Advertisement

ಪಾಕಿಸ್ಥಾನ ಉಗ್ರ ಕೃತ್ಯಗಳಿಗೆ ಐರೋಪ್ಯದ ಮೌನವೇಕೆ?

01:02 AM Jan 04, 2023 | Team Udayavani |

ವಿಯೆನ್ನಾ: ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಐರೋಪ್ಯ ಒಕ್ಕೂಟದಿಂದ ಏಕಕಂಠ ಖಂಡನೆ ಏಕೆ ವ್ಯಕ್ತವಾಗುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರಶ್ನಿಸಿದ್ದಾರೆ.

Advertisement

ಆಸ್ಟ್ರಿಯಾದ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ಥಾನ ಎನ್ನುವುದು ಭಯೋತ್ಪಾದನೆಯ ಮೂಲ ಕೇಂದ್ರ ಎಂದು ಪ್ರತಿಪಾದಿ ಸಿದ್ದಾರೆ. ಪಾಕಿಸ್ಥಾನದ ವಿರುದ್ಧ ನೀವು ಬಳಸಿರುವ ಪದ “ರಾಜತಾಂತ್ರಿಕ’ ಆಗಿಲ್ಲವಲ್ಲ ಎಂಬ ನಿರೂಪಕನ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್‌, “ರಾಜ ತಾಂತ್ರಿಕ ಅಧಿಕಾರಿ ಎಂದ ಮಾತ್ರಕ್ಕೆ ನೀವು ಕೃತಘ್ನ ಎಂದರ್ಥವಲ್ಲ. ಪಾಕಿಸ್ಥಾನದ ವಿರುದ್ಧ ಭಯೋತ್ಪಾದನೆಯ ಮೂಲ ಕೇಂದ್ರ ಎನ್ನುವುದಕ್ಕಿಂತ ಕಠಿನ ಪದ ಪ್ರಯೋಗ ಮಾಡಬಹುದಿತ್ತು. ಆ ರಾಷ್ಟ್ರದ ಗಡಿಯಾಚೆಯಿಂದ ನಮಗೆ ಏನು ಅನುಭವ ಉಂಟಾಗುತ್ತಿದೆ ಎನ್ನುವುದನ್ನು ಗಮನಿಸಿದರೆ ಬಳಕೆ ಮಾಡಿದ ಪದದ ತೀಕ್ಷ್ಣತೆ ಕಡಿಮೆಯೇ ಆಗಿದೆ ಎಂದರು.

ಪಾಕಿಸ್ಥಾನ ನಡೆಸುತ್ತಿರುವ ಉಗ್ರ ಕೃತ್ಯಗಳನ್ನು ಖಂಡಿಸುವಂಥ ಮಾತುಗಳು ಐರೋಪ್ಯ ಒಕ್ಕೂಟದ ವತಿಯಿಂದ ಸೂಕ್ತವಾಗಿ ವ್ಯಕ್ತವಾಗುತ್ತಿಲ್ಲ ಎಂದೂ ಜೈಶಂಕರ್‌ ಸಂದರ್ಶನದಲ್ಲಿ ಆಕ್ಷೇಪ ಮಾಡಿದ್ದಾರೆ. ಜಗತ್ತಿಗೇ ಭಯೋತ್ಪಾದನೆಯಿಂದ ಉಂಟಾಗುವ ಕಷ್ಟ-ನಷ್ಟಗಳ ಅರಿವು ಇದೆ. ಆದರೆ ಐರೋಪ್ಯ ಒಕ್ಕೂಟ ಸಹಿ ತ ಕೆಲವು ರಾಷ್ಟ್ರಗಳು ಇತರ ರಾಷ್ಟ್ರಗಳಲ್ಲಿ ಉಗ್ರ ದಾಳಿ ನಡೆದರೆ ಅದು ತಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ವರ್ತಿಸುತ್ತವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ರಾಷ್ಟ್ರಗಳೂ ಏಕಕಂಠದ ಧ್ವನಿಯಲ್ಲಿ ಮಾತನಾಡಬೇಕು ಎಂದರು.

ಇದೇ ವೇಳೆ ವಿಶ್ವಸಂಸ್ಥೆ ಸುಧಾರಣೆ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು ಕಾಯಂ ಸದಸ್ಯತ್ವದ ಅನುಕೂಲತೆಗಳನ್ನು ಅನುಭವಿಸುತ್ತಾ ಕೂತಿರುವವರಿಗೆ ಸುಧಾರಣೆಯ ಜರೂರತ್ತೇ ಅರ್ಥವಾಗುವುದಿಲ್ಲ ಎಂದಿದ್ದಾರೆ.

ಇಬ್ಬರು ನಸುಳುಕೋರರ ಹತ್ಯೆ: ಪಂಜಾಬ್‌ನ ಭಾರತ-ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದ ಪತ್ಯೇಕ ಘಟನೆಗಳಲ್ಲಿ ಮಂಗಳವಾರ ಇಬ್ಬರು ನುಸುಳುಕೋರರನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದು, ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ರಾತ್ರಿ ಕರ್ಫ್ಯೂ ಜಾರಿ: ಚಳಿ ಹಾಗೂ ದಟ್ಟ ಮಂಜಿನ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಒಂದು ಕಿ.ಮೀ. ಉದ್ದಕ್ಕೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ದಟ್ಟ ಮಂಜಿನ ವಾತಾವರಣದಲ್ಲಿ ನುಸುಳುಕೋರರನ್ನು ಮತ್ತು ಡ್ರೋನ್‌ಗಳ ಮೂಲಕ ನಡೆಯುವ ಶಸ್ತ್ರಾಸ್ತ್ರ ಕಳ್ಳಸಾಗಣೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆ ಸಮಯದಲ್ಲಿ ಈ ಪ್ರದೇಶದಲ್ಲಿ ಸಂಚರಿಸದಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಸುರಕ್ಷಿತ ತಾಣವಾಗಿ ಉಳಿಯದ ಜಮ್ಮು!
ಜಮ್ಮುವಿನ ರಜೌರಿ ಜಿಲ್ಲೆಯಲ್ಲಿ ರವಿವಾರ ಮತ್ತು ಸೋಮವಾರ ಉಗ್ರರಿಂದ ಏಳು ಮಂದಿಯ ಹತ್ಯೆ, ಕಾಶ್ಮೀರಿ ಪಂಡಿತರು ವಾಸಿಸುವ ದೊಡ್ಡ ಕಾಲನಿ ಸಮೀ ಪವೇ ಕಳೆದ ವಾರ 15 ಕೆಜಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆ ಘಟನೆಗಳು ಕಾಶ್ಮೀರವನ್ನು ತೊರೆದು ಜಮ್ಮುವಿಗೆ ಆಗಮಿಸಿರುವ ಅಪಾರ ಸಂಖ್ಯೆಯ ಕಾಶ್ಮೀರಿ ಪಂಡಿತರಲ್ಲಿ ನಡುಕ ಹುಟ್ಟಿಸಿದೆ. “ನಮ್ಮ ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಪ್ರಧಾನ ಮಂತ್ರಿ ಪ್ಯಾಕೇಜ್‌ ಅಡಿಯಲ್ಲಿ ಉದ್ಯೋಗ ದೊರೆತಿದೆ. ಇತ್ತೀಚೆಗೆ ಅವರಿಗೆ ಉಗ್ರ ಸಂಘಟನೆ ದಿ ರಿಸಿಸ್ಟೆನ್ಸ್‌ ಫ್ರಂಟ್‌(ಟಿಆರ್‌ಎಫ್)ನಿಂದ ಬೆದರಿಕೆ ಬಂದಿದೆ. ಕಾಶ್ಮೀರಕ್ಕೆ ವಾಪಸು ಹೋಗಬೇಕೆಂದು ನಿರ್ಧರಿಸಿದರೂ ಇದೀಗ ಅದು ಸಾಧ್ಯವಿಲ್ಲ. ನಮ್ಮ ಕುಟುಂಬದ ನಾಲ್ವರು ಅವರ ಸಂಪಾದನೆ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ಕಳೆದ 200ಕ್ಕೂ ಹೆಚ್ಚು ದಿನಗಳಿಂದ ಸಂಬಳ ಸ್ಥಗಿತವಾಗಿದೆ,’ ಎಂದು ಕಾಶ್ಮೀರಿ ಪಂಡಿತೆಯೊಬ್ಬರು ಅವಲತ್ತುಕೊಂಡಿದ್ದಾರೆ.

ಸ್ಥಳೀಯ ರಂತೆ ವೇಷಭೂಷಣ ಧರಿಸಿಕೊಂಡು ವಾಸಿಸುವಂತೆ ಪ್ರಧಾನಮಂತ್ರಿ ಪ್ಯಾಕೇಜ್‌ ಅಡಿಯ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಬ್ಯಾಂಕ್‌ ಮತ್ತು ಶಾಲೆ ಉದ್ಯೋಗಿಗಳು ಗುಂಪಾಗಿಯೇ ಜೀವಿಸುವಂತೆ ಮತ್ತು ಗುಂಪಲ್ಲೇ ಪ್ರಯಾಣ ಮಾಡುವಂತೆ ಸಲಹೆ ನೀಡಲಾ ಗಿದೆ. “ಭಯದಿಂದ ಪ್ರಯಾಣದ ಸಮಯದಲ್ಲಿ ಕಾಶ್ಮೀರಿ ಪಂಡಿತರು ಹಿಂದಿ ಮಾತನಾಡುತ್ತಿಲ್ಲ. ಕಚೇರಿ ಸಮೀ ಪದ ಗ್ರಾಮಗಳು ಖಾಲಿ ಇದ್ದರೂ ಅಲ್ಲಿ ಇರಲು ಧೈರ್ಯ ಸಾಲದೇ ದೂರದ ಗ್ರಾಮಗಳಲ್ಲಿ ನೆಲೆಸುವಂತಾಗಿದೆ,’ ಎಂದು ಮತ್ತೊಬ್ಬ ಕಾಶ್ಮೀರಿ ಪಂಡಿತ್‌ ವಾಸ್ತವ ಸ್ಥಿತಿ ವಿವರಿಸಿದರು. ಈ ನಡುವೆ ರಜೌರಿ ಜಿಲ್ಲೆಯಲ್ಲಿ ನಡೆದ ದಾಳಿಗೆ ಕಾರಣರಾದ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ನಾಗರಿಕ ಸಮಾಜದಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ರಜೌರಿಯ ಘಟನೆಯಿಂದ ತೀವ್ರ ದುಃಖವಾಗಿದೆ. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧದ ಹೇಯ ಉಗ್ರ ದಾಳಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next