Advertisement

ಇನ್ನೂ ನೋಡೋಕೆ ತುಂಬಾ ಇದೆ…

06:10 AM Dec 22, 2017 | Team Udayavani |

ಈ ವರ್ಷ ಬಿಡುಗಡೆಯಾದ 190ಕ್ಕೂ ಹೆಚ್ಚು ಸಿನಿಮಾಗಳ ಪೈಕಿ ನೀವೆಷ್ಟು ನೋಡಿದ್ದೀರಾ? ಹೇಗೆ ಎಣಿಸಿದರೂ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಲೆಕ್ಕಕ್ಕೆ ಸಿಗಬಹುದಷ್ಟೇ.ಮುಂದಿನ ವರ್ಷ ಸಹ ಅಷ್ಟೊಂದು ಚಿತ್ರಗಳು ಬಿಡುಗಡೆಯಾಗುತ್ತವಾ? ಗೊತ್ತಿಲ್ಲ. ಅದರಲ್ಲಿ ಎಷ್ಟು ಚಿತ್ರಗಳನ್ನು ನೋಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆಗೆ, ಉತ್ತರ ಸಿಗುವುದಿಲ್ಲ. ಆದರೆ, ಮುಂದಿನ ವರ್ಷ ನೀವೊಂದಿಷ್ಟು ಸಿನಿಮಾಗಳನ್ನು ನೋಡಲೇಬೇಕು. ಹಾಗೆ ನೋಡಬಹುದಾದ ಚಿತ್ರಗಳ ಪಟ್ಟಿಯೇ ದೊಡ್ಡದಿದೆ. ಇನ್ನೂ ಏನೆಲ್ಲಾ ನೋಡ್ಬೇಕಪ್ಪಾ ಎಂಬ ಯೋಚನೆ ನಿಮ್ಮ ತಲೆಯಲ್ಲಿದ್ದರೆ, ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವ ಕೆಲವು ಪ್ರಮುಖ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ …

Advertisement

ಇನ್ನೇನು ಒಂದು ವಾರ, ಹೊಸ ವರ್ಷ ಬಂದೇ ಬಿಡುತ್ತದೆ. ಚಿತ್ರರಂಗ ಕೂಡಾ ಹೊಸ ವರ್ಷದಲ್ಲಿ ಹೊಸ ಭರವಸೆಯನ್ನು ಹೊಂದಿದೆ. ಸಾಕಷ್ಟು ವಿಭಿನ್ನ ಹಾಗೂ ನಿರೀಕ್ಷಿತ ಸಿನಿಮಾಗಳು ಹೊಸ ವರ್ಷಕ್ಕೆ ಬಿಡುಗಡೆಯಾಗಲಿವೆ. ಕಳೆದ ವರ್ಷದಂತೆ ಈ ವರ್ಷವೂ ಎಲ್ಲಾ ಬಗೆಯ, ಬೇರೆ ಬೇರೆ ಜಾನರ್‌ನ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸುಲಭದಲ್ಲಿ ಹೇಳಬೇಕಾದರೆ ಕೊರಿಯನ್‌ ದೆವ್ವಗಳು, ಇರಾನಿಯನ್‌ ಮಕ್ಕಳು, ತಮಿಳಿನ ಮೈಂಡ್‌ ಗೇಮ್‌, ತೆಲುಗಿನ ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌… ಇವೆಲ್ಲ ಈ ವರ್ಷ ಬೇರೆ ಬೇರೆ ಸಿನಿಮಾಗಳ ಮೂಲಕ ಬಂದು ಹೋಗಿವೆ. ಹೊಸ ವರ್ಷವೂ ಅವು ಮುಂದುವರೆಯಲಿವೆ. ಹಾಗಂತ ಆ ಭಾಷೆಯ ಸಿನಿಮಾಗಳನ್ನು ರೀಮೇಕ್‌ ಮಾಡುತ್ತಾರೆ ಎಂದಲ್ಲ. ಗೊತ್ತೋ, ಗೊತ್ತಿಲ್ಲದಂತೆಯೋ ಆ ತರಹದ ಸಿನಿಮಾಗಳಿಂದ ಪ್ರೇರಣೆಯಂತೂ ಇದ್ದೇ ಇರುತ್ತದೆ. ಅದೆಷ್ಟೋ ಬಾರಿ ಸಿನಿಮಾ ನೋಡಿದ ಪ್ರೇಕ್ಷಕ ಬೇರೆ ಭಾಷೆಗಳ ಜೊತೆ ಈ ಸಿನಿಮಾಗಳನ್ನು ಕನೆಕ್ಟ್ ಮಾಡಿಕೊಳ್ಳುತ್ತಾನೆ ಕೂಡಾ. ಹೊಸ ವರ್ಷದಲ್ಲೂ ಹಾರರ್‌, ಮಕ್ಕಳ ಚಿತ್ರ, ಮೈಂಡ್‌ ಗೇಮ್‌, ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌, ಫ್ಯಾಮಿಲಿ ಡ್ರಾಮಾ … ಹೀಗೆ ವಿವಿಧ ಜಾನರ್‌ನ ಸಿನಿಮಾಗಳು ಅಬ್ಬರಿಸಲಿವೆ ಎಂದರೆ ತಪ್ಪಲ್ಲ.  ಹಾಗೆ ನೋಡಿದರೆ 2018  ಹೆಚ್ಚು ರಂಗೇರಲಿದೆ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ, ಸ್ಟಾರ್‌ ಸಿನಿಮಾಗಳು. ಸ್ಟಾರ್‌ ಸಿನಿಮಾಗಳು ಪ್ರತಿ ವರ್ಷವೂ ಬಿಡುಗಡೆಯಾಗುತ್ತವೆ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. 2018ರ ವಿಶೇಷ ಅಡಗಿರೋದೇ ಅಲ್ಲಿ. ನೀವೇ ಸುಮ್ಮನೆ ಲೆಕ್ಕ ಹಾಕಿ, ಬಹುನಿರೀಕ್ಷೆಯ ಸಿನಿಮಾಗಳು ಎಷ್ಟು ತಯಾರಾಗುತ್ತಿವೆ ಎಂದು. “ದಿ ವಿಲನ್‌’, “ಕೆಜಿಎಫ್’, “ಕುರುಕ್ಷೇತ್ರ’, “ಟಗರು’ … ಹೀಗೆ ಸಾಕಷ್ಟು ಸಿನಿಮಾಗಳು 2018ರಲ್ಲಿ ಚಿತ್ರರಂಗದಲ್ಲಿ ಧೂಳೆಬ್ಬಿಸಲಿವೆ. 

 2018ಕ್ಕೆ ಬರುವವರು
ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದಷ್ಟು ನಟರ ಚಿತ್ರಗಳು ಈ ವರ್ಷ ಅಂದರೆ 2017ಕ್ಕೆ ಬಿಡುಗಡೆಯಾಗಲೇ ಇಲ್ಲ. ಸಹಜವಾಗಿಯೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷ ಅಭಿಮಾನಿಗಳಿಗೆ ಮುಖದರ್ಶನ ನೀಡದ ಪ್ರಮುಖ ನಟರೆಂದರೆ ಯಶ್‌, ರಕ್ಷಿತ್‌ ಶೆಟ್ಟಿ, ರವಿಚಂದ್ರನ್‌, ಕೋಮಲ್‌, ಅಂಬರೀಶ್‌  … ಈ ನಟರ ಯಾವುದೇ ಚಿತ್ರಗಳು ಈ ವರ್ಷ ತೆರೆಕಂಡಿಲ್ಲ. ಸಾಮಾನ್ಯವಾಗಿ ಯಶ್‌ ಸಿನಿಮಾ ನವೆಂಬರ್‌ ಅಥವಾ ಡಿಸೆಂಬರ್‌ಗೆ ಬಿಡುಗಡೆಯಾಗುತ್ತದೆ. ಆದರೆ, ಈ ವರ್ಷ ಆಗಿಲ್ಲ. ಇನ್ನು, ರಕ್ಷಿತ್‌ ಶೆಟ್ಟಿ ನಟಿಸಿದ ಯಾವ ಚಿತ್ರವೂ ಈ ವರ್ಷ ಬಿಡುಗಡೆಯಾಗಿಲ್ಲ. ಕಳೆದ ವರ್ಷ ಕೊನೆಯಲ್ಲಿ ಬಿಡುಗಡೆಯಾದ “ಕಿರಿಕ್‌ ಪಾರ್ಟಿ’ಯೇ ಅವರ ಕೊನೆಯ ಚಿತ್ರ. ಈ ವರ್ಷ ಸ್ಕ್ರಿಪ್ಟ್ನಲ್ಲೇ ತೊಡಗಿಸಿಕೊಂಡ ರಕ್ಷಿತ್‌ ಅವರ “ಶ್ರೀಮನ್ನಾರಾಯಣ’ ಚಿತ್ರ ಹೊಸ ವರ್ಷದ ಕೊನೆಗೆ ಬಿಡುಗಡೆಯಾಗಲಿದೆ. ಇನ್ನು ಕೋಮಲ್‌ ನಟಿಸಿದ ಯಾವ ಸಿನಿಮಾ ಬಂದಿಲ್ಲ. ಮುಂದಿನ ವರ್ಷ ಅವರ “ಕೆಂಪೇಗೌಡ-2′ ಬರಲಿದೆ. ಇನ್ನು ಈ ವರ್ಷ ರವಿಚಂದ್ರನ್‌ ಅವರ ಮೂರು ಸಿನಿಮಾಗಳು ಸೆಟ್ಟೇರಿದ್ದು ಬಿಟ್ಟರೆ ಅವರ ನಟನೆಯ ಯಾವ ಚಿತ್ರವೂ ಸೆಟ್ಟೇರಲೇ ಇಲ್ಲ. ಹೊಸ ವರ್ಷಕ್ಕೆ ಅವರ ನಟನೆಯ ಎರಡೂ¾ರು ಚಿತ್ರಗಳು ಬಿಡುಗಡೆಯಾಗಲಿವೆ. ಅಂಬರೀಶ್‌ ಅವರು ಗೆಸ್ಟ್‌ ಅಪಿಯರೆನ್ಸ್‌ ಮಾಡಿದ ಚಿತ್ರವಾದರೂ ಬಿಡುಗಡೆಯಾಗುತ್ತಿತ್ತು. ಆದರೆ ಈ ವರ್ಷ ಯಾವ ಸಿನಿಮಾವೂ ಬರಲಿಲ್ಲ. ಹೊಸ ವರ್ಷಕ್ಕೆ ಅಂಬರೀಶ್‌ ಪ್ರಮುಖ ಪಾತ್ರ ಮಾಡುತ್ತಿರುವ “ಅಂಬಿ ನಿಂಗೆ ವಯಸ್ಸಾಯೊ¤à’ ಬಿಡುಗಡೆಯಾಗಲಿದೆ.

ಹೊಸ ನಿರೀಕ್ಷೆ
ಕೇವಲ ಸ್ಟಾರ್‌ಗಳಷ್ಟೇ ಅಲ್ಲದೇ, ಒಂದಷ್ಟು ಸಿನಿಮಾಗಳು ತಮ್ಮ ಕಥಾವಸ್ತುವಿನಿಂದ ಹಾಗೂ ಆ ನಿರ್ದೇಶಕರ ಹಿಂದಿನ ಸಿನಿಮಾಗಳ ಹಿಟ್‌ನಿಂದ ಕೆಲವು ಚಿತ್ರಗಳ ಮೇಲೆ ಪ್ರೇಕ್ಷಕ ಕಣ್ಣಿಟ್ಟಿದ್ದಾನೆ. ಇದು ಪ್ರೇಕ್ಷಕನ ನಿರೀಕ್ಷೆ. ಹಾಗಂತ ನಿರೀಕ್ಷಿತ ಸಿನಿಮಾಗಳೆಲ್ಲವೂ ನಿರೀಕ್ಷೆಯ ಮಟ್ಟ ತಲುಪುತ್ತವೆ ಎಂದಲ್ಲ. “ರಾಜರಥ’, “ಚೂರಿಕಟ್ಟೆ’, “ಕವಲುದಾರಿ’, “ಕಥಾಸಂಗಮ’, “ಪ್ರೇಮ ಬರಹ’, “ಲೈಫ್ ಜೊತೆಗೊಂದು ಸೆಲ್ಫಿ’, “ತಾಯಿಗೆ ತಕ್ಕ ಮಗ’, “ಭೀಮಾ ಸೇನಾ ನಳಮಹಾರಾಜ’, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, “ರಾಜು ಕನ್ನಡ ಮೀಡಿಯಂ’, “ಕಿಚ್ಚು’, “ರಾಜಾ ಸಿಂಹ’, “ಹೌರಾ ಬ್ರಿಡ್ಜ್’, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ -ರಾಮಣ್ಣ ರೈ’, “ಸಂಹಾರ’, “ಕವಚ’, “ದಳಪತಿ’ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಚಿತ್ರಗಳು ಒಂದಲ್ಲ, ಒಂದು ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿರೋದಂತೂ ಸುಳ್ಳಲ್ಲ. ಇವೆಲ್ಲವೂ ಹೊಸ ವರ್ಷಕ್ಕೆ ಬಿಡುಗಡೆಯಾಗಲಿವೆ. ಹಾಗಾಗಿ 2018ಕ್ಕೂ ಹೊಸ ಪ್ರಯೋಗದ ಸಾಕಷ್ಟು ಚಿತ್ರಗಳು ತೆರೆಗೆ ಬರಲಿವೆ.

ಲೇಟ್‌ ಬಟ್‌ ಲೇಟೆಸ್ಟ್‌
ಹಾಗೆ ನೋಡಿದರೆ ಕೆಲವು ಸಿನಿಮಾಗಳು ಆರಂಭವಾದ ಬಿರುಸು ನೋಡಿದರೆ ಈ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಅಂದುಕೊಂಡಂತೆ ಎಲ್ಲಾ ನಡೆಯಬೇಕಲ್ವಾ? ಹಾಗಾಗಿ, ಕೆಲವು ಚಿತ್ರಗಳು ತಡವಾಗಿವೆ. ಅದರಲ್ಲಿ ಪ್ರಮುಖವಾಗಿ ಕಾಣೋದು “ಕೆಜಿಎಫ್’. ಯಶ್‌ ಅವರ “ಕೆಜಿಎಫ್’ ಚಿತ್ರ ಈ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣವಾಗುತ್ತಿದ್ದಂತೆ ಚಿತ್ರ ಕೂಡಾ ದೊಡ್ಡದಾಗುತ್ತಾ ಬಂತು. ಅದು ಯಾವ ಮಟ್ಟಿಗೆಂದರೆ ಎರಡು ಭಾಗಗಳನ್ನಾಗಿ ವಿಂಗಡಿಸುವ ಮೂಲಕ. ಹಾಗಾಗಿ, ಚಿತ್ರ ಹೊಸ ವರ್ಷದಲ್ಲಿ ಬಿಡುಗಡೆಯಾಗುತ್ತಿದೆ. ಈ ವರ್ಷ ತಡವಾದ ಮತ್ತೂಂದು ಚಿತ್ರವೆಂದರೆ “ಟಗರು’. “ಟಗರು’ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು.ಅದು ಕೂಡಾ ತಡವಾಗಿ ಈಗ ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ಇನ್ನು, “ದಿ ವಿಲನ್‌’ ಚಿತ್ರಕ್ಕೆ ಆ್ಯಮಿ ಜಾಕ್ಸನ್‌ ಅವರ ವೀಸಾ ಸಮಸ್ಯೆ ಎದುರಾಗಿದ್ದರಿಂದ ಚಿತ್ರ ತಡವಾಗುತ್ತಾ ಹೋಗಿದೆ. “ಕುರುಕ್ಷೇತ್ರ’ ಚಿತ್ರದ ಕ್ಯಾನ್ವಸ್‌ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುವ ಮೂಲಕ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ.

Advertisement

ಸ್ಟಾರ್‌ ಮೇಳ
2018ನ್ನು ಈ ಬಾರಿ ರಂಗೇರಿಸುವುದರಲ್ಲಿ ಸ್ಟಾರ್‌ಗಳ ಪಾತ್ರ ಮಹತ್ವದ್ದು. ಅದಕ್ಕೆ ಕಾರಣ ಅವರು ಒಪ್ಪಿಕೊಂಡಿರುವ ಬಹುನಿರೀಕ್ಷಿತ ಹಾಗೂ ಮಲ್ಟಿಸ್ಟಾರರ್‌ ಸಿನಿಮಾ. ಈ ಎಲ್ಲಾ ಸಿನಿಮಾಗಳು 2018ರಲ್ಲಿ ತೆರೆಗಪ್ಪಳಿಸಲಿವೆ. ಹಾಗೆ ಕ್ರೇಜ್‌ ಕ್ರಿಯೇಟ್‌ ಮಾಡಿರುವ ಸಿನಿಮಾಗಳಲ್ಲಿ ಪ್ರಮುಖವಾದುವು ಎಂದರೆ “ದಿ ವಿಲನ್‌’, “ಕೆಜಿಎಫ್’, “ಕುರುಕ್ಷೇತ್ರ’, “ಟಗರು’ ಚಿತ್ರಗಳು. ಇವೆಲ್ಲವೂ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿವೆ. ಇನ್ನು, ಸುದೀಪ್‌ ಅಭಿನಯದ “ಪೈಲ್ವಾನ್‌’ ಹಾಗೂ “ಕೋಟಿಗೊಬ್ಬ-3′ ಚಿತ್ರಗಳು ಕೂಡಾ ಹೊಸ ವರ್ಷಕ್ಕೆ ಆರಂಭವಾಗಲಿದ್ದು, ಎರಡರಲ್ಲೊಂದು ಚಿತ್ರ ಆ ವರ್ಷವೇ ಬಿಡುಗಡೆಯಾಗಲಿದೆ. ಮುಖ್ಯವಾಗಿ ಶಿವರಾಜಕುಮಾರ್‌ ಹಾಗೂ ಸುದೀಪ್‌ ಜೊತೆಯಾಗಿ ನಟಿಸಿರುವ “ದಿ ವಿಲನ್‌’ ಚಿತ್ರದ ಕ್ರೇಜ್‌ ಈಗಲೇ ಆರಂಭವಾಗಿದೆ. ಇಬ್ಬರು ಸ್ಟಾರ್‌ ನಟರು ಮೊದಲ ಬಾರಿಗೆ ಜೊತೆಯಾಗಿರುವುದು ಒಂದಾದರೆ, ಪ್ರೇಮ್‌ ಆರು ವರ್ಷಗಳ ನಂತರ ನಿರ್ದೇಶನ ಮಾಡಿರುವ ಚಿತ್ರವಿದು. ಇನ್ನು, ಯಶ್‌ ಅಭಿನಯದ “ಕೆಜಿಎಫ್’ ಚಿತ್ರ ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ 2018ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. “ಉಗ್ರಂ’ ಚಿತ್ರದ ಪ್ರಶಾಂತ್‌ ನೀಲ್‌ ನಿರ್ದೇಶನದ ಎರಡನೇ ಚಿತ್ರ ಎಂಬುದು ಒಂದು ಕಾರಣವಾದರೆ, ಯಶ್‌ ಅವರು ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ಸಿನಿಮಾ ಎಂಬುದು ಕ್ರೇಜ್‌ಗೆ ಮತ್ತೂಂದು ಕಾರಣ. ಈ ಚಿತ್ರಕ್ಕಾಗಿ ಸುಮಾರು ಒಂದು ವರ್ಷದಿಂದ ಗಡ್ಡಬಿಟ್ಟಿದ್ದಾರೆ. ಕನ್ನಡದ ಬಹುತೇಕ ನಟರು ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರವೊಂದು ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ಅದು “ಕುರುಕ್ಷೇತ್ರ. ದರ್ಶನ್‌ ದುರ್ಯೋಧನನಾಗಿ ಕಾಣಿಸಿಕೊಂಡಿರುವ ಈ ಚಿತ್ರ ಚಿತ್ರ ಬಿಗ್‌ ಬಜೆಟ್‌ ಜೊತೆಗೆ ಬಹುತಾರಾಗಣದ ಚಿತ್ರ. ಕನ್ನಡದ ಬಹುತೇಕ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್‌ನಲ್ಲಿ ತೆರೆಕಾಣಲಿದ್ದು, ದೊಡ್ಡ ಪೌರಾಣಿಕ ಸಿನಿಮಾವೊಂದನ್ನು ಕನ್ನಡ ಚಿತ್ರಪ್ರೇಮಿಗಳು ಎದುರು ನೋಡುತ್ತಿರೋದು ಸುಳ್ಳಲ್ಲ.  ಇನ್ನು, “ಟಗರು’. ಶಿವರಾಜಕುಮಾರ್‌ ಹಾಗೂ ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರವಿದು. ಚಿತ್ರದ ಟ್ರೇಲರ್‌ ಸಖತ್‌ ಹಿಟ್‌ ಆಗುವ ಜೊತೆಗೆ ಸೂರಿ ಶೈಲಿಯ ಆ್ಯಕ್ಷನ್‌ ಸಿನಿಮಾ ಎಂಬುದನ್ನು ತೋರಿಸಿಕೊಟ್ಟಿವೆ. ಈ ಚಿತ್ರ ಕೂಡಾ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದು ಈಗಾಗಲೇ ಬಿಡುಗಡೆಗೆ ರೆಡಿಯಾಗಿ, ಕ್ರೇಜ್‌ ಹುಟ್ಟಿಸಿರುವ ಸಿನಿಮಾಗಳಾದರೆ “ಭರ್ಜರಿ’ ಹಿಟ್‌ ಕೊಟ್ಟ ಧ್ರುವ ಸರ್ಜಾ ಅವರ “ಪೊಗರು’, ಗಣೇಶ್‌ ಅವರ “ಆರೆಂಜ್‌’, ವಿಜಯ್‌ ಅವರ “ಕನಕ’, “ಜಾನಿ ಜಾನಿ ಯೆಸ್‌ ಪಪ್ಪಾ’, ರವಿಚಂದ್ರನ್‌ ಅವರ “ಬಕಾಸುರ’, “ರಾಜೇಂದ್ರ ಪೊನ್ನಪ್ಪ’, “ದಶರಥ’, ಪ್ರೇಮ್‌ ಆ್ಯಕ್ಷನ್‌ ಇಮೇಜ್‌ನ “ದಳಪತಿ’, ಜಗ್ಗೇಶ್‌ ಅವರ “8 ಎಂಎಂ’, ಕೂಡಾ 2018ರಲ್ಲಿ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next