Advertisement

ರಾಗಿ ಖರೀದಿ ನೋಂದಣಿಗೆ ಇರುವುದೊಂದೇ ಕೇಂದ್ರ

01:56 PM Dec 20, 2022 | Team Udayavani |

ನೆಲಮಂಗಲ: ರಾಗಿ ಖರೀದಿಗಾಗಿ ಸರ್ಕಾರ ನೋಂದಣಿ ಕಾರ್ಯ ಆರಂಭಿಸಿದ್ದು, ಇಡೀ ತಾಲೂಕಿಗೆ ಒಂದೇ ಒಂದು ನೋಂದಣಿ ಕೇಂದ್ರ ತೆರೆದಿರುವ ಕಾರಣ, ರೈತರು ದಿನಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Advertisement

ತಾಲೂಕಿನಲ್ಲಿ ರಾಗಿ ಬೆಳೆದ ಸಾವಿರಾರು ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ತಾಲೂಕಿನ ಕೆಂಪಲಿಂಗನಹಳ್ಳಿ ಸಮೀಪದಲ್ಲಿ ಕೇವಲ ಒಂದೇ ಒಂದು ನೋಂದಣಿ ಕೇಂದ್ರವನ್ನು ಆರಂಭಿಸಿದೆ. ಇದಕ್ಕಾಗಿ ರೈತರು ಬೆಳಗಿನಜಾವ 5 ಗಂಟೆಗೆ ಕೇಂದ್ರದ ಬಳಿ ಬಂದು ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಬೆಳಗ್ಗೆ 8ರಿಂದ 9 ಗಂಟೆಗೆ ಅರ್ಧ ಕಿ.ಮೀ. ದೂರ ರೈತರ ಸಾಲು ಇರುತ್ತದೆ. ಜೊತೆಗೆ ಸರ್ವರ್‌, ಇತರೆ ಸಮಸ್ಯೆ ಆದ್ರೆ ದಿನಗಟ್ಟಲೆ ರೈತರು ಊಟ, ತಿಂಡಿ, ನೀರು ಇತರೆ ವ್ಯವಸ್ಥೆ ಇಲ್ಲದೆ, ನೋಂದಣಿ ಕೇಂದ್ರದ ಬಳಿಯಲ್ಲೇ ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ.

ವ್ಯವಸ್ಥೆ ಇಲ್ಲದ ಸ್ಥಳ: ನೋಂದಣಿ ಕೇಂದ್ರದ ಬಳಿ ಕನಿಷ್ಠ ನೆರಳು, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡದ ಪರಿಣಾಮ, ಸ್ಥಳೀಯ ಕೆಲ ದಾನಿಗಳು ರೈತರ ಸಂಕಷ್ಟಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಆಟೋ, ಬಸ್‌ ವ್ಯವಸ್ಥೆ ಇಲ್ಲದ ಕಡೆ ಕೇಂದ್ರವಿದ್ದು, ಬಸ್‌ ನಿಲ್ದಾಣ 1.5 ಕಿ.ಮೀ. ದೂರ ಇದೆ. ಸ್ವಂತ ವಾಹನಗಳಿಲ್ಲದ ರೈತರು ನಡೆದುಕೊಂಡು ಹೋಗುವ ಸ್ಥಿತಿ ಇದೆ. ತಾಲೂಕಿನಲ್ಲಿ ಎರಡು ಅಥವಾ ಮೂರು ಕಡೆ ನೋಂದಣಿ ಕೇಂದ್ರ ಆರಂಭ ಮಾಡಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದು ರೈತರ ಆಗ್ರಹವಾಗಿದೆ.

ಅಧಿಕಾರಿಗಳಿಗೆ ಒತ್ತಾಯ: ತಾಲೂಕಿನ ಸಾವಿರಾರು ರೈತರು ಒಂದು ಕಡೆ ಬರುವ ಪರಿಣಾಮ, ಸಾಕಷ್ಟು ಸಮಸ್ಯೆಯಾಗಿದ್ದು, ಎರಡು ಕಡೆ ಕೇಂದ್ರ ತೆರೆಯುವಂತೆ ಒತ್ತಾಯ ಮಾಡುವ ಜತೆಗೆ ಐದು ಎಕರೆಗಿಂತ ಹೆಚ್ಚು ಜಮೀನು ಇರುವ ರೈತರಿಗೆ ನೋಂದಣಿ ನೀಡಿಲ್ಲ, ಕೆಲವರಿಗೆ ಪಹಣಿಗಳಲ್ಲಿ ರಾಗಿ ಎಂಬುದಾಗಿ ನಮೂದು ಮಾಡದೆ ಕೈಬಿಟ್ಟಿದ್ದಾರೆ, ಇಂತಹ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲು ಕೃಷಿ ಹಾಗೂ ಕಂದಾಯ ಅಧಿಕಾರಿಗಳನ್ನು ನೇಮಕ ಮಾಡಬೇಕು, ರೈತರ ಸಂಕಷ್ಟಕ್ಕೆ ಸ್ಪಂದಿ ಸಬೇಕು ಎಂದು ತಾಲೂಕಿನ ರೈತರು ಒತ್ತಾಯ ಮಾಡಿದರು.

Advertisement

ರೈತರ ಸಂಕಷ್ಟಕ್ಕೆ ಎನ್‌.ಶ್ರೀನಿವಾಸ್‌ ಸ್ಪಂದನೆ: ರಾಗಿ ಖರೀದಿಗೆ ಹೆಸರು ನೋಂದಣಿ ದಿನದಿಂದ ಪ್ರತಿನಿತ್ಯ ರೈತರು ಬಿಸಿಲಿನಲ್ಲಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಳಗಿನ ಜಾವ ಬರುವ ರೈತರು ಸಂಜೆಯವರೆಗೂ ಊಟ, ನೀರಿನ ವ್ಯವಸ್ಥೆಯೇ ಇಲ್ಲದೇ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಇದೆ. ಇದರ ಪರಿಣಾಮ ಕೆಪಿಸಿಸಿ ವೀಕ್ಷಕ ಎನ್‌.ಶ್ರೀನಿವಾಸ್‌ ಸಾಲಿನಲ್ಲಿ ನಿಲ್ಲುವ ರೈತರಿಗೆ ಪೆಂಡಾಲ್‌ ಹಾಕಿ ನೆರಳಿನ ವ್ಯವಸ್ಥೆ ಮಾಡಿಸಿ, ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುವ ಜತೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಒದಗಿಸಿದ್ದಾರೆ. ಈ ಮೂಲಕ ರೈತರಿಗೆ ಸಹಾಯವಾಗುವಂತೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳು ರೈತರಿಗೆ ಅನುಕೂಲವಾಗಲು ಮಾಡಬೇಕಾಗಿದ್ದ ಸಹಾಯವನ್ನು ಎನ್‌.ಶ್ರೀನಿವಾಸ್‌ ಮಾಡಿರುವ ಹಿನ್ನೆಲೆ ರೈತರು ಧನ್ಯವಾದ ತಿಳಿಸಿದ್ದಾರೆ.

ರಾಗಿ ಖರೀದಿ ನೋಂದಣಿಗೆ ಸರಿಯಾದ ವ್ಯವಸ್ಥೆ ಮಾಡದೇ ರೈತರನ್ನು ಅಲೆದಾಡಿಸಲಾಗುತ್ತಿದೆ. ತ್ಯಾಮಗೊಂಡ್ಲು ಅಥವಾ ಸೋಂಪುರದಲ್ಲಿ ಮತ್ತೂಂದು ಕೇಂದ್ರ ಸ್ಥಾಪಿಸಿದರೆ ಬಹಳಷ್ಟು ಅನುಕೂಲವಾಗಲಿದೆ. ಎರಡು ದಿನದಿಂದ ಕುಡಿಯಲು ನೀರಿಲ್ಲದೆ, ಬಿಸಿಲಿನಲ್ಲಿ ನಿಲ್ಲುವಂತಹ ದುಸ್ಥಿತಿ ಇತ್ತು. ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ನೆರಳು, ನೀರು, ಊಟದ ವ್ಯವಸ್ಥೆ ಮಾಡಿರುವುದು ಬಹಳಷ್ಟು ಅನುಕೂಲವಾಗಿದೆ. – ನಾಗರಾಜು, ರೈತ

ತಾಲೂಕಿನ ರೈತರು ರಾಗಿ ಖರೀದಿ ಕೇಂದ್ರದ ಬಳಿ ನೋಂದಾಯಿಸಲು ಗಟ್ಟೆಗಟ್ಟಲೆ ಬಿಸಿಲಿನಲ್ಲಿ ಕಾಯುತ್ತಿದ್ದರು. ಇದನ್ನು ನೋಡಿ ಬಹಳಷ್ಟು ನೋವಾಯಿತು. ನೆರಳು, ಊಟ, ನೀರಿನ ವ್ಯವಸ್ಥೆ ಮಾಡಿದ್ದೇನೆ, ಹೆಸರು ನೋಂದಣಿ ಮುಗಿಯುವ ತನಕ ರೈತರಿಗೆ ನನ್ನ ಸೇವೆ ಮಾಡುತ್ತೇನೆ. ಶೀಘ್ರದಲ್ಲಿ ಅಧಿಕಾರಿಗಳು ಎರಡು ಕೇಂದ್ರ ತೆರೆಯುವ ಮೂಲಕ ಅನ್ನದಾತರಿಗೆ ನೆರವಾಗಬೇಕಿದೆ. – ಎನ್‌.ಶ್ರೀನಿವಾಸ್‌, ಕಾಂಗ್ರೆಸ್‌ ವೀಕ್ಷಕ.

Advertisement

Udayavani is now on Telegram. Click here to join our channel and stay updated with the latest news.

Next