Advertisement
ಅಳ ಜಾಸ್ತಿ ಇರುವ ಬಾವಿಗಳಲ್ಲಿ ಅಪಾಯಗಳು ಅಧಿಕ. ಕರಾವಳಿ ಜಿಲ್ಲೆಗಳ ಒಳಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಾವಿಗಳು ಸುಮಾರು 100 ಅಡಿಗಿಂತಲೂ ಅಳವಿರುತ್ತವೆ. ಎಪ್ರಿಲ್, ಮೇ ತಿಂಗಳಿನಲ್ಲಿ ಬಾವಿಗಳ ಕೆಸರು ತೆಗೆಯುವ, ಸ್ವತ್ಛಗೊಳಿಸುವ ಕಾರ್ಯ ನಡೆಯುತ್ತದೆ. ಒಂದೋ ಮನೆಯವರು ತಾವೇ ಸ್ವತಃ ಇಳಿದು ಸ್ವತ್ಛಗೊಳಿಸುತ್ತಾರೆ ಅಥವಾ ಕೂಲಿಯಾಳುಗಳ ಮೂಲಕ ಮಾಡಿಸುತ್ತಾರೆ.
ಹೆಚ್ಚು ಆಳದ ಬಾವಿಗಳಲ್ಲಿ ತಳದಲ್ಲಿ ವಿಷಾನಿಲ ಒಂದೆಯಾಡೆಯಾದರೆ ಇನ್ನೊಂಡೆಡೆ ಆಮ್ಲಜನಕದ ಕೊರತೆ ಇರುತ್ತದೆ. ಬಾವಿಗೆ ಇಳಿದ ಕೂಡಲೇ ಇದರಿಂದ ವ್ಯಕ್ತಿಗೆ ಉಸಿರಾಟದ ತೊಂದರೆ ತಲೆದೋರಿ ಪ್ರಜ್ಞೆ ತಪ್ಪಿ ಅಸ್ವಸ್ಥಕ್ಕೆ ಒಳಗಾಗುತ್ತಾರೆ. ಈ ಸಂದರ್ಭ ಅವರಿಗೆ ತುರ್ತು ಚಿಕಿತ್ಸೆ ಅವಶ್ಯವಿರುತ್ತದೆ. ಅವರನ್ನು ತತ್‌ಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇಲ್ಲದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಬಾವಿ ಒಳಗಿರುವ ಮಂದಿ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗುತ್ತಿರುವುದನ್ನು ಕಂಡು ಇವರನ್ನು ರಕ್ಷಿಸಲು ಮೇಲೆ ಇದ್ದವರು ಬಾವಿಗೆ ಇಳಿದು ಬಿಡುತ್ತಾರೆ. ಅವರಿಗೆ ಇದರ ಕಾರಣಗಳು ಗೊತ್ತಿರುವುದಿಲ್ಲ. ಎನೋ ಪ್ರಜ್ಞೆ ತಪ್ಪಿರಬೇಕು ಎಂದು ನೆರವಿಗೆ ಧಾವಿಸುತ್ತಾರೆ. ಪರಿಣಾಮ ಅವರು ಕೂಡ ಅಸ್ವಸ್ಥರಾಗಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಸರು ಇದ್ದರೆ ಅದರಲ್ಲಿ ಹೂತುಹೋಗುವ ಸಾಧ್ಯತೆಗಳು ಇದ್ದು ಉಸಿರುಕಟ್ಟಿ ಸಾವು ಸಂಭವಿಸುವ ಪ್ರಮೇಯಗಳೂ ಇವೆ.
Related Articles
ಬಾವಿಗೆ ಇಳಿಯಲು ಮತ್ತು ತುಂಬಿರುವ ಕೆಸರು ತೆಗೆಯಲು ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ ಅನುಭವ ಬೇಕು. ಅನುಭವಿಗಳು ಬಾವಿಯ ಸ್ಥಿತಿಗತಿಯನ್ನು ಮೊದಲೇ ಅಂದಾಜಿಸುತ್ತಾರೆ. ಅವರಿಗೆ ಹೆಚ್ಚಿನ ಸಂಬಳವನ್ನು ನೀಡಬೇಕಾಗುತ್ತದೆ. ಪ್ರಸ್ತುತ ಕೂಲಿಯಾಳುಗಳ ಅಭಾವದ ಸಮಯ. ಅನುಭವ ಇಲ್ಲದಿದ್ದರೂ ಹೆಚ್ಚಿನ ಸಂಬಳದ ಆಕರ್ಷಣೆಯಿಂದ ಬಾವಿಗೆ ಇಳಿಯುತ್ತಾರೆ. ಒಂದೊಮ್ಮೆ ಇಂತಹ ಘಟನೆಗಳು ಬಾವಿಯೊಳಗೆ ಅನಾಹುತ ಸಂಭವಿಸಿದರೆ ಮೇಲೆ ಇದ್ದವರು ಕೂಡಲೇ ಬಾವಿಗಿಳಿಯದೆ 101 ನಂಬರ್ ಡಯಲ್ ಮಾಡಿ ಅಗ್ನಿಶಾಮಕದಳವರಿಗೆ ಮಾಹಿತಿ ಕೊಡಬೇಕು. ಅವರು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯಾಚರಣೆ ನಡೆಸುತ್ತಾರೆ. ಅವರಲ್ಲಿ ಉಸಿರಾಟ ಸಾಧನಗಳಿರುತ್ತವೆ. ಇದಲ್ಲದೆ ಪೈಪ್ ಮೂಲಕ ಬಾವಿಯೊಳಗೆ ಆಮ್ಲಜನಕ ಸರಬರಾಜು ಮಾಡುತ್ತಾರೆ. ಜೀವರಕ್ಷಕ ಸಾಧನಗಳ ಮೂಲಕ ಬಾವಿಯೊಳಗೆ ಸಿಲುಕಿದವರನ್ನು ಮೇಲಕ್ಕೆ ತರುತ್ತಾರೆ.
