ನನ್ನ ಎರಡನೇ ತರಗತಿ ಅರ್ಧ ಮುಗಿಯುವ ಹೊತ್ತಿಗೆ ಸರ್ ನಮ್ಮ ಊರನ್ನು ಬಿಟ್ಟು ಹೊರಟು ನಿಂತಿದ್ದರು. ಯಾರೋ ಸರ್‌ಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದು ಬೆದರಿಸಿದ್ದರು. ಆ ಅನಿರೀಕ್ಷಿತ ಆಕ್ರಮಣಕ್ಕೆ ಹೆದರಿದ್ದ ಅವರು, ಅಂಜಿಕೆಯಿಂದ ರಾತ್ರೋ ರಾತ್ರಿ ಊರಿಗೆ ಹೊರಟು ನಿಂತಿದ್ದರು. ಊರಿಗೆ ಊರೇ ಅವರನ್ನು ಕಳುಹಿಸಲು ಬಂದಿತ್ತು…
ಸೋಗೆ ಚಪ್ಪರದ ಮಣ್ಣಿನ ಶಾಲೆಯಲ್ಲಿ ನನ್ನ ಒಂದನೇ ಕ್ಲಾಸ್ ಪ್ರಾರಂಭವಾಗಿದ್ದು. “ಸ.ಕಿ.ಪ್ರಾ ಶಾಲೆ, ಜಕ್ಕೊಳ್ಳಿ’ ಎಂಬ ತಗಡಿನ ಬೋರ್ಡ್ ತೂಗಿ ಬಿಡದಿದ್ದರೆ, ಅದನ್ನು ಶಾಲೆ ಎಂದು ಗುರುತಿಸುವುದೇ ಕಷ್ಟವಿತ್ತು. 11 ವಿದ್ಯಾರ್ಥಿಗಳಿದ್ದ, ಐದನೇ ಕ್ಲಾಸಿನವರೆಗಿನ ಸಣ್ಣ ಶಾಲೆ. ನನ್ನಕ್ಕ ನನಗಿಂತ ಮೂರು ವರ್ಷ ದೊಡ್ಡವಳು. ಅವಳೂ ಅದೇ ಶಾಲೆಯಲ್ಲಿ ಓದುತ್ತಿದ್ದಳು. ನನಗೆ “ಅ’ದಿಂದ “ಎ’ವರೆಗೆ ಕಲಿಸಿದ್ದು ಅಜ್ಜ. “ಏ’ದಿಂದ ಸುರೇಶ್ ಸರ್ ಬಳಿ ಪ್ರಾರಂಭವಾದ ಕಲಿಕೆ, ಎರಡನೇ ತರಗತಿಯ ಕೊನೆಯಲ್ಲಿ ಅಪ್ಪನ ಹೆಸರನ್ನು ಇಂಗ್ಲಿಷ್‌ನಲ್ಲಿ ಅರ್ಧ ಬರೆಯಲು ಕಲಿಯುವಲ್ಲಿಗೆ ಅಂತ್ಯವಾಗಿತ್ತು. ಅಪ್ಪನ “ರಾಮಕೃಷ್ಣ’ ಹೆಸರಲ್ಲಿ, ರಾಮ ಎಂದು ಇಂಗ್ಲಿಷ್‌ನಲ್ಲಿ ಬರೆಯುವುದನ್ನು ಕಲಿತಿದ್ದು ಎರಡನೇ ತರಗತಿಯಲ್ಲಾದರೆ, ಕೃಷ್ಣ ಎಂದು ಬರೆಯಲು ಕಲಿತಿದ್ದು ಆರನೇ ತರಗತಿಯಲ್ಲಿ.
ನನಗೆ ಸುರೇಶ್ ಸರ್ ಎಂದರೆ ಬಹಳ ಇಷ್ಟ. ಅದಕ್ಕಿಂತ ಜಾಸ್ತಿ ಭಯ. ಪಠ್ಯದ ವಿಷಯದಲ್ಲಿ ಶಿಸ್ತು ಇಲ್ಲದಿದ್ದರೆ ಅವರಿಂದ ಚೆನ್ನಾಗಿ ಬರೆ ಬೀಳುತ್ತಿತ್ತು. ಶಾಲೆ ಮುಗಿಯಲು ಒಂದು ತಾಸು ಮೊದಲು, ದಿನಾ ಒಬ್ಬೊಬ್ಬರು ಮಗ್ಗಿ ಬಾಯಿಪಾಠ ಹೇಳಿಕೊಡಬೇಕಿತ್ತು. ನನ್ನ ಪಾಳಿಯ ದಿನ, ಪ್ರತಿಸಲವೂ ತಪ್ಪು ಹೇಳಿ, ಹಸಿರು ಹಗ್ಗದಲ್ಲಿ ಹೊಡೆತ ತಿನ್ನುತ್ತಿದ್ದೆ. ಅಕ್ಕನ ಪುಸ್ತಕದ ಮಂತ್ರಿ ಪಾಠದ ಹಾಳೆ ಹರಿದಾಗಂತೂ ಬಿಸಿಲಲ್ಲಿ ಎರಡು ತಾಸು ನಿಲ್ಲಿಸಿದ್ದರು. ಪುಸ್ತಕಕ್ಕೆ ಎಷ್ಟು ಸಾರಿ ಬೈಂಡ್ ಹಾಕಿಕೊಟ್ಟರೂ ಅದನ್ನು ಕಿತ್ತುಕೊಂಡು ಕಿವಿ ಹಿಂಡಿಸಿಕೊಳ್ಳುತ್ತಿದ್ದೆ. ಅಕ್ಕನಿಗೆ “ಅಕ್ಕ’ ಎನ್ನದೇ, ಹೆಸರಿಟ್ಟು ಕರೆದದ್ದಕ್ಕೆ ಸರಿಯಾಗಿ ಬೈಸಿಕೊಂಡ ಮೇಲೆ “ಅಕ್ಕ’ ಎನ್ನಲು ರೂಢಿ ಮಾಡಿಕೊಂಡೆ. ಪ್ರತಿ ಶನಿವಾರ ಸಾಲಾಗಿ ಬಂದು ಕೈ ಬೆರಳಿನ ಲಟ್ಟಿಗೆ ತೆಗೆಸಿಕೊಳ್ಳಬೇಕಿತ್ತು. ಶನಿವಾರವೆಂದರೆ ನನಗೆ ಯಮಯಾತನೆ. ಗುರುವಾರ, ಸರ್ ಎಲ್ಲರ ಕೈ ಉಗುರು ನೋಡುತ್ತಿದ್ದರು. ಉಗುರು ಬಿಟ್ಟರೆ ಸ್ಕೇಲ್‌ನಲ್ಲಿ ಕೈ ಮೇಲೆ ಹೊಡೆತ ಬೀಳುತ್ತಿತ್ತು. ಒಮ್ಮೆ ನನ್ನ ಉಗುರು ತುಂಬ ಕೆಸರಾಗಿತ್ತು. ಹಿಂದಿನ ದಿನ ಗದ್ದೆಯಲ್ಲಿ ಮಣ್ಣಾಟ ಆಡಿದ ಕುರುಹು ಉಗುರಿನಲ್ಲಿ ಉಳಿದಿತ್ತು. ಅವತ್ತು ಸರ್ ನನಗೆ ಹೊಡೆಯದೆ, ಅಲ್ಲೇ ಇದ್ದ ಅವರ ಮನೆಗೆ ಕರೆದುಕೊಂಡು ಹೋಗಿ ಸೋಪ್ ಹಾಕಿ ಕೈ ತೊಳೆಸಿ, ಮತ್ತೂಮ್ಮೆ ಹೀಗೆ ಕೊಳೆ ಆದರೆ ಹೊಡೆತ ಬೀಳುತ್ತದೆಂದು ಎಚ್ಚರಿಸಿದ್ದರು. ಸಮಯಕ್ಕೆ ಸರಿಯಾಗಿ ಬರದಿದ್ದರೆ ಒಂಟಿ ಕಾಲಲ್ಲಿ ನಿಲ್ಲಬೇಕಿತ್ತು.
ದಿನವೂ “ನಾನು ಮಾಡಿದ ಒಂದು ಒಳ್ಳೆಯ ಕೆಲಸ’ದ ಕುರಿತು ಬರೆಯಬೇಕಿತ್ತು. ಮೇಲೆ ದೇವರು ನೋಡುತ್ತಿರುತ್ತಾನೆ. ಸುಳ್ಳು ಬರೆದರೆ ಶಾಪ ಕೊಡುತ್ತಾನೆಂದು ಹೆದರಿಸಿದ್ದರಿಂದ, ರಸ್ತೆಯಲ್ಲಿದ್ದ ಕಲ್ಲನ್ನಾದರೂ ಪಕ್ಕಕ್ಕೆ ಹಾಕಿ; ನಾನು ಮಾಡಿದ ಒಳ್ಳೆಯ ಕೆಲಸವೆಂದು ಬರೆಯುತ್ತಿ¨ªೆ. ಪರೀಕ್ಷೆಯಲ್ಲಿ ಶಾಲೆಗೆ ಹೆಚ್ಚು ಅಂಕ ಪಡೆದವರಿಗೆ ಪ್ರೈಸ್ ಕೊಡುತ್ತಿದ್ದರು ಸುರೇಶ್ ಸರ್. ಒಮ್ಮೆ ಅಕ್ಕ ಹೆಚ್ಚು ಅಂಕ ಗಳಿಸಿ, ಬಣ್ಣದ ಪೆನ್ಸಿಲ್‌ಅನ್ನು ಬಹುಮಾನವಾಗಿ ಪಡೆದಳು. ಅದು ನನಗೂ ಬೇಕು ಎಂದು ಅಕ್ಕನೊಟ್ಟಿಗೆ ಜಗಳವಾಡಿ, ಇಡೀ ದಿನ ಅತ್ತಿದ್ದೆ. ಮರುದಿನ ಆ ವಿಷಯ ಸರ್‌ಗೆ ಗೊತ್ತಾಗಿ, ಅಂಥದೇ ಬಣ್ಣದ ಪೆನ್ಸಿಲ್ ಕೊಟ್ಟು- ಮುಂದಿನ ಪರೀಕ್ಷೆಯಲ್ಲಿ ನೀನು ಫಸ್ಟ್ ಬರದಿದ್ದರೆ ಇದೆಲ್ಲವನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಆ ಹೆದರಿಕೆಯಿಂದಲೇ ಪಟ್ಟಾಗಿ ಕೂತು ಓದಿ, ಚೆನ್ನಾಗಿ ಪರೀಕ್ಷೆ ಬರೆದು, ಮೂರೂ ವಿಷಯದಲ್ಲಿ ನೂರಕ್ಕೆ ನೂರು ತೆಗೆದುಕೊಂಡಿದ್ದೆ.
ಆಗಸ್ಟ್ 15, ಜನವರಿ 26 ಬಂದರೆ ಸರ್‌ಗೆ ಹಬ್ಬದ ಸಂಭ್ರಮ. ತಿಂಗಳಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮದ ತಯಾರಿ ಮಾಡಿಸುತ್ತಿದ್ದರು. ಶಾಲೆಯ ಅಂಗಳವನ್ನು ಸಗಣಿಯಿಂದ ಸಾರಿಸಬೇಕಿತ್ತು. ಇಡೀ ಶಾಲೆಗೆ ಮಾವಿನ ತೋರಣ, ಬಾಗಿಲಲ್ಲಿ ದೊಡ್ಡ ರಂಗೋಲಿ, ರಾಷ್ಟ್ರ ನಾಯಕರಿಗೆ ಹೂವಿನ ಮಾಲೆ… ಆ ದಿನ ಏಳು ಗಂಟೆಗೆ ಶಾಲೆಯಲ್ಲಿ ಇರಬೇಕಾಗುತ್ತಿತ್ತು. ಪರಿಸರ ದಿನಾಚರಣೆಯಂದು, ಶಾಲೆಯ ಸುತ್ತ ಅಕೇಶಿಯಾ ಗಿಡ, ಹೂವಿನ ಗಿಡ ನೆಡಿಸಿದ್ದರು. ಪ್ರತಿದಿನ ನಮ್ಮೊಂದಿಗೆ ಸರ್ ಕೂಡ ಆ ಗಿಡಗಳಿಗೆ ನೀರು ಹಾಕುತ್ತಿದ್ದರು.
ನನ್ನ ಎರಡನೇ ತರಗತಿ ಅರ್ಧ ಮುಗಿಯುವ ಹೊತ್ತಿಗೆ ಸರ್ ನಮ್ಮ ಊರನ್ನು ಬಿಟ್ಟು ಹೊರಟು ನಿಂತಿದ್ದರು. ಆದರೆ ಅವರಿಂದ ಇನ್ನೂ ಬಹಳಷ್ಟು ಕಲಿಯುವುದಿತ್ತು. ಯಾರೋ ಸರ್‌ಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದು ಬೆದರಿಸಿದ್ದರು. ಆ ಅನಿರೀಕ್ಷಿತ ಆಕ್ರಮಣಕ್ಕೆ ಹೆದರಿದ್ದ ಅವರು, ಅಂಜಿಕೆಯಿಂದ ರಾತ್ರೋ ರಾತ್ರಿ ಊರಿಗೆ ಹೊರಟು ನಿಂತಿದ್ದರು. ಊರಿಗೆ ಊರೇ ಅವರನ್ನು ಕಳುಹಿಸಲು ಬಂದಿತ್ತು. ನನ್ನ ಅಕ್ಕನ ತಲೆ ಮುಟ್ಟಿ, “ಚೆನ್ನಾಗಿ ಓದ್ರಿ, ನಿಮ್ಮನ್ನ ನೋಡೋಕೆ ಆಗಾಗಾ ಬರ್ತೀನಿ’ ಎಂದು ಕೈ ಬೀಸಿ ಹೊರಟು ಹೋದರು.
ಆದರೆ, ಹಾಗೆ ಹೊರಟು ಹೋದವರು ಒಂದು ದಿನವೂ ಬರಲೇ ಇಲ್ಲ. ಹದಿನೈದು ವರ್ಷ ಆಯ್ತು. ಅವರು ಶಾಲೆಗೆ ಹಚ್ಚಿದ ಬಣ್ಣ ಮಾಸಿದೆ. ಗ್ಯಾದರಿಂಗ್, ಪ್ರತಿಭಾ ಕಾರಂಜಿ, ನ್ಪೋರ್ಟ್ಸ್, ಪಿಕ್‌ನಿಕ್ ಎಲ್ಲವೂ ಸುರೇಶ್ ಸರ್ ಕಾಲಕ್ಕೇ ಮುಗಿದುಹೋಯಿತು. ಈಗ ಅಕೇಶಿಯಾ ಗಿಡಗಳು ಮರವಾಗಿವೆ. ಗಿಡಗಳು ಹೂವು ಬಿಡುತ್ತಿವೆ. ಆದರೆ, ಅವರು ಹೋದ ಮೇಲೆ ಶಾಲೆಗೆ ಜೀವವಿದೆ ಅನಿಸುತ್ತಲೇ ಇಲ್ಲ…
ಕಾವ್ಯಾ ಜಕ್ಕೊಳ್ಳಿ