ಮೈಸೂರು: ಸರ್ಕಾರಿ ಬಂಗಲೆ “ಕಾವೇರಿ’ ನಿವಾಸದಲ್ಲಿ ತಮ್ಮ ಹೆಸರಿದ್ದ ಬೋರ್ಡ್ ತೆರವುಗೊಳಿಸಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿ, “ಬೋರ್ಡ್ ತೆರೆವುಗೊಳಿಸುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಭಾನುವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಕಾವೇರಿಯಲ್ಲಿ ವಾಸವಾಗಿದ್ದೇನೆ. ಈಗ ಪ್ರತಿಪಕ್ಷ ನಾಯಕನಾಗಿರುವುದರಿಂದ ಅದೇ ಮನೆಯನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಈಗ ನನ್ನ ಹೆಸರಿವ ಬೋರ್ಡ್ ತೆರವುಗೊಳಿಸಿರುವುದು ಏಕೆ ಎಂದು ಗೊತ್ತಿಲ್ಲ. ಒಂದು ವೇಳೆ ಹೇಳಿದ್ದರೆ ಮನೆ ಬಿಟ್ಟುಕೊಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದರು.
ಅದು ಸರ್ಕಾರಿ ಬಂಗಲೆಯಾಗಿರುವುದರಿಂದ ಯಾವತ್ತಿದ್ದರೂ ಖಾಲಿ ಮಾಡಲೇ ಬೇಕು. ಹಿಂದೆ ಕೆ.ಜೆ. ಜಾರ್ಚ್ ಅವರಿಗೆ “ಕಾವೇರಿ’ಯನ್ನು ನಿಗದಿ ಪಡಿಸಲಾಗಿತ್ತು. ಆದರೆ ಮುಖ್ಯಮಂತ್ರಿಯಾಗಿ ಅದೇ ಬಂಗಲೆಯಲ್ಲಿ ಇದ್ದುದ್ದರಿಂದ ನಾನೇ ಇರುತ್ತೇನೆ ಎಂದು ಜಾರ್ಜ್ ಅವರಲ್ಲಿ ಕೇಳಿದ್ದರಿಂದ ಅವರು ಬಂದಿರಲಿಲ್ಲ. ಹಾಗಾಗಿ ಅದೇ ಮನೆಯಲ್ಲಿ ವಾಸವಿದ್ದೇನೆ ಎಂದು ಹೇಳಿದರು.
ಸುತ್ತೂರು ಮಠದ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬಂದಾಗ ನಾನು ಭಾಗವಹಿಸಬೇಕಾಗಿತ್ತು. ಆದರೆ ಬೇರೆ ಕಾರ್ಯಕ್ರಮದಲ್ಲಿ ಅನಿವಾರ್ಯವಾಗಿ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಸ್ವಾಮೀಜಿ ಆಶೀರ್ವಾದ ಪಡೆದಿದ್ದು, ಬೇರೇನು ವಿಶೇಷವಿಲ್ಲ ಎಂದು ತಿಳಿಸಿದರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್‌ಸೇಠ್, ಯತೀಂದ್ರ, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಮಾಜಿ ಶಾಸಕ ವಾಸು ಸೇರಿದಂತೆ ಇತರರು ಹಾಜರಿದ್ದರು.