ಹೊನ್ನಾವರ: ಜೀವಜಲ ಕುಡಿಯುವ ನೀರಿನ ಸಮಸ್ಯೆ ಮಳೆಗಾಲ ಮುಗಿಯುತ್ತಿದ್ದಂತೆಯೇ ತಲೆದೋರಿದೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಆರಂಭವಾಗಿ ತಿಂಗಳು ಕಳೆದಿದೆ. ತಾಲೂಕಿನ ಮಧ್ಯದಲ್ಲಿ ಹರಿಯುತ್ತಿರುವ ಶರಾವತಿ ಮತ್ತು ಗಂಗಾವಳಿ ನದಿಗಳಿವೆ. ಗುಂಡಬಾಳ, ಭಾಸ್ಕೇರಿ ಹೊಳೆಗಳಿವೆ. ಸುತ್ತಲೂ ನೀರಿರುವಾಗ ನೀರಿನ ಬರಗಾಲ ಸಾಧ್ಯವೇ ಇರಲಿಲ್ಲ. ಬೇಜವಾಬ್ದಾರಿ ಜನರ ಸ್ವಯಂಕೃತಾಪರಾಧದಿಂದ ನೀರಿನ ಬರ ಉಂಟಾಗಿದೆ.
ಕಂದಾಯ ಭೂಮಿಯ 3ಪಟ್ಟು ಅರಣ್ಯ ಭೂಮಿ ಅತಿಕ್ರಮಣವಾಗಿದೆ. ಗುಡ್ಡದ ಓರೆಯ ಈ ಪ್ರದೇಶದಲ್ಲಿ ಮೊದಲು ಹಳ್ಳಕ್ಕೆ ಕಟ್ಟುಹಾಕಿ ನೀರು ಪಡೆಯುತ್ತಿದ್ದರು. ಈಗ ಎಲ್ಲೆಡೆ ಕೊಳವೆಬಾವಿ ಕೊರೆದ ಕಾರಣ ಹಳ್ಳ ಬತ್ತಿ ಹೋಗಿದೆ. ಅತಿಕ್ರಮಣದಾರರು ಬಸಿದುಬಿಟ್ಟ ನೀರು ಕಂದಾಯ ಭೂಮಿಗೆ ಬರಬೇಕು. ಅದೂ ನಿಂತು ಹೋಗಿದೆ. ಕಟ್ಟುಕಟ್ಟಿ ಪಂಪ್ ಹಾಕಿ ನೀರು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಹಗಲುರಾತ್ರಿ ಅಗತ್ಯಕ್ಕಿಂತ ಹೆಚ್ಚು ನೀರನ್ನು ತೋಟಗಳಿಗೆ ಹರಿಸಿದರು. ಕೆಲವು ವರ್ಷಗಳಲ್ಲಿ ಭೂಗರ್ಭದ ಜಲಮಟ್ಟ ಇಳಿದು ಹೋಗಿದೆ. ಈಗ ಹಳ್ಳಗಳಿಗೆ ಜೆಸಿಬಿಯಿಂದ ಹೊಂಡ ತೋಡಿ ಅಲ್ಪಸ್ವಲ್ಪ ನೀರು ಪಡೆಯುತ್ತಿದ್ದಾರೆ. ಸಾವಿರಾರು ಎಕರೆ ತೋಟಗಳಿಗೆ ಈಗ ತಿಂಗಳಿಗೊಮ್ಮೆ ನೀರು. ಹೆಚ್ಚಿದ ಜನಸಂಖ್ಯೆ, ಸಾಗುವಳಿ ಭೂಮಿಯ ವಿಸ್ತಾರ, ನೀರಿನ ದುರ್ಬಳಕೆ ಒಂದು ಕಾರಣ. ತಾಲೂಕಿನಲ್ಲಿ 80ರಷ್ಟಿದ್ದ ಕಾಡು ಕಡಿದು ಹೋದ ಕಾರಣ ಮಳೆಗಾಲದಲ್ಲಿ ಬಿದ್ದ ನೀರು ಮರಗಳ ಮೇಲೆ ಇಳಿದು ನೆಲದಲ್ಲಿ ನಿಧಾನ ಇಂಗುವ ಪ್ರಕ್ರಿಯೆ ನಿಂತು ಹೋಗಿದ್ದು ಮಳೆಯ ನೀರು ಜರ್ ಎಂದು ಇಳಿದು ಮಣ್ಣು ಕಚ್ಚಿಕೊಂಡು ಹೊಳೆಗಿಳಿದು ಸಮುದ್ರ ಸೇರುತ್ತದೆ.
ಜಲಮೂಲವಿಲ್ಲದ ಊರಿನಲ್ಲಿ ನೀರಿಗೆ ಪರದಾಟ, ಟ್ಯಾಂಕ್ ಮೂಲಕ ಪೂರೈಕೆ ಸಹಜ. ಹಳ್ಳಿಯಲ್ಲಿ ನಾಲ್ಕಾರು ಜನರ ಕುಟುಂಬ, ಕೊಟ್ಟಿಗೆಯಲ್ಲಿ ದನಕರು. ಸರ್ಕಾರ ಕೇವಲ ಕುಡಿಯುವ ನೀರು ಪೂರೈಸುತ್ತದೆ. ಸ್ನಾನಕ್ಕೆ, ದನಕರುಗಳಿಗೆ ನೀರಿಲ್ಲ. ಇದನ್ನು ಯಾವುದೇ ಸರ್ಕಾರ ಪೂರೈಸಲು ಸಾಧ್ಯವಿಲ್ಲ. ಒಂದು ಎಕರೆ ತೋಟವಿದ್ದರೆ ಕನಿಷ್ಠ ಎರಡು ಬಾವಿಗಳಿರುತ್ತಿದ್ದವು. ಭೂಮಿಯೊಂದಿಗೆ ನೀರು ಪಾಲಾಗಿ ಜಗಳಕ್ಕೆ ಕಾರಣವಾಯಿತು. ಹೆಚ್ಚಿನವರು ಬಾವಿ ಮುಚ್ಚಿ ತಮಗೆ ಮಾತ್ರ ಬೋರ್‌ವೆಲ್ ಕೊರೆದುಕೊಂಡರು. ಈಗಲೂ ಇಂಗುಗುಂಡಿ ಮಾಡಿ ನೀರಿಂಗಿಸಿ ಬಾವಿ ತುಂಬಿಸುವ, ಗುಡ್ಡದ ಮೇಲೆ ನೀರಿಂಗಿಸುವ ಕೆಲಸ ನಡೆಯುತ್ತಿಲ್ಲ. ವರ್ಷವರ್ಷವೂ ಮಳೆಚಕ್ರಕ್ಕೆ, ನೀರಿಂಗುವ ಪ್ರಕ್ರಿಯೆಗೆ ಹೊಡೆತ ಬೀಳುತ್ತಿರುವ ಪರಿಣಾಮ ಅಂತರ್ಜಲ ಕುಸಿದು ಹೋಗಿದೆ.
Advertisement
ಇದಕ್ಕೆ ಶಾಶ್ವತ ಪರಿಹಾರ ಮಾರ್ಗಗಳಿದ್ದರೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಶಾಶ್ವತ ಜಲಮೂಲ ನದಿಯ ನೀರೆತ್ತದೆ ತುರ್ತು ಕೊಳವೆಬಾವಿ ಕೊರೆದು, ಅವು ಬತ್ತಿ ಹೋಗಿ ಬರಗಾಲ ಮುಂದುವರಿದಿದೆ, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ.
ಸದ್ಯ ನಗರದಲ್ಲಿ ನೀರು ಪೂರೈಕೆ ತೃಪ್ತಿಕರವಾಗಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ತೊಟ್ಟಿಗಳು ಹಾಳಾಗಿವೆ. ಹೊನ್ನಾವರ ನಗರ ಮತ್ತು ಗೇರಸೊಪ್ಪಾವರೆಗಿನ 13ಗ್ರಾಪಂಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಅರಣ್ಯ ಇಲಾಖೆ ಭೂಮಿ ನೀಡಿದೆ. ಟೆಂಡರ್ ಕರೆದು ಪ್ರಕ್ರಿಯೆ ಆರಂಭವಾಗಿ ಮುಗಿಯಲು 10ವರ್ಷ ಬೇಕು. ಕರಾವಳಿಯ ಎಲ್ಲ ತಾಲೂಕುಗಳಲ್ಲೂ ಬೇಸಿಗೆಯಲ್ಲಿ ತುಂಬಿ ಹರಿಯುವ ನದಿಗಳಿವೆ. ಬಳಕೆಗೆ ಹೆಚ್ಚಾಗಿ ಎರಡು ಬೆಳೆ ಬೆಳೆಯಬಹುದಾಗಿದೆ. ಚತುಷ್ಪಥ ಮಾಡಿದಂತೆ ಪಾಲುದಾರಿಕೆಯಲ್ಲಿ ಇಂತಹ ಯೋಜನೆ ಜಾರಿಗೆ ಬಂದರೆ 20ವರ್ಷದಲ್ಲಿ ಲಾಭ ಬರುತ್ತದೆ. ರಾಜಕೀಯ ಇಚ್ಛಾಶಕ್ತಿ ಕೊರತೆ, ಕಣ್ಣೆದುರು ಕಾಣುವ ನೀರನ್ನು ಎತ್ತಿ ಕುಡಿಯಲಾರದೆ, ಕುಡಿಸಲಾರದೆ ಕಣ್ಣೀರು ತಂದುಕೊಳ್ಳುವ ಸ್ಥಿತಿ ಬಂದಿದೆ. ಸರ್ಕಾರ, ಸಾರ್ವಜನಿಕರು, ಜನಪ್ರತಿನಿಧಿ ಸಂಸ್ಥೆಗಳು ನೀರಿನ ಸಮರ್ಪಕ ನಿರ್ವಹಣೆಗೆ, ಜಲಮೂಲ ಸಂರಕ್ಷಣೆಗೆ ಆಸಕ್ತಿ ವಹಿಸದಿದ್ದರೆ ಗಂಭೀರ ದುರಂತ ಕಾದಿದೆ.
ತಾಲೂಕಿನಲ್ಲಿ 28ಗ್ರಾಪಂಗಳಿವೆ. ಮಂಕಿ ಅನಂತವಾಡಿಗಳಿಗೆ ಮಾರ್ಚ್ 15ರಿಂದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬಳಕೂರ, ಚಂದಾವರ, ಕಡತೋಕಾಗಳಲ್ಲೂ ನೀರಿನ ಬೇಡಿಕೆ ಇದೆ. ಮುಗ್ವಾ, ಹಳದೀಪುರಗಳಿಗೆ ಪೂರೈಸಬೇಕಾಗಿದೆ. ಮೇ ತಿಂಗಳಲ್ಲಿ ಮಳೆ ಬರದಿದ್ದರೆ 25ಗ್ರಾಪಂಗಳಿಗೆ ಕುಡಿಯುವ ನೀರು ಕೊಡಬೇಕಾಗುತ್ತದೆ. ಟ್ಯಾಂಕರ್‌ಗಳಿಗೆ ಗುತ್ತಿಗೆ ನೀಡಲಾಗಿದೆ. ಅವರಿಗೆ ಸಕಾಲದಲ್ಲಿ ಬಾಡಿಗೆ ನೀಡಲಾಗಿದೆ. ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಆದರೆ ಜನರಿಗೆ, ಜಾನುವಾರುಗಳಿಗೆ ಅಗತ್ಯವಿದ್ದಷ್ಟು ನೀರು ಪೂರೈಸುವುದು ಶಾಶ್ವತ ಯೋಜನೆಯಿಂದ ಮಾತ್ರ ಸಾಧ್ಯ.
• ಮಂಜುಳಾ ಭಜಂತ್ರಿ,ತಹಶೀಲ್ದಾರ್, ಹೊನ್ನಾವರ