ಮಹಾನಗರ: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ. ಅಮ್ಮ ದೇವತಾ ಸ್ವರೂಪಿ. ತಾಯಿಯ ಪ್ರೀತಿಗೆ ಈ ಪ್ರಪಂಚದ ಯಾರ ಪ್ರೀತಿಯೂ ಸರಿಸಾಟಿಯಾಗಲಾರದು. ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ವಸ್ತು ಅಂದರೆ ಅದು ತಾಯಿ ಮಾತ್ರ. ಯಾಕೆಂದರೆ ಆ ತಾಯಿಯ ಪ್ರೀತಿ ಅಮೂಲ್ಯವಾದದ್ದು, ಹಾಗೆ ನಿಷ್ಕಳಂಕವಾದದ್ದು ಎಂದು ಪ್ರಾಂತ ಸಂಘಟನ ಪ್ರಮುಖ ರವೀಶ್ ಅಭಿಪ್ರಾಯಪಟ್ಟಿದ್ದಾರೆ.
ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ನೇತೃತ್ವದಲ್ಲಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಉಮಾಮಹೇಶ್ವರ ಶಾಖೆಯವರು ಅಯೋಜಿಸಿದ್ದ ಮಾತೃವಂದನ, ಮಾತೃ ಪೂಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ತಾರಾನಾಥ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯ ಕ್ರಮದ ಮೊದಲಿಗೆ ಯೋಗ ಬಂಧು ಗಳಿಗೆ, ಸಾರ್ವಜನಿಕರಿಗೆ ದೇಶೀಯ ಬಾಲ್ಯದ ಆಟಗಳನ್ನು ಆಡಿಸಲಾಯಿತು.
ಕೈತುತ್ತು
ಸಭಾ ಕಾರ್ಯಕ್ರಮದ ಬಳಿಕ ಮಾತೃಭೋಜನದಲ್ಲಿ ದೇಶೀಯ ಅಡುಗೆಗಳನ್ನು ಅಮ್ಮನ ನೆನಪಿನೊಂದಿಗೆ ಕೈತುತ್ತು ನೀಡಲಾಯಿತು.
ವಿಜಯಲಕ್ಷ್ಮೀ ಸ್ವಾಗತಿಸಿದರು. ಸತ್ಯವತಿ ವರದಿ ಮಂಡಿಸಿದರು. ಚಂದ್ರ ಶೇಖರ್ ವಂದಿಸಿ, ಸುಜಾತಾ ಜಿತೇಂದ್ರ ನಿರೂಪಿಸಿದರು. ಮಂಜುನಾಥೇಶ್ವರ ವಲಯದ ಸಂಚಾಲಕಿ ಭಾರತಿ, ಸಹಸಂಚಾಲಕ ಆನಂದ, ಶಿಕ್ಷಕ ಪ್ರಸಾದ್, ಜಿಲ್ಲಾ ಸಂಚಾಲಕ ಗೋಕುಲನಾಥ್, ಜಿಲ್ಲಾ ಸೇವಾ ಪ್ರಮುಖ ಭಾಸ್ಕರ್, ಶಾಖಾ ಸಂಚಾಲಕ ಜಯದೇವ್ ಮುಂತಾದವರು ಉಪಸ್ಥಿತರಿದ್ದರು.
ಪ್ರೀತಿಗೆ ಕೊನೆ ಇಲ್ಲ
ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗಶಿಕ್ಷಣ ಸಮಿತಿ ಮಂಗಳೂರಿನ ಪಂಚಲಿಂಗೇಶ್ವರ ವಲಯದ ಪುಷ್ಪಲತಾ ಮಾತನಾಡಿ, ತಾಯಿಯ ಪ್ರೀತಿಗೆ ಕೊನೆ ಇಲ್ಲ. ಯಾಕೆಂದರೆ ಅದು ಸಮುದ್ರದಂತೆ ಆಳ ಮತ್ತು ವಿಶಾಲವಾದದ್ದಾಗಿದೆ. ತಾಯಿಯ ಪ್ರೀತಿ ಕತ್ತಲೆಗೆ ಬೆಳಕಿನಂತೆ ಎಂದರು.