ಬೆಂಗಳೂರು: ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿರಬೇಕು ಎಂದು ಜೆಡಿಎಸ್ ನಾಯಕ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಕಾಲದಲ್ಲಿ ಹಣಕಾಸು ಇಲಾಖೆಗೆ ಪ್ರತ್ಯೇಕ ಮಂತ್ರಿಗಳಿದ್ದರು.
ಹಣಕಾಸು ಸಚಿವರು ಮಾರವಾಡಿಗಳ ರೀತಿ ಪ್ರತಿದಿನ ಇಲಾಖೆಯ ಆಗುಹೋಗುಗಳ ಬಗ್ಗೆ ನಿಗಾ ವಹಿಸುತ್ತಾರೆ. ಕಾನೂನು, ಹಣಕಾಸು ಹಾಗೂ ಆಡಳಿತ ಸುಧಾರಣೆ ಇಲಾಖೆ ಸರ್ಕಾರದಲ್ಲಿ ಅತ್ಯಂತ ಮಹತ್ವದ ಇಲಾಖೆಗಳು. ಹೀಗಾಗಿ, ಈ ಇಲಾಖೆಗಳಿಗೆ ಪ್ರತ್ಯೇಕ ಸಚಿವರು ಇದ್ದರೆ ಆಡಳಿತ ಉತ್ತಮವಾಗಿರುತ್ತದೆ ಎಂದು ಹೇಳಿದರು.
ವಿಶ್ವನಾಥ್ ಹೇಳಿಕೆಗೆ ಬೆಂಬಲ ಸೂಚಿಸಿರುವ ಬಿಜೆಪಿ ನಾಯಕ ಆರ್.ಅಶೋಕ್, ಹಣಕಾಸು ಇಲಾಖೆ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೇಂದ್ರದಲ್ಲಿ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರು ಇರುತ್ತಾರೆ. ಅದೇ ರೀತಿ, ಎಲ್ಲ ರಾಜ್ಯಗಳಲ್ಲಿಯೂ ಪ್ರತ್ಯೇಕ ಸಚಿವರು ಇರಬೇಕು.
ಮುಖ್ಯಮಂತ್ರಿ ಹಣಕಾಸು ಸಚಿವರಾದರೆ, ಬಜೆಟ್ ಮಂಡನೆ ನಂತರ ಮುಂದಿನ ವರ್ಷದ ಬಜೆಟ್ ಸಿದ್ದತೆಗೆ ಮಾತ್ರ ಹಣಕಾಸು ಇಲಾಖೆಯ ಬಗ್ಗೆ ಆಲೋಚನೆ ಮಾಡುತ್ತಾರೆ. ಹೀಗಾಗಿ, ಎಚ್.ವಿಶ್ವನಾಥ್ ಅವರ ಸಲಹೆ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಇನ್ನು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಆಶೋಕ್, ಗ್ರಾಮ ವಾಸ್ತವ್ಯ ಕುಮಾರಸ್ವಾಮಿಯ ವೈಯಕ್ತಿಕ ಕಾರ್ಯಕ್ರಮ. ಹಿಂದಿನ ಮೈತ್ರಿ ಸರ್ಕಾರದ ಅಜೆಂಡಾದಲ್ಲಿಯೂ ಅದು ಇರಲಿಲ್ಲ. ಗ್ರಾಮ ವಾಸ್ತವ್ಯಕ್ಕೆ ಒಂದು ಕೋಟಿ ಖರ್ಚು ಮಾಡಿದರೆ, ಐನೂರು ವಾಸ್ತವ್ಯ ಮಾಡಿದರೆ, ಐನೂರು ಕೋಟಿ ವೆಚ್ಚವಾಗುತ್ತದೆ. ಸರಳ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.