Advertisement

ಹೂಳು ತುಂಬಿದ ಮೈಪಾಲಕೆರೆಯ ಅಭಿವೃದ್ಧಿ ಆಗಬೇಕಿದೆ

10:42 PM Nov 11, 2019 | Team Udayavani |

ಕಾರ್ಕಳ: ಹಳ್ಳಿ ಸೊಬಗನ್ನೇ ಹೊಂದಿರುವ 7ನೇ ವಾರ್ಡ್‌ ತೆಂಗು, ಕಂಗು, ಗದ್ದೆಗಳಿಂದ ನಳನಳಿಸುತ್ತಿರುವ ಊರು. ಅರಣ್ಯ ಸಂಪತ್ತನ್ನು ಮೈದಳೆದಿರುವ ಈ ವಾರ್ಡ್‌ ಪುರಸಭೆಯ ಅತಿ ದೊಡ್ಡ ವಾರ್ಡ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.ಎಸ್‌ವಿಟಿ ಸರ್ಕಲ್‌ನಿಂದ ಆರಂಭವಾಗುವ ಈ ವಾರ್ಡ್‌ ಒಂದು ಬದಿ ಹಿರ್ಗಾನ,ಮತ್ತೂಂದು ಬದಿ ತೆಳ್ಳಾರು ತನಕ ವ್ಯಾಪಿಸಿದೆ. ಪೆರ್ವಾಜೆ, ಪತ್ತೂಂಜಿಕಟ್ಟೆ ಪೇಟೆಗಳನ್ನು ಹೊಂದಿರುವ ಈ ವಾರ್ಡ್‌ನಲ್ಲಿ ಸುಮಾರು 300 ಮನೆಗಳಿವೆ.

Advertisement

ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಗರಡಿ, ಬ್ರಹ್ಮಶ್ರೀ ಹನಿಮೊಗೇರ ಮತ್ತು ಹಲೆರ ಪಂಜುರ್ಲಿ ದೈವಸ್ಥಾನ, ದತ್ತಾತ್ರೇಯ ಮಂದಿರ, ಪೊಲ್ಲಾರು ಮಸೀದಿ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳು ಈ ವಾರ್ಡ್‌ನಲ್ಲಿವೆ.ಪತ್ತೂಂಜಿಕಟ್ಟೆ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿನ ವಿದ್ಯಾದೇಗುಲ. ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಹಾಗೂ ಮಹಿಳಾ ಮಂಡಳ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

ಇಬ್ಬರು ಅಧ್ಯಕ್ಷರನ್ನು ನೀಡಿದ ವಾರ್ಡ್‌
ಈ ವಾರ್ಡ್‌ನಿಂದ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಚಂದ್ರಹಾಸ ಸುವರ್ಣ ಹಾಗೂ ಸುಬಿತ್‌ ಕುಮಾರ್‌ ಎನ್‌.ಆರ್‌. ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ರಸ್ತೆ ಅಭಿವೃದ್ಧಿಗೆ 37 ಲಕ್ಷ ರೂ.
ಶ್ರೀನಿವಾಸ್‌ ಸ್ವೀಟ್ಸ್‌ ಸ್ಟಾಲ್‌ ಎದುರು ಭಾಗದಿಂದ ಪೊಲ್ಲಾರುತನಕದ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗಾಗಿ ಪುರಸಭೆಯು ನಗರೋತ್ಥಾನದಡಿ 37 ಲಕ್ಷ ರೂ. ಅನುದಾನ ನೀಡಿತ್ತು. ಆದರೆ ಬಿಡುಗಡೆಗೊಂಡ ಅನುದಾನದಲ್ಲಿ ನಿಗದಿಪಡಿಸಲಾದ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಅಸಮಾಧಾನ ಸ್ಥಳೀಯರದ್ದು.

ಬಸ್‌ ಬೇಡಿಕೆ
ಕಾರ್ಕಳ ಪೇಟೆಯಿಂದ ಪತ್ತೂಂಜಿಕಟ್ಟೆ ಪೊಲ್ಲರಾಗಿ ಅಜೆಕಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕೆಂಬ ಆಗ್ರಹ ಇಲ್ಲಿನ ಜನರದ್ದು. ಉಳಿದಂತೆ ವಾರ್ಡ್‌ನಲ್ಲೊಂದು ಕ್ರೀಡಾಂಗಣವಾಗಬೇಕೆಂಬ ಬೇಡಿಕೆಯೂ ಇದೆ. ಕ್ರೀಡಾಂಗಣಕ್ಕೆ ಬೇಕಾದ ಜಾಗ ಈ ವಾರ್ಡ್‌ನಲ್ಲಿದ್ದು, ಸ್ಥಳ ಗುರುತು ಮಾಡಿಕೊಡುವಂತೆ ಸ್ಥಳೀಯರು ಕಂದಾಯ ಇಲಾಖೆಗೆ ಮನವಿ ನೀಡಿರುತ್ತಾರೆ. ಉಳಿದಂತೆ ಬೇಸಗೆಯಲ್ಲಿ ಅಲ್ಪ ಪ್ರಮಾಣದ ನೀರಿನ ಸಮಸ್ಯೆ, ದಾರಿದೀಪದ ಸಮಸ್ಯೆಯೂ ಕಂಡುಬರುತ್ತಿದೆ.

Advertisement

ಮೈಪಾಲಕೆರೆ ಅಭಿವೃದ್ಧಿಯಾಗಲಿ
ಈ ವಾರ್ಡ್‌ನ ಮೈಪಾಲ ಎಂಬಲ್ಲಿ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಕೆರೆಯೊಂದಿದೆ. ಆದರೆ ಈ ಕೆರೆಯಲ್ಲಿ ಹೂಳು ತುಂಬಿದ್ದು, ಉಪಯೋಗ ಶೂನ್ಯವಾಗಿದೆ. ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬಹುದಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಕೆರೆ ಅಭಿವೃದ್ಧಿಗೊಂಡು ನೀರು ಸಮೃದ್ಧವಾಗಿ ತುಂಬಲಿ ಎಂಬ ಆಶಾವಾದ ಇಲ್ಲಿನ ನಾಗರಿಕರದ್ದು.

ಬಸ್‌ ವ್ಯವಸ್ಥೆ ಕಲ್ಪಿಸಿ
ಪೊಲ್ಲಾರು ರಸ್ತೆ ಡಾಮರು, ಪತ್ತೂಂಜಿಕಟ್ಟೆ-ಪೊಲ್ಲಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ನಮ್ಮದು. ಅತ್ಯಂತ ಅಗತ್ಯವಾಗಿರುವ ಈ ಬೇಡಿಕೆಗಳು ಈಡೇರಿದಲ್ಲಿ ನಮ್ಮ ವಾರ್ಡ್‌ನ ಬಹುತೇಕ ಸಮಸ್ಯೆಗಳು ಬಗೆಹರಿದಂತೆ.
-ಸುಬೀತ್‌ ಕುಮಾರ್‌ ಎನ್‌.ಆರ್‌., ಮಾಜಿ ಪುರಸಭಾ ಅಧ್ಯಕ್ಷರು

ದಾರಿದೀಪ ಸಮಸ್ಯೆ ಶೀಘ್ರ ಪರಿಹಾರ
ಪೆರ್ವಾಜೆ-ಪತ್ತೂಂಜಿಕಟ್ಟೆ ಯ 7ನೇ ವಾರ್ಡ್‌ನ ಬಹುತೇಕ ಎಲ್ಲ ರಸ್ತೆಗಳು ಕಾಂಕ್ರೀಟ್‌ಗೊಂಡಿವೆ. ಪೊಲ್ಲಾರು ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ. ಉಳಿದಂತೆ ಕುಡಿಯುವ ನೀರಿನ ಸಮಸ್ಯೆ, ದಾರಿದೀಪದ ಸಮಸ್ಯೆ ಅಲ್ಪ ಪ್ರಮಾಣದಲ್ಲಿದ್ದು, ಅವುಗಳನ್ನು ಸರಿಪರಿಡಿಸುವ ಕಾರ್ಯ ಮಾಡಲಾಗುವುದು.
-ಮಮತಾ ಪೂಜಾರಿ, ವಾರ್ಡ್‌ ಸದಸ್ಯೆ

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next