ಮಂಡ್ಯ: ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಮದ್ದೂರು ತಾಲೂಕು ಆರೋಗ್ಯ ಇಲಾಖೆ ಪಟ್ಟಣದ ಆಯ್ದ ಸ್ಥಳಗಳಲ್ಲಿ ಶನಿವಾರ ಕೊರೊನಾ ಜನಜಾಗೃತಿ ಅಭಿಯಾನ ನಡೆಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಆಶಾಲತಾ ನೇತೃತ್ವದಲ್ಲಿ ಇಲಾಖೆ ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಕರ್ತರ ತಂಡ ಪಟ್ಟಣದ ಶಿವಪುರ ರೈಲು ನಿಲ್ದಾಣ, ನ್ಯಾಯಾಲಯ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಹೊಳೇ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ರೈಲು ನಿಲ್ದಾಣದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕರನ್ನು ಬಾಲಸ್ವಾಸ್ತ್ಯ ಕಾರ್ಯಕರ್ತರ ತಂಡ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸುವ ಮೂಲಕ ಕೊರೋನಾ ಸೋಂಕಿನ ಭೀತಿ ಇಲ್ಲ ಎಂದು ಹೇಳಿ ಪ್ರಯಾಣಿಕರಲ್ಲಿ ನೈತಿಕವಾಗಿ ಧೈರ್ಯ ತುಂಬಿದರು.
ನಂತರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲರು ಮತ್ತು ಕಕ್ಷಿದಾರರಿಗೆ ಯಂತ್ರದ ಮೂಲಕ ತಪಾಸಣೆ ನಡೆಸಿ ಕೋವಿಡ್ ಸೋಂಕಿಲ್ಲ ಎಂದು ಖಚಿತಪಡಿಸಿಕೊಂಡರು. ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಭಕ್ತಾದಿಗಳ ತಪಾಸಣೆ ನಡೆಸಿದ ಇದೇ ತಂಡ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಬಸ್ ಗಳಿಗಾಗಿ ಕಾದು ಕುಳಿತಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸಿದರು. ಕೋವಿಡ್ 19 ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ತಂಡ, ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ಬಳಕೆ ಕುರಿತು ತಿಳಿವಳಿಕೆ ಮೂಡಿಸಿದರು. ನಂತರ ಸ್ಥಳದಲ್ಲೇ ಕರಪತ್ರ ವಿತರಣೆ ಮಾಡಿದರು.
ರಾಷ್ಟ್ರೀಯ ಬಾಲಸ್ವಾಸ್ತ್ಯ ಕಾರ್ಯಪಡೆ ತಂಡದ ಡಾ.ರಶ್ಮಿ, ಡಾ.ಪದ್ಮಜಾ, ಕಿರಿಯ ಮಹಿಳಾ ಸಹಾಯಕಿ ಎಚ್.ಎಂ.ಮಣಿ, ಸಹಾಯಕಿ ಆಶಾ, ಅಂಗನ ವಾಡಿ ಕಾರ್ಯಕರ್ತೆಯರು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.