Advertisement

ಗ್ರಾಮದ ಅಭಿವೃದ್ಧಿ ಬಯಸದ ಕಾರ್ಯದರ್ಶಿ ಬೇಡ

01:05 AM Sep 27, 2019 | Team Udayavani |

ಉಪ್ಪಿನಂಗಡಿ: ಇತ್ತೀಚೆಗಷ್ಟೇ ಗೋಳಿತೊಟ್ಟು ಗ್ರಾ.ಪಂ.ಗೆ ವರ್ಗಾವಣೆಗೊಂಡಿದ್ದ ಕಾರ್ಯದರ್ಶಿ ಚಂದ್ರಾವತಿ ಅವರನ್ನು ಮತ್ತೆ 34 ನೆಕ್ಕಿಲಾಡಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸುವ ರಾಜಕೀಯ ಹುನ್ನಾರ ನಡೆಯುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಸಹಕರಿಸದ ಅವರನ್ನು ರಾಜಕೀಯ ಒತ್ತಡಕ್ಕೆ ಮಣಿದು ಮತ್ತೆ ಇಲ್ಲಿಗೆ ವರ್ಗಾಯಿಸಿದರೆ ಗ್ರಾ.ಪಂ.ನ ಕಾಂಗ್ರೆಸ್‌ ಬೆಂಬಲಿತ ಎಲ್ಲ ಏಳು ಸದಸ್ಯರು ಗ್ರಾಮಸ್ಥರೊಂದಿಗೆ ಸೇರಿಕೊಂಡು ಹೋರಾಟ ರೂಪಿಸಲಿದ್ದು, ಅಗತ್ಯ ಬಿದ್ದಲ್ಲಿ ರಾಜೀನಾಮೆ ನೀಡಡಲೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.

Advertisement

ಪುತ್ತೂರು ತಾ.ಪಂ. ಇಒ ನವೀನ್‌ ಭಂಡಾರಿ ಅವರಿಗೆ ಸೆ. 26ರಂದು ಮನವಿ ನೀಡಿದ 34 ನೆಕ್ಕಿಲಾಡಿ ಗ್ರಾ.ಪಂ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು, ಚಂದ್ರಾವತಿ ಸುಮಾರು ಒಂದೂವರೆ ವರ್ಷ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಒ, ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಗ್ರಾಮದ ಅಭಿವೃದ್ಧಿಗೆ ಚಿಂತಿಸುವ ಬದಲು ರಾಜಕೀಯ ನಡೆಸಿದ್ದೇ ಹೆಚ್ಚು. ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಅಡ್ಡಗಾಲು ಹಾಕುತ್ತಿದ್ದರು. ಗ್ರಾಮಸಭೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಕಡತಕ್ಕಷ್ಟೇ ಸೀಮಿತವಾಗಿತ್ತು. ಸಾರ್ವಜನಿಕರ ಅರ್ಜಿಗಳನ್ನು ಸರಿಯಾದ ಸಮಯಕ್ಕೆ ವಿಲೇ ಮಾಡದೇ ಜನಸಾಮಾನ್ಯರನ್ನು ವಿನಾಕಾರಣ ಅಲೆದಾಡಿಸುತ್ತಿದ್ದರು ಎಂಬ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.

2018-19ರ ಮಾರ್ಚ್‌ ಅಂತ್ಯದವರೆಗೆ ಲಕ್ಷಾಂತರ ರೂ. ನೀರಿನ ಬಿಲ್‌ ವಸೂಲಾತಿಗೆ ಬಾಕಿ ಇದೆ. ಇದು ಇತ್ತೀಚೆಗಷ್ಟೇ ಸದಸ್ಯರ ಗಮನಕ್ಕೆ ಬಂದಿದೆ. ಈ ಅವಧಿಯಲ್ಲಿ ಚಂದ್ರಾವತಿ ಕಾರ್ಯದರ್ಶಿಯಾಗಿದ್ದರು. ಇದರಲ್ಲಿ ಕರ್ತವ್ಯ ಲೋಪವೂ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಸುಮಾರು ಒಂದೂವರೆ ವರ್ಷದಿಂದ ನೆಕ್ಕಿಲಾಡಿ ಗ್ರಾಮದಲ್ಲಿ ಬೀದಿ ದೀಪಗಳೇ ಇರಲಿಲ್ಲ. ಮಳೆಗಾಲಕ್ಕೆ ಪೂರ್ವಭಾವಿಯಾಗಿ ಆಗಬೇಕಿದ್ದ ಚರಂಡಿ ನಿರ್ಮಾಣ, ನಿರ್ವಹಣೆ ಕಾಮಗಾರಿ ಈ ಬಾರಿ ನಡೆಯಲೇ ಇಲ್ಲ. ಹಲವು ಬಾರಿ ಇದರ ಬಗ್ಗೆ ಪ್ರಸ್ತಾವಿಸಿದ್ದರೂ, ಅಧಿಕಾರಿ ವರ್ಗ ಅಗತ್ಯ ಕಾಮಗಾರಿ ನಡೆಸಲೇ ಇಲ್ಲ. ಚಂದ್ರಾವತಿ ಜುಲೈನಲ್ಲಿ ಗೋಳಿತೊಟ್ಟು ಗ್ರಾ.ಪಂ.ಗೆ ವರ್ಗಾವಣೆಯಾಗಿದ್ದರು. ಬಳಿಕ ದಾರಿ ದೀಪ ಅಳವಡಿಕೆ, ಸ್ವತ್ಛತಾ ಕಾಮಗಾರಿ ನಡೆದಿದೆ. ಇಲ್ಲಿನ ಕಾರ್ಯದರ್ಶಿಯಾಗಿದ್ದ ರಾಮಣ್ಣ ಇತ್ತೀಚೆಗೆ ನಿಧನರಾಗಿದ್ದು, ಅವರ ಸ್ಥಾನಕ್ಕೆ ಶಿರಾಡಿ ಗ್ರಾ.ಪಂ.ನ ಕಾರ್ಯದರ್ಶಿ ಶಾರದಾ ಅವರನ್ನು ನಿಯೋಜಿಸಲಾಗಿದೆ. ಈ ನಡುವೆ ಕೆಲವರು ರಾಜಕೀಯ ಒತ್ತಡ ತಂದು ಚಂದ್ರಾವತಿ ಅವರನ್ನು 34 ನೆಕ್ಕಿಲಾಡಿ ಗ್ರಾ.ಪಂ.ಗೆ ಕಾರ್ಯದರ್ಶಿಯನ್ನಾಗಿ ಮರು ನಿಯುಕ್ತಿಗೊಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಗ್ರಾಮದ ಅಭಿವೃದ್ಧಿ ಬಯಸದ ಕಾರ್ಯದರ್ಶಿ ನಮ್ಮ ಗ್ರಾ.ಪಂ.ಗೆ ಬೇಡ. ಇಲ್ಲಿಗೆ ಓರ್ವ ದಕ್ಷ, ಭ್ರಷ್ಟಾಚಾರರಹಿತ, ಅಭಿವೃದ್ಧಿ ಬಗ್ಗೆ ಇಚ್ಛಾಶಕ್ತಿಯಿರುವ ಕಾರ್ಯದರ್ಶಿ ಬೇಕು. ಒಂದು ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಚಂದ್ರಾವತಿ ಅವರನ್ನೇ ಮರು ನಿಯುಕ್ತಿಗೊಳಿಸಿದರೆ ಉಗ್ರ ಹೋರಾಟ ರೂಪಿಸುತ್ತೇವೆ. ಅಗತ್ಯ ಬಿದ್ದಲ್ಲಿ ರಾಜೀನಾಮೆ ನೀಡಲು ಬದ್ಧ ಎಂದು ಎಚ್ಚರಿಸಿದ್ದಾರೆ.ಮನವಿ ಸಲ್ಲಿಸಿದ ನಿಯೋಗದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ.ಉಪಾಧ್ಯಕ್ಷ ಅಸ್ಕರ್‌ ಅಲಿ, ಸದಸ್ಯರಾದ ಬಾಬು ಮೂಲ್ಯ, ಮೈಕಲ್‌ ವೇಗಸ್‌, ಸತ್ಯಾವತಿ, ಅನಿ ಮಿನೇಜಸ್‌, ಯಮುನಾ, ಮಾಜಿ ಅಧ್ಯಕ್ಷೆ ಅಮೀತಾ ಹರೀಶ್‌ ಇದ್ದರು.

Advertisement

ಗ್ರಾಮಸ್ಥರಿಂದಲೂ ಮನವಿ
ಚಂದ್ರಾವತಿ ಅವರನ್ನು ಮತ್ತೆ 34 ನೆಕ್ಕಿಲಾಡಿಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಬಾರದು. ಗ್ರಾಮದ ಅಭಿವೃದ್ಧಿ ಬಯಸದ ಕಾರ್ಯದರ್ಶಿ ಬೇಡ ಎಂದು ಗ್ರಾಮಸ್ಥರೂ ಎಚ್ಚರಿಸಿದ್ದಾರೆ. ಗ್ರಾಮಸ್ಥರ ಪರವಾಗಿ 52 ಸಹಿಗಳನ್ನು ಸಂಗ್ರಹಿಸಿ ಮನವಿ ನೀಡಿದ ನಿಯೋಗದಲ್ಲಿ “ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಅಬ್ದುರ್ರಹ್ಮಾನ್‌ ಯುನಿಕ್‌, ಅಮಿತಾ ಹರೀಶ್‌, ಖಲಂದರ್‌ ಶಾಫಿ, ಅಶ್ರಫ್ ಬಿ.ಟಿ. ನೆಕ್ಕಿಲಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next