ಬೆಂಗಳೂರು: ಹೈಕೋರ್ಟ್ ನೀಡಿದ ತೀರ್ಪು ನನಗಿಂತ ಸರಕಾರ ಮತ್ತು ರಾಜ್ಯದ ಜನರಿಗೆ ಸಿಕ್ಕ ಗೆಲುವು. ನಾನು ಸಾಯುವವರೆಗೂ ನನ್ನ ಸ್ನೇಹಿತರು ಈ ರೀತಿ ತೊಂದರೆ ಕೊಡುತ್ತಲೇ ಇರುತ್ತಾರೆ. ಪಿತೂರಿಯ ವಿರುದ್ಧ ನನ್ನ ಹೋರಾಟವೂ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆದಾಯ ಮೀರಿ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅರ್ಜಿ ಯನ್ನು ಬುಧವಾರ ಹೈಕೋರ್ಟ್ ವಜಾಗೊಳಿಸಿ ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸರಕಾರದ ತೀರ್ಮಾನ ಸರಿ ಇದೆ ಎಂದು ಹೈಕೋರ್ಟ್ ತಿಳಿಸಿದೆ.
ಸಿಬಿಐನವರು ಈ ವಿಚಾರ ಇಲ್ಲಿಗೆ ಬಿಟ್ಟರೂ ಬಿಡಬಹುದು ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ನನಗೆ ಅನ್ಯಾಯವಾಗಿದ್ದರೆ ನಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದೆ. ಪಶ್ಚಿಮ ಬಂಗಾಲದ ನ್ಯಾಯಾಲಯದಲ್ಲಿನ ಇತ್ತೀಚಿನ ಆದೇಶದ ಬಗ್ಗೆಯೂ ಹೇಳಲಾಗಿದೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಾವು ಯಾರಿಗೂ ಮೋಸ ಮಾಡುವ ಆವಶ್ಯಕತೆ ಇಲ್ಲ. ಆ ಕೆಲಸ ಮಾಡಿಲ್ಲ. ಕಾನೂನು ನನಗೆ ರಕ್ಷಣೆ ಕೊಟ್ಟಿದೆ ಎಂದರು.
ನನ್ನ ವಿರುದ್ಧ ಪಿಎಂಎಲ್ ಎ ಪ್ರಕರಣ ದಾಖಲಿಸಿ ನನ್ನನ್ನು ಜೈಲಿಗೂ ಕಳುಹಿಸಿದರು. ನಾನು ತಪ್ಪು ಮಾಡಿಲ್ಲ ಎಂದು ಅಂದೂ ವಾದ ಮಾಡಿದ್ದೆ . ಇಂದೂ ಅದನ್ನೇ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸರಿ ಯಲ್ಲ. ಪ್ರಕರಣದ ತನಿಖೆ ನಡೆಯಲಿ, ಎಲ್ಲ ಪ್ರಕರಣಗಳಂತೆ ಈ ಪ್ರಕರಣವೂ ಲೋಕಾ ಯುಕ್ತದಲ್ಲಿ ತನಿಖೆಯಾಗಲಿ ಎಂದು ವರ್ಗಾವಣೆ ಮಾಡಿದರು. ಈಗ ಲೋಕಾಯುಕ್ತ ತನಿಖೆ ಮಾಡುತ್ತಿದ್ದು, ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದರು.