ಲಕ್ನೋ/ನವದೆಹಲಿ: “ದೇಶದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ನಾವು ಯಾವುದೇ ಅಡ್ಡಿಯನ್ನು ಉಂಟುಮಾಡುವುದಿಲ್ಲ. ಪ್ರಷರ್ ಕುಕ್ಕರ್ ಅನ್ನು ಒತ್ತುವ ಕೆಲಸಕ್ಕೆ ನಾವು ಕೈಹಾಕುವುದಿಲ್ಲ. ಆದರೆ, ದೇಶವನ್ನು ಅಸ್ಥಿರತೆಗೆ ನೂಕಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ.’ ಹೀಗೆಂದು ಹೇಳಿರುವುದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.
ಇತ್ತೀಚೆಗೆ ಮಾವೋವಾದಿಗಳೊಂದಿಗೆ ನಂಟು ಹಾಗೂ ಪ್ರಧಾನಿ ಮೋದಿ ಹತ್ಯೆಗೆ ಸಂಚು ಆರೋಪದಲ್ಲಿ ಹಲವು ಹೋರಾಟ ಗಾರರನ್ನು ಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ, ಪ್ರಜಾಸತ್ತಾತ್ಮಕವಾಗಿ ಯಾರು ಏನು ಬೇಕಿದ್ದರೂ ಮಾಡಬಹುದು. ಅದಕ್ಕೆ ನಾವು ಖಂಡಿತಾ ಅಡ್ಡಿ ಮಾಡುವುದಿಲ್ಲ. ಆದರೆ, ದೇಶದಲ್ಲಿ ಹಿಂಸಾಚಾರ ಹುಟ್ಟುಹಾಕಲು ಅಥವಾ ರಾಷ್ಟ್ರವನ್ನು ಅಸ್ಥಿರತೆಗೆ ತಳ್ಳಲು ಅಥವಾ ದೇಶವನ್ನು ಒಡೆಯಲು ಮಾತ್ರ ನಾವು ಅವಕಾಶ ನೀಡುವುದಿಲ್ಲ. ಏಕೆಂದರೆ, ಇದಕ್ಕಿಂತ ದೊಡ್ಡ ಅಪರಾಧ ಬೇರೊಂದಿಲ್ಲ ಎಂದಿದ್ದಾರೆ ಸಿಂಗ್. 2012ರಲ್ಲೂ ಹಲವಾರು ಹೋರಾಟಗಾರರನ್ನು ಬಂಧಿಸಲಾಗಿತ್ತು. ಆಗಲೂ ಇದೇ ರೀತಿಯ ಆರೋಪಗಳು ಕೇಳಿಬಂದಿದ್ದವು ಎಂದೂ ಸಿಂಗ್ ನೆನಪಿಸಿಕೊಂಡಿದ್ದಾರೆ.
ಪ್ರತಿರೋಧ ಚಿವುಟುವ ಯತ್ನ: ಇನ್ನೊಂದೆಡೆ, ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಸಚಿವ ಚಿದಂಬರಂ, ಹೋರಾಟಗಾರರನ್ನು ಬಂಧಿಸಿರುವ ಕ್ರಮವು ಪ್ರತಿರೋಧವನ್ನು ಚಿವುಟುವ ಯತ್ನ ಎಂದು ಆರೋಪಿಸಿದ್ದಾರೆ. ಆರೋಪ ಅಲ್ಲಗಳೆದ ಬಂಧಿತರು: ತನಿಖಾ ಸಂಸ್ಥೆಯು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಬಂಧಿತರು ತಳ್ಳಿಹಾಕಿದ್ದಾರೆ. ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲೆಂದೇ ಒಂದು ಕಲ್ಪಿತ ಪತ್ರವನ್ನು ಸೃಷ್ಟಿಸಲಾಗಿದೆ ಎಂದು ಸುಧಾ ಭಾರದ್ವಾಜ್ ಆರೋಪಿಸಿದ್ದಾರೆ. ಇನ್ನು, ಪ್ಯಾರಿಸ್‌ನಲ್ಲಿ ನಡೆದ ನಕ್ಸಲರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪವನ್ನು ಆನಂದ್ ತೆಲು¤ಂಬೆ ಅಲ್ಲಗಳೆದಿದ್ದು, ನಾನು ಶೈಕ್ಷಣಿಕ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲು ವಿದೇಶಗಳಿಗೆ ತೆರಳಿದ್ದಿದೆ. ಆದರೆ, ಅವುಗಳಿಗೆ ಅಧಿಕೃತ ಆಹ್ವಾನಗಳ ಮೇರೆಗೆ ಹೋಗಿದ್ದು, ಅದಕ್ಕೆ ಪೂರಕ ದಾಖಲೆಗಳೂ ಇವೆ ಎಂದಿದ್ದಾರೆ. ಇದೇ ವೇಳೆ, ಪ್ರಕರಣ ಕುರಿತು ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ ಮಹಾರಾಷ್ಟ್ರ ಪೊಲೀಸರನ್ನು ಕೆಲವು ನಿವೃತ್ತ ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ತಮ್ಮ ಸಿಕ್ಕಿರುವ ಸಾಕ್ಷ್ಯಗಳನ್ನು ಆರೋಪಪಟ್ಟಿಯ ರೂಪದಲ್ಲಿ
ಕೋರ್ಟ್‌ಗೆ ಸಲ್ಲಿಸಬೇಕೇ ವಿನಾ ಅದನ್ನು ಬಹಿರಂಗಪಡಿಸಿದ್ದು ಸರಿಯಲ್ಲ ಎಂದಿದ್ದಾರೆ.