Advertisement

ರಾಜಭವನ- ಸರಕಾರದ ನಡುವೆ ಸಮನ್ವಯ ಇರಲಿ

11:24 PM Nov 08, 2022 | Team Udayavani |

ದೇಶದ ಕೆಲವು ರಾಜ್ಯಗಳಲ್ಲಿ, ಅದರಲ್ಲೂ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಳೆದ ಕೆಲವು ಸಮಯಗಳಿಂದ ಸರಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಅದರಲ್ಲೂ ದಕ್ಷಿಣದ ಕೇರಳ, ತಮಿಳುನಾಡು, ತೆಲಂಗಾಣಗಳಲ್ಲಿ ರಾಜಭವನ ಮತ್ತು ಸರಕಾರದ ನಡುವೆ ಗುದ್ದಾಟ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

Advertisement

ಸಾಮಾನ್ಯವಾಗಿ ಕೇಂದ್ರ ಸರಕಾರದ ಪ್ರತಿನಿಧಿ ಎಂಬಂತೆ ನೇಮಕ ಗೊಳ್ಳುವ ರಾಜ್ಯಪಾಲರು ಆಯಾ ರಾಜ್ಯಗಳ ಪ್ರಥಮ ಪ್ರಜೆ ಆಗಿರುತ್ತಾರೆ. ರಾಜ್ಯಪಾಲರು ಮೂಲತಃ ಯಾವುದೇ ಪಕ್ಷಕ್ಕೆ ಸೇರಿದ್ದರೂ ತಮ್ಮ ಪಕ್ಷದ ಸಿದ್ಧಾಂತವನ್ನು ಮರೆತು ಸಾಂವಿಧಾನಿಕ ಹುದ್ದೆಯನ್ನು ನಿಭಾಯಿಸುತ್ತಾರೆ ಮತ್ತು ನಿಭಾಯಿಸಬೇಕು ಎಂದು ಸಂವಿಧಾನ ನಿರೀಕ್ಷಿಸುತ್ತದೆ. ಜತೆಗೆ ರಾಜ್ಯ ಸರಕಾರಗಳೂ ಸಹ ರಾಜ್ಯಪಾಲರ ಜತೆ ಸಮನ್ವಯತೆಯಿಂದ ಇರಬೇಕಾಗುತ್ತದೆ.

ತಮಿಳುಸೈ ಸುಂದರ‌ ರಾಜನ್‌ ರಾಜ್ಯಪಾಲರಾಗಿರುವ ತೆಲಂಗಾಣದ ವಿವಿಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡುವ ಮಸೂದೆಯ ಬಗ್ಗೆ ಸರಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ನಡೆದಿದೆ. 3 ವರ್ಷಗಳ ಹಿಂದೆ ಸಹಿಗಾಗಿ ಕಳುಹಿಸಿರುವ ಮಸೂದೆಯನ್ನು ವಾಪಸ್‌ ಕಳಿಸಿಲ್ಲ ಎಂಬುದು ಕೆಸಿಆರ್‌ ಸರಕಾರದ ಆರೋಪ. ರಾಜ್ಯಪಾಲರು ನೇಮಕಾತಿ ಮಸೂದೆಗೆ ಒಪ್ಪಿಗೆ ನೀಡಲು ವಿಳಂಬ ಧೋರಣೆ ಮಾಡು ತ್ತಿದ್ದಾರೆ ಎಂದು ವಿದ್ಯಾರ್ಥಿಗಳೇ ಪ್ರತಿಭಟನೆ ನಡೆಸಿದ್ದರು. ಹಾಗೆಯೇ ತಮಿಳುನಾಡು ಮೂಲದ ತಮಿಳುಸೈ ಅವರು ತಮಿಳುನಾಡು ರಾಜಕೀಯದಲ್ಲಿ ಮೂಗುತೂರಿಸುತ್ತಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ. ತಮಿಳುನಾಡಿನ ರಾಜ್ಯಪಾಲರಾಗಿರುವ ಆರ್‌.ಎನ್‌.ರವಿ ವಿರುದ್ಧವೂ ಡಿಎಂಕೆ ಆರೋಪಿಸಿದ್ದು, 20 ಮಸೂದೆಗಳನ್ನು ರಾಜ್ಯಪಾಲರು ಹಾಗೆಯೇ ಇರಿಸಿಕೊಂಡಿದ್ದಾರೆ ಎಂದಿದೆ. ಅಲ್ಲದೆ ಇವರನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಮತ್ತು ಎಲ್‌ಡಿಎಫ್ ಸರಕಾರದ ನಡುವಣ ಜಗಳ ಗುಟ್ಟಾಗಿ ಉಳಿದಿಲ್ಲ. ಲೋಕಾಯುಕ್ತ ಮಸೂದೆ, ವಿಶ್ವವಿದ್ಯಾನಿಲಯ ಸುಧಾರಣೆ ಮಸೂದೆ ಸಹಿತ ಕೆಲವು ಮಸೂದೆಗಳನ್ನು ರಾಜ್ಯಪಾಲರು ಅಂಗೀಕರಿಸಿಲ್ಲ. ಈ ನಡುವೆ ವಿವಿಗಳಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಮಸೂದೆ ಸಹ ರಾಜಭವನದಲ್ಲಿ ಸ್ಥಗಿತಗೊಂಡಿದೆ. ಪಿಣರಾಯಿ ಸರಕಾರದ ಯಾವುದೇ “ಅಕ್ರಮ ನೀತಿ’ಯನ್ನು ಅನುಮೋದಿಸುವುದಿಲ್ಲ ಎಂದು ರಾಜ್ಯಪಾಲರು ಹೇಳುತ್ತಾರೆ. ಈ ಹಿಂದೆ ಪಶ್ಚಿಮ ಬಂಗಾಲದಲ್ಲೂ ಇಂಥದ್ದೇ ಬೆಳವಣಿಗೆ ನಡೆದಿತ್ತು. ಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ರಾಜ್ಯ ಸರಕಾರ ಕಿತ್ತುಕೊಂಡಿತ್ತು. ಇನ್ನೊಮ್ಮೆ ನಡುರಾತ್ರಿ ವಿಧಾನಸಭೆ ಕಲಾಪ ಕರೆಯುವ ಮೂಲಕ ರಾಜ್ಯಪಾಲರಿಗೆ ಮಮತಾ ಸರಕಾರ ಮುಜುಗರ ಉಂಟು ಮಾಡಿತ್ತು.

ರಾಜಭವನ ಮತ್ತು ರಾಜ್ಯ ಸರಕಾರದ ನಡುವೆ ಜಿದ್ದು ಮತ್ತು ಹಠಮಾರಿತನ ಪ್ರವೇಶಿಸಿದರೆ ಆಡಳಿತ ಯಂತ್ರ ಸ್ಥಗಿತಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ರಾಜಭವನಗಳು ರಾಜಕೀಯ ಕೇಂದ್ರಗಳಾಗಬಾರದು. ಜತೆಗೆ ಸರಕಾರ ನಡೆಸುತ್ತಿರುವ ರಾಜಕೀಯ ಪಕ್ಷಗಳೂ ಜಿದ್ದಿಗೆ ಇಳಿಯಬಾರದು. ಸಮನ್ವಯದಿಂದ ಕೆಲಸ ಮಾಡಿಕೊಂಡರೆ ಅದರಿಂದ ಎಲ್ಲರಿಗೂ ಕ್ಷೇಮ.

Advertisement

Udayavani is now on Telegram. Click here to join our channel and stay updated with the latest news.

Next