧೀರನಾದೆ. ಅದು ಅತ್ತಿತ್ತ ಜೋಕಾಲಿಯಂತೆ ಜೀಕುತ್ತ ಮಾಡಿದ ಸದ್ದುಕೇಳಿ ಚಿಟ್ಟೆ ಮೇಲೆಲ್ಲೊ ಆಡುತ್ತಿದ್ದ ಮಕ್ಕಳು ಅಂಗಳಕ್ಕೆ ಬಂದು ನನ್ನ ಅಸಡ್ಡಾಳ ಸವಾರಿಯನ್ನು ಮೋಜಿನಿಂದ ಸವಿಯುತ್ತಿದ್ದರು. ನಾನು ಚಿಕ್ಕ ಮಕ್ಕಳಂತೆ ಆಡುತ್ತಿರುವುದು ಅವರಿಗೆ ತಮಾಷೆಯಾಗಿ ತಮ್ಮ ಜಗತ್ತಿನ ಒಬ್ಬ ಅಸಂಗತ ಸದಸ್ಯ ಎಂದು ಹುರುಪಾಯಿತು. ಅವರು ನಕ್ಕು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಾಯಿ ಬೊಗಳಿ, ಶಂಕ್ರನೂ ಹೊರಗೆ ಬಂದು ನನ್ನ ಸರ್ಕಸ್‌ ಜಗಜ್ಜಾಹೀರಾಗಿ ಎಲ್ಲರೂ ನೋಡಿದರೆಂದು ನನಗೆ ನಾಚಿಕೆಯಾಯಿತು. ನನ್ನ ಸೊಕ್ಕು ಇಳಿಯಿತು, ನನಗಾದ ಅವಮಾನ ಸಾಕೆಂಬಂತೆ ಗೇಟು ಅರ್ಧ ತೆರೆದು ಹೋಗೆನ್ನುವಂತೆ ವಿಧೇಯ ದ್ವಾರಪಾಲಕನಾಗಿ ಸರಿದು ನಿಂತಿತು. ಏನೆಲ್ಲ ಓದಿಕೊಂಡು ಬೀಗುತ್ತಿರುವ ನಾನು ಸಾಮಾನ್ಯ ಪರಿವೆಯನ್ನು ಕಳೆದುಕೊಂಡು ಅದೆಷ್ಟು ಜಡನಾಗಿದ್ದೆನೆಂದರೆ ಗೇಟು ತೆಗೆದಿರುವುದನ್ನೇ ನಾನು ಗಮನಿಸಿರಲಿಲ್ಲ !

ನನ್ನ ಮಾನ ಹರಾಜು ಹಾಕಿದ ಗೇಟನ್ನು ಶಪಿಸುತ್ತ ನನ್ನ ಮಾನಭಂಗಕ್ಕೆ ಕಾರಣ ಹುಡುಕುತ್ತ ಮೆಟ್ಟಿಲಿಳಿದು ಕಿರಿಗಣ್ಣು ಮಾಡಿ ನೆರೆತ ರೊಣೆಯ ಹುಬ್ಬಿನ ಮೇಲೆ ಅಂಗೈಯನ್ನು ನೆಳಲು ಹೆಡೆ ಮಾಡಿ ಹಿಡಿದ ಶಂಕ್ರನ ಎದುರು ನಿಂತೆ.

“”ಅರೆರೆ! ಈ ಬೆಳಾಗಾ ಮುಂಚೆ ಬಂದವು ಯಾರಪ್ಪಾ ಹೇಳಿ ನೋಡೆª ಹೇಳಾತು. ಕಣ್ಣು ಸಾಪು ಮಂಜಾಗೋಯೊ. ಈ ಮಕ್ಕೊ ಗೇಟ ಹತ್ತಿ ಆಟಾ ಆಡ್ತಿದ್ದೊ ಸಲ್ಪ ಕುಂಡೆ ಬಿಸಿ ಮಾಡ್ವೊ ಹೇಳಿ ಬಂದೆ. ನೋಡಿದ್ರೆ ನೀವು! ಗೇಟು ಗಟ್ಟಿ ಇದ್ದಾ ನೋಡಿದ್ರನಾ, ಆದರೆ, ಅದು ಸಲ್ಪ ಪರಾಮಶಿನೆ ಬಿಲೊ.”

ಶಂಕ್ರ ನನ್ನ ಚಿಕ್ಕಂದಿನಿಂದಲೂ ಹೀಗೆಯೇ ಎಂದೋ ಮುದುಕಾಗುವುದನ್ನು ನಿಲ್ಲಿಸಿ ಚಿರಂಜೀವಿಯಂತೆ ಇದ್ದವನು. ಅವನ ಪೊತ್ತ ಕಣ್ಣು ಹುಬ್ಬುಗಳ ಕೂದಲು ಯಕ್ಷಗಾನದ ಕೋಡಂಗಿಯು ಹತ್ತಿ ಅಂಟಿಸಿಕೊಂಡಂತೆ ಬೆಳ್ಳಗಾಗಿದ್ದವು. ಮರದ ಪೊಟರೆಗೆ ಮೂಡಿದ ಬಂದಳಕದಂತೆ ಎರಡೂ ಕಿವಿಗಳಲ್ಲಿ ಚಾಮರ ಕೂದಲುಗಳು ಚಾಚಿಕೊಂಡಿದ್ದವು. ಅಂಗಿ ತೆಗೆದರೆ ಮೈ ರೋಮವೆಲ್ಲ ಬಿಳಿಯಾದ ಗೂಡುಬೆನ್ನಿನ ಅವನು ದ್ವಾಪರ ದಾಟಿ ಬಂದ ಆಂಜನೇಯನಂತೆ ಕಾಣುತ್ತಿದ್ದ. ಸೊಂಟದಲ್ಲಿ ಕಸು ಇರುವ ತನಕ ಅವನು ಶ್ಯಾನಭೋಗರ ಕೆಳಗೆ ಉಗ್ರಾಣಿಯಾಗಿ ನೌಕರಿ ಮಾಡಿದವನು. ಖಾಕಿ ಬಟವೆಯಲ್ಲಿ ಕಂದಾಯ ಇಲಾಖೆಯ ಕಾಗದ ಪತ್ರಗಳನ್ನು ಇಟ್ಟು ಟಯರ್‌ ರಬ್ಬರಿನ ಅಟ್ಟೆ ಚಪ್ಪಲಿಯನ್ನು ಜರಾಬರಾ ಎಳೆಯುತ್ತ ಅಲೆದವನು. ಶ್ಯಾನಭೋಗರ ಜೊತೆಯಲ್ಲಿ ಬಂದಾಗ ಭಕ್ಷೀಸು ಕೊಡುತ್ತಿದ್ದ ಕಾಯಿ, ಅಡಿಕೆಗಳ ಸಂಭಾವನೆ ಹೊತ್ತು ಬೇಸರವಿಲ್ಲದೆ ಭಕ್ತಿಯಿಂದ ನಡೆದವನು.

Advertisement

“”ಅದೆಂತಕ್ಕೆ ಅಷ್ಟು ದೊಡ್ಡ ಗೇಟು ಹಾಕ್ಸಿದ್ದೆ ಮಾರಾಯ?”
ಗೇಟಿನ ಮೇಲೆ ಸೇಡು ತೀರಿಸಿಕೊಳ್ಳುವ ಮುಖಭಂಗ ಸ್ಥಿತಿಯಲ್ಲಿ ನಾನಿದ್ದೆ.

“”ಅದೆಲ್ಲ ಮಾಣಿ ಕೆಲ್ಸ. ಎನ್ನ ಮಾತೆಲ್ಲ ಕೇಳೊ¤ ಮಾಡಿದ್ರಾ ನೀವು, ಖಾಲಿ ಬರುx. ಅದು ಸಾಯ್ಲಿ, ನಿಂಗಕ್ಕೆ ದಾರಿ ತಪ್ಪು ಹೇಳಿ ಗೊತ್ತಾತು ಎನಗೆ. ದಾರಿ ತಪೆª ಎಂತದು ಎಷ್ಟು ವರ್ಷಾತು ನಿಂಗೊ ಈ ಕಡೆ ಬಾರೆª. ಬಂದದ್ದು ಚಲೊನೆ ಆತು. ಪೊಕ್ಕೆ ಹೊಡಿವಾ ಬನ್ನಿ”

“”ಗಡಿಮನೆ ಸುಬ್ರಾಯಪ್ಪ ಮನೇಲಿ ಇರಲಕ್ಕೇನೊ. ಅಲ್ಲೆ ಪೊಕ್ಕೆ ಹೊಡಿವಾ ನೀನು ಬಾ. ಮೊದ್ಲಿನಾಂಗೆ ದಾರಿ ಸವೆದ್ಕಂಡು ಇರಿ¤ಲ್ಲೆ. ಒಬ್ಬನ ಮನೀಂದ ಮತ್ತೂಬ್ಬರ ಮನೆಗೆ ಹೋಗೋ ರೂಢಿ ಬಿಟ್ಟು ಹೋಯ್ದು. ಹಳೆ ದಾರಿಯಲ್ಲಾ ಬಂದ್‌ ಮಾಡಿ ಬೇಲಿ ಹಾಕಿದ್ದೊ”.
“”ಓಹೋಹೋಹೋ ಗೊತ್ತಾತು ಬಿಡಿ, ಚಳವಳಿ ಮಾಡªವರು ಸುಬ್ರಾಯಪ್ಪನೋರು! ಅವರ ಮೇಲೆ ಪುಸ್ತಕ ಬರೆಯೋರು ನೀವು. ಎನಗೆ ಹ್ಯಾಂಗೆ ಅಂದಾಜಾತು ಹೇಳಿ ನೋಡ್ವಾ. ಆ ದಿನ ಅವರ ಮನೆಗೆ ಹೋದಾಗ ಬಾಳ ಖುಷಿಂದ ಹೇಳಿದ್ರು. ನಾಕು ಜನಕ್ಕೆ ನೀವು ಬರೆಯೊ ಪುಸ್ತಕದಿಂದ ನಿಜ ಗೊತ್ತಾವ್ರು ಅಂದ್ರು” ಶಂಕ್ರ ತಾನು ಹಾಕಿದ ಸವಾಲಿಗೆ ತಾನೆ ಜವಾಬು ನೀಡಿದ.

ಗಡಿಮನೆ ಸುಬ್ರಾಯಪ್ಪನವರ ಕುರಿತು ನಾನು ಜೀವನ ಚರಿತ್ರೆ ಬರೆಯುವ ವಿಷಯ ಶಂಕ್ರನಿಗೆ ಹೇಗೆ ತಿಳಿಯಿತು ಎಂದು ನನಗೆ ಅಚ್ಚರಿಯಾಯಿತು. ವಾರದ ಹಿಂದೆ ಪ್ರಸಿದ್ಧ “ಕನಸು’ ಪುಸ್ತಕ ಪ್ರಕಾಶನದವರು ಇಲ್ಲಿಯ ತನಕ ಗಮನಕ್ಕೆ ಬಾರದ ಕರ್ನಾಟಕದ ಆಯ್ದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೀವನ ಚರಿತ್ರೆ ಬರೆಯಿಸುವ ಮಾಲಿಕೆಯೊಂದನ್ನು ಆರಂಭಿಸಿರುವುದಾಗಿಯೂ ಸುಬ್ರಾಯಪ್ಪನವರ ಕುರಿತು ನಾನು ಬರೆಯಬೇಕಂತಲೂ ಆಗ್ರಹಿಸಿದ್ದರು. ಪ್ರಕಾಶನದ ಬಗ್ಗೆ ನನಗಿರುವ ಅಭಿಮಾನದಿಂದಾಗಿಯೂ ಸುಬ್ರಾಯಪ್ಪನವರ ಸಾತ್ವಿಕತೆಯನ್ನು ಮೆಚ್ಚಿಕೊಂಡಿದ್ದರಿಂದಲೂ ಅವರ ವಿಶ್ವಾಸದ ಮಾತನ್ನು ಅಲ್ಲಗಳೆಯಲಾರದೆ ಒಪ್ಪಿಕೊಂಡೆ. ಸುಬ್ರಾಯಪ್ಪನವರ ಸಾರ್ವಜನಿಕ ಜೀವನದ ಕುರಿತು ಬರೆಯುವುದು ಸುಲಭ ಎಂದೆನಿಸಿದರೂ ಅವರ ಕುಟುಂಬದ ಖಾಸಗಿ ವಿವರಗಳನ್ನು ನಿರ್ಲಿಪ್ತ ಸತ್ಯಶೋಧನೆಯ ಹಾದಿಯಲ್ಲಿ ದಾಖಲಿಸುವುದು ಚಿಂತೆಗೀಡು ಮಾಡಿತು. ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕಳುಹಿಸುವಾಗ ಹೆಂಡತಿ ತಕರಾರು ಎತ್ತಿದಳು:

“”ಗಡಿಮನೆ ಮತ್ತೆ ಹೊಸ್ಮನೆ ಮಧ್ಯೆ ಮೊದ್ಲಿನಿಂದಲೂ ವಿರಸ ಇದ್ದದ್ದು ನಿಮ್ಗೆ ಗೊತ್ತಿದ್ದು. ಮರ್ತುಹೋದ ವಿಷಯ ಮತ್ತೆ ಎತ್ತದಾಂಗಾಗು¤. ದಿನ ಬೆಳಗಾದ್ರೆ ದಾರೀಲಿ ಎದರಾಗೊ ಜನ. ಅವರ ಸಂಗ್ತಿಗೆ ವೈಮನಸು ಕಟ್ಕಂಡು ಎನ್‌ಕೈಲ್ಲಂತು ಆಯುಷ್ಯಪೂರ್ತಿ ಇರಲ್ಲಾಗ್ತಿಲ್ಲೆ. ಹ್ಯಾಂಗ ಬರೆದ್ರೂ ಅದು ವಿವಾದ ಅಪ್ಪುದೇ. ಅಯ್ಯೊಯ್ಯೊ ಆ ತಂಗಜ್ಜಿ ಬಾಯಿಗೆ ಸಿಕ್ಕರೆ ಕತೆ ಮುಗ್ಧಾಂಗೆ.”

ಅವಳು ಯಾವ ವಿವಾದವನ್ನೂ ಎದುರು ಹಾಕಿಕೊಳ್ಳಲು ಒಪ್ಪಲಾರಳು. ಸಾಮಾಜಿಕ ನಿಯಮಗಳನ್ನು ಉಲ್ಲಂ ಸಲೊಪ್ಪದ ಸಂಪ್ರದಾಯಸ್ಥೆ. ಅವಳ ಕಳಕಳಿ ನನಗರ್ಥವಾದರೂ ಬಂಧನಕ್ಕೊಳಗಾಗಿ ಸುರಕ್ಷಿತ ನೆಮ್ಮದಿಯಲ್ಲಿ ಸಾಗುವ ಬರವಣಿಗೆ ನನಗಿಷ್ಟವಾಗಲಾರದು.

“”ವಿವಾದಕ್ಕೆ ಎಳೆಯೋದು ಎಂಥ ಹೊಸಾತಿದ್ದು? ಒಳಗೆ ಹೊರಗೆ ಎಲ್ಲಾ ವಿಷಯ ಗೊತ್ತಿದ್ದದ್ದೇ. ಈಗೇನು ವಿವಾದ ಇಲ್ಲೆ ಎಂದೇನೂ ಹೇಳ್ವಾಂಗಿಲ್ಲೆ. ಸ್ವತಃ ಸುಬ್ರಾಯಪ್ಪನೋರೆ ಯಾವ ಮುಚ್ಚುಮರೆ ಮಾಡೆª ಬರೀ ಹೇಳಿ ಧೈರ್ಯ ಕೊಟ್ಟಿದ್ರು ಎಂದೇನಿದ್ರೂ ಸಂಗ್ರಹ. ಹೊಸ ಸೃಷ್ಟಿ ಮಾಡೋದಲ್ಲ”.
“”ನಿಮ್ಮ ಒಂಟಿ ಹಿಡ್ತ ಯಾವಾಗ ಬಿಟ್ಟುಕೊಟ್ಟಿದ್ದಿದ್ದು. ಎಂಗೊವೆಲ್ಲ ನಿಂಗಳಷ್ಟು ತಿಳ್ಕಂಡವಲ್ಲ ಮಾರಾಯಾ” ಮುನಿಸಿಕೊಂಡು ಹೋಗಿದ್ದಳು.

ಸುಬ್ರಾಯಪ್ಪನವರ ಪೂರ್ವಾನುಮತಿಯಿಲ್ಲದೆ ನಾನು ಪ್ರಕಾಶರಿಗೆ ಒಪ್ಪಿಗೆ ಕೊಟ್ಟಿದ್ದು ನನಗೆ ಮುಜುಗರ ಉಂಟುಮಾಡಿತ್ತು. ಆ ಆತಂಕದಲ್ಲಿರುವಾಗ ಅವರನ್ನು ಶಾಲೆಯಲ್ಲಿ ಆಗಸ್ಟ್‌ ಹದಿನೈದರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭೇಟಿಯಾಗುವ ಯೋಗ ಕೂಡಿ ಬಂತು. ಪ್ರತಿವರ್ಷ ಅವರು ತಪ್ಪದೆ ತಾವೇ ತಯಾರಿಸಿದ ಧೂಪದ ಅಗರಬತ್ತಿ ಕಟ್ಟಿನೊಂದಿಗೆ ಬಂದು ಗಾಂಧಿ ಫೋಟೊಕ್ಕೆ ಪೂಜೆ ಸಲ್ಲಿಸಿ ಎರಡು ಮಾತಾಡಿ, ಮಕ್ಕಳಿಗೆ ರವೆ ಲಾಡು ಕೊಟ್ಟು ಹೋಗುವುದು ವಾಡಿಕೆ. ಈ ವ್ರತವನ್ನು ನಾನು ಶಾಲೆಗೆ ಹೋಗುವಾಗಿನಿಂದಲೂ ನೋಡುತ್ತ ಬಂದಿದ್ದೇನೆ. ನಾಜೂಕಾದ ಅವರ ತೆಳ್ಳಗೆ ಬೆಳ್ಳಗಿನ ಚೊಕ್ಕ ಶರೀರ, ಗಂಧದ ಪರಿಮಳ ಸೂಸುವ ಶುಭ್ರ, ಶ್ವೇತ ವಸ್ತ್ರ , ತಲೆಯ ಮೇಲೆ ನುಣುಪಾದ ಮೃದುವಾದ ಕೊಕ್ಕರೆ ಬಿಳುಪಿನ ಟೊಪ್ಪಿ, ಬೆಳದಿಂಗಳಿನಂತಹ ಶಾಂತ ಮಾತು ನನಗೆ ಯಾವಾಗಲೂ ನೆನಪಿನಲ್ಲಿ ಊರಿರುವ ಚಿತ್ರ. ನನಗೊಬ್ಬ ಇಂಥ ಅಜ್ಜನಿರಬೇಕಿತ್ತು ಎಂದು ಅನಿಸುವ ಹಾಗೆ ಅವರ ಜೀವ. ದೋಣಿಯಾಕಾರದ ಅವರ ಗರಿಗರಿ ಟೊಪ್ಪಿ ಹಾಕಲು ನನಗೂ ಆಸೆ ಆಗುತ್ತಿತ್ತು. ಅಂದು ಅವರು ಗಾಂಧಿಯ ಆತ್ಮಚರಿತ್ರೆಯಲ್ಲಿ ವಿಶ್ವದ ಚರಿತ್ರೆಯೇ ಅಡಗಿದೆ. ಗಾಂಧಿ ಹುಡುಕಿ ಕೊಟ್ಟ ಚರಕ ಐನ್‌ಸ್ಟೈನ್‌ ಶೋಧನೆಯಷ್ಟೇ ಮಹತ್ವದ್ದು. ನೀವೆಲ್ಲ ಅವರ ಆತ್ಮಚರಿತ್ರೆಯನ್ನು ಓದೆºàಕು ಎಂದು ಮಾತಾಡಿದ್ದರು. ಈ ಆತ್ಮಚರಿತ್ರೆಯ ಪ್ರಸ್ತಾವನೆಯನ್ನು ಮುಂದಿಟ್ಟು ನಾನು “ಕನಸು’ ಪ್ರಕಾಶನದ ಯೋಜನೆಯನ್ನು ವಿವರಿಸಿದೆ. ಐದು ನಿಮಿಷದ ಮೌನದ ನಂತರ “”ನಿನ್ನ ಬರವಣಿಗೆಯಿಂದಾದ್ರೂ ಪೂರ್ಣ ಸತ್ಯ ಗೊತ್ತಾಗ್ಲಿ” ಎಂದು ಧ್ಯಾನಿಸುವಂತೆ ಕ್ಷಣಕಾಲ ಕಣ್ಮುಚ್ಚಿದರು.

“”ಮಾತಾಡಲ್ಲೆ ನಿಮ್ಮನೆಗೆ ಯಾವಾಗ ಬರ್ಲಿ?”
“”ಆನು ಮನೆ ಬಿಟ್ಟು ಹೊರಗೆಲ್ಲೂ ಹೊಗ್ತಿಲ್ಲೆ, ಯಾವಾಗಬೇಕಾದ್ರೂ ಬಾ” ಆಹ್ವಾನವಿತ್ತಿದ್ದರು.
ಸುಬ್ರಾಯಪ್ಪನವರ ಮನೆಗೆ ದಾರಿ ಕಾಣಿಸಲು ಶಂಕ್ರನೆ ನನ್ನ ಜೊತೆ ನಡೆದ. ಕೇವಲ ದಾರಿ ದರ್ಶಕನಾಗಿ ಅವನು ನನ್ನೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂಬ ನನ್ನ ಸಂದೇಹ ನಿಜವಾಯಿತು. ಮೊಣಕಾಲು ನೋವಿದ್ದರೂ ಮೊಮ್ಮಗನಿಗೆ ಹೇಳಬಹುದಾಗಿದ್ದರೂ ಜೀರ್ಣಕಾಯವನ್ನು ಎಳೆಯುತ್ತ ಬರಲು ಅವನದೇ ಆಸಕ್ತಿಯಿತ್ತು.

“”ಪುಸ್ತಕದಲ್ಲಿ ಎಲ್ಲಾ ಬರೀತ್ರಾ?” ಸಂಕ ದಾಟುತ್ತ ಕುತೂಹಲದಿಂದ ವಿಚಾರಿಸಿದ. ಅವನು ಬಳಸಿದ “ಎಲ್ಲಾ’ ಎಂಬ ಶಬ್ದದ ಒಳಾರ್ಥವನ್ನು ಬಗೆಯಲು ನಾನು,
“”ಎಲ್ಲಾ ಅಂದ್ರೆ?” ಕೆಣಕಿದೆ.
“”ಎಲ್ಲಾ ಅಂದ್ರೆ ನಿಂಗಕ್ಕೆ ತಿಳಿಯದ್ದೇನಲ್ಲ ! ಅವರ ಮನೆಯೊಳಗಿನ ಕತೆ!”
“”ಎಲ್ಲಾ ಬರೆಯೋದೆ. ಒಳಗೆ ಹೊರಗೆ ಫ‌ರಕ್ಕು ಇಲ್ಲೆ”
ಅರ್ಧ ಘಟ್ಟದಲ್ಲಿ ನಿಂತ. ಅಲ್ಲೆ ತುದಿಗಾಲಲ್ಲಿ ಕುಳಿತ. ಉಸಿರು ಜೋರಾಗಿತ್ತು.

“”ಸೊಂಟದ ಕೆಳಗಿನ ವಿಚಾರ ಬರಯಡಿ ಮಾರಾಯೆ. ನಾನೇ ಹೇಳಿದ್ದು ಹೇಳಿ ಎಲ್ರಿಗೂ ತಿಳಿದು ಹೋಗು¤. ಹೊಸ್ಮನೆ ಪುಟ್ಟಣ್ಣೋರ ಕೇಸು ನಿಖಾಲಿ ಆಯ್ದು. ಹಳೆ ಹಕೀಕತ್ತು ಬಿಚ್ಚಿದ್ರೆ ನನ್ನ ಕೈಗೆ ಕ್ವಾಳ ಬೀಳು¤ ಹೇಳಿ ತಿಳ್ಕಳಿ. ಆ ರಗಳೆ ಕೆದ್ಕಡಿ. ಯಾರಿಂಗೂ ಸುಕ ಇಲ್ಲೆ ಅದ್ರಿಂದ”. “”ಸಾಕ್ಷಿದಾರ ನಿನ್ನ ಬಿಡೋದು ಹ್ಯಾಂಗೆ? ಸೊಂಟದ ಕೆಳಗಿನ ವಿಚಾರ ಕಣ್ಣಾರೆ ಕಂಡಿದ್ದೆ ಹೇಳಿ ಖಬೂಲಾದೆ. ಪುಸ್ತಕದಲ್ಲಿ ನಿನಗೊಂದು ಶಾಶ್ವತ ಜಾಗ ಆದಾಂಗಾತು. ನಡೆದ ಸಂಗ್ತಿ ನೀನು ಹೇಳ್ಲಿಕ್ಕೆ ಬೇಕು”

ನನ್ನ ಪುಸ್ತಕದಲ್ಲಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿರುವುದು ಅವನಿಗೆ ಚಂಡಿಯಾಗಿ ಕಾಡಿದ ತಂಗಜ್ಜಿಗಿಂತಲೂ ಹೊಸ್ಮನೆ ಪುಟ್ಟಣ್ಣನ ಸಾವಿನ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಕಲ್ಪಿಸಿಕೊಂಡು ಹೆದರಿದ್ದ.
“”ನನಗೆ ಗೊತ್ತಿದ್ದ ವಿಷಯ ಪ್ರಾಮಾಣಿಕವಾಗಿ ಹೇಳೆ¤; ಆದರೆ ನನ್ನ ಹೆಸರ ಹಾಕಡಿ”
“”ಅದೆಂಥ ತಳ್ಳಿ ಅರ್ಜಿ ಎಂದು ಮಾಡಿದ್ಯನಾ. ಕತೆಯಾಗಿದ್ರೆ ಹೆಸರು ಬದಲಾಯಿಸಲಾಗಿತ್ತು. ಕಂಡದ್ದನ್ನ ಕಂಡಾಂಗೆ ಬರೆಯವು. ನಮ್ಮ ಜಮೀನ ಖಾತೆ ಹೆಸರು ನೋಂದಾಯಿಸಾªಂಗೆ. ಅದ್ರ ಬದಲಿಸಲು ಬತ್ತಾ ಹೇಳು. ಹಾಂಗೇಯಾ ಇದು. ಅಂದ್ರಮಾತ್ರ ಅದು ಜೀವನದ ಸತ್ಯ”.

“”ಎನಗೆಂಥ ಹೆದ್ರೆಕೆರಾ ಈಗ್ಲೊ ಇನ್ನೊಂದು ಗಳಿಗೆಗೊ ಸಾಯಲು ತಯಾರಾಗಿ ಕೂತವಾ ಆನು. ಜೀವದ ಆಸೆ ಇಲ್ಲೆ, ಸಾಯೋದಕ್ಕೆ ಅಜಿಬಾತ ಹೆದ್ರದಂವಲ್ಲ. ಉಗ್ರಾಣಿ ನೌಕರಿಯಲ್ಲಿ ಸುಳ್ಳು ಹೇಳªಂವಲ್ಲ, ಒಂದು ದಮಡಿ ಲಂಚ ತಿಂದಂವಲ್ಲ. ನಿಂಗೊ ಬರೊRಳ್ಳದೊಂದು ನೋಡಿ ಯಾರಿಂಗೂ ಗೊತ್ತಿಲ್ದ ಗುಟ್ಟು ಹೇಳೆ¤. ಖರೇಗೂ ಪಕ್ಕಾ ಗೊತ್ತಿದ್ದದ್ದು ಎನಗೆ ಮಾತ್ರ ಬಿಲೊ”

ಆತ್ಮ ಪ್ರಶಂಸೆ ಎಂಬಂತೆ ಭಾಸವಾದರೂ ಅವನು ನುಡಿದದ್ದರಲ್ಲಿ ನಿಜವಿತ್ತು. ಗಡಿಮನೆ ಮತ್ತು ಹೊಸ್ಮನೆ ಎರಡೂ ಕಡೆಯ ಅಂತರಂಗವನ್ನು ಮೌನವಾಗಿ ಒಳಗೆ ಇಟ್ಟುಕೊಂಡವನು ಅವನು. ವದಂತಿಯಾಗಿ ಹಬ್ಬಿದ ಹಲವು ಮಹತ್ವದ ಸಂಗತಿಗಳು ಅವನ ಸಮಕ್ಷಮ ಜರುಗಿದಂತವು. ಹೊಟ್ಟೆಯಲ್ಲಿ ಇಷ್ಟು ಕಾಲ ಇಟ್ಟುಕೊಂಡ ನಿಜವನ್ನು ಕೊನೆಗಾಲದಲ್ಲಿ ಹೇಳಿ ಮುಕ್ತನಾಗುವ ಹಂಬಲವೂ ಅವನಿಗಿದ್ದಂತಿತ್ತು. ಹಠಾತ್ತಾನೆ ಬದಲಾದ ಅವನ ಆವೇಶದ ಮನಸ್ಸಿನಲ್ಲಿ ನಾನು ಅಂದುಕೊಂಡ ಯೋಚನೆಯಂತೆ ಇತ್ತು. ನನ್ನ ಬರವಣಿಗೆಗೆ ಅವನಷ್ಟು ಉಪಯುಕ್ತ ಮನುಷ್ಯ ಇನ್ನೊಬ್ಬನಿರಲಾರ. ಅವನೇನಾದರೂ ಅಸಹಕಾರ ತೋರಿದ್ದರೆ ನನ್ನ ಬರವಣಿಗೆಯ ಸತ್ಯದ ಇನ್ನೊಂದು ಮಗ್ಗಲು ಜಗತ್ತಿಗೆ ಗೋಚರಿಸಲು ಸಾಧ್ಯವಿಲ್ಲವೆಂದು ಖಾತ್ರಿಯಿತ್ತು.

ಗಡಿಮನೆ ಹೆಸರಿಗೆ ತಕ್ಕಂತೆ ಊರಿನ ಗಡಿಯಲ್ಲಿದೆ. ಎರಡು ಮೈಲು ಕಾಡು ದಾಟಿದರೆ ಇನ್ನೊಂದು ಊರು. ಹಳೆಯ ಕಾಡು ಮನೆ, ಗದ್ದೆ, ತೋಟಕ್ಕೆ ಘನ ವಿರಕ್ತ ಮೌನವನ್ನೊ ಕಾಲದ ಕೋಟೆಯನ್ನೊ ಕಟ್ಟಿದಂತಿದೆ. ಮನೆಯ ಮೇಲುಸ್ತರದಲ್ಲಿರುವ ಪಾಳು ಜಾಗದಲ್ಲಿ ಹಿಂದೊಂದು ಕಾಲದಲ್ಲಿ ಗದ್ದೆ ಉಳುಮೆ ಮಾಡಿ ಉತ್ತಿ, ಬಿತ್ತಿ ಬೆಳೆದ ಕುರುಹುಗಳಿವೆ. “”ಆನು ಸಣ್ಣಿದ್ದಾಗ ಇಲ್ಲಿ ಗೆದ್ದೆ ಮಾಡಿದ್ದು ನೆನಪಿದ್ದು ಎನಗೆ. ಕಬ್ಬು ನೆಟ್ಟದ್ದು ಗೊತ್ತಿದ್ದು; ಹತ್ತು ಕೊಪ್ಪರಿಗೆ ಬೆಲ್ಲ ಎತ್ತಿದ್ದು ಗೊತ್ತಿದ್ದು ಎನಗೆ; ಆಚಾರಿ ತಗ್ಗಿನ ಹಳ್ಳಕ್ಕೆ ಕಟ್ಟಾಕಿ ನೀರು ತರಕಾಗಿತ್ತು. ಮಳೆ ಕಮ್ಮಿ ಆದ್ಮೇಲೆ ಗದ್ದೆ ಹಾಳು ಬಿತ್ತು” ಶಂಕ್ರ ಹಳೆ ಕಾಲದ ಕತೆ ಶುರು ಮಾಡಿದ. ಗಡಿಮನೆ ಗುಡ್ಡದ ನೆತ್ತಿಯಿಂದ ಕೇರಿ ಸರಿಯಾಗಿ ಕಾಣುತ್ತಿತ್ತು. ಗದ್ದೆಯ ಮೂಲೆಯಲ್ಲಿರುವ ಕೆರೆಯ ಸನಿಹದ ದೇವಸ್ಥಾನ, ರಾತ್ರಿವಸತಿ ಬಸ್ಸಿಗೆ ಹೋಗುವ ದಾರಿಯ ಅಂಚಿನಲ್ಲಿರುವ ಕಟ್ಟೆ ಕಟ್ಟಿದ ಅಶ್ವತ್ಥ ಮರ, ತುಸು ಎತ್ತರದ ದಿಬ್ಬದ ಮೇಲೆ ಬಿಳಿ ಗೋಡೆ ಮಾತ್ರ ಕಾಣುವ ಶಾಲೆ, ಕೊಯ್ಲಿಗೆ ಬಂದ ಭತ್ತದ ಗದ್ದೆಯ ಮಧ್ಯದ ಹಾಸಿಗೆ ಸುರುಳಿ ಸುತ್ತಿಟ್ಟ ಮಾಳ, ಗರಿ ಬಿಟ್ಟ ಕಬ್ಬಿನ ಗದ್ದೆಯ ಸಾಲು, ತೋಟದ ಸಾಲಿನಲ್ಲಿ ಗದ್ದೆಯಿಂದ ಹಾಕಿದ ದಾಟು ಸಂಕದಾಚೆಯ ಕೇರಿ ಮನೆಗಳ ಹಂಚಿನ ಮಾಡು ಚೌಕಟ್ಟಿಲ್ಲದ ಚಿತ್ರದಂತೆ ಕಂಡಿತು.

“”ಭತ್ತದ ಕುತ್ರಿ ಹಾಕಿದ್ದು ಕಾಣ್ತು ನೋಡಿ ಅದು ಗಣ³ಣ್ಣಂದು. ಕಳದ ಹಿಂದೆಯೇ ಮನೆ. ಅಪ್ಪ-ಮಗ ಬೇರೇನೆ ಇದ್ದೊ. ಹಾಂಗೇಳಿ ವೈವಾಟು, ಮಾತು ಬಿಟ್ಕಂಡಿವಿಲ್ಲೆ. ಗನಾ ಮಾಡ್ಕಂಡೆ ಇದ್ದೊ. ಅತ್ತೆ ಸೊಸೆ ಮಧ್ಯೆ ಏನಾರು ಕಸ್ಲೆ ಬಂತನಾ. ಅವರದ್ದು ಎಂತಾ ನಮ್ನಿ ಹೇಳಿ ತಿಳಿತ್ಲೆ.”

ಬೆಟ್ಟದ ಕಡೆಯಿಂದ ಹರಿದು ಬಂದ ಝರಿ ನೀರು ಸುಬ್ರಾಯಪ್ಪನವರ ಬಚ್ಚಲಿಗೆ ಬೆಲಗಿನ ಗುಂಟ ಹರಿದು ಬಿದರಿನ ಹರಣಿಯ ಮೂಲಕ ಹಂಡೆಯ ಎದುರು ಒಲೆಗೆ ಸೋಕುವಂತೆ ಧುಮುಕುತ್ತದೆ. ಆ ಮನೆಗೆ ಬರುವ ಹೊಸಬರಿಗೆ ಅಬ್ಬಿ ನೀರಿನ ಸದ್ದು ಕೇಳಿ ಮಳೆಯ ಭ್ರಮೆ ಉಂಟಾಗುತ್ತದೆ. ಚಪ್ಪಟೆ ಕಲ್ಲಿಗೆ ಅಪ್ಪಳಿಸಿ ಉಂಟಾಗುವ ಸಪ್ಪಳಕ್ಕೆ ನಿದ್ದೆ ಬಾರದೆ ನೀರನ್ನು ಪಕ್ಕ ಸರಿಸಿದ್ದ ಪ್ರಸಂಗ ನಡೆದಿದೆ. ನನಗಂತು ಯಥೇತ್ಛ ನೀರು, ಸಮೃದ್ಧ ಕಾಡು ನಿಶ್ಶಬ್ದವನ್ನು ತುಂಬಿ ತುಳುಕುವಂತೆ ಕಂಡಿತು.

ಶ್ರೀಧರ ಬಳಗಾರ

Advertisement

Udayavani is now on Telegram. Click here to join our channel and stay updated with the latest news.

Next