Advertisement

ಗ್ರಹಣದ ವೇಳೆ ಪೂಜೆಯಿಲ್ಲ

11:19 AM Jan 31, 2018 | |

ಬೆಂಗಳೂರು: ಗ್ರಹಣ ಎನ್ನುವುದೇ ಅಶುಭ, ಬರಿಗಣ್ಣಿನಲ್ಲಿ ನೋಡಬಾರದು ಎಂಬುದು ಹಲವರ ನಂಬಿಕೆ. ವಿಜ್ಞಾನವನ್ನೇ ನಂಬಿರುವವರು ಇದಕ್ಕೆ ವಿರುದ್ಧವಾಗಿದ್ದಾರೆ. ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಅನೇಕರು ವೈಜ್ಞಾನಿಕವಾಗಿ ಪ್ರತಿಪಾದಿಸುತ್ತಿದ್ದಾರೆ.

Advertisement

ರಾಜ್ಯದ ಶಾಲಾ ಕಾಲೇಜು, ಬೆಂಗಳೂರಿನ ನೆಹರು ತಾರಾಲಯ, ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟ್‌, ಭಾರತ ಜ್ಞಾನ ವಿಜ್ಞಾನ ಸಮಿತಿ ಹೀಗೆ ವಿವಿಧ ಸಂಘಟನೆಗಳು ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲು ಬೇಕಾದ ವ್ಯವಸ್ಥೆಯನ್ನು ಮಾಡಿದೆ. ಗ್ರಹಣ ಅಶುಭ ಹಾಗೂ ಅಶೌಚ್ಯ ಎಂಬ ಕಾರಣಕ್ಕೆ ದೇವಸ್ಥಾನದಲ್ಲಿ ಈ ವೇಳೆಗೆ ಯಾವುದೇ ಪೂಜೆ, ಅಲಂಕಾರ, ಅಭಿಷೇಕ ಇರುವುದಿಲ್ಲ.

ಜ.31ರ ಸಂಜೆ 6.21ರಿಂದ 7.38ರ ವರೆಗೆ ಚಂದ್ರಗ್ರಹಣ ನಡೆಯಲಿದೆ. ಎರಡು ಹುಣ್ಣಿಮೆಗಳು ಒಂದೇ ತಿಂಗಳಲ್ಲಿ ಬಂದರೆ(ಜ.1 ಮತ್ತು ಜ.31) ಎರಡನೇ ಹುಣ್ಣಿಮೆಯನ್ನು ನೀಲಿಚಂದ್ರ ಎಂದು ಕರೆಯಲಾಗುತ್ತದೆ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತಿದೆ. ಎರಡು ಗ್ರಹಗಳ ಸಂಯೋಗದಿಂದ ಉಂಟಾಗುವ ರಾಹುಗ್ರಸ್ಥ ಉಪರಾಗದ ಸಂಬಂಧವೇ ಗ್ರಹಣ, ಇದನ್ನು ಬರಿಗಣ್ಣಿನಲ್ಲಿ ನೋಡಬಾರದು ಎಂದು ಧಾರ್ಮಿಕರ ನಂಬಿಕೆ.

ನೆಹರು ತಾರಾಲಯದಲ್ಲಿ ವ್ಯವಸ್ಥೆ: ಪೂರ್ಣಚಂದ್ರಗ್ರಹಣವನ್ನು ಸಾರ್ವಜನಿಕರು ಬರಿಗಣ್ಣಿನಿಂದ ನೋಡಲು ಬೇಕಾದ ವ್ಯವಸ್ಥೆಯನ್ನು ನಗರದ ಟಿ.ಚೌಡಯ್ಯ ರಸ್ತೆಯ ಜವಾಹರ್‌ಲಾಲ್‌ ನೆಹರು ತಾರಾಲಯದಲ್ಲಿ ಮಾಡಲಾಗಿದೆ. ಸಂಜೆ 6.30ರಿಂದ ರಾತ್ರಿ 8.30ರ ತನಕ ಖಗೋಳದ ವಿದ್ಯಾಮಾನವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ತಯಾರಿ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ಸಂಜೆ 6.15ಕ್ಕೆ, ಮಂಗಳೂರಿನಲ್ಲಿ ಸಂಜೆ 6.27ಕ್ಕೆ, ಮೈಸೂರಿನಲ್ಲಿ ಸಂಜೆ 6.20ಕ್ಕೆ, ಧಾರವಾಡದಲ್ಲಿ ಸಂಜೆ 6.22ಕ್ಕೆ, ಬಾಗಲಕೋಟೆಯಲ್ಲಿ ಸಂಜೆ 6.18ಕ್ಕೆ ಮತ್ತು ಗುಲ್ಬರ್ಗದಲ್ಲಿ ಸಂಜೆ 6.12ಕ್ಕೆ ಚಂದ್ರೋದಯವಾಗಲಿದೆ. ಬಹುತೇಕ ಕಡೆಗಳಲ್ಲಿ ಸಂಜೆ 6.21ರಿಂದಲೇ ಚಂದ್ರಗ್ರಹಣ ಗೋಚರವಾಗುತ್ತದೆ ಎಂದು ತಾರಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಶಾಲೆಗಳಲ್ಲಿ ಸೂಪರ್‌ ಮೂನ್‌ ವೀಕ್ಷಣೆ: ಭಾರತೀಯ ಖಭೌತ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೊ.ಪ್ರಜ್ವಲ್‌ಶಾಸಿŒ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಲಹೆಯಂತೆ ಜ.31ರಂದು ಸಂಜೆ 6.30ರ ನಂತರ ಶಾಲೆಯಲ್ಲಿ ಶಿಕ್ಷಕರು, ಮಕ್ಕಳು ಮತ್ತು ಅವರ ಪೋಷಕರು ಸಾಮೂಹಿಕವಾಗಿ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಜತೆಗೆ ಖಗೋಳದ ಕೆಲವೊಂದು ವಿದ್ಯಮಾನ ತಿಳಿಸಲು ಇಲಾಖೆ ಈ ವ್ಯವಸ್ಥೆ ಮಾಡಿದೆ. ಚಂದ್ರೋದಯದ ವೇಳೆ ಗೋಚರಿಸುವ ಸೂಪರ್‌ ಮೂನ್‌ ನೋಡಲು ಬೇಕಾದ ವ್ಯವಸ್ಥೆಯನ್ನು ಶಾಲಾ ಪರಿಸರದಲ್ಲೇ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿದೆ. 

ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿಯಿಂದ ಶ್ರೀನಗರ, ಬಸವೇಶ್ವರನಗರ, ವಿಜಯನಗರ, ರಾಜಾಜಿನಗರದ ಬಾಷ್ಯಂ ವೃತ್ತ, ಅರಬಿಂದೊ ಶಾಲೆ, ಕೆಂಗೇರಿ ಉಪನಗರ, ಆರ್‌.ಟಿ. ನಗರ ಹಾಗೂ ಜೆ.ಪಿ.ಪಾರ್ಕ್‌ನಲ್ಲಿ ಸಾಮೂಹಿಕವಾಗಿ ಚಂದ್ರಗ್ರಹಣ ವೀಕ್ಷಿಸಲು ಬೇಕಾದ ವ್ಯವಸ್ಥೆ ಮಾಡಿದೆ.

ಗ್ರಹಣದ ಸಮಯ ಮನುಷ್ಯರಿಗೆ ಅಶೌಚ್ಯವಾಗಿರುತ್ತದೆ. ಹೀಗಾಗಿ ದೇವಾಲಯಗಳಲ್ಲಿ ಪೂಜೆ, ಅಲಂಕಾರ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆ ನಡೆಯುವುದಿಲ್ಲ. ಗ್ರಹಣದ ಕಾಲದಲ್ಲಿ ಮಂದಾಗ್ನಿ ಇರುತ್ತದೆ. ಇದನ್ನು ಬರಿಗಣ್ಣಿನಿಂದ ನೋಡುವುದು ಒಳ್ಳೆಯದಲ್ಲ.
-ಮುರುಗೋಡು ವಿಜಯವಿಠಲ ಆಚಾರ್ಯ, ಆಧ್ಯಾತ್ಮಕ ಚಿಂತಕ 

ಗ್ರಹಣದ ಬಗ್ಗೆ ಜನರಲ್ಲಿ ಅನೇಕ ಬಗೆಯ ಮೂಢನಂಬಿಕೆ ಇದೆ. ಪೂರ್ಣಚಂದ್ರ ಗ್ರಹಣದ ವೇಳೆ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸಲು ಒಂದು ಸದಾವಕಾಶ. ಈ ಗ್ರಹಣ ನೋಡಲು ಯಾವುದೇ ಸಾಧನ-ಸಲಕರಣೆ ಅಗತ್ಯವಿಲ್ಲ. ಇದರಿಂದ ಯಾವ ಅಪಾಯವೂ ಇಲ್ಲ.
-ಎಚ್‌.ಎಸ್‌.ಜಯಕುಮಾರ್‌, ರಾಜ್ಯ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next