ಬೆಂಗಳೂರು: ರಾಜ್ಯದಲ್ಲಿ ಸತತ ಮೂರನೇ ದಿನ ವರುಣನ ಅಬ್ಬರ ಮುಂದುವರಿದಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಕಡಿಮೆ ಒತ್ತಡದ ತಗ್ಗು (ಟ್ರಫ್) ಮತ್ತು ಮೇಲ್ಮೆ„ಸುಳಿಗಾಳಿ ಈಗಲೂ ಯಥಾಸ್ಥಿತಿಯಲ್ಲಿದೆ.ಇದು ದಕ್ಷಿಣ ಒಳನಾಡಿನಲ್ಲಿ
ಹಾದುಹೋಗಿರುವುದರಿಂದ ಈ ಭಾಗದಲ್ಲಿ ಮಳೆ ಇನ್ನೂ ಒಂದೆರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಒಳನಾಡಿನಲ್ಲೂ ಮಳೆಯ ಸಿಂಚನವಾಗಿದೆ.ಗದಗ, ಧಾರವಾಡ, ಬೆಳಗಾವಿಯಲ್ಲಿ ಕನಿಷ್ಠ 1ರಿಂದ ಗರಿಷ್ಠ 5 ಮಿ.ಮೀ.ನಷ್ಟು ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಜೋರಾಗಿತ್ತು. ಹಾಸನ, ಚಾಮರಾಜನಗರ,ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಮಗಳೂರು ಸುತ್ತಮುತ್ತ ಕನಿಷ್ಠ 4ರಿಂದ ಗರಿಷ್ಠ 42 ಮಿ.ಮೀ. ಮಳೆ ದಾಖಲಾಗಿದೆ. ಹಾಸನ, ಮಡಿಕೇರಿ,ಚಿತ್ರದುರ್ಗ, ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗಿದೆ.
ಸಿಡಿಲಿಗೆ ಮಹಿಳೆ ಬಲಿ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯಲ್ಲಿ ಸಿಡಿಲು ಬಡಿದು ಬೋಚೇನಹಳ್ಳಿ ಗ್ರಾಮದ ನರಸಮ್ಮ(50) ಮೃತಪಟ್ಟಿದ್ದಾರೆ. ಹನುಮಕ್ಕ ಎಂಬುವರು ಗಾಯಗೊಂಡಿದ್ದಾರೆ.