ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಆಡಿಸಲಾದ ಭಾರತ ತಂಡದಲ್ಲಿ ಒಂದು ಅಚ್ಚರಿಯ ಬದಲಾವಣೆ ಕಂಡುಬಂದಿತ್ತು. ಹಿಂದಿನ ಪಂದ್ಯದ ಹೀರೋ, ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕೈಬಿಟ್ಟು ಆ ಸ್ಥಾನಕ್ಕೆ ಪೇಸ್ ಬೌಲರ್ ಜೈದೇವ್ ಉನಾದ್ಕತ್ ಅವರನ್ನು ಆಡಿಸಲಾಗಿತ್ತು. ಇದಕ್ಕೆ ಎಲ್ಲ ದಿಕ್ಕುಗಳಿಂದಲೂ ವ್ಯಾಪಕ ಟೀಕೆ ಎದುರಾಗಿತ್ತು.
ಆದರೆ ಜೈದೇವ್ ಉನಾದ್ಕತ್ ಅವರಿಗೆ 12 ವರ್ಷಗಳಷ್ಟು ಸುದೀರ್ಘಾವಧಿಯ ಬಳಿಕ ಟೆಸ್ಟ್ ಆಡುವ ಭಾಗ್ಯ ಎದುರಾದದ್ದು ಮಾತ್ರ ಸುಳ್ಳಲ್ಲ. ಮಂಗಳವಾರ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತಾಡಿರುವ ಜೈದೇವ್ ಉನಾದ್ಕತ್, “ಕುಲದೀಪ್ ಯಾದವ್ ಸ್ಥಾನ ತುಂಬಿದ ಯಾವುದೇ ಒತ್ತಡ ನನ್ನ ಮೇಲಿರಲಿಲ್ಲ’ ಎಂಬುದಾಗಿ ಹೇಳಿದರು.
“ನನ್ನ ಅತೀ ದೊಡ್ಡ ಆಸೆಯೆಂದರೆ ರೆಡ್ ಬಾಲ್ ಕ್ರಿಕೆಟ್ ಆಡುವುದು. ಕೋವಿಡ್ ಕಾರಣದಿಂದ ಎರಡನೇ ಸಲ ರಣಜಿ ಟ್ರೋಫಿ ಪಂದ್ಯಾವಳಿಯನ್ನು ಮುಂದೂಡಿದಾಗ ಇದ್ದ ಒಂದು ಅವಕಾಶವನ್ನೂ ಕಳೆದುಕೊಂಡೆ. ಇದೀಗ 12 ವರ್ಷಗಳ ಬಳಿಕ ಟೆಸ್ಟ್ ಆಡಿದ ಸಂತೃಪ್ತಭಾವ ನನ್ನದಾಗಿದೆ. ನಾನಲ್ಲಿ ಕುಲದೀಪ್ ಯಾದವ್ ಸ್ಥಾನಕ್ಕೆ ಬಂದೆ. ಹಿಂದಿನ ಟೆಸ್ಟ್‌ನಲ್ಲಿ ಅವರು ಪಂದ್ಯಶ್ರೇಷ್ಠರಾಗಿದ್ದರು. ಇದರ ಹೊರತಾಗಿಯೂ ನಾನು ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ’ ಎಂಬುದಾಗಿ ಜೈದೇವ್ ಉನಾದ್ಕತ್ ಹೇಳಿದರು.
2010ರಲ್ಲಿ ಮೊದಲ ಟೆಸ್ಟ್
31 ವರ್ಷದ ಜೈದೇವ್ ಉನಾದ್ಕತ್ ತಮ್ಮ ಮೊದಲ ಟೆಸ್ಟ್ ಪಂದ್ಯವಾಡಿದ್ದು 2010ರಷ್ಟು ಹಿಂದೆ. ಅದು ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯ. ಸಚಿನ್ ತೆಂಡುಲ್ಕರ್ ಕಾಲ ಅದಾಗಿತ್ತು. ಧೋನಿ ನಾಯಕರಾಗಿದ್ದರು. ಸೆಹವಾಗ್, ಗಂಭೀರ್, ದ್ರಾವಿಡ್, ಲಕ್ಷ್ಮಣ್, ಹರ್ಭಜನ್ ಮೊದಲಾದ ತಾರಾ ಆಟಗಾರರಿದ್ದ ತಂಡವಾಗಿತ್ತು. ಅಲ್ಲಿ ಭಾರತ ಇನ್ನಿಂಗ್ಸ್ ಸೋಲನುಭವಿಸಿತ್ತು. ಆತಿಥೇಯರ ನಾಲ್ಕೇ ವಿಕೆಟ್ ಕೀಳಲು ಸಾಧ್ಯವಾಗಿತ್ತು. ಉನಾದ್ಕತ್‌ಗೆ ಯಾವುದೇ ಯಶಸ್ಸು ಸಿಕ್ಕಿರಲಿಲ್ಲ.
ಮತ್ತೊಂದು ಉಲ್ಲೇಖನೀಯ ಸಂಗತಿಯೆಂದರೆ, ಉನಾದ್ಕತ್ ಆಡಿದ್ದ 2010ರ ತಂಡದಲ್ಲಿದ್ದ ಆಟಗಾರರೆಲ್ಲರೂ ಈಗ ನಿವೃತ್ತರಾಗಿದ್ದಾರೆ. ಅಂದಿನ ದಕ್ಷಿಣ ಆಫ್ರಿಕಾ ತಂಡ ಕೂಡ ಸಂಪೂರ್ಣ ಬದಲಾಗಿದೆ. ಇಂಥ ಹೊತ್ತಿನಲ್ಲಿ ಜೈದೇವ್ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ!