ಶೀರ್ಷಿಕೆಯನ್ನೊಮ್ಮೆ ನೋಡಿ ಇದೇನಪ್ಪಾ! ಎಂದುಕೊಂಡಿರಾ? ನಾನು ಹೇಳಲು ಹೊರಟಿರುವ ವಿಷಯ ಬಿ.ಎಡ್ ಕೋರ್ಸ್ ನ ಬಗ್ಗೆ. ಇತರ ಎಲ್ಲಾ ಕೋರ್ಸ್‌ಗಳಿಗಿಂತ ಭಿನ್ನವಾಗಿರುವುದೇ ಈ ಬಿ.ಎಡ್. ಸಾಮಾನ್ಯವಾಗಿ ಇತರ ಕೋರ್ಸ್‌ಗಳಲ್ಲಿ ಸಮಾನ ವಯಸ್ಕರಿದ್ದರೆ, ಬಿ.ಎಡ್‌ನಲ್ಲಿ ಆಗತಾನೇ ಡಿಗ್ರಿ ಮುಗಿಸಿ ಬಂದವರಿಂದ ಹಿಡಿದು, 10-12 ವರ್ಷಗಳ ಕಾಲ ಬೇರೆ ಉದ್ಯೋಗ ದಲ್ಲಿದ್ದು ಬಂದವರೆಲ್ಲರನ್ನೂ ಒಳಗೊಂಡ ಸ್ನೇಹಿತರ ಬಳಗ ನಮ್ಮದು.
ಕಾಲೇಜಿಗೆ ಸೇರಿದ ಹೊಸತರಲ್ಲಿ “ಈ ಎರಡು ವರ್ಷಗಳನ್ನು ಹೇಗೆ ಕಳೆಯುವುದೋ?’ ಎಂದೆನಿಸಿದರೂ, ಉತ್ತಮ ಶಿಕ್ಷಕಿ ಆಗಬೇಕೆಂಬ ಹಂಬಲದಿಂದ ಬಂದು ಸೇರಿದ ಕೋರ್ಸ್ ಆಗಿರುವುದರಿಂದಾಗಿ ಕಷ್ಟಪಟ್ಟು ಅಥವಾ ಇಷ್ಟಪಟ್ಟಾದರೂ ಕಲಿಯಲೇ ಬೇಕೆಂದುಕೊಂಡೆನು. ನಂತರದ ದಿನಗಳಲ್ಲಿ “ಕಲಿಯಲು ಬಹಳಷ್ಟಿದೆ’ ಎಂಬುವುದನ್ನು ತಿಳಿದೆನು. ನಮ್ಮ ಕಾಲೇಜಿನಲ್ಲಿ ಕಲಿತ ಉತ್ತಮ ಅಂಶಗಳಲ್ಲಿ ಕಾರ್ಯಕ್ರಮಗಳ ಆಯೋಜನೆ’ ಹಾಗೂ “ಸಮಯದ ಪರಿಪಾಲನೆ’ಯೂ ಒಂದಾಗಿದೆ. ಯಾವುದೇ ಕಾರ್ಯಕ್ರಮಗಳಿರಲಿ, ನಿರ್ಧರಿಸಿದ ವೇಳೆಗೆ ಸರಿಯಾಗಿ ತಪ್ಪದೇ ಆರಂಭಗೊಂಡು, ಅಂತೆಯೇ ಕಾರ್ಯಕ್ರಮ ಮುಗಿಸುವುದು ನಮ್ಮ ಕಾಲೇಜಿನ ವಿಶೇಷತೆಗಳಲ್ಲೊಂದು.
ಪ್ರತೀ ಗುರುವಾರ ಕಾಲೇಜಿನಲ್ಲಿ ಕಾರ್ಯಕ್ರಮಗಳಿರುತ್ತಿದ್ದು, ನಮ್ಮನ್ನು ನಾವು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಅತಿ ಕಡಿಮೆ ಸಮಯದಲ್ಲಿ ಕಾರ್ಯಕ್ರಮಗಳಿಗೆ ತಯಾರಿ ನಡೆಸುತ್ತಿದ್ದೆವು. ಕಿರು ಪ್ರಹಸನಕ್ಕೆ ಸ್ನೇಹಿತರೊಂದಿಗೆ ಸೇರಿಕೊಂಡು ಒಂದು ದಿನದಲ್ಲಿ ಸ್ಕ್ರಿಪ್ಟ್ ಬರೆದು, ಅದನ್ನು ಸರಿಯಾಗಿ ಒಮ್ಮೆ ಓದಿಕೊಂಡು, ವೇದಿಕೆಯಲ್ಲಿ ಪ್ರದರ್ಶಿಸುವಾಗ, ಏನೇನೋ ಡೈಯಲಾಗ್ ಹೇಳಿ, ಎದುರಿಗಿರುವ ನಮ್ಮ ಸ್ನೇಹಿತರನ್ನು ಸಂಕಷ್ಟಕ್ಕೆ ಗುರಿಯಾಗಿಸುತ್ತಿದ್ದದ್ದು ಸಾಮಾನ್ಯ. ಅವರು ಪಟ್ಟನೆ ತಲೆ ಓಡಿಸಿ, ಒಂದು ಡಯಲಾಗ್‌ನ್ನು ಆ ಕ್ಷಣಕ್ಕೆ ಹೇಳಿ ವೀಕ್ಷಕರಿಗೆ ಗೊತ್ತಾಗದಂತೆ ಸರಿಮಾಡಿ, ಮುಂದುವರೆಯುತ್ತಿದ್ದದ್ದು ಎಂದೆಂದಿಗೂ ಮರೆಯಲಾಗದು.
ಮೊದಲ ಸೆಮಿಸ್ಟರ್‌ನಲ್ಲಿ ಮೈಕ್ರೋ ಟೀಚಿಂಗ್, 2ನೇ ಸೆಮಿಸ್ಟರ್‌ನಲ್ಲಿ ಟೀಚಿಂಗ್ ಪ್ರಾಕ್ಟೀಸ್, 3ನೇ ಸೆಮಿಸ್ಟರ್‌ನಲ್ಲಿ ಐಸಿಟಿ ಲೆಸನ್ ಹಾಗೂ 4ನೇ ಸೆಮಿಸ್ಟರ್‌ನಲ್ಲಿ ಇಂಟರ್ನ್ಶಿಪ್ ಹೀಗೆ ನಮ್ಮ ಬೋಧನಾ-ವಿಧಾನಗಳನ್ನು ಉತ್ತಮಗೊಳಿಸಲು ಬಿ.ಎಡ್ ಸಹಕಾರಿ ಯಾಗಿದೆ. “ಸ್ವ ಅರಿವು ಮತ್ತು ಯೋಗ’ ಎಂಬ ಪತ್ರಿಕೆಯು “ಪ್ರಾಕ್ಟೀಸ್’ ಮತ್ತು “ಥಿಯರಿ’ ಪರೀಕ್ಷೆಗಳಿಗೆ ಇರುವುದರಿಂದಾಗಿ, ಕೈಕಾಲುಗಳನ್ನು ಕಷ್ಟಪಟ್ಟಾದರೂ ತಿರುಗಿಸಿ, ಮುರುಗಿಸಿ, ಬಾಗಿಸಿ ಯೋಗವನ್ನು ಕಲಿತೆವು. “ಆರ್ಟ್ ಆ್ಯಂಡ್ ಡ್ರಾಮಾ’ ಪತ್ರಿಕೆಯ ಮೂಲಕ ಹಲವಾರು ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿ ಸಂಭ್ರಮಿಸಿದೆವು.
ಒಂದು ಮಗುವಿನ ಹುಟ್ಟಿನ ಸಮಯದಲ್ಲಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಿಂದ ಹಿಡಿದು, ಮಗುವಿನ ಶಿಕ್ಷಣಕ್ಕಾಗಿ ಇರುವ ಎಲ್ಲಾ ವಿಧಿ, ನಿಯಮ, ಕಾಯಿದೆಗಳವರೆಗೂ ಬಿಎಡ್‌ನಲ್ಲಿ ಕಲಿಯುತ್ತೇವೆ. “ಆಪ್ತ ಸಲಹೆ ಮತ್ತು ಮಾರ್ಗದರ್ಶನ’ ಎಂಬ ಪತ್ರಿಕೆಯೂ ಕೂಡ ಶಿಕ್ಷಕರ ಜವಾಬ್ದಾರಿಯ ಕುರಿತು ತಿಳಿಸುತ್ತದೆ. ಅಸೈನ್‌ಮೆಂಟ್‌ಗಳನ್ನು ಸಬ್‌ಮಿಶನ್‌ಗೆ ಕೊನೆಯ ದಿನಾಂಕ ಹತ್ತಿರ ಬರುತ್ತಿರುವಾಗ, ನಿಶಾಚಾರಿಗಳಂತೆ ರಾತ್ರಿಯಿಡೀ ಕುಳಿತು ಬರೆದು ಮುಗಿಸಿದ ಸಾಧನೆ ನಮ್ಮದು. ಇಂದು 3ನೇ ಸೆಮಿಸ್ಟರ್‌ನ ಅಂತಿಮ ಘಟ್ಟ ತಲುಪಿದ್ದು, ವಿದ್ಯಾರ್ಥಿ ಜೀವನ ಮುಗಿದೇ ಹೋಗುತ್ತದಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಿದ್ದಿ, ಪ್ರೋತ್ಸಾಹಿಸುತ್ತಾ ಬಂದಿರುವ ನನ್ನೆಲ್ಲಾ ನೆಚ್ಚಿನ ಅಧ್ಯಾಪಕ ವೃಂದದವರಿಗೆ ಸದಾ ಚಿರಋಣಿ. ಅಧ್ಯಾಪಕ ವೃಂದದವರ ಪ್ರೀತಿ-ವಿಶ್ವಾಸ, ಕಾಳಜಿ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರ ಆತ್ಮೀಯತೆ, ಸಹಾಯಹಸ್ತ ಎಲ್ಲವೂ ಸದಾ ಕಾಲ ನಮ್ಮ ಸ್ಮತಿಪಟಲದಲ್ಲಿ ಅಚ್ಚೊತ್ತಿರುವಂತಹದ್ದು.
ಅನುಷಾ ಎಸ್. ಶೆಟ್ಟಿ
ಬಿ.ಎಡ್. ತೃತೀಯ ಸೆಮಿಸ್ಟರ್
ಡಾ. ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ, ಉಡುಪಿ