ಬೆಂಗಳೂರು: “ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಲ್ಲಿ ನನಗೆ ಸಮಾಧಾನವಿದೆ. ಬಿಜೆಪಿಯ ಯಾವ ನಾಯಕರು ನನ್ನ ಗೌರವಕ್ಕೆ ಧಕ್ಕೆ ತಂದಿಲ್ಲ ‘ ಎಂದು ವಸತಿ ಸಚಿವ ವಿ. ಸೋಮಣ್ಣ ಭಾವುಕ ಮಾತುಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಂದು ಅನೇಕ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಅಂತಿಮ ತೆರೆ ಎಳೆದಿದ್ದಾರೆ.
ಮಂಗಳವಾರ ಕಾವೇರಿ ಭವನದ ರಾಜೀವ್ ಗಾಂಧಿ ವಸತಿ ನಿಗಮದ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ನಾನು ಪಕ್ಷಕ್ಕೆ ಮುಜುಗರ, ಅಗೌರವ ತರುವ ರೀತಿ ವರ್ತಿಸುವುದಿಲ್ಲ. ನನಗೆ ಅಪಮಾನ ಆಗಿದ್ದರೆ ನಾನು ಮಂತ್ರಿ ಸ್ಥಾನಕ್ಕೆಯೇ ರಾಜೀನಾಮೆ ನೀಡುತ್ತಿದ್ದೆ. ನಾನು ಭಯ ಬಿದ್ದು ಇರುವವನಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ’ ಎಂದು ಹೇಳಿದರು.
“ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಸುಮ್ಮನಾಗುತ್ತೇನೆ. ಪಕ್ಷದ ಕೆಲಸ ಮಾಡುತ್ತ ಇರುತ್ತೇನೆ. ನಾನು ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ನಾನು ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದೆ. ಈಗ ವಾಪಸ್ ಪಿಗ್ನಿ ಸಂಗ್ರಹಿಸಲು ಕೂಡ ಸಿದ್ಧ. ಆದರೆ ಅಲ್ಲಿಂದ, ಇಲ್ಲಿಗೆ ಚಿತಾವಣೆ ಮಾಡುವ ಕೆಲಸ ಮಾಡಿಲ್ಲ’ ಎಂದು ಹೇಳಿದರು.
ಸೋಮಣ್ಣ ಕಣ್ಣೀರು!
ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರಡಿ ಎಂಟಡಿ ರೂಮ್‌ನಲ್ಲಿ 16 ವರ್ಷ ವಾಸಿಸಿದ್ದೇನೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಸುಮ್ಮನೆ ಇರುವವನಲ್ಲ. ಸುಳ್ಳು ಹೇಳಿ ನಾನು ನನ್ನ ಜೀವನ ಮಾಡುವುದಿಲ್ಲ. ನಮ್ಮ ತಾಯಿ ತಂದೆ ನನಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನಾನು ಯಾರ ಮುಲಾಜಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವದೆ ಮಾಡೋದು ಒಳ್ಳೆಯದಲ್ಲ ಎಂದು ಸೋಮಣ್ಣ ಕಣ್ಣೀರು ಹಾಕಿದರು.
Related Articles
ಬಿಎಸ್‌ವೈ ಪ್ರಶ್ನಾತೀತ ನಾಯಕ
ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಆರೋಗ್ಯವಾಗಿ ಇರಲಿ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನನ್ನ ಮಾರ್ಗದರ್ಶಕರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನನ್ನ ಆತ್ಮೀಯ ಸ್ನೇಹಿತರು. ನಾನು ಬಿಜೆಪಿ ಸೇರಲು ಅನಂತಕುಮಾರ್ ಕಾರಣ. ಇನ್ನು ಮುಂದೆ ಆದರೂ ತೇಜೋವಧೆ ಮಾಡಬೇಡಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ ಎಂದು ಹೇಳಿದರು.
ದೇವೇಗೌಡರ ಗುಣಗಾನ
ನಾನು ಮೊದಲು ಕಾರ್ಪೊರೇಟರ್ ಇದ್ದೆ 1994ರಲ್ಲಿ ಶಾಸಕನಾದೆ. ರಾಜ್ಯದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದೆ. ಮೂರು ಮರ್ಡರ್ ಆಯ್ತು, ನನ್ನ ಮೇಲೆ ಎತ್ತಿ ಹಾಕಿದ್ದರು. ಆಗ ಪೊಲೀಸ್ ಅಧಿಕಾರಿಯಾಗಿದ್ದ ಅಬ್ದುಲ್ ಅಜೀಮ್ ನನ್ನ ಮೇಲೆ ಆರೋಪ ಮಾಡಿದ್ದರು. ದೇವೇಗೌಡರು ಉಪ ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದರು. ನನ್ನ ಜಾತಿಯೇ ಬೇರೆ, ಅವರ ಜಾತಿಯೇ ಬೇರೆ ಆದರೂ ದೇವೇಗೌಡರು ನನ್ನ ರಾಜಕೀಯವಾಗಿ ಕೈ ಹಿಡಿದರು ಎಂದು ಹೇಳಿದರು.
ಅದಾದ ಮೇಲೆ ಕಾಂಗ್ರೆಸ್‌ಗೆ ಹೋದೆ. ಕಾಂಗ್ರೆಸ್‌ನಿಂದ ಎರಡು ಬಾರಿ ಗೆದ್ದೆ. ಆದಾದ ಮೇಲೆ ಸೋತೆ. ಸೋತವನನ್ನ ವಿಧಾನ ಪರಿಷತ್ ಸದಸ್ಯ ಮಾಡಿದ್ದು ಯಡಿಯೂರಪ್ಪ ಅವರು. ನನ್ನನ್ನು ಸಚಿವರನ್ನಾಗಿಯೂ ಮಾಡಿದ್ದರು. ನಾನು ಸಿದ್ದರಾಮಯ್ಯ ಅವರ ಜೊತೆಯು ಕೆಲಸ ಮಾಡಿದ್ದೇನೆ, ಡಿ ಕೆ ಶಿವಕುಮಾರ್ ಕೂಡ ಆಪ್ತರು ಎಂದು ಹೇಳಿದರು.
ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಮಂತ್ರಿ ಆಗಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಅಂತಿದೆ. ಮೋದಿ, ಅಮಿತ್ ಶಾ, ನಡ್ಡಾ ನಮ್ಮ ನಾಯಕರು ಎಂದು ನುಡಿದರು.