Advertisement
ಬಾವಿಗೆ ಇಳಿಯುವ ಮೊದಲು ಎನು ಮಾಡಬೇಕು ಬಾವಿಗೆ ಇಳಿಯುವ ಮೊದಲು ಅದರಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆಯೇ ಎಂಬ ಬಗ್ಗೆ ಪರೀಕ್ಷಿಸಬೇಕು.
ಬಕೆಟೊಂದರಲ್ಲಿ ದೀಪ ಅಥವಾ ಕ್ಯಾಂಡಲ್ ಉರಿಸಿಟ್ಟು ಬಾವಿಗೆ ಇಳಿಸಬೇಕು. ದೀಪ ಆರಿದರೆ ಅಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆ ಎಂದರ್ಥ.
ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದ್ದರೆ ಬಾವಿಗೆ ಇಳಿಯುವಾಗಲೇ ಇದರ ಮುನ್ಸೂಚನೆ ಕಂಡು ಬರುತ್ತದೆ. ಅರ್ಧಕ್ಕೆ ಹೋಗುವಷ್ಟರಲ್ಲಿ ಕಣ್ಣು ಊರಿ ಹಾಗೂ ಕೈಕಾಲು ನಡುಗಲು ಪ್ರಾರಂಭವಾಗುತ್ತದೆ. ಇಂತಹ ಅನುಭವವಾದರೆ ಮುಂದಕ್ಕೆ ಇಳಿಯಬಾರದು.
ವಿಷಾನಿಲ ಇದ್ದರೆ ಮೇಲಿನಿಂದ ಬಾವಿಗೆ ನೀರು ಹಾಕಬೇಕು. ಆಗ ವಿಷಾನಿಲಗಳು ಮೇಲಕ್ಕೆ ಬರುತ್ತದೆ. ಮೇಲಿನಿಂದ ಹಸುರು ಎಲೆಗಳಿರುವ ಮರದ ಗೆಲ್ಲುಗಳನ್ನು ಹಾಕಿದರೆ ಆಮ್ಲಜನಕದ ಕೊರತೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ ಎಂದು ಅಗ್ನಿಶಾಮಕ ದಳದ ತಜ್ಞರು ತಿಳಿಸುತ್ತಾರೆ.
ಅಪಾಯಕಾರಿ ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳದ 101 ನಂಬರ್‌ಗೆ ಡಯಲ್ ಮಾಡಿ ಮಾಹಿತಿ ನೀಡಬೇಕು. ಮುಂಜಾಗರೂಕತೆ ವಹಿಸಿ
ಆಳದ ಅಥವಾ ಉಪಯೋ ಗಿಸದ, ಬಹಳಷ್ಟು ವರ್ಷಗಳಿಂದ ಸ್ವತ್ಛಗೊಳಿಸದ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಅಥವಾ ತ್ಯಾಜ್ಯಗಳು ಕೊಳೆತು ಮಿಥೆನ್ ಅನಿಲ ಸಮಸ್ಯೆ ಇರುತ್ತದೆ. ಇವುಗಳಿಗೆ ಇಳಿಯುವಾಗ ಮುಂಜಾಗರೂಕತೆ ವಹಿಸ ಬೇಕು. ಅಮ್ಲಜನಕ ಕೊರತೆ ಅಥವಾ ಮಿಥೆನ್ ಅನಿಲ ಇಲ್ಲವೆಂಬುದನ್ನು ಖಾತ್ರಿ ಪಡಿಸಿ ಕೊಂಡು ಅನಂತರ ಬಾವಿಗೆ ಇಳಿಯಬೇಕು. ಇಳಿಯುವಾಗ ಸೊಂಟಕ್ಕೆ ಹಗ್ಗ ಕಟ್ಟಿ ಅದರ ತುದಿಯನ್ನು ಮೇಲೆ ಇರುವವರ ಕೈಯಲ್ಲಿ ಕೊಡಬೇಕು. ಅರ್ಧಕ್ಕೆ ಹೋಗುವಾಗ ಉಸಿರುಕಟ್ಟಿದ ಅನುಭವ ಆದರೆ ಮುಂದಕ್ಕೆ ಹೋಗಬಾರದು.
- ತಿಪ್ಪೆಸ್ವಾಮಿ, ಮುಖ್ಯ ಅಗ್ನಿಶಾಮಕ ಅಧಿಕಾರಿ ಮಂಗಳೂರು ಕೇಶವ ಕುಂದರ್