ಉಡುಪಿ: ತರಳಬಾಳು ಜಗದ್ಗುರು ಶಾಖಾಮಠ ಸಾಣೇ ಹಳ್ಳಿಯ ಡಾ| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ರವಿವಾರ ರಂಗಭೂಮಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ವತಿಯಿಂದ ಜರಗಿದ ತ್ರಿದಿನ ರಂಗೋತ್ಸವ ಸಮಾರೋಪದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಆದರ್ಶದ ಹಾದಿಯಲ್ಲಿ ಹೋಗುವರಿಗೆ ಅನೇಕ ವಿಪತ್ತುಗಳು ಎದುರಾಗುತ್ತವೆ. ಪ್ರಜಾಪ್ರಭುತ್ವ, ಸಂವಿಧಾನಕ್ಕೂ ಬೆಲೆ ಕೊಡುತ್ತಿಲ್ಲ.
ಸಮಾಜದಲ್ಲಿ ಸರ್ವಾಧಿ ಕಾರ ಮನೋಭಾವ ಹೆಚ್ಚುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣ ಸಹಿತ ಅನೇಕ ಶರಣರು ಇದಕ್ಕಿಂದ ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು. ಇಂದಿನ ವ್ಯವಸ್ಥೆ ಯಲ್ಲಿ ಶಿಕ್ಷಣ ಕೊಟ್ಟರೆ ಸಾಲದು, ಸಂಸ್ಕಾರ ನೀಡಬೇಕು. ರಂಗಭೂಮಿ ಸಮಾಜದ ಕೊಳೆಯನ್ನು ತೊಳೆಯುವ ಕೆಲಸ ಮಾಡುತ್ತಿದೆ. ಸಮಾಜದ ಅನಿಷ್ಟಗಳನ್ನು ನಾಟಕ ಕಲೆಯ ಮೂಲಕ ಪ್ರಸ್ತುತಪಡಿಸಿ ಜನರ ಮನಸ್ಸು ಪರಿವರ್ತಿಸಬಹುದು. ಮನೋ ರಂಜನೆ ನೀಡಿದರೆ ಅದು ಯಶಸ್ವಿ ನಾಟಕವಲ್ಲ. ವ್ಯಕ್ತಿಯ ಮನೋ ವಿಕಾಸ, ಆಲೋಚನೆ, ಬದುಕಿಗೆ ಉತ್ತಮ ತತ್ವಗಳನ್ನು ಅಳವಡಿಸಿ ಕೊಳ್ಳುವಂತೆ ಮಾಡುವುದು ಯಶಸ್ವಿ ನಾಟಕ ಎಂದರು.
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ರಂಗ ಭೂಮಿ ಕಲೆಯಿಂದ ಸಮಾಜದ ಅಂಕುಡೊಂಕು ಗಳನ್ನು ಸರಿಪಡಿಸಲು ಸಾಧ್ಯವಿದೆ ಎಂದು ಆಶೀರ್ವಚನ ನೀಡಿ ರಂಗಭೂಮಿಯ ಚಟುವಟಿಕೆಯನ್ನು ಶ್ಲಾಘಿಸಿದರು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಅಭಿನಂದನ ಭಾಷಣ ಮಾಡಿದರು. ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್ ಚಂದ್ರಶೇಖರ್, ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ಅರುಣ್ ಕುಮಾರ್, ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಪದಾಧಿಕಾರಿ ಭಾಸ್ಕರ್ ರಾವ್ ಕಿದಿಯೂರು, ರಂಗಕರ್ಮಿ ನಂದಕುಮಾರ್, ಕಲಾ ಪೋಷಕ ಯು. ವಿಶ್ವನಾಥ್ ಶೆಣೈ ಉಪಸ್ಥಿತರಿದ್ದರು. ರಂಗಭೂಮಿಯ ಪ್ರ. ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಸ್ವಾಗತಿಸಿ, ನಿರೂಪಿಸಿದರು.