ಮುಂಬಯಿ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ನಿನ್ನೆ ಮಂಗಳವಾರ ರಾತ್ರಿ ದಕ್ಷಿಣ ಮುಂಬಯಿಯ ನಾಗಪಾಡದಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಅವರ ಮೇಲೆ ಯಾರೋ ಅಪರಿಚಿತ ವ್ಯಕ್ತಿ ಬೂಟು ಎಸೆದ ಘಟನೆ ನಡೆದಿದೆ.
“ಬೂಟು ಎಸೆಯುವವರು ಗಾಂಧಿ ಹಂತಕರ ಹಿಂಬಾಲಕರು” ಎಂದು ಓವೈಸಿ ತತ್‌ಕ್ಷಣ ಪ್ರತಿಕ್ರಿಯಿಸಿದರು.
ಈ ಘಟನೆ ನಿನ್ನೆ ಮಂಗಳವಾರ ರಾತ್ರಿ ಸುಮಾರು 9.45ರ ಹೊತ್ತಿಗೆ ನಡೆಯಿತು; ಆದರೆ ಬೂಟು ಎಸೆತದಿಂದ ಓವೈಸಿಗೆ ಗಾಯಗಳಾಗಲಿಲ್ಲ.
ಘಟನೆಯಂದ ಒಂದಿನಿತೂ ವಿಚಲಿತರಾಗದ ಓವೈಸಿ, “ನನ್ನ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು ನನ್ನ ಜೀವವನ್ನೇ ಅರ್ಪಿಸಲು ನಾನು ಸಿದ್ಧನಿದ್ದೇನೆ. ಇಂತಹ ಕೃತ್ಯ ಎಸಗುವವರೆಲ್ಲ ಹತಾಶ ವ್ಯಕ್ತಿಗಳು. ಇವರಿಗೆ ಸರಕಾರ ತ್ರಿವಳಿ ತಲಾಕ್ ಬಗ್ಗೆ ಕೈಗೊಂಡ ನಿರ್ಧಾರವು ಜನರು, ವಿಶೇಷವಾಗಿ ಮುಸ್ಲಿಮರಿಗೆ ಸ್ವೀಕೃತವಾಗಿಲ್ಲ ಎಂಬುದನ್ನು ನೋಡಲಾಗುತ್ತಿಲ್ಲ’ ಎಂದು ಖಂಡಿಸಿದರು. ಇಂತಹ ಘಟನೆಗಳು ನಮ್ಮನ್ನು ನಿಜ ನುಡಿಯುವುದರಿಂದ ತಡೆಯಲಾರವು ಎಂದು ಓವೈಸಿ ಗುಡುಗಿದರು.
ಪೊಲೀಸರೀಗ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸುತ್ತಿದ್ದು ಬೂಟು ಎಸೆದ ವ್ಯಕ್ತಿ ಯಾರೆಂಬುದನ್ನು ಹುಡುಕಾಡುತ್ತಿದ್ದಾರೆ.