ಗೆಲುವು ಎಲ್ಲರಿಗೂ ಅಗತ್ಯ. ಅದಕ್ಕಿಂತಲೂ ಹೆಚ್ಚಾಗಿ ಗೆಲುವು ಆತ್ಮ ವಿಶ್ವಾಸವನ್ನು ನೀಡುತ್ತದೆ. ಅದು ಹಾಗೇ ಅಲ್ವೇ.. ಮಾತೊಂದರಂತೆ ಗೆದ್ದ ಎತ್ತಿನ ಬಾಲ ಹಿಡಿಯಬೇಕು ಎಂಬುದು ಜಗದ ನಿಯಮ. ಹಾಗೇ ಗೆಲುವಿನ ಓಟ ಜೀವನದಲ್ಲಿ ನಿರಂತರವಾಗಿರುತ್ತದೆ. ಮಗುವೊಂದು ಶಾಲೆಗೆ ಹೋಗುವಾಗ ಸಣ್ಣ ಸಣ್ಣ ವಿಷಯಗಳಿಗೆ ಸಿಕ್ಕಿದ ಗೆಲುವಿನಿಂದ ಹಿಡಿದು ಉದ್ಯೋಗದಲ್ಲಿ ಭರ್ತಿ ಹೊಂದುವುದು ಕೂಡಾ ಗೆಲುವಿನ ಲೆಕ್ಕಾಚಾರವೇ.
ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಯಾವತ್ತಾದರೂ ಒಮ್ಮೆ ಜೀವನದಲ್ಲಿ ಗೆಲ್ಲಲೇ ಬೇಕೆಂಬ ಹಠವಿರುತ್ತದೆ. ಅದಕ್ಕಾಗಿ ಸಣ್ಣಸಣ್ಣ ಸೋಲುಗಳನ್ನು ಅವನು ನಿಲ್ಯìಕ್ಷಿಸುತ್ತಾ ಬರುತ್ತಾನೆ. ಒಮ್ಮೆ ಗೆದ್ದಾಗ ಹಿಂದೆ ಅನುಭವಿಸಿದ ಸೋಲುಗಳೆಲ್ಲ ಆತನಿಗೆ ನಗಣ್ಯವಾಗಿ ತೋರುತ್ತದೆ. ಇದು ಸಂತೋಷವೇ ಆದರೆ ಗೆಲುವಿನ ಓಟದೆಡೆಯಲ್ಲಿ ಉಂಟಾಗುವ ಮರೆವು ಮಾತ್ರ ಎಂದಿಗೂ ಆಪತ್ತು ಉಂಟು ಮಾಡುವಂತದ್ದು ಆಗಿದೆ. ಅದು ಕೇವಲ ಮರೆವಲ್ಲ ಅಹಂಕಾರದ ಮತ್ತೂಂದು ರೂಪ. ಜೀವನ ಮತ್ತು ಸೋಲುಗಳಲ್ಲಿ ನಮ್ಮ ಜತೆಗಿದ್ದವರನ್ನು ಗೆದ್ದಾಗಲೂ ಜತೆಗೆ ಕರೆದುಕೊಂಡು ಹೋಗಬೇಕು. ಅಥವಾ ನಮ್ಮ ನೋವಿಗೆ ಸಾಂತ್ವನ ಹೇಳಿದವರನ್ನು ನೋವು ಮರೆತಾಗ ಮರೆತು ಬಿಡಬಾರದು.
ಈ ಮರೆವು ಸ್ವಾಭಾವಿಕವಲ್ಲ. ಅದರ ಹಿಂದೆ ನಮ್ಮ ಮನಃ ಸ್ಥಿತಿ ಅಡಗಿರುತ್ತದೆ. ಗೆಲುವು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರ ಜತೆಗೆ ನಮ್ಮ ಮನೋಬಲವನ್ನೂ ಹೆಚ್ಚಿಸುತ್ತದೆ. ಜತೆಗೆ ಯಾರೂ ಇಲ್ಲದಿದ್ದರೂ ನಾವು ಬದುಕು ಬಲ್ಲೆವೆಂಬ ಯೋಚನೆ ಯಾವಾಗ ನಮ್ಮ ತಲೆಯೊಳಗೆ ಹೊಕ್ಕುತ್ತದೆಯೋ ಅಲ್ಲಿಗೆ ನಮ್ಮ ಸ್ವಭಾವವೂ ಬದಲಾಗುತ್ತದೆ. ಎಲ್ಲರನ್ನು ಕಡೆಗಣಿಸಲು ಆರಂಭಿಸುತ್ತೇವೆ. ಸ್ನೇಹ, ಪ್ರೀತಿಗೆ ಅಲ್ಲಿ ಜಾಗವಿರುವುದಿಲ್ಲ. ಹೀಗೆ ಗೆಲುವಿನ ಪಯಣ ಒಂಟಿಯಾಗುತ್ತದೆ.
ಒಂಟಿ ಪಯಣ ಯಾವತ್ತಿದ್ದರೂ ಉತ್ತಮವೇ. ಆದರೆ ಕೆಲವೊಂದು ಬಾರಿ ಜೀವನ ಸಾರ್ಥಕತೆಯನ್ನು ಪಡೆಯಬೇಕಾದರೆ ಖುಷಿ ಹಂಚಿಕೊಳ್ಳಲು ನಮ್ಮ ಜತೆ ಯಾರಾದರೂ ಇರಲೇ ಬೇಕು. ಅದು ರಕ್ತ ಸಂಬಂಧವೇ ಆಗಬೇಕೆಂದಿಲ್ಲ. ನಮ್ಮ ಹೆಸರು ಕೇಳಿ ಖುಷಿ ಪಡುವ ಒಂದೆರಡು ಸ್ನೇಹಿತರಿದ್ದರೆ ಸಾಕು. ಅಂತೂ ಯಾರೂ ಇಲ್ಲದಿದ್ದರೆ ಮುಂದೊಂದು ದಿನ ಗೆಲುವು ನೀರಸವಾಗಿ ಬಿಡುತ್ತದೆ. ಗೆಲುವಿನೆಡೆಗಿನ ಓಟದಲ್ಲಿ ನಮ್ಮವರನ್ನೂ ಕರೆದುಕೊಂಡು ಓಡೋಣ.. ಆಗ ಸೋಲೇ ಆದರೂ ಹಂಚಿಕೊಳ್ಳಲು ಜತೆಗೆ ಜನರಿರುತ್ತಾರೆ.
-ಸುಶ್ಮಿತಾ ಶೆಟ್ಟಿ ಸಿರಿಬಾಗಿಲು