Advertisement

MUDA: ಇಂದು ಮೈಸೂರಲ್ಲಿ ಕಾಂಗ್ರೆಸ್‌ Vs ಬಿಜೆಪಿ ಹೋರಾಟ

12:08 AM Jul 12, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿಪಕ್ಷ ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಜು. 11ರಂದು ಮುಡಾ ಮುತ್ತಿಗೆಗೆ ಸಿದ್ಧತೆ ನಡೆಸಿದ್ದರೆ, ಇತ್ತ ಕಾಂಗ್ರೆಸ್‌ ಕೂಡ ಬಿಜೆಪಿ ಪ್ರತಿಭಟನಕಾರರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದೆ.

Advertisement

ಈ ಸಂಬಂಧ ಬಿಜೆಪಿ ಶಾಸಕ ಟಿ.ಎಸ್‌. ಶ್ರೀವತ್ಸ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌, ಸಿ.ಟಿ. ರವಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಮುಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರೆ, ಇನ್ನೊಂದೆಡೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಮುಡಾಕ್ಕೆ ಮುತ್ತಿಗೆ ಹಾಕುವ ಬಿಜೆಪಿಯವರಿಗೆ ನಾವು ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮುಡಾ ಎದುರು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

10 ಸಾವಿರ ಕಾರ್ಯಕರ್ತರು ಭಾಗಿ
ಮುಡಾ ಹಗರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಜು. 12ರಂದು ಮೈಸೂರಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಭೆ ನಡೆಯಲಿದೆ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ 10 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ತಿಳಿಸಿದರು.

ನಗರದ ಡಿ. ದೇವರಾಜ ಅರಸು ರಸ್ತೆ, ಸಯ್ನಾಜಿರಾವ್‌ ರಸ್ತೆಯ ವ್ಯಾಪಾರಿಗಳು 2 ಗಂಟೆ ಕಾಲ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ನಿವೇಶನಾಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ನಮ್ಮ ಕೈ ಬಲಪಡಿಸಬೇಕು ಎಂದರು.

ಬಿಜೆಪಿಯವರಿಗೆ ನಾವೂ ಮುತ್ತಿಗೆ ಹಾಕುತ್ತೇವೆ: ಲಕ್ಷ್ಮಣ್‌
ಮೈಸೂರು: ಮುಡಾ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿಯವರಿಗೆ ನಾವೂ ಮುತ್ತಿಗೆ ಹಾಕುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬಿಜೆಪಿಯವರು ಮುಡಾ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಜು. 12ರಂದು ಬೆಳಗ್ಗೆ 10ಕ್ಕೆ ಮುಡಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತೇವೆ. 20 ದಿನಗಳಿಂದ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಲೋಪವಾಗಿಲ್ಲ. ಲೋಪವಾಗಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಬಿಜೆಪಿ ವಿರುದ್ಧದ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಮುಡಾ ನೀಡಿರುವ ಬದಲಿ ನಿವೇಶನ ವಿಚಾರದಲ್ಲಿ ಬಿಜೆಪಿ ಯವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದು, ಅವರಂತೆ ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ. ಹಗರಣದ ವಿರುದ್ಧವಾಗಿ ಬಿಜೆಪಿ ನಾಯಕರು ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲೇ ಪ್ರತಿಭಟನೆ ಮಾಡಲಿ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಮುಖ್ಯಮಂತ್ರಿಗಳ ಪತ್ನಿಗೆ ಪರ್ಯಾಯವಾಗಿಯಷ್ಟೇ ನಿವೇಶನ ನೀಡಲಾಗಿದೆ ಎಂದಾದಲ್ಲಿ, ಒಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಕ್ಲೀನ್‌ಚಿಟ್‌ ಪಡೆದುಕೊಳ್ಳಲಿ.
-ಯದುವೀರ್‌ ಒಡೆಯರ್‌ ಮೈಸೂರು-ಕೊಡಗು ಸಂಸದ

ಮುಡಾ ಹಗರಣ ಬಿಜೆಪಿ ಯವರ ಕಾಲದಲ್ಲೇ ಎಲ್ಲ ಆಗಿದೆ. ಇದೀಗ ಅವರೇ ಹೋರಾಟ ಮಾಡುತ್ತಿದ್ದಾರೆ. ನೂರು ಸುಳ್ಳು ಹೇಳಿ, ಅದನ್ನು ಸತ್ಯ ಮಾಡಲು ಹೊರಟಿದ್ದಾರೆ. ಮುಡಾದಲ್ಲಿ ಯಾರು ತಪ್ಪು ಮಾಡಿದ್ದರೂ ತನಿಖೆ ಮುಗಿಯುವವರೆಗೂ ಕಾಯಬೇಕು.
– ಕೆ.ಜೆ. ಜಾರ್ಜ್‌, ಇಂಧನ ಸಚಿವ

ಮೂರು ತಿಂಗಳ ಅವಧಿಯಲ್ಲಿ ಮುಡಾದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆಯು ಹೆಚ್ಚಾಗಿದೆಯೇ ಹೊರತು ಹಿಂದಿನ ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ಆಗಿಲ್ಲ. ಹಗರಣ ಕುರಿತು ಸದನದಲ್ಲಿ ನಮ್ಮ ಹೋರಾಟ ಯಾವ ರೀತಿ ನಡೆಯುತ್ತದೆ ಎನ್ನುವುದು ಕಾದು ನೋಡಿ.
-ಜಿ.ಟಿ. ದೇವೇಗೌಡ
ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ

ಅಪವಾದ ಬಂದಾಗ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಇತಿಹಾಸವಿದೆ. ಅಂತೆಯೇ ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು. ಆದರೆ ಲಜ್ಜೆ ಬಿಟ್ಟು ನಡೆದುಕೊಳ್ಳುತ್ತಿದ್ದಾರೆ. ಪ್ರಕರಣವನ್ನು ಅವಲೋಕಿಸಿದಾಗ ಸಿಎಂ ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು.
-ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next