Advertisement

ಕೊನೆ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ತರಗತಿ ; ಹಾಜರಿ ಕಡ್ಡಾಯವಲ್ಲ

03:32 AM Jul 13, 2020 | Hari Prasad |

ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷೆಗೆ ಮುನ್ನ ತರಗತಿ ಬಯಸಿದಲ್ಲಿ ಅದಕ್ಕೂ ಉನ್ನತ ಶಿಕ್ಷಣ ಇಲಾಖೆ ವ್ಯವಸ್ಥೆ ಕಲ್ಪಿಸಲಿದೆ.

Advertisement

ಸೆಪ್ಟಂಬರ್‌ ಅಂತ್ಯದೊಳಗೆ ಅಂತಿಮ ಸೆಮಿಸ್ಟರ್‌ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಎಲ್ಲ ವಿಶ್ವವಿದ್ಯಾಲಯಗಳಿಗೆ ಸರಕಾರ ಈಗಾಗಲೇ ಸೂಚನೆ ನೀಡಿದೆ.

ಕೋವಿಡ್ 19 ನಿಂದಾಗಿ ಆನ್‌ಲೈನ್‌ ಮೂಲಕ ಪಠ್ಯಕ್ರಮ ಪೂರೈಸಿರುವುದರಿಂದ ತಾಂತ್ರಿಕ ಕೋರ್ಸ್‌ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರಿಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಪರೀಕ್ಷೆಗೆ ಮುನ್ನ ಕನಿಷ್ಠ ಒಂದು ವಾರವಾದರೂ ಪ್ರತ್ಯಕ್ಷ ತರಗತಿ ನಡೆಸಬೇಕು ಎನ್ನುವ ಆಗ್ರಹ ರಾಜ್ಯಾದ್ಯಂತ ವಿದ್ಯಾರ್ಥಿ ವಲಯದಿಂದ ಬಂದಿತ್ತು. ಅದರಂತೆ ಆಗಸ್ಟ್‌ ನಲ್ಲಿ ತರಗತಿ ನಡೆಸಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಉನ್ನತ ಮೂಲವೊಂದು ‘ಉದಯವಾಣಿ’ಗೆ ಖಚಿತಪಡಿಸಿದೆ.

ಕೆಲವು ಪದವಿ ಕೋರ್ಸ್‌ ಹೊರತುಪಡಿಸಿ ಬಹುತೇಕ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್‌ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್‌ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್‌, ಫೀಲ್ಡ್‌ ವರ್ಕ್‌, ಅಸೈನ್‌ಮೆಂಟ್‌ ಸಹಿತ ಪ್ರಾಯೋಗಿಕ ಕಾರ್ಯಗಳು ಶಿಕ್ಷಣದ ಭಾಗವಾಗಿವೆ. ಜತೆಗೆ ಪರೀಕ್ಷೆಯೂ ಇದೆ. ಆದರೆ ಕೋವಿಡ್ 19 ನಿಂದಾಗಿ ಇವುಗಳನ್ನು ಸಮರ್ಪಕವಾಗಿ ಮಾಡಲಾಗಿಲ್ಲ.

Advertisement

ಅಂತಿಮ ಪರೀಕ್ಷೆಯ ಜತೆಗೆ ಪ್ರಾಜೆಕ್ಟ್ ವರ್ಕ್‌ ಮತ್ತು ಫೀಲ್ಡ್‌ವರ್ಕ್‌ ಸಹಿತ ವಿವಿಧ ಅಸೈನ್‌ಮೆಂಟ್ ಗಳ ಅಂಕ ಸೇರಿಸಿ ಫ‌ಲಿತಾಂಶ ನೀಡಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಿಗೆ ಸಮಸ್ಯೆಯಾಗದಂತೆ ಕ್ರಮತೆಗೆದುಕೊಳ್ಳುವ ಬಗ್ಗೆಯೂ ಇಲಾಖೆಯಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಆಗಸ್ಟ್‌ನಲ್ಲಿ ನಡೆಯಲಿದೆ ತರಗತಿ
ಆಗಸ್ಟ್‌ನಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಿದ್ದೇವೆ. ಹಾಜರಾತಿ ವಿದ್ಯಾರ್ಥಿಗಳ ಆಯ್ಕೆ, ಕಡ್ಡಾಯವಲ್ಲ. ತರಗತಿ ಬೇಕು ಎನ್ನುವ ವಿದ್ಯಾರ್ಥಿಗಳು ಇಲಾಖೆ ನಿಗದಿಪಡಿಸಲಿರುವ ದಿನಾಂಕಗಳಲ್ಲಿ ಕಾಲೇಜಿಗೆ ಬಂದು ತರಗತಿಯಲ್ಲಿ ಭಾಗಿಯಾಗಬಹುದು. ಯಾವ ರೀತಿ ತರಗತಿ ನಡೆಸಬೇಕು ಮತ್ತು ಸಾಮಾಜಿಕ ಅಂತರ ಸಹಿತ ಸುರಕ್ಷಾ ಕ್ರಮಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಸದ್ಯವೇ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತಿಮ ವರ್ಷ ಅಥವಾ ಸೆಮಿಸ್ಟರ್‌ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಆಗಸ್ಟ್‌ ತಿಂಗಳಲ್ಲಿ ತರಗತಿ ನಡೆಸಲಿದ್ದೇವೆ. ಆದರೆ ಹಾಜರಾತಿ ಕಡ್ಡಾಯವಲ್ಲ, ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಿದ್ದೇವೆ. ಪರೀಕ್ಷೆ ಮೊದಲು ತರಗತಿ ಬೇಕು ಎನ್ನುವ ವಿದ್ಯಾರ್ಥಿಗಳಿಗೆ ಈ ತರಗತಿ ವ್ಯವಸ್ಥೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಈ ಸಂಬಂಧ ಸಿದ್ಧತೆ ನಡೆಯುತ್ತಿದೆ.
-ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next