ನವದೆಹಲಿ: 2022ರ “ಅತ್ಯುತ್ತಮ ಭಕ್ಷ್ಯ’ಗಳ ಜಾಗತಿಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನ ಪಡೆದುಕೊಂಡಿದೆ. ಬಲ್ಗೇರಿಯಾದ ಟೇಸ್ಟ್ ಅಟ್ಲಾಸ್ ಸಂಸ್ಥೆ ನಡೆಸಿದ ಸಮೀಕ್ಷೆಯ ಅನ್ವಯ ಈ ರ್‍ಯಾಂಕಿಂಗ್ ಬಿಡುಗಡೆ ಮಾಡಲಾಗಿದೆ.
ಮತ್ತೊಂದು ವಿಶೇಷವೆಂದರೆ, ಬೆಂಗಳೂರಿನ ಕರಾವಳಿ, ಮುಂಬೈನ ಶ್ರೀ ಥೇಕರ್ ಭೋಜನಾಲಯ, ನವದೆಹಲಿಯ ಬುಖಾರಾ ಮತ್ತು ದಮ್ ಪಖ್ತ್, ಗುರುಗ್ರಾಮದ ಕಮೋರಿನ್ ಮತ್ತು ಇತರೆ 450 ರೆಸ್ಟಾರೆಂಟ್‌ಗಳನ್ನು ಭಾರತದಲ್ಲಿ ರುಚಿ ರುಚಿಯಾದ ಭೋಜನ ಲಭ್ಯವಿರುವಂಥ ಅತ್ಯುತ್ತಮ ರೆಸ್ಟಾರೆಂಟ್‌ಗಳು ಎಂದು ಹೆಸರಿಸಲಾಗಿದೆ.
“ಅತ್ಯುತ್ತಮ ಭಕ್ಷ್ಯ’ಗಳ ಪಟ್ಟಿಯಲ್ಲಿ ಇಟಲಿಯ ಭಕ್ಷ್ಯಗಳು ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, ಗ್ರೀಸ್ ಮತ್ತು ಸ್ಪೇನ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. ಆದರೆ, ಜಗತ್ತಿನಾದ್ಯಂತ ಜನಪ್ರಿಯವಾಗಿದ್ದರೂ ಚೈನೀಸ್ ಖಾದ್ಯಗಳು ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿವೆ.
ಆಹಾರ ಸಾಮಗ್ರಿಗಳು, ಖಾದ್ಯಗಳು ಮತ್ತು ಪಾನೀಯಗಳು ಹೀಗೆ 3 ವಿಭಾಗಗಳಲ್ಲಿ “ಅತ್ಯುತ್ತಮ’ವಾದುದನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಇದರಲ್ಲಿ ಭಾರತಕ್ಕೆ 4.54 ಅಂಕಗಳು ದೊರೆತಿದ್ದು, “ಗರಂ ಮಸಾಲ, ಮಲಾಯ್, ತುಪ್ಪ, ಬಟರ್ ಗಾರ್ಲಿಕ್ ನಾನ್, ಕೀಮಾ’ಗಳು ಅತಿ ಹೆಚ್ಚು ಅಂಕಗಳನ್ನು ಪಡೆದಿವೆ. ಭಾರತದ ಒಟ್ಟು 460 ಆಹಾರ ವಸ್ತುಗಳು ಪಟ್ಟಿಯಲ್ಲಿದ್ದವು.