ಬೆಂಗಳೂರು: ಐಪಿಎಸ್ ಅಧಿಕಾರಿ ಡಾ| ಮಧುಕರ್ ಶೆಟ್ಟಿ ಅವರ ಸಾವನ್ನು ಸಂಭ್ರಮಿಸುವ ಅಧಿಕಾರಿಗಳು ಆಡಳಿತ ವ್ಯವಸ್ಥೆ ಮತ್ತು ರಾಜಕೀಯದಲ್ಲಿ ಇನ್ನೂ ಇದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಬಂಟರ ಸಂಘ ರವಿವಾರ ವಿಜಯನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಆಯೋಜಿಸಿದ್ದ ಡಾ| ಮಧುಕರ್ ಶೆಟ್ಟಿ ಅವರಿಗೆ “ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಇಲ್ಲವಾ ಗಿರುವುದರಿಂದ ತಾವು ಬಚಾವಾಗಿ ದ್ದೇವೆ. ಇನ್ಯಾವ ಕಂಟಕಗಳು ನಮಗೆ ಇಲ್ಲ ಎಂದು ಖುಷಿ ಪಡುವ ವ್ಯಕ್ತಿಗಳು ಸಮಾಜದಲ್ಲಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ಅವರನ್ನು 2-3 ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದುದಲ್ಲದೆ, ರಾಜ್ಯಪಾಲರ ಎಡಿಸಿಯಾಗಿ ನೇಮಕ ಮಾಡಿದ್ದರು. ಅಂಥ ವರ್ಗಾವಣೆಗಳನ್ನು ಸಹಿಸಿ ಕೊಂಡು ಪೊಲೀಸ್ ಇಲಾಖೆ ಮತ್ತು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಲವು ನಿವೇಶನಗಳನ್ನು ಅಲ್ಲಿನ ಮಾಲಕರನ್ನು ಬೆದರಿಸಿ ಸಚಿವರೊಬ್ಬರು ಅವುಗಳನ್ನು ಕಬಳಿಸಲು ಮುಂದಾಗಿದ್ದರು. ಈ ಮಾಹಿತಿ ಪಡೆದ ಮಧುಕರ್ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ಸಚಿವ ಮತ್ತವರ ಪುತ್ರನನ್ನು ಜೈಲಿಗೆ ಕಳುಹಿಸಿದ್ದರು. ಅಲ್ಲದೆ ರಾಜ್ಯದ ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡುವಲ್ಲಿ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ್ ಶೆಟ್ಟಿ ಅವರು ಮಾತನಾಡಿ, ಸಮಾಜಕ್ಕಾಗಿ ದುಡಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ, ಲೋಕಾ ಯುಕ್ತದಲ್ಲಿ ಕರ್ತವ್ಯ ನಿರ್ವಹಿಸುವಾಗ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು. ಅಂಥ ಮತ್ತೂಬ್ಬ ಅಧಿಕಾರಿ ಸಿಗುವುದು ಬಹಳ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ| ಡಿ.ವಿ. ಗುರುಪ್ರಸಾದ್ ಮಾತನಾಡಿ, ಪ್ರೊಬೆಷನರಿ ಅವಧಿ ಯಿಂದಲೇ ಮಧುಕರ್ ಶೆಟ್ಟಿ ಆದರ್ಶ ವಾದಿಯಾಗಿದ್ದರು ಎಂದರು.
ಮಧುಕರ್ ಶೆಟ್ಟಿ ಹೆಸರಿನಲ್ಲಿ ಪ್ರಶಸ್ತಿ
ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಹೆಸರಿನಲ್ಲಿ ಬಂಟರ ಸಂಘ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ ಎಂದು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಹೇಳಿದರು. ಪ್ರತಿ ವರ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ “ಮಧುಕರ್ ಶೆಟ್ಟಿ’ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.