1) ಶಂಕರ್ ನಾಗ್ ಅವರ ಪ್ರಸಿದ್ಧ “ಮಾಲ್ಗುಡಿ ಡೇಸ್’ ಸರಣಿಯ ಒಟ್ಟು ಪ್ರಸಾರವಾದ ಎಪಿಸೋಡುಗಳ ಸಂಖ್ಯೆ ಎಷ್ಟು?
2) ನಾಲ್ಕು ವರ್ಷದ ಮಗುವೊಂದು ಪ್ರತಿ ದಿನ ಕೇಳುವ ಪ್ರಶ್ನೆಗಳ ಸಂಖ್ಯೆ?
3) ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವ ವೇಗ?
4) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಮಾದರಿಯ ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸಂಖ್ಯೆ?
5) ಪ್ರತಿದಿನ ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ?
6) ಫೆಬ್ರವರಿ 2016ರ ವರದಿ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ನೋಂದಾಯಿತ ವಾಹನಗಳ ಸಂಖ್ಯೆ?
7) ಕರ್ನಾಟಕದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ?
8) 2017ರಲ್ಲಿ ಭಾರತೀಯ ಸೆನ್ಸಾರ್ ಬೋರ್ಡಿನಿಂದ ಅಂಗೀಕೃತವಾದ ಒಟ್ಟು ಚಲನಚಿತ್ರಗಳು?
9) ಭಾರತದಲ್ಲಿರುವ ಉತ್ಛ ನ್ಯಾಯಾಲಯಗಳ ಸಂಖ್ಯೆ?
10) 2017ರ ವರದಿ ಪ್ರಕಾರ ಜಗತ್ತಿನಲ್ಲಿರುವ ಜಾಲತಾಣಗಳ ಸಂಖ್ಯೆ?
ಈ ಪ್ರಶ್ನೆಗಳಿಗೂ ಸಿನಿಮಾಗೂ ಸಂಬಂಧವೇನು ಎಂಬ ಪ್ರಶ್ನೆ ಬರುವುದು ಸಹಜ. ಈ ಪ್ರಶ್ನೆಗಳಿಗೂ ಸಿನಿಮಾಗೂ ಸಂಬಂಧವಿಲ್ಲದಿದ್ದರೂ, “ಒಂದಲ್ಲ ಎರಡಲ್ಲ’ ಚಿತ್ರತಂಡವು ಈ ಪ್ರಶ್ನೆಗಳನ್ನಿಟ್ಟುಕೊಂಡು ಹೊಸ ತರಹದ ಪ್ರಚಾರ ಮಾಡುತ್ತಿದೆ. ಈ ಹಿಂದೆ “ರಾಮ ರಾಮಾ ರೇ’ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್, ಇದೀಗ ಸದ್ದಿಲ್ಲದೆ “ಒಂದಲ್ಲ ಎರಡಲ್ಲ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ.
ಈ ಚಿತ್ರದ ಹಾಡುಗಳು ಸೋಮವಾರ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ “ಒಂದಲ್ಲ ಎರಡಲ್ಲ ಸತ್ಯ ಸಂಗತಿ’ ಎಂಬ ಹೆಸರಿನಡಿ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ ಸತ್ಯಪ್ರಕಾಶ್. ಅದರಡಿ, ಪ್ರತಿ ದಿನ ಒಂದೊಂದು ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ಮೇಲೆ ಹೇಳಿದ ಎಲ್ಲಾ ಪ್ರಶ್ನೆಗಳೂ ಅದೇ ಸರಣಿಯಲ್ಲಿ ಕೇಳಲಾಗಿರುವ ಪ್ರಶ್ನೆಗಳು.
ಈ ಪ್ರಶ್ನೆಗಳ ಕೆಳಗೆ ಅವರೇ ಉತ್ತರವನ್ನೂ ನೀಡಿರುತ್ತಾರೆ. ಆದರೆ, ಅದಕ್ಕೂ ಮುನ್ನ “ಒಂದಲ್ಲ ಎರಡಲ್ಲ’ ಎಂಬ ಚಿತ್ರದ ಹೆಸರು ಬಂದು, ಆ ನಂತರ ಉತ್ತರ ಬರುತ್ತದೆ. ಉದಾಹರಣೆಗೆ, ಶಂಕರ್ ನಾಗ್ ಅವರ ಪ್ರಸಿದ್ಧ “ಮಾಲ್ಗುಡಿ ಡೇಸ್’ ಸರಣಿಯ ಒಟ್ಟು ಪ್ರಸಾರವಾದ ಎಪಿಸೋಡುಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಯ ಕೆಳಗೇ, ಒಂದಲ್ಲ ಎರಡಲ್ಲ 54 ಎಂಬ ಉತ್ತರ ಇರುತ್ತದೆ.
ಅದೇ ತರಹ, ಪ್ರತಿದಿನ ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ ಎಂಬ ಪ್ರಶ್ನೆಗೆ, ಉತ್ತರವಾಗಿ ಒಂದಲ್ಲ ಎರಡಲ್ಲ 19312 ಕಿಲೋಮೀಟರ್ ಎಂಬ ಉತ್ತರವಿರುತ್ತದೆ. ಹೀಗೆ ಸ್ವಾರಸ್ಯಕರ ಪ್ರಶ್ನೆಗಳನ್ನಿಟ್ಟುಕೊಂಡು, ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ನಿರ್ದೇಶಕ ಸತ್ಯಪ್ರಕಾಶ್. ಈ ಚಿತ್ರಕ್ಕೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನು “ಹೆಬ್ಬುಲಿ’ ನಿರ್ಮಿಸಿದ್ದ ಉಮಾಪತಿ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